ADVERTISEMENT

EXCLUSIVE | ‘ಎಲ್ಲಿದೆ ಮೋದಿ ಗ್ಯಾರಂಟಿ?’: ಪ್ರಜಾವಾಣಿ ಸಂದರ್ಶನದಲ್ಲಿ ಡಿಕೆಶಿ

ರಾಜೇಶ್ ರೈ ಚಟ್ಲ
Published 6 ಏಪ್ರಿಲ್ 2024, 0:27 IST
Last Updated 6 ಏಪ್ರಿಲ್ 2024, 0:27 IST
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್   
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಗೆದ್ದ ಗುಂಗಿನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಗ್ಯಾರಂಟಿ’ ಫಲಾನುಭವಿಗಳ ಆಶೀರ್ವಾದ, ಬಿಜೆಪಿಗೆ ಇರುವ ವಿರೋಧಿ ಅಲೆಯ ಮೇಲೆ ಲೋಕಸಭೆಯಲ್ಲೂ ಭಾರಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟದಿಂದ ಕಾಂಗ್ರೆಸ್‌ಗೆ ಲಾಭವೇ ಆಗಲಿದೆ ಎಂಬ ಲೆಕ್ಕಾಚಾರದಲ್ಲೂ ಇದ್ದಾರೆ. ಈ ಎಲ್ಲದರ ಕುರಿತು ‘ಪ್ರಜಾವಾಣಿ’ ಜತೆ ಅವರು ಮಾತನಾಡಿರುವುದು ಇಲ್ಲಿದೆ.

ರಾಜ್ಯ ರಾಜಕೀಯದ ಸದ್ಯದ ಚಿತ್ರಣವನ್ನು ಹೇಗೆ ಗ್ರಹಿಸುತ್ತೀರಿ?

ಇಷ್ಟು ಬೇಗ ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಎದುರಿಸಬೇಕಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಗೆಲುವು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್‌ ಒಂದಾಗಿದೆ. ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ. ಆದರೆ, ಜನ ಇದನ್ನು ಒಪ್ಪಲ್ಲ. ಇನ್ನು ಆಂತರಿಕ ಸಂಘರ್ಷ ಇದ್ದಾಗ ಗೊಂದಲ, ಚಿಂತೆ ಇರುತ್ತದೆ. ನಮ್ಮಲ್ಲಿ (ಕಾಂಗ್ರೆಸ್) ಅಂತಹ ಸಂಘರ್ಷ ಏನೂ ಇಲ್ಲ. ಅದೇ ಬಲ. 

ಬಿಜೆಪಿ– ಜೆಡಿಎಸ್‌ ‘ಮೈತ್ರಿ’ ಪರಿಣಾಮ ಬೀರುವುದಿಲ್ಲವೇ?

ADVERTISEMENT

ಜನ ನಂಬಬೇಕಲ್ಲವೇ? ನಾವು (ಕಾಂಗ್ರೆಸ್‌) ಜೆಡಿಎಸ್‌ಗೆ ಬೆಂಬಲ ನೀಡಿದಾಗ ಯಡಿಯೂರಪ್ಪ, ‘ಏಯ್... ಡಿ.ಕೆ. ನೆನಪಿಟ್ಟುಕೊಂಡಿರು. ಈ ಅಪ್ಪ, ಮಗನನ್ನು ನಂಬಬೇಡ, ಬೆನ್ನಿಗೆ ಚೂರಿ ಹಾಕುವವರು’ ಅಂದಿದ್ದರು. ಅಂತಹ ಮಾತುಗಳನ್ನು ಜನ ಮರೆಯಲು ಸಾಧ್ಯವೇ? 

‘ಗ್ಯಾರಂಟಿ’ಗಳು ‘ಕೈ’ಹಿಡಿಯಲಿದೆ ಎಂಬ ವಿಶ್ವಾಸವೇ?

‘ಗ್ಯಾರಂಟಿ’ ಮತ ಅಲ್ಲ. ಜನರ ಬದುಕಿಗೆ ಆಧಾರ. ಜನ ಉಪಕಾರ ಸ್ಮರಣೆ ತೋರಿಸುವ ನಂಬಿಕೆಯಿದೆ. ಜೊತೆಗೆ, ನಮ್ಮ ಪಕ್ಷದ ಕೇಂದ್ರದ ಪ್ರಣಾಳಿಕೆಯಲ್ಲಿ ಎಲ್ಲ ವರ್ಗಗಳಿಗೂ ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದಿರುವ ತೆಲಂಗಾಣ, ಕರ್ನಾಟಕ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ‘ಗ್ಯಾರಂಟಿ’ಗಳನ್ನು ಅನುಷ್ಠಾನ ಮಾಡಿದ್ದೇವೆ. ಹೆಚ್ಚು ವಿಶ್ವಾಸದಿಂದ ಜನರ ಮುಂದೆ ನಾವಿದ್ದೇವೆ. 10 ವರ್ಷಗಳಲ್ಲಿ ಜನರ ಭಾವನೆಗಳನ್ನು ಕೆರಳಿಸಿದ ಸಿಎಎ, 370 ರದ್ಧತಿಯಂಥ ಘೋಷಣೆಗಳನ್ನು ಬಿಟ್ಟರೆ ಬದುಕಿಗೆ‌ ನೆರವಾಗುವ ಯಾವುದಾರೂ ಯೋಜನೆಯನ್ನು ಎನ್‌ಡಿಎ ತಂದಿದೆಯೇ?

ಹಾಗಿದ್ದರೆ, ಮೋದಿ ‘ಗ್ಯಾರಂಟಿ’ ?

ಎಲ್ಲಿದೆ ಮೋದಿ ಗ್ಯಾರಂಟಿ? ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಬಂತೇ? ಕಪ್ಪು ಹಣ ತಂದ್ರಾ? ರೈತರ ಆದಾಯ ಇಮ್ಮಡಿ ಆಗಿದೆಯೇ? 2 ಕೋಟಿ ಉದ್ಯೋಗ ಎಲ್ಲಿದೆ? ಕೋವಿಡ್‌ ಸಂದರ್ಭದಲ್ಲಿ ಜನರಿಗೆ ₹ 20 ಲಕ್ಷ ಕೋಟಿ ಕೊಟ್ಟಿದ್ದೇವೆಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಯಾರಿಗೆ ಹಣ ಬಂದಿದೆ? ಯಾವ ವರ್ಗದವರ ಕೈ ಸೇರಿದೆ? ಮೋದಿ ಹೆಸರೇ ‘ಗ್ಯಾರಂಟಿ’ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ, ಅದರಿಂದ ಯಾರದಾದರೂ ಹೊಟ್ಟೆ ತುಂಬುತ್ತದೆಯೇ?

ಅಯೋಧ್ಯೆಯ ಬಾಲರಾಮನ ಪ್ರಭಾವ?

ಫೋಟೋದಲ್ಲಿ, ಹೃದಯದಲ್ಲಿ ರಾಮ ಇದ್ದಾನೆ. ಚುನಾವಣೆಯಲ್ಲಿ ಇಲ್ಲ. ಭಾವನೆಗೆ ರಾಮ. ಬದುಕಿಗೆ ಅಲ್ಲ.

ಜೆಡಿಎಸ್‌ ಸಖ್ಯದ ಕಾರಣಕ್ಕೆ ಬಿಜೆಪಿಯತ್ತ ಒಕ್ಕಲಿಗರು ವಾಲಬಹುದೆಂಬ ಆತಂಕವಿದೆಯೇ? 

ಒಕ್ಕಲಿಗ ಸಮುದಾಯಕ್ಕೆ ಬಿಜೆಪಿಯವರು ಅವಮಾನ ಮಾಡಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿದರು. ಸದಾನಂದ ಗೌಡ, ಪ್ರತಾಪ್‌ ಸಿಂಹ, ನಳಿನ್‌ಕುಮಾರ್‌ ಕಟೀಲ್‌ ಏನು ತಪ್ಪು ಮಾಡಿದ್ದಾರೆ? ಪಕ್ಷ ನಿಷ್ಠೆಯಿಂದ ದುಡಿದವರನ್ನು ದೂರ ಇಟ್ಟರು. ಬಿಜೆಪಿಗಿದು ತಿರುಗಬಾಣವಾಗಲಿದೆ.

ಒಕ್ಕಲಿಗರಿಗೆ ಎಂಟು ಟಿಕೆಟ್‌ ಕೊಟ್ಟಿದ್ದೀರಿ. ಒಳಗುಟ್ಟೇನು?

ಗೆಲ್ಲುವ ಅವಕಾಶ ನೋಡಿಕೊಂಡು ಒಕ್ಕಲಿಗರಿಗೆ, ಲಿಂಗಾಯತರಿಗೆ ಟಿಕೆಟ್ ಕೊಟ್ಟಿದ್ದೇವೆ. ಪರಿಶಿಷ್ಟ ಸಮುದಾಯದ ಬಲಗೈಗೆ ಮೂರು ಕಡೆ ಕೊಟ್ಟಿದ್ದೇವೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಹಿಂದೆ ಆದ್ಯತೆ ಸಿಗುತ್ತಿತ್ತು. ಈ ಬಾರಿ ಕಾರ್ಯತಂತ್ರ ಬದಲಿಸಿಕೊಂಡಿದ್ದೇವೆ. 43 ವರ್ಷಗಳ ಬಳಿಕ ಮೈಸೂರಿನಲ್ಲಿ ಒಕ್ಕಲಿಗರಿಗೆ ಟಿಕೆಟ್‌ ನೀಡಿದ್ದೇವೆ.

ಟಿಕೆಟ್‌ ಹಂಚಿಕೆಯಲ್ಲಿ ಕುಟುಂಬ ಸದಸ್ಯರದ್ದೇ ಪಾರುಪತ್ಯ. ಸೋಲಿನ ಭಯದಿಂದ ಸಚಿವರು ಸ್ಪರ್ಧೆಗೆ ಹಿಂಜರಿದರೇ?

ಸ್ಥಳೀಯ ರಾಜಕೀಯ ಸ್ಥಿತಿಗತಿ ನೋಡಿ ಟಿಕೆಟ್‌ ನೀಡಿದ್ದೇವೆ. ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಯಾಗಿರುವುದು ನಿಜ. ಹಾಗೆಂದು ಅವರಾಗಿಯೇ ಹಿಂದೆ ಸರಿದಿಲ್ಲ. ಹೊಸ ಮುಖ, ವಿದ್ಯಾವಂತರು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆಂದು ಸಚಿವರ ಮಕ್ಕಳಿಗೆ, ರಕ್ಷಾ ರಾಮಯ್ಯನಂಥವರಿಗೆ ಟಿಕೆಟ್‌ ಕೊಟ್ಟಿದ್ದೇವೆ. ಭವಿಷ್ಯದಲ್ಲಿ ಪಕ್ಷಕ್ಕೆ, ಸಂಸತ್ತಿಗೆ ಅವರೆಲ್ಲ ದೊಡ್ಡ ಆಸ್ತಿಯಾಗಲಿದ್ದಾರೆ.

ಕೋಲಾರ ಟಿಕೆಟ್‌ ವಿಷಯದಲ್ಲಿ ಕೊನೆಗೂ ರಾಜಿ ಸಂಧಾನ ಸಾಧ್ಯವಾಗಲಿಲ್ಲವಲ್ಲ?

ಇಬ್ಬರನ್ನೂ (ಕೆ.ಎಚ್‌. ಮುನಿಯಪ್ಪ, ಕೆ.ಆರ್. ರಮೇಶ್‌ಕುಮಾರ್ ಬಣ) ಕರೆಸಿ ಮಾತನಾಡಿದ್ದೇವೆ. ಮುನಿಯಪ್ಪ ಪುತ್ರಿ ರೂಪಕಲಾ ಅವರಿಗೆ ಟಿಕೆಟ್‌ ನೀಡಲು ಸಿದ್ಧರಿದ್ದೆವು. ಆದರೆ, ಒಪ್ಪಲಿಲ್ಲ. ಗೊಂದಲಕ್ಕೆ ಅವಕಾಶ ನೀಡದೆ ಮೂರನೇ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದೇವೆ. ಇದೊಂದು ರೀತಿಯ ‘ಸಂದೇಶ’ವೂ ಹೌದು. 

ನಿಮ್ಮ ಸ್ವಕ್ಷೇತ್ರ ಬೆಂಗಳೂರು ಗ್ರಾಮಾಂತರ ಸವಾಲಾಗಿದೆಯೇ?

ಅಲ್ಲಿ ಪಕ್ಷದ ಅಭ್ಯರ್ಥಿ, ನನ್ನ ತಮ್ಮ ಸುರೇಶ ಮಾಡಿದ ಸೇವೆಯನ್ನು ಯಾರ ಜೊತೆಗೂ ಹೋಲಿಸಲು ಆಗಲ್ಲ. ವಿಧಾನಸಭೆ ಚುನಾವಣೆಯಲ್ಲಿ ನಾನು ಕ್ಷೇತ್ರಕ್ಕೆ (ಕನಕಪುರ) ಕಾಲಿಡದಿದ್ದರೂ 1.23 ಲಕ್ಷ ಲೀಡ್‌ ಬಂದಿರುವುದು ಅವನಿಂದಲೇ. ಜನರ ಮನದಾಳ ಅರಿತು ಕೆಲಸ ಮಾಡುತ್ತಿದ್ದಾನೆ. ಹೀಗಿರುವಾಗ ಜನರೇನು ದಡ್ಡರಾ?  

ಅಧಿಕಾರಕ್ಕಾಗಿ ಶಿವಕುಮಾರ್‌ ಕಾಯುತ್ತಿದ್ದಾರೆಂದು ಅಮಿತ್‌ ಶಾ ಹೇಳುತ್ತಿದ್ದಾರಲ್ಲ?

ರಾಜಕಾರಣದಲ್ಲಿ ಇರುವವರೆಲ್ಲ ಅಧಿಕಾರಕ್ಕೆ ತಾನೆ ಬಡಿದಾಡುವುದು. ನಾನು ಸನ್ಯಾಸಿ ಅಲ್ವಲ್ಲ. ಶಾ, ಮೋದಿ ಅವರ‍್ಯಾರೂ ಸನ್ಯಾಸಿ ಅಲ್ವಲ್ಲ...

ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೀರಿ?

ವಿಧಾನಸಭೆ ಚುನಾವಣೆಯಲ್ಲಿ ಗೆದ್ದಂತೆ, ಅದೇ ಅನುಪಾತದಷ್ಟು ಸೀಟು ಗೆಲ್ಲುತ್ತೇವೆ. ಮೊದಲ ಹಂತದ ಚುನಾವಣೆಯ ಬಳಿಕ ಎಷ್ಟು ಕ್ಷೇತ್ರವೆಂದು ಹೇಳುತ್ತೇನೆ. 

ಬಿಜೆಪಿಯಲ್ಲಿ ಟಿಕೆಟ್‌ ಸಿಗದವರಿಂದ ತೆರೆಮರೆಯ ಸಹಾಯ ನಿರೀಕ್ಷಿಸುತ್ತೀರಾ?

ನೀವೇ ನೋಡಿದ್ದೀರಲ್ಲ... ಪ್ರತಾಪ್‌ ಸಿಂಹ, ಡಿ.ವಿ. ಸದಾನಂದ ಗೌಡ, ಯಲಹಂಕ‌ ಶಾಸಕ ವಿಶ್ವನಾಥ್‌ ಮಾತು, ‘ಗೋ ಬ್ಯಾಕ್‌’ ಅಭಿಯಾನ. ಶ್ರೀನಿವಾಸ ಪ್ರಸಾದ್‌ ಅವರ ಪ್ರಭಾವವನ್ನು ಕಡೆಗಣಿಸಲು ಆಗುತ್ತದೆಯೇ? ಅವರಿಗೆ ಲಿಂಗಾಯತರು, ದಲಿತರು ಬೆಂಬಲ ನೀಡಿದ್ದರು. ಈ ಚುನಾವಣೆಯಲ್ಲಿ ಅವರೆಲ್ಲರೂ ಪಕ್ಷದ ಪರ ನಿಲ್ಲುವ ವಿಶ್ವಾಸವಿದೆ.

ಹೆಚ್ಚು ಸ್ಥಾನ ಗೆದ್ದರೆ ನೀವು ‘ಮುಖ್ಯಮಂತ್ರಿ’ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ? 

ಈ ಪ್ರಶ್ನೆಗೆ ಸಮಯ ಉತ್ತರ ಕೊಡುತ್ತದೆ. ಈಗ ಬೇಡ. ನಮ್ಮ (ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್) ಮಧ್ಯೆ ಹೊಂದಾಣಿಕೆಯಿದೆ. ಮುಂದುವರಿಸಿಕೊಂಡು ಹೋಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.