ADVERTISEMENT

IPL 2024: ವಿರಾಮ ಪಡೆದ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್‌

ಪಿಟಿಐ
Published 16 ಏಪ್ರಿಲ್ 2024, 13:30 IST
Last Updated 16 ಏಪ್ರಿಲ್ 2024, 13:30 IST
<div class="paragraphs"><p>ಮ್ಯಾಕ್ಸ್‌ವೆಲ್‌</p></div>

ಮ್ಯಾಕ್ಸ್‌ವೆಲ್‌

   

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ ಅನಿರ್ದಿಷ್ಟಾವಧಿಗೆ ‘ಮಾನಸಿಕ ಮತ್ತು ದೈಹಿಕ’ ವಿರಾಮ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ನಿರ್ಧರಿಸಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಆದ ಬೆರಳಿನ ಗಾಯದಿಂದ ಅವರು ಆಡಿರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಆದರೆ ತಂಡದಿಂದ ತಾವೇ ಹಿಂದೆ ಸರಿದಿರುವುದಾಗಿ 35 ವರ್ಷದ ಮ್ಯಾಕ್ಸ್‌ವೆಲ್‌  ಒಪ್ಪಿಕೊಂಡಿದ್ದಾರೆ.

ADVERTISEMENT

‘ಇದು ಸುಲಭದ ನಿರ್ಧಾರವಾಗಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ನಂತರ ನಾನು ಫಫ್ (ಡುಪ್ಲೆಸಿ) ಮತ್ತು ಕೋಚ್‌ಗಳ ಬಳಿ ಹೋಗಿ, (ನನ್ನ ಬದಲು) ಬೇರೊಬ್ಬರನ್ನು ಪ್ರಯತ್ನಿಸಲು ಇದು ಸೂಕ್ತ ಸಮಯ ಎಂದಿದ್ದೆ’ ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ನನಗೆ ಈಗ ಮಾನಸಿಕ ಮತ್ತು ದೈಹಿಕ ವಿಶ್ರಾಂತಿ ಬೇಕಾಗಿದೆ. ದಣಿದಿರುವ ದೇಹವನ್ನು ಸುಸ್ಥಿತಿಗೆ ತರಬೇಕಾಗಿದೆ’  ಎಂದು ಅವರು ಹೇಳಿದರು.

ವಿಶ್ರಾಂತಿ ಕಾರಣಕ್ಕೆ ಮ್ಯಾಕ್ಸ್‌ವೆಲ್‌ ತಂಡದಿಂದ ಹಿಂದೆ ಸರಿಯುತ್ತಿರುವುದು ಇದು ಎರಡನೇ ಸಲ. 2019ರ ಅಕ್ಟೋಬರ್‌ನಲ್ಲೂ ಅವರು ಮಾನಸಿಕ ಮತ್ತು ದೈಹಿಕ ವಿಶ್ರಾಂತಿ ಕಾರೆಣ ನೀಡಿ ಸ್ಪರ್ಧಾತ್ಮಕ ಕಾರಣ ನೀಡಿ ಹಿಂದೆಸರಿದಿದ್ದರು. ಕೆಲವು ತಿಂಗಳ ನಂತರ ಅವರು ತಂಡಕ್ಕೆ ಮರಳಿದ್ದರು.

ಹಾಲಿ ಐಪಿಎಲ್‌ನಲ್ಲಿ ಅವರ ಆಟ ತಳಕಂಡಿತ್ತು. ಆರು ಪಂದ್ಯಗಳಿಂದ 5.33 ಸರಾಸರಿಯಲ್ಲಿ ಬರೇ 32 ರನ್‌ ಗಳಿಸಿದ್ದಾರೆ. ಸ್ಟ್ರೈಕ್‌ ರೇಟ್‌ 94. ಕೆಕೆಆರ್‌ ವಿರುದ್ಧ ಗಳಿಸಿದ 28 ರನ್ ವೇಳೆಯೂ ಅವರಿಗೆ ಎರಡು ಜೀವದಾನ ದೊರಕಿತ್ತು.

‘ನಾನು ಬ್ಯಾಟ್‌ನಿಂದ ಕೊಡುಗೆ ನೀಡಲಾಗುತ್ತಿಲ್ಲ. ಪಾಯಿಂಟ್‌ ಪಟ್ಟಿಯಲ್ಲಿ ನಮ್ಮ ತಂಡದ ಸ್ಥಾನ ನೋಡಿದರೆ, ಬೇರೊಬ್ಬರಿಗೆ ಅವಕಾಶ ಇದು ಸಕಾಲ. ಯಾರಾದರೊಬ್ಬರು ಒಳ್ಳೆಯ ಪ್ರದರ್ಶನದಿಂದ ಆ ಸ್ಥಾನಕ್ಕೆ ಸರಿಹೊಂದಬಹುದು ಎನ್ನುವ ವಿಶ್ವಾಸವಿದೆ’ ಎಂದು ಅರು ಹೇಳಿದರು.

ಟೂರ್ನಿಯ ನಂತರದ ಹಂತದಲ್ಲಿ ತಂಡಕ್ಕೆ ಮರಳಿ ಉತ್ತಮ ಸಾಧನೆ ತೋರಬಲ್ಲೆ ಎನ್ನವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಅವರ ಫಾರ್ಮ್‌ ಕುಸಿತ ಅಚ್ಚರಿ ಮೂಡಿಸಿತ್ತು. ಐಪಿಎಲ್‌ಗಿಂತ ಮೊದಲು ನವೆಂಬರ್‌ನಿಂದ ಆರಂಭವಾಗುವಂತೆ 17 ಟಿ20 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 552 ರನ್‌ ಕಲೆಹಾಕಿದ್ದರು. ಸ್ಟ್ರೈಕ್‌ರೇಟ್‌ ಕೂಡ (185) ಉತ್ತಮವಾಗಿಯೇ ಇತ್ತು.

ಹೊಸದಲ್ಲ:

ಐಪಿಎಲ್‌ನಲ್ಲಿ ಅವರ ಫಾರ್ಮ್ ಪ್ರಪಾತಕ್ಕೆ ಕುಸಿದಿರುವುದು ಕೂಡ ಹೊಸದೇನಲ್ಲ. 2020ರ ಸಾಲಿನಲ್ಲಿ ಪಂಜಾಬ್ ಕಿಂಗ್ಸ್‌ ಪರ ಆಡಿದ್ದ ವೇಳೆ 11 ಪಂದ್ಯಗಳಿಂದ ಬರೇ 108 ರನ್ ಗಳಿಸಿದ್ದರು. ಒಂದೂ ಸಿಕ್ಸರ್‌ ಇರಲಿಲ್ಲ.

‘ಆದರೆ ಆ ವೇಳೆ ನಾನು ಹೆಚ್ಚು ಕಮ್ಮಿ ಸ್ಪಿನ್ನರ್‌ ಪಾತ್ರ ನಿರ್ವಹಿಸುತ್ತಿದ್ದೆ. ಕೆ.ಎಲ್‌ (ರಾಹುಲ್‌) ಮತ್ತು ಮಯಂಕ್‌ (ಅಗರವಾಲ್‌) ಆಗ ಪ್ರಮುಖ ರನ್‌ಗಳಿಕೆದಾರರಾಗಿದ್ದರು’ ಎಂದು ಅವರು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.