ADVERTISEMENT

ಮರಿಮಲ್ಲಪ್ಪ ಶಾಲೆ ಚಾಂಪಿಯನ್‌

ಶಾರದಾ ವಿದ್ಯಾಲಯ ರನ್ನರ್ಸ್‌ ಅಪ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2015, 20:07 IST
Last Updated 16 ಜನವರಿ 2015, 20:07 IST
‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್ನರು..... ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ವತಿಯಿಂದ ‘ದೀಕ್ಷಾ ನೆಟ್‌ವರ್ಕ್‌’ ಪ್ರಾಯೋಜಕತ್ವದಲ್ಲಿ  ಬೆಂಗಳೂರಿ­ನಲ್ಲಿ ಶುಕ್ರ­ವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌’ನಲ್ಲಿ ಮೊದಲ ಸ್ಥಾನ ಗಳಿಸಿದ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿಯ­ರಾದ ವೈಷ್ಣವಿ ಸಿ. ಹಾಗೂ ಸುಷ್ಮಿತಾ ಎಸ್. ಅವರನ್ನು ನಟ ರಮೇಶ್ ಅರವಿಂದ್ ಅಭಿನಂದಿಸಿದರು 	 	–ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್ನರು..... ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ವತಿಯಿಂದ ‘ದೀಕ್ಷಾ ನೆಟ್‌ವರ್ಕ್‌’ ಪ್ರಾಯೋಜಕತ್ವದಲ್ಲಿ ಬೆಂಗಳೂರಿ­ನಲ್ಲಿ ಶುಕ್ರ­ವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌’ನಲ್ಲಿ ಮೊದಲ ಸ್ಥಾನ ಗಳಿಸಿದ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿಯ­ರಾದ ವೈಷ್ಣವಿ ಸಿ. ಹಾಗೂ ಸುಷ್ಮಿತಾ ಎಸ್. ಅವರನ್ನು ನಟ ರಮೇಶ್ ಅರವಿಂದ್ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸ­ಲಾ­ಗಿದ್ದ ‘ಪ್ರಜಾವಾಣಿ ಕ್ವಿಜ್‌‘ ಸ್ಪರ್ಧೆಯಲ್ಲಿ ಮೈಸೂರಿನ ಮರಿ­ಮಲ್ಲಪ್ಪ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಂಗಳೂರಿನ ಶಾರದಾ ವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು.

ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಚಿತ್ರನಟ, ನಿರ್ದೇಶಕ ರಮೇಶ್‌ ಅರವಿಂದ್ ‘ಕ್ವಿಜ್‌ ಮಾಸ್ಟರ್‌’ ಆಗಿ ಫೈನಲ್‌ ಸ್ಪರ್ಧೆ ನಡೆಸಿಕೊಟ್ಟರು. ಐದು ಸುತ್ತುಗಳ ಪ್ರಶ್ನೆ ಕೇಳಲಾ­ಯಿತು. ಈ ಸುತ್ತುಗಳಲ್ಲಿ ಮರಿಮಲ್ಲಪ್ಪ ಹಾಗೂ ಶಾರದಾ ವಿದ್ಯಾಲಯದ ನಡುವೆ ತುರುಸಿನ ಪೈಪೋಟಿ ಕಂಡು ಬಂತು. ಫೈನಲ್‌ ಅಂತ್ಯದ ವೇಳೆಗೆ ಮರಿ­ಮಲ್ಲಪ್ಪ ಪ್ರೌಢಶಾಲೆ ಹಾಗೂ ಶಾರದಾ ವಿದ್ಯಾಲಯ ತಂಡಗಳು ತಲಾ 70 ಅಂಕಗಳನ್ನು ಗಳಿಸಿದವು. ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್‌ ಮೊರೆ ಹೋಗಲಾಯಿತು.

ಟೈಬ್ರೇಕರ್‌ನಲ್ಲಿ ಮೂರು ಪ್ರಶ್ನೆ­ಗಳನ್ನು ಕೇಳಲಾಯಿತು. ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿಗಳು ಎರಡು ಪ್ರಶ್ನೆಗಳಿಗೆ ಹಾಗೂ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು ಒಂದು ಪ್ರಶ್ನೆಗೆ ಸರಿ ಉತ್ತರ ನೀಡಿದರು.

ಹೀಗಾಗಿ ಮರಿಮಲ್ಲಪ್ಪ ಪ್ರೌಢಶಾಲೆ ಚಾಂಪಿ­ಯನ್‌ ಆಯಿತು. 35 ಅಂಕ ಗಳಿಸಿದ ಶಿವಮೊಗ್ಗದ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆಯ ಬಿ ತಂಡ ಮೂರನೇ ಸ್ಥಾನ ಗಳಿಸಿತು. ಮೊದಲನೇ ಸ್ಥಾನ ಗಳಿಸಿದ ಮರಿ­ಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ­ಯರಾದ ಸುಷ್ಮಿತಾ ಎಸ್. ಹಾಗೂ ವೈಷ್ಣವಿ ಸಿ. ಅವರಿಗೆ ಲ್ಯಾಪ್‌ಟಾಪ್‌, ದ್ವಿತೀಯ ಸ್ಥಾನ ಗಳಿಸಿದ ಮಂಗಳೂರಿನ ಶಾರದಾ ವಿದ್ಯಾಲಯದ ವಿದ್ಯಾರ್ಥಿ­ಗಳಾದ ಪ್ರಜ್ಞಾ ಎನ್‌.ಹೆಬ್ಬಾರ್‌ ಹಾಗೂ ಜೆ.ರಕ್ಷಿತ್‌ ಕುಮಾರ್‌ ಅವರಿಗೆ ಕ್ಯಾಮೆರಾ ಮತ್ತು  ಮೂರನೇ ಸ್ಥಾನ ಗಳಿಸಿದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿಗಳಾದ ಭರತ್‌  ಎಚ್‌.ಎನ್‌. ಹಾಗೂ ಕಿಶೋರ್ ಭಟ್ ಅವರಿಗೆ  ಟ್ಯಾಬ್‌ ನೀಡಲಾಯಿತು. ಉಳಿದ ಮೂರು ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಸೆಮಿಫೈನಲ್‌ ಸ್ಪರ್ಧೆ:
ಬೆಳಿಗ್ಗೆ ಸೆಮಿಫೈನಲ್‌ ಸ್ಪರ್ಧೆಗಳು ನಡೆದವು. ಆರು ವಲಯಗಳ 12 ತಂಡಗಳು ಸೆಮಿಫೈನಲ್‌ನಲ್ಲಿ ಪಾಲ್ಗೊಂಡವು. ಮೊದಲ ಸೆಮಿಫೈನಲ್‌­ನಲ್ಲಿ ಅಧಿಕ ಅಂಕ ಗಳಿಸಿದ ಮಂಗಳೂರಿನ ಶಾರದಾ ವಿದ್ಯಾಲಯ, ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ತಂಡ, ರಾಜಾಜಿನಗರದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್ ತಂಡಗಳು ಫೈನಲ್‌ ಪ್ರವೇಶಿಸಿದವು. ವಾಲ್‌ನಟ್ ನಾಲೆಡ್ಜ್‌ ಸಂಸ್ಥೆಯ ಸಚಿನ್ ರವಿ ಕ್ವಿಜ್ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸಿದರು.

ಎರಡನೇ ಸೆಮಿಫೈನಲ್‌ನಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಧಾರವಾಡದ ಶಾಂತಿಸದನ ಪ್ರೌಢಶಾಲೆ, ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆ, ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢಶಾಲೆ ತಂಡ­ಗಳು ಫೈನಲ್‌ ಪ್ರವೇಶಿಸಿದವು. ವಾಲ್‌­ನಟ್ ನಾಲೆಡ್ಜ್‌ ಸಂಸ್ಥೆಯ ರಾಘವ ಚಕ್ರವರ್ತಿ ಸ್ಪರ್ಧೆ ನಡೆಸಿಕೊಟ್ಟರು. ಆರು ವಲಯಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ 705 ಶಾಲೆಗಳ 5,050 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿ ವಲಯದಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದವು. 

ವಿಜೇತರಿಗೆ ನಟ ರಮೇಶ್ ಅರವಿಂದ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮ್ಮದ್ ಮೊಹಿಸಿನ್‌ ಬಹುಮಾನ ವಿತರಿಸಿದರು. ‘ಪ್ರಜಾವಾಣಿ’ ಸಂಪಾದಕ ಕೆ.ಎನ್‌. ಶಾಂತಕುಮಾರ್‌, ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ದೀಕ್ಷಾ ನೆಟ್‌ವರ್ಕ್‌ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಶ್ರೀಧರ್‌, ಲಲಿತಾ ಶ್ರೀಧರ್‌ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಧೆಗೆ ದೀಕ್ಷಾ ನೆಟ್‌ವರ್ಕ್ ಪ್ರಾಯೋಜಕತ್ವ ವಹಿಸಿತ್ತು.

ಚಾಂಪಿಯನ್ನರ ಬಲ, ಸೋತವರ ಛಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.