ADVERTISEMENT

ತುಮಕೂರು | 24ಕ್ಕೆ ಅಮಿತ್‌ ಶಾ ಭೇಟಿ: ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 5:34 IST
Last Updated 20 ಏಪ್ರಿಲ್ 2024, 5:34 IST
ಅಮಿತ್ ಶಾ
ಅಮಿತ್ ಶಾ   

ತುಮಕೂರು:  ಏ.24ರಂದು ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್‌ನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಲಿದ್ದಾರೆ.

‘ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಜಿಲ್ಲೆಯಾದ್ಯಂತ ಪ್ರಚಾರ ನಡೆಸಲಾಗುತ್ತಿದೆ. ಇದೇ 21ರಂದು ಮನೆ ಮನೆ ಸಂಪರ್ಕ ಮಹಾಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಇಲ್ಲಿ ಶುಕ್ರವಾರ ತಿಳಿಸಿದರು.

ಕಾರ್ಯಕರ್ತರು ಇಡೀ ದಿನ ಪ್ರತಿ ಮನೆಗೆ ಭೇಟಿ ನೀಡಿ ಕೇಂದ್ರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ಕೇಂದ್ರದ ಫಲಾನುಭವಿಗಳನ್ನು ಸಂಪರ್ಕಿಸಿ ಮತಯಾಚನೆ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಬಿಜೆಪಿ ಪ್ರಕೋಷ್ಠ ರಾಜ್ಯ ಸಂಯೋಜಕ ಎಸ್‌.ದತ್ತಾತ್ರೇಯ, ‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಮಹಿಳೆಯರಿಗೆ ಸೂಕ್ತ ಗೌರವ, ರಕ್ಷಣೆ ಸಿಗುತ್ತಿಲ್ಲ. ಇದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಹತ್ಯೆ ತಾಜಾ ಉದಾಹರಣೆ. ಇದು ಅತ್ಯಂತ ಅಮಾನವೀಯ ಘಟನೆಯಾಗಿದೆ. ರಾಜ್ಯದಲ್ಲಿ ಮಹಿಳಾ ವಿರೋಧಿ ಸರ್ಕಾರ ಇದೆ’ ಎಂದು ಟೀಕಿಸಿದರು.

ಬಿಜೆಪಿ ಮುಖಂಡರಾದ ಎಸ್.ಶಿವಪ್ರಸಾದ್, ಬಿ.ಎಚ್‌.ಅನಿಲ್‌ಕುಮಾರ್‌, ಟಿ.ಆರ್‌.ಸದಾಶಿವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.