ADVERTISEMENT

70 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ನಾಶ

ಮೂರು ಸಾವಿರ ಹೆಕ್ಟೇರ್‌ ಈರುಳ್ಳಿ ನಷ್ಟ; ಶೇಂಗಾ, ಸೇವಂತಿಗೂ ರೋಗ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಸೆಪ್ಟೆಂಬರ್ 2021, 18:18 IST
Last Updated 17 ಸೆಪ್ಟೆಂಬರ್ 2021, 18:18 IST
   

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಸೈನಿಕ ಹುಳುವಿನ ಬಾಧೆಗೆ 70 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳ ಬೆಳೆ ಹಾನಿಯಾದರೆ, ಕೊಳೆರೋಗದಿಂದ ಮೂರು ಸಾವಿರ ಹೆಕ್ಟೇರ್‌ ಈರುಳ್ಳಿ ನಷ್ಟವಾಗಿದೆ.

ಇತ್ತೀಚೆಗೆ ಸುರಿದ ಜಿಟಿಜಿಟಿ ಮಳೆಯಿಂದ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹಗರಿಬೊಮ್ಮನಯಳ್ಳಿಯಲ್ಲಿ ಈರುಳ್ಳಿಗೆ ಕೊಳೆ ರೋಗ ಆವರಿಸಿಕೊಂಡಿದೆ. ಕಾಳು ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟಿದ್ದರಿಂದ ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ರೈತರೇ ಮೆಕ್ಕೆಜೋಳ ನಾಶಪಡಿಸಿದ್ದಾರೆ.

ಹೊಸಪೇಟೆಯಲ್ಲಿ ಸತತ ಮಳೆಗೆ ಬಾಳೆ ಕೊಳೆಯುತ್ತಿದೆ. ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರಿನಲ್ಲಿ ಶೇಂಗಾ, ಸೇವಂತಿ ಹೂವಿನಲ್ಲೂ ರೋಗ ಕಾಣಿಸಿಕೊಂಡಿರುವುದರಿಂದ ರೈತರು ಬೆಳೆ ನಷ್ಟದ ಆತಂಕದಲ್ಲಿದ್ದಾರೆ. ಈಗಷ್ಟೇ ತೋಟಗಾರಿಕೆ ಇಲಾಖೆಯು ಬೆಳೆ ಹಾನಿಯ ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

‘ಇನ್ನು ಎರಡು ವಾರ ಕಳೆದರೆ ಗುಣಮಟ್ಟದ ಈರುಳ್ಳಿ ಕೈಸೇರುತ್ತಿತ್ತು. ಆದರೆ, ಅಧಿಕ ತೇವಾಂಶದಿಂದ ರೋಗ ಬಂದಿದೆ. ಮೂರು ವರ್ಷದಿಂದ ಸತತವಾಗಿ ಈರುಳ್ಳಿಯಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ. ತೋಟಗಾರಿಕೆ ಇಲಾಖೆಯವರು ಯಾವುದೇ ಪರಿಹಾರ ಸೂಚಿಸಿಲ್ಲ’ ಎಂದು ಹೂವಿನಹಡಗಲಿ ತಾಲ್ಲೂಕಿನ ಹಿರೇಕೊಳಚಿಯ ರೈತ ರಹೀಮ್‌ ಸಾಬ್‌ ಹೇಳಿದರು.

‘ಸತತವಾಗಿ ಸುರಿದ ಮಳೆಗೆ ಗದ್ದೆಯಲ್ಲಿ ಬಾಳೆ ಕೊಳೆತು ಹೋಗಿದೆ. ಹಾಕಿದ ಬಂಡವಾಳವೂ ಬರುವುದಿಲ್ಲ. ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ’ ಎಂದು ಹೊಸಪೇಟೆ ತಾಲ್ಲೂಕಿನ ಹೊಸೂರಿನ ರೈತ ಹುಲುಗಪ್ಪ ಅಸಹಾಯಕರಾಗಿ ನುಡಿದರು.

ಬೆಳೆ ಹಾನಿಯ ತಾಲ್ಲೂಕುವಾರು ವಿವರ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು ಮೆಕ್ಕೆಜೋಳ ಈರುಳ್ಳಿ ಶೇಂಗಾ
ಹೊಸಪೇಟೆ – 20 –
ಹರಪನಹಳ್ಳಿ 27,369 700 200
ಹೂವಿನಹಡಗಲಿ 25,001 800 –
ಹಗರಿಬೊಮ್ಮನಹಳ್ಳಿ600 900 –
ಕೂಡ್ಲಿಗಿ 10,000 400 7,500
ಕೊಟ್ಟೂರು 8,000 350 1,200

***

ಕೊಳೆರೋಗ, ಸೈನಿಕ ಹುಳುವಿನಿಂದ ಈರುಳ್ಳಿ, ಮೆಕ್ಕೆಜೋಳ ದೊಡ್ಡ ಪ್ರಮಾಣದಲ್ಲಿ ಹಾಳಾಗಿದೆ. ಸಮೀಕ್ಷೆ ಮುಗಿದ ನಂತರ ನಿಖರ ಅಂಕಿ ಅಂಶ ಗೊತ್ತಾಗಲಿದೆ.
- ತಿಪ್ಪಾರೆಡ್ಡಿ, ಕೇಂದ್ರ ಸಹಾಯಕ, ತೋಟಗಾರಿಕೆ ಇಲಾಖೆ ಬಳ್ಳಾರಿ

ಹೋದ ವರ್ಷದ ಬೆಳೆ ಹಾನಿಯ ಪರಿಹಾರ ಇದುವರೆಗೆ ಕೈಸೇರಿಲ್ಲ. ಈ ವರ್ಷದ ನಷ್ಟಕ್ಕೆ ಪರಿಹಾರ ಸಿಗುವ ಭರವಸೆ ಇಲ್ಲ.
- ರಹೀಮ್‌ ಸಾಬ್‌, ರೈತ, ಹಿರೇಕೊಳಚಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.