ADVERTISEMENT

‘ಭ್ರಷ್ಟ ಜನತಾ ಪಕ್ಷ’ ಎಂದ ಠಾಕ್ರೆ:‘ಖಿಚಡಿ’, ‘ಬಾಡಿ ಬ್ಯಾಗ್’ ಹಗರಣ ನೆನಪಿಸಿದ BJP

ಪಿಟಿಐ
Published 31 ಮಾರ್ಚ್ 2024, 12:00 IST
Last Updated 31 ಮಾರ್ಚ್ 2024, 12:00 IST
<div class="paragraphs"><p>ಚಂದ್ರಶೇಖರ್‌ ಬವಾಂಕುಲೆ ಮತ್ತು ಉದ್ಧವ್ ಠಾಕ್ರೆ </p></div>

ಚಂದ್ರಶೇಖರ್‌ ಬವಾಂಕುಲೆ ಮತ್ತು ಉದ್ಧವ್ ಠಾಕ್ರೆ

   

ಮುಂಬೈ: ಬಿಜೆಪಿ ಎಂದರೆ ‘ಭ್ರಷ್ಟ ಜನತಾ ಪಕ್ಷ’ ಎಂದು ಕರೆದಿರುವ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ವಿರುದ್ಧ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬವಾಂಕುಲೆ ಅವರು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಉದ್ಧವ್ ಠಾಕ್ರೆ ಅವರು ತಾವು ಮುಖ್ಯಮಂತ್ರಿಯಾಗಿದ್ದ ನಡೆದಿರುವ ‘ಖಿಚಡಿ’, ‘ಕೋವಿಡ್ ಬಾಡಿ ಬ್ಯಾಗ್’ ಹಗರಣಗಳ ಬಗ್ಗೆ ಮೌನವಹಿಸಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಹಿಂದಿನ ಉದ್ಧವ್ ಠಾಕ್ರೆ ಸರ್ಕಾರದ ಭ್ರಷ್ಟಾಚಾರದ ಹಗರಣಗಳ ಬಗ್ಗೆ ನಮ್ಮ ಡಿಸಿಎಂ ದೇವೇಂದ್ರ ಫಡಣವೀಸ್‌ ಅವರು ಸಿನಿಮಾ ಮಾಡಿದರೆ, ಅವುಗಳಿಗೆ ‘ಖಿಚಡಿ ಫೈಲ್ಸ್’, ‘ಕೋವಿಡ್ ಬಾಡಿ ಬ್ಯಾಗ್ ಫೈಲ್ಸ್’, ‘ಲಾಡೆನ್ ಫೈಲ್ಸ್’ ಎಂದು ಹೆಸರಿಡಬಹುದು. ಜತೆಗೆ ಅವುಗಳ ಮೂಲಕ ₹100 ಕೋಟಿ ವೆಚ್ಚದ ರಿಕವರಿ ಫೈಲ್‌ಗಳ ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ’ ಎಂದು ಬವಾಂಕುಲೆ ವಂಗ್ಯವಾಡಿದ್ದಾರೆ.

‘ಕೋವಿಡ್ ಸಮಯದಲ್ಲಿ ‘ಖಿಚಡಿ’ ವಿತರಣೆ, ಕೋವಿಡ್ ಸಂತ್ರಸ್ತರಿಗೆ ಬಾಡಿ ಬ್ಯಾಗ್‌ಗಳ ಖರೀದಿ ಸೇರಿದಂತೆ ಗುತ್ತಿಗೆ ನೀಡಲು ಕಮಿಷನ್ ತೆಗೆದುಕೊಳ್ಳುವ ಹಗರಣದಲ್ಲಿ ಶಿವಸೇನಾ (ಯುಬಿಟಿ) ನೇರವಾಗಿ ಭಾಗಿಯಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಬಿಜೆಪಿ ಬಗ್ಗೆ ಮಾತನಾಡುವ ಮುನ್ನ ಠಾಕ್ರೆ ಅವರು ತಾವು ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಹೇಗೆ ಕೆಲಸ ಮಾಡಿದ್ದರು ಎಂಬುದನ್ನು ಯೋಚಿಸಬೇಕು. ನೀವು ನಮ್ಮ ಬಗ್ಗೆ (ಬಿಜೆಪಿ) ಎಷ್ಟೇ ವ್ಯಂಗ್ಯವಾಡಿದರೂ ಮಹಾರಾಷ್ಟ್ರದ ಜನರು ತಕ್ಕ ಉತ್ತರ ನೀಡುತ್ತಾರೆ’ ಎಂದು ಬವಾಂಕುಲೆ ತಿಳಿಸಿದ್ದಾರೆ.

ಬಿಜೆಪಿಗರು ಮಣಿಪುರಕ್ಕೆ ಭೇಟಿ ನೀಡಲು ನಿರ್ಲಕ್ಷಿಸುತ್ತಿದ್ದಾರೆ ಎಂಬ ಠಾಕ್ರೆ ಆರೋಪ ಕುರಿತು ಪ್ರತಿಕ್ರಿಯಿಸಿದ ಮುಂಬೈ ಘಟಕದ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್, ‘ಉದ್ಧವ್ ಠಾಕ್ರೆ ಮಣಿಪುರದ ಬಗ್ಗೆ ಮಾತನಾಡುತ್ತಾರೆ. ಠಾಕ್ರೆ ಅವರು ಮುಂಬೈನ ಮಾಲ್ವಾನಿ ಪ್ರದೇಶಕ್ಕೆ ಭೇಟಿ ನೀಡಲು ಸಿದ್ಧರಿದ್ದರೆ ಅವರ ಸಾರಿಗೆ ವೆಚ್ಚವನ್ನು ಭರಿಸಲು ನಾನು ಸಿದ್ಧನಿದ್ದೇನೆ’ ಎಂದು ಕುಟುಕಿದ್ದಾರೆ.

ಯಾರು ಭ್ರಷ್ಟರು ಮತ್ತು ಯಾರು ಅಲ್ಲ ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದು ಠಾಕ್ರೆ ವಿರುದ್ಧ ಶೆಲಾರ್ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.