ADVERTISEMENT

ಗಿರಡ್ಡಿ, ಚಂಪಾ, ಪಟ್ಟಣಶೆಟ್ಟಿ ‘ಸಾಕ್ಷಿ ಪ್ರಜ್ಞೆ’

ಧಾರವಾಡ ಸಾಹಿತ್ಯ ಸಂಭ್ರಮ

ರವೀಂದ್ರ ಭಟ್ಟ
Published 17 ಜನವರಿ 2015, 19:40 IST
Last Updated 17 ಜನವರಿ 2015, 19:40 IST

ಧಾರವಾಡ: ಇಲ್ಲಿ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ದಿನವಾದ ಶನಿವಾರ ಸಾಕ್ಷಿ ಪ್ರಜ್ಞೆ, ಸಂಕ್ರಮಣದ ಜಟಾಪಟಿ. ಇಡೀ ದಿನ ಇಂತಹ ತುರುಸಿನ ಸಂವಾದಗಳು ನಡೆಯುತ್ತಲೇ ಹೊರಗಿನ ಚಳಿಗೆ ಒಳಗೆ ಬಿಸಿಯೇರಿಸಿದವು.

ಶನಿವಾರದ ಮೊದಲ ಗೋಷ್ಠಿಯಲ್ಲಿಯೇ ಸಿದ್ಧಲಿಂಗ ಪಟ್ಟಣಶೆಟ್ಟಿ ತಾವು ಮತ್ತು ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ ಆರಂಭಿಸಿದ ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯಿಂದ ತಾವು ಯಾಕೆ ಹೊರಗಡೆ ಬರಬೇಕಾಯಿತು ಎನ್ನುವ ಮೂಲಕ ಚರ್ಚೆಗೆ ನಾಂದಿ ಹಾಡಿದರು. ಜೊತೆಗೆ ತಾವೇ ಆರಂಭಿಸಿದ ‘ಸಂಕಲನ’ ಪತ್ರಿಕೆ 7 ವರ್ಷದ ನಂತರ ಯಾಕೆ ನಿಂತಿತು ಎನ್ನುವುದನ್ನೂ ಹೇಳಿ ಕಾವು ಏರಿಸಿದರು.

‘ಸಂಕಲನ ನಿಲ್ಲಲು ನಾನೇ ಕಾರಣ. ಯಾಕೆಂದರೆ ನಿಲ್ಲಿಸಿದ್ದು ನಾನೆ. ಆದರೆ ಪುಕ್ಕಟೆ ಪತ್ರಿಕೆ ತರಿಸಿಕೊಂಡವರು, ಚಂದಾಹಣ ಕಟ್ಟದವರು ಎಲ್ಲ ಕಡೆ ಇದ್ದಾರೆ. ನಮ್ಮ ಕರ್ನಾಟಕದಲ್ಲಿ ಬಹಳ ಇದ್ದಾರೆ’ ಎಂದು ಅವರು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಿರಡ್ಡಿ ಗೋವಿಂದರಾಜ ‘ಪತ್ರಿಕೆ ನಿಂತರೆ ಅದಕ್ಕೆ ಯಾರನ್ನೂ ಆಕ್ಷೇಪಿಸಬಾರದು’ ಎಂದರು.

‘ಇಲ್ಲ ಇಲ್ಲ, ನಾನು ಯಾರನ್ನೂ ಆಕ್ಷೇಪಿಸುವುದಿಲ್ಲ. ಗಿರಡ್ಡಿ ಅವರನ್ನೂ ಸಹ’ ಎಂದು ಪಟ್ಟಣಶೆಟ್ಟಿ ಹೇಳಿದಾಗ ಸಭಾಂಗಣದಲ್ಲಿ ನಗೆಯ ಬುಗ್ಗೆ.

ಈ ಹಂತದಲ್ಲಿ ಪ್ಷೇಕ್ಷಕರ ಸಾಲಿನಲ್ಲಿ ಎದ್ದುನಿಂತ ಪ್ರೊ.ಚಂದ್ರಶೇಖರ ಪಾಟೀಲ ‘ಸಂಕ್ರಮಣ ಪತ್ರಿಕೆಯ ಇಬ್ಬರು ಮಾಜಿ ಸಂಪಾದಕರಾದ ಗಿರಡ್ಡಿ ಗೋವಿಂದರಾಜ ಮತ್ತು ಸಿದ್ಧಲಿಂಗ ಪಟ್ಟಣ ಶೆಟ್ಟಿ ಅವರನ್ನು ಸಾಕ್ಷಿಯಾಗಿಟ್ಟುಕೊಂಡೇ ನಾನು ಮಾತನಾಡುವುದಿದೆ’ ಎಂದು ಹೇಳಿ ಇಬ್ಬರು ಬಿಟ್ಟರೂ ಈಗ ಸಂಕ್ರಮಣಕ್ಕೆ 50ರ ಸಂಭ್ರಮ. ಇಂತಹ ಪತ್ರಿಕೆಗಳನ್ನು ನಡೆಸಲು ವಿಚಿತ್ರ ಭಂಡತನ ಬೇಕು. ಅದೇ ನನ್ನ ಬಂಡವಾಳ’ ಎಂದು ನಗೆ ಸಾಗರವನ್ನು ವಿಸ್ತರಿಸಿದರು.

‘ಸತ್ತ ಪತ್ರಿಕೆಗಳಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ಜೊತೆಗೆ ಜೀವ ಇರುವ ಪತ್ರಿಕೆಗಳನ್ನು ಉಳಿಸೋಣ. ಅದಕ್ಕೆ ಒಂದೇ ಮಾರ್ಗ ಎಲ್ಲರೂ ನಿಮ್ಮ ಚಂದಾಹಣ ಕೊಟ್ಟುಬಿಡಿ’ ಎಂದಾಗ ಇನ್ನಷ್ಟು ನಗೆ ಹರಿಯಿತು.

ಅನಿಯತಕಾಲಿಕೆ!: ಗೋಪಾಲಕೃಷ್ಣ ಅಡಿಗರು ಸಾಕ್ಷಿ ಪತ್ರಿಕೆ ನಡೆಸುತ್ತಿದ್ದಾಗ ಅದರಲ್ಲಿ ಇದೊಂದು ಅನಿಯತಕಾಲಿಕೆ ಪತ್ರಿಕೆ ಎಂದು ಹೇಳಿಕೊಂಡಿದ್ದರು. ನಿರ್ದಿಷ್ಟ ಸಮಯ ಇಲ್ಲದೇ ಇರುವುದರಿಂದ 6 ತಿಂಗಳಿಗೆ ಒಮ್ಮೆ ಬಂದರೂ ಸಾಕು. ಆದರೂ ನೀವು ಬೇಗ ಬೇಗ ಲೇಖನ ಕಳಿಸಿರಪ್ಪ. ನಾವು ಬೇಗ ಪ್ರಕಟ ಮಾಡಬೇಕು ಎನ್ನುತ್ತಿದ್ದರು ಎಂದು ಪಟ್ಟಣಶೆಟ್ಟಿ ಅವರು ಹೇಳಿದಾಗಲೂ ಚಪ್ಪಾಳೆ ಸದ್ದು ಕೇಳಿಬಂತು.

ಅಮ್ಮನ ಅಂತಃಕರಣ: ವೈದೇಹಿ ತಮ್ಮ ಮಾತುಗಳ ಸಮರ್ಥನೆಗೆ ಕತೆಯೊಂದನ್ನು ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಎಂದು ಗೊತ್ತಾದಾಗ ರಾಮಚಂದ್ರ ಎಲ್ಲರ ಬಳಿಗೆ ಹೋಗಿ ನಾಳೆ ನನಗೆ ಪಟ್ಟಾಭಿಷೇಕ ಎಂದು ಹೇಳುತ್ತಿದ್ದನಂತೆ. ಎಲ್ಲರೂ ಅವನಿಗೆ ಶುಭಹಾರೈಕೆ, ಆಶೀರ್ವಾದ ಮಾಡಿದರು. ದಶರಥ ಕೂಡ ಇದನ್ನೇ ಮಾಡಿದ. ರಾಮಚಂದ್ರ ತನ್ನ ತಾಯಿ ಕೌಸಲ್ಯೆ ಬಳಿಗೂ ಹೋಗಿ ನಾಳೆ ನನಗೆ ಪಟ್ಟಾಭಿಷೇಕ ಎಂದಾಗ ಕೌಸಲ್ಯೆ ‘ಅಯ್ಯೋ ಮಗ, ಬೆಳಗಿನಿಂದ ಊಟವನ್ನೇ ಮಾಡಲಿಲ್ಲವಲ್ಲೋ, ಬೇಗ ಹೋಗಿ ಊಟ ಮಾಡು’ ಎಂದಳಂತೆ. ಈ ರೀತಿಯ ಸಂವೇದನೆ ಪುರುಷರಿಗೆ ಬಾರದು ಎಂದು ಅವರು ಹೇಳಿದರು.

ನಾಡಗೀತೆಗಳಲ್ಲಿ ಗಂಡು ಮಕ್ಕಳೇ ಯಾಕಿದ್ದಾರೆ?
ಕುವೆಂಪು ಅವರು ರಚಿಸಿದ ನಾಡಗೀತೆಯಲ್ಲಿ ಕೇವಲ ಗಂಡಸರ ಹೆಸರುಗಳೇ ಇವೆ. ಮಹಿಳೆಯರ ಹೆಸರು ಯಾಕೆ ಇಲ್ಲ. ಇಂತಹ ಪ್ರಶ್ನೆಯನ್ನು ವೈದೇಹಿ ಅವರು ತಮ್ಮ ಲೇಖನವೊಂದರಲ್ಲಿ ಎತ್ತಿದ್ದರು ಎಂದು ಟಿ.ಪಿ.ಅಶೋಕ್‌ ಹೇಳಿದರು.

ಕನ್ನಡ ಶಾಲೆ, ಉಚಿತ ಪಾಠ!: ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಕನ್ನಡ ಶಾಲೆಯೊಂದನ್ನು ಆರಂಭಿಸಲಿ ಎಂದು ಪ್ರಕಾಶಕ ಚನ್ನಬಸವಣ್ಣ ಕನ್ನಡ ಮಾಧ್ಯಮ ಮುಂದೇನು ಎಂಬ ಗೋಷ್ಠಿಯಲ್ಲಿ ಸಲಹೆ ಮಾಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಚಂಪಾ ‘ಟ್ರಸ್ಟ್ ಕನ್ನಡ ಶಾಲೆ ಆರಂಭಿಸಿದರೆ ನಾನು ಉಚಿತವಾಗಿ ಪಾಠ ಮಾಡುತ್ತೇನೆ’ ಎಂದು ಭರವಸೆ ನೀಡಿದರು. ಆಗ ಅಬ್ದುಲ್‌ ರೆಹಮಾನ್‌ ಪಾಷಾ ಅವರೂ ‘ನಾನೂ ಬರ್ತೇನೆ’ ಎಂದರು. ಸಭಾಂಗಣದಲ್ಲಿ ಇನ್ನಷ್ಟು ಧ್ವನಿಗಳೂ ಇದಕ್ಕೆ ಕೂಡಿಕೊಂಡವು.

ಪುರುಷ ಸಾಹಿತ್ಯ ಎಂಬ ಶಬ್ದವೇ ಇಲ್ಲವಲ್ಲ!
ದಿನದ ಎರಡನೇ ಗೋಷ್ಠಿ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ, ಮಹಿಳೆ, ದಲಿತ ಸಂವೇದನೆ ಗುರುತಿಸುವುದು ಸರಿಯೇ? ಎಂಬ ಬಗ್ಗೆ ನಡೆದ ಚರ್ಚೆ ಇನ್ನಷ್ಟು ಭಿರುಸಾಗಿತ್ತು. ದಲಿತ ಸಾಹಿತಿ, ಮುಸ್ಲಿಂ ಸಾಹಿತಿ, ಮಹಿಳಾ ಸಾಹಿತಿ ಎಂದು ಕರೆಯುವುದು ಸರಿಯೇ ತಪ್ಪೇ ಎಂದು ಜೋರು ಚರ್ಚೆ ನಡೆಯುತ್ತಿದ್ದಾಗ ತಣ್ಣನೆಯ ಧ್ವನಿಯಲ್ಲಿ ಮಾತು ಆರಂಭಿಸಿದ ವೈದೇಹಿ ‘ಪುರುಷ ಸಾಹಿತಿ ಎಂಬ ಶಬ್ದವೇ ಇಲ್ಲವಲ್ಲ. ನಮಗಾದರೆ ಮಹಿಳಾ ಸಾಹಿತಿ ಎಂಬ ಹೆಸರು ಇದೆ. ನಿಮಗೆ ಒಂದು ಹೆಸರೂ ಇಲ್ಲ’ ಎಂದು ಹೇಳುತ್ತ ಚರ್ಚೆಗೆ ರಂಗು ಏರಿಸಿದರು.
‘ನೀವು ಗಂಡಸರು ನಮ್ಮ ಮುಖ ನೋಡಿದಿರಿ. ತುಟಿ, ನಾಭಿ, ಇನ್ನು ಏನೇನೋ ನೋಡಿದಿರಿ. ನಿಮಗೆ ನಮ್ಮ ದೇಹವೇ ಮುಖ್ಯವಾಗಿತ್ತು. ಆದರೆ ನಾವು ಮಹಿಳೆಯರು ನಿಮ್ಮ ಶೌರ್ಯ ನೋಡಿದೆವು, ಬುದ್ಧಿ ಶಕ್ತಿ ನೋಡಿದೆವು. ನಿಮಗೆ ಯಾಕೆ ಈ ಬುದ್ಧಿ ಇರಲಿಲ್ಲ’ ಎಂದು ಪ್ರಶ್ನಿಸುವ ಮೂಲಕ ಕೆಣಕಿದರು.


ಪ್ರಕರಣ ವಾಪಸು ಪಡೆದ ಆಚಾರ್ಯ!
ಅಬ್ದುಲ್‌ ರಷೀದ್‌ ಅವರ ಜಮೀನಿನ ಪಕ್ಕ ಆಚಾರ್ಯರೊಬ್ಬರದು ಜಮೀನು ಇತ್ತಂತೆ. ಆ ಆಚಾರ್ಯರು ಯಾವುದೋ ಕ್ಷುಲ್ಲಕ ಕಾರಣಕ್ಕೆ ರಷೀದ್ ಮೇಲೆ ಕೇಸ್‌ ದಾಖಲಿಸಿದರಂತೆ. ಆಗ ರಷೀದ್‌ ‘ಅಯ್ಯೋ ನಾನೂ ಕೂಡ ಆಚಾರ್ಯರ ವಂಶದವನೆ ಕಣ್ರಿ. ನನ್ನ ಮುತ್ತಾತನ ತಾತ ಆಚಾರ್ಯನೇ ಆಗಿದ್ದರು. ಟಿಪ್ಪು ಬಂದು ನಮ್ಮನ್ನು ಮತಾಂತರ ಮಾಡಿಸಿ ಬಿಟ್ಟ’ ಎಂದು ಸಣ್ಣ ಸುಳ್ಳೊಂದನ್ನು ಹೇಳಿದರಂತೆ. ಆಗ ಆಚಾರ್ಯ ಕೇಸ್ ವಾಪಸು ಪಡೆದರಂತೆ. ರಷೀದ್‌ ಈ ಕತೆ ಹೇಳಿದಾಗ ಮತ್ತೆ ಸಭೆಯಲ್ಲಿ ನಗೆಯ ಅಲೆ.

‘ಭಂಡತನವೇ ಬಂಡವಾಳ’

ತಂದೆ ಕವನ ವಾಚಿಸಿದ ಮಗ

ಅಮೃತಬಳ್ಳಿ ಕಷಾಯದ ಕವಿಯ ಅಮೃತ ಹಸ್ತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.