ADVERTISEMENT

ಮಹಿಳಾ ’ಮತ’ ಸೆಳೆತ: ಬಿಜೆಪಿ ಪಥ

ವೈ.ಗ.ಜಗದೀಶ್‌
Published 2 ಏಪ್ರಿಲ್ 2024, 0:24 IST
Last Updated 2 ಏಪ್ರಿಲ್ 2024, 0:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಆಡಳಿತ ನಡೆಸುವವರು, ರಾಜಕಾರಣ ಮಾಡುವವರು, ನೀತಿಗಳನ್ನು ರೂಪಿಸುವವರು ಗಂಡಸರೇ ಆದರೂ ಮತ ಹಾಕಲು, ಚುನಾವಣೆ ವೇಳೆ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು, ನಾಯಕರು ಬಂದಾಗ ಜನಸಾಗರ ಸೇರಿದಂತೆ ತೋರಿಸಲು ಮಹಿಳೆಯರೇ ಬೇಕು. ದೇಶದ ಒಟ್ಟು ಜನಸಂಖ್ಯೆಯಲ್ಲಿ, ಪ್ರತಿ ಕುಟುಂಬದಲ್ಲಿ ಸ್ತ್ರೀಶಕ್ತಿಯ ಪಾಲು ಅರ್ಧದಷ್ಟಿದ್ದರೂ ಅಧಿಕಾರ ತಮ್ಮ ಮುಷ್ಟಿಯೊಳಗೇ ಇರಬೇಕು ಎಂಬುದು ಪುರುಷರ ಠೇಂಕಾರ. ತಮ್ಮ ಬಳಿಯೇ ಅಧಿಕಾರ ಇರಬೇಕು ಎಂದು ಬಯಸುವ ಪುರುಷಾಧಿಪತ್ಯ, ತಮಗೆ ನಿಷ್ಠೆಯಿಂದ ಮತ ಹಾಕುವ ತಾಯಂದಿರ ಮತ ಸೆಳೆಯಲು ವಿವಿಧ ಬಗೆಯ ಕಸರತ್ತುಗಳನ್ನು, ಆಸೆ–ಆಮಿಷಗಳನ್ನು, ಯೋಜನೆ–ಸಹಾಯಧನವನ್ನು ನೀಡುತ್ತಲೇ ಬಂದಿದೆ. 

ಅದೇನೂ ಇಂದು–ನಿನ್ನೆಯ ಕತೆಯಲ್ಲ. ಕರ್ನಾಟಕದಲ್ಲಿ ಮಹಿಳಾ ಮತ ಸೆಳೆಯಲು ಕಾಂಗ್ರೆಸ್‌ ಪಕ್ಷ ‘ಗ್ಯಾರಂಟಿ’ಗಳನ್ನು ಘೋಷಿಸಿ ಅದರಲ್ಲಿ ಯಶಸ್ಸನ್ನೂ ಪಡೆಯಿತು. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ, ಅರ್ಧದಷ್ಟಿರುವ ಮಹಿಳಾ ಮತದಾರರನ್ನು ಬಿಜೆಪಿಯೆಡೆಗೆ ಆಕರ್ಷಿಸಲು ಹಲವು ಯೋಜನೆಗಳನ್ನು ಘೋಷಿಸುತ್ತಲೇ ಬಂದಿದ್ದಾರೆ. ಅವುಗಳಲ್ಲಿ ಬಹುತೇಕವು ಅನುಷ್ಠಾನವಾಗಿವೆ. ಆಕರ್ಷಕ ಹೆಸರು ಬಳಸಿ ಸೂಜಿಗಲ್ಲಿನಂತೆ ಜನರನ್ನು ಸೆಳೆಯುವುದು ಮೋದಿಯವರಿಗಂತೂ ಕರಗತ. ಹೀಗೆ ಚುಂಬಕ ಹೆಸರುಗಳನ್ನು ಹೊಂದಿದ ಯೋಜನೆಗಳು ನೇರ ನಗದು ವರ್ಗಾವಣೆ ಮೂಲಕ ಮಹಿಳೆಯರಿಗೆ ನೇರವಾಗಿ ತಲುಪುವ ಯೋಜನೆಗಳೇ ಆಗಿವೆ.

ADVERTISEMENT

ಕಾಂಗ್ರೆಸ್ ಅಥವಾ ಯುಪಿಎ ಸರ್ಕಾರಗಳು ಕೇಂದ್ರದಲ್ಲಿ ಅಧಿಕಾರ ನಡೆಸಿದಾಗ ಮಹಿಳಾ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದವು. ಅವುಗಳಲ್ಲಿ ಕೆಲವು ಕಾರ್ಯಕ್ರಮಗಳ ಹೆಸರನ್ನು ಬದಲಾಯಿಸಿ, ಹೊಸರೂಪ ಕೊಟ್ಟು ಭಾರಿ ಪ್ರಚಾರವನ್ನು ಪಡೆಯುವ ತಂತ್ರಗಾರಿಕೆಯನ್ನು ಮೋದಿ ಸರ್ಕಾರ ಮಾಡುತ್ತಾ ಬಂದಿತು. ಸ್ವಚ್ಛ ಭಾರತ್‌ ಯೋಜನೆ ಇಂತಹದರಲ್ಲಿ ಒಂದು. 

ಹಳ್ಳಿಗಳಲ್ಲಿ ಸೌದೆ ಅಥವಾ ಸೀಮೆ ಎಣ್ಣೆ ಸ್ಟೌ ಬಳಸಿ ಹೊಗೆಯ ಉರಿಯಲ್ಲಿ ಬೇಯುತ್ತಿದ್ದ ಮಹಿಳೆಯರ ಕಷ್ಟ ತಲುಪಿಸಲು ಜಾರಿಗೆ ತಂದ ‘ಉಜ್ವಲ’ ಯೋಜನೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೈಹಿಡಿದಿತ್ತು. ಆದರೆ, ಈಚೆಗಿನ ವರ್ಷಗಳಲ್ಲಿ ಸಿಲಿಂಡರ್ ದುಬಾರಿಯಾಗಿ, ಜನರು ಸೌದೆಗಳ ಮೊರೆಹೋಗಿದ್ದೂ ಉಂಟು.

ಕೇಂದ್ರದಲ್ಲಿ ಅಧಿಕಾರ ಹಿಡಿದಾರಭ್ಯ ಬಿಜೆಪಿಯು ಮಹಿಳಾ ಕೇಂದ್ರೀತ ಯೋಜನೆಗಳನ್ನು ಘೋಷಿಸುವ ಮೂಲಕ, ತಮ್ಮ ಮತಬ್ಯಾಂಕ್‌ ಅನ್ನು ಭದ್ರಪಡಿಸಿಕೊಳ್ಳುವ ಕೆಲಸಕ್ಕೆ ಕೈಹಾಕಿತು. ಮಹಿಳಾ ಸ್ವಾವಲಂಬನೆಯ ಆಶಯವೂ ಇದರ ಹಿಂದಿತ್ತಾದರೂ, ಒಮ್ಮೆ ನಂಬಿದರೆ ಕೈಬಿಡದ ಮಹಿಳೆಯರ ಮತಗಳ ಖಾತರಿಪಡಿಸಿಕೊಳ್ಳುವ ದೂರದೃಷ್ಟಿಯೂ ಇದರ ಬೆನ್ನಿಗಿತ್ತು ಎಂಬುದನ್ನು ಅಲ್ಲಗಳೆಯಲಾಗದು. 

ಧರ್ಮದ್ವೇಷದ ರಾಜಕಾರಣವನ್ನು ಬಿಜೆಪಿ ಮುಂದುವರಿಸಿಕೊಂಡೇ ಬಂದಿದೆ. ಮುಸ್ಲಿಂ ಸಮುದಾಯದ ಧಾರ್ಮಿಕ ಸಂಗತಿಯಾಗಿದ್ದ ‘ತ್ರಿವಳಿ ತಲಾಖ್‌’ ವಿಷಯವನ್ನು ಬಿಜೆಪಿ ರಾಜಕೀಯ ವೇದಿಕೆಗೆ ತಂದಿತ್ತು. ದೇಶವ್ಯಾಪಿ ಇದನ್ನು ಚರ್ಚೆಯಾಗುವಂತೆ ನೋಡಿಕೊಂಡಿತು. ಕೊನೆಗೆ ತ್ರಿವಳಿ ತಲಾಖ್‌ ರದ್ದುಪಡಿಸುವ ಕಾನೂನು ಜಾರಿಗೊಳಿಸಿತು. ‘ತಲಾಖ್‌’ ಅಸ್ತ್ರವನ್ನು ಬಳಸಿ, ಮಹಿಳೆಯರನ್ನು ಶೋಷಿಸುತ್ತಿದ್ದ ಪದ್ಧತಿಗೆ ತಡೆಹಾಕುವ ಉದ್ದೇಶ ಇದರ ಹಿಂದಿದೆ; ಮುಸ್ಲಿಂ ಮಹಿಳೆಯರ ಏಳಿಗೆ–ಹಿತಕ್ಕಾಗಿ ಇದನ್ನು ಜಾರಿಗೊಳಿಸಲಾಗಿದೆ’ ಎಂದು ಬಿಜೆಪಿ ಬಿಂಬಿಸಿತು. ಮೇಲ್ನೋಟಕ್ಕೆ ಇದು ಸದಾಶಯದಂತೆ ಕಂಡರೂ, ಇದು ಮುಸ್ಲಿಂ ಸಮುದಾಯದ ಮಹಿಳೆಯರ ಮತಗಳನ್ನು ಸೆಳೆಯುವ ತಂತ್ರಗಾರಿಕೆಯ ಭಾಗವಾಗಿತ್ತು. ಮುಸ್ಲಿಂ ಮಹಿಳೆಯರ ಬಗ್ಗೆ ನೈಜ ಕಾಳಜಿ ಇದ್ದುದೇ ನಿಜವಾದರೆ, ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತರುವ ಯತ್ನವನ್ನೂ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಮಾಡಬೇಕಿತ್ತು; ಆದರೆ, ಅಂತಹ ಯಾವುದೇ ಕುರುಹುಗಳು ಕಳೆದ 10 ವರ್ಷಗಳಲ್ಲಿ ಸಿಗುವುದಿಲ್ಲ.

ಮಹಿಳಾ ಮತದಾರರ ಓಲೈಕೆಗಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ರೂಪಿಸಿದೆ. ನಾರೀಶಕ್ತಿ, ಡ್ರೋನ್ ದೀದಿ, ಲಖ್‌ಪತಿ ದೀದಿ, ಬೇಟಿ ಪಡಾವೋ ಬೇಟಿ ಬಚಾವೋ ಎಂಬಿತ್ಯಾದಿ ಚೆಂದ ಚೆಂದದ ಹೆಸರುಗಳಲ್ಲಿ ಅವು ಹೊಳೆಯುತ್ತಿವೆ. ಬೇಟಿ ಪಡಾವೋ ಪರಿಣಾಮ ಅವಲೋಕಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ದೊಡ್ಡ ಮಟ್ಟದ ಕ್ರಾಂತಿಕಾರಕ ಬದಲಾವಣೆಯಾದ ಸೂಚನೆಗಳು ಕಾಣಸಿಗುತ್ತಿಲ್ಲ. ಬೇಟಿ ಬಚಾವೋ ಅಂದರೆ ಹೆಣ್ಣುಮಗುವಿನ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿದೆಯಾದರೂ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಯುವತಿಯರು–ಮಹಿಳೆಯರ ರಕ್ಷಣೆ ಎಷ್ಟರಮಟ್ಟಿಗೆ ಆಗಿದೆ ಎಂಬುದಕ್ಕೆ ವಿಶೇಷ ಉಲ್ಲೇಖಗಳೇನೂ ಬೇಕಿಲ್ಲ. ಮಹಿಳೆಯರಿನ್ನೂ ಮನೆಯೊಳಗೆ ಇರಬೇಕೆಂಬ ವೈದಿಕ ಧರ್ಮದ ಹೇರಿಕೆಗಳ ಕುರಿತಾಗಿ ಎಂದೂ ಆ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದಿಲ್ಲ. ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯಾಗಿ ನೋಡುವ ವಿಷಯದಲ್ಲಿ ಆ ಪಕ್ಷದ ಸಾಂಪ್ರದಾಯಿಕ ನಿಲುವಿನಲ್ಲೇನೂ ಬದಲಾವಣೆಯಾಗಿಲ್ಲ.

ಇದಕ್ಕೆಲ್ಲ ಬೊಟ್ಟು ಇಟ್ಟಂತೆ ರಾಷ್ಟ್ರಪತಿ ಆಯ್ಕೆ ಮಾಡುವಾಗ ಮಹಿಳೆಯೊಬ್ಬರಿಗೆ ಉನ್ನತ ಗೌರವವನ್ನು ಕಲ್ಪಿಸಿರುವುದಾಗಿ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಅದರಲ್ಲೂ, ಅವರು ಬುಡಕಟ್ಟು ಮಹಿಳೆ ಎಂಬ ‘ಹೆಗ್ಗಳಿಕೆ’ಯನ್ನು ತಮ್ಮ ಮುಡಿಗೆ ಪೇರಿಸಿಕೊಳ್ಳುತ್ತದೆ. ಸಂಸತ್ ಭವನ ಉದ್ಘಾಟನೆಗಾಗಲಿ, ರಾಮಮಂದಿರ ಶಿಲಾನ್ಯಾಸ ಮತ್ತು ಬಾಲರಾಮನ ಪ್ರತಿಷ್ಠಾಪನೆಯಂತಹ ಕಾರ್ಯಕ್ರಮದಲ್ಲಿ ಅವರನ್ನು ‘ಅಸ್ಪೃಶ್ಯ’ರನ್ನಾಗಿಯೇ ನೋಡಿ, ಹೊರಗಿಡಲಾಯಿತು. ಮತದ ಕಾರಣಕ್ಕೆ ‘ಮಹಿಳೆ–ಬುಡಕಟ್ಟು’ ವಾದವನ್ನು ಮುಂದಿಟ್ಟಿದ್ದೇ ವಿನಾ ಅದರಲ್ಲಿ, ನೈಜ ಕಾಳಜಿಯನ್ನೇನೂ ತೋರಲಿಲ್ಲ.

ಇಷ್ಟೆಲ್ಲ ಮಾಡಿಯೂ 2019ರಲ್ಲಿ ಮಹಿಳೆಯರು ಒಂದಿಷ್ಟು ಪ್ರಮಾಣದಲ್ಲಿ ನಿಂತಂತೆ 2024ರಲ್ಲಿ ನಿಲ್ಲುತ್ತಾರೆಯೇ? ಕಮಲ ಅರಳಿಸಲು ತಮ್ಮ ಶಕ್ತಿ ಧಾರೆ ಎರೆಯುತ್ತಾರೆಯೇ ಎಂಬುದನ್ನು ಫಲಿತಾಂಶವಷ್ಟೇ ಹೇಳಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.