ADVERTISEMENT

ವಸ್ತುಸಂಗ್ರಹಾಲಯ: ಕಲೆ, ಚಿತ್ರಪಟಗಳ ‘ಜ್ಯೂಯೆಲ್‌ ಬಾಕ್ಸ್‌’

ಅಭಿಲಾಷ್ ಪಿ.ಎಸ್‌.
Published 11 ಫೆಬ್ರುವರಿ 2023, 19:30 IST
Last Updated 11 ಫೆಬ್ರುವರಿ 2023, 19:30 IST
ಜ್ಯುವೆಲ್‌ ಬಾಕ್ಸ್‌ ಕಟ್ಟಡದ ನೋಟ
ಜ್ಯುವೆಲ್‌ ಬಾಕ್ಸ್‌ ಕಟ್ಟಡದ ನೋಟ   

2015ರಲ್ಲಿ ಡಿಜಿಟಲ್‌ ವೇದಿಕೆಯಲ್ಲಿ ಆರಂಭಗೊಂಡ ಕಲೆ ಮತ್ತು ಚಿತ್ರಪಟಗಳ ವಸ್ತುಸಂಗ್ರಹಾಲಯ (ಮ್ಯಾಪ್‌) ಇದೀಗ ಆಫ್‌ಲೈನ್‌ ರೂಪ ಪಡೆಯುತ್ತಿದೆ. ಫೆ.18ರಿಂದ ಜನರು ಮ್ಯಾಪ್‌ಗೇ ಭೇಟಿ ನೀಡಿ ಕಲಾಭಂಡಾರದ ಸಾಗರದಲ್ಲಿ ಈಜಬಹುದಾಗಿದೆ. ಹಾಗಾದರೆ ಈ ಮ್ಯಾಪ್‌ ವಿಶೇಷವೇನು?

***

ಅದೊಂದು ಕಲಾಭಂಡಾರ! ಹೆಜ್ಜೆ ಹೆಜ್ಜೆಗೂ ಎದುರಾಗುವ ಕಲೆ, ಚಿತ್ರಪಟಗಳ ಲೋಕ. ‘Birth of a sculpture’ ಎನ್ನುವ ಬರಹವಿರುವ ಕ್ಯಾನ್ವಾಸ್‌ನಲ್ಲಿ ಎಂ.ಎಫ್‌. ಹುಸೇನ್‌ ರೇಖೆಗಳ ಮೂಲಕವೇ ಮಾತನಾಡುತ್ತಾ ಅಲ್ಲಿಗೆ ಸ್ವಾಗತ ಕೋರುತ್ತಾರೆ. ನಂದಿಗಳ ನಡುವೆ, ಸರ್ಪಲೋಕದಲ್ಲಿ ಕುಳಿತಾಗ ಆಕಾಶದಲ್ಲಿ ನೀಲಹಕ್ಕಿಗಳು ಸುರುಳಿಯಾಡುತ್ತಾ ಚಿಂವ್‌ಗುಟ್ಟುತ್ತವೆ...

ADVERTISEMENT
(ಕಂಚಿನಲ್ಲಿ ಅರಳಿದ ಶಿಲ್ಪ ಕಲೆ: ಎಲ್‌.ಎನ್‌.ತಲ್ಲೂರು)

ಇದು ಬೆಂಗಳೂರಿನ ಕಸ್ತೂರ್‌ಬಾ ರಸ್ತೆಯಲ್ಲಿರುವ ಕಲೆ ಮತ್ತು ಚಿತ್ರಪಟಗಳ ವಸ್ತುಸಂಗ್ರಹಾಲಯ (ಮ್ಯಾಪ್‌–ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿ) ಪರಿಕಲ್ಪನೆ ಹುಟ್ಟುಹಾಕಿದ ಅಭಿಷೇಕ್‌ ಪೊದ್ದಾರ್‌ ಕಚೇರಿಯ ಹೊರನೋಟ. ಕಚೇರಿಯ ಕೊಠಡಿಯೂ ಒಂದು ಮಿನಿ ಮ್ಯೂಸಿಯಂ. ಅಲ್ಲಿಯೂ ಹಲವು ಚಿತ್ರಕಲೆಗಳು, ಶಿಲ್ಪಕಲಾಕೃತಿಗಳು...ಇವೆಲ್ಲಾ ನೋಡಿದ ಬಳಿಕ ಹೊರಳಿದ ಪ್ರಶ್ನೆ, ‘ಉದ್ಯಮದ ಕುಟುಂಬದಿಂದ ಬಂದ ನಿಮಗೆ ಈ ಆಸಕ್ತಿ ಹುಟ್ಟಿದ್ದು ಹೇಗೆ’ ಎನ್ನುವುದು.

‘ನಾನ್ಯಾವಾಗ ಸಂಗ್ರಹಕಾರನಾದೆ ಎಂದು ನನಗೇ ತಿಳಿದಿಲ್ಲ. ನಾನು ಮೂಲತಃ ರಾಜಸ್ಥಾನದವನು. ಕೋಲ್ಕತ್ತದಲ್ಲಿ ಓದಿ ಬೆಳೆದ ನಾನು ಬೆಂಗಳೂರಿಗೆ 1990ರಲ್ಲಿ ಬಂದೆ. ನಾನು ಬೆಳೆದಂತಹ ವಾತಾವರಣ ಕಲೆ ಮತ್ತು ಸಂಸ್ಕೃತಿಯತ್ತ ನನ್ನ ಆಸಕ್ತಿ ಹೊರಳಲು ಪೂರಕವಾಗಿತ್ತು. ನನ್ನ ತಂದೆ, ತಾಯಿ ಇಬ್ಬರೂ ಕಲೆಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಮನೆಯ ಪ್ರತಿ ಹೆಜ್ಜೆಯಲ್ಲೂ ಕಲೆ, ಚಿತ್ರಕಲೆಗಳ ಓಘವಿತ್ತು. ಜೊತೆಗೆ ಈ ಕ್ಷೇತ್ರದತ್ತ ಆಸಕ್ತಿಯನ್ನೂ ಪ್ರೋತ್ಸಾಹಿಸಲಾಗುತ್ತಿತ್ತು. ಡೆಹರಾಡೂನ್‌ನ ಡೂನ್‌ ಶಾಲೆಯಲ್ಲಿನ ಶಿಕ್ಷಣ ಈ ಕ್ಷೇತ್ರದತ್ತ ಇದ್ದ ನನ್ನ ಒಲವು ರೂಪ ಪಡೆಯಲು ಕಾರಣವಾಯಿತು. ಕಲೆ, ರಂಗಭೂಮಿ, ಸಂಗೀತ ಹೀಗೆ ಹಲವು ಕ್ಷೇತ್ರದತ್ತ ಡೂನ್‌ ಗಮನಹರಿಸುತ್ತಿತ್ತು. ಇಂತಹ ವಾತಾವರಣವಿದ್ದ ಶಾಲೆಯೇ ನನ್ನೊಳಗಿದ್ದ ಕಲೆಯ ಆಸಕ್ತಿ ಮತ್ತಷ್ಟು ಬೇರೂರಲು ಕಾರಣವಾಯಿತು. ಶಾಲೆಯಲ್ಲಿ ಚಿತ್ರಕಲೆಯಷ್ಟೇ ಅಲ್ಲ, ಆವೆ ಮಣ್ಣು, ಲೋಹ, ಮರ, ಸಿರಾಮಿಕ್‌ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌(ಪಿಒಪಿ)ನಿಂದ ಕಲಾಕೃತಿಗಳನ್ನು ರಚಿಸುವ ಕೌಶಲ ಕಲಿಸಲಾಗುತ್ತಿತ್ತು. ಈ ಒಡ್ಡಿಕೆ ನನ್ನ ಮೇಲೆ ಬೀರಿದ ಪ್ರಭಾವ ಅಗಾಧ’ ಎಂದು ಬಾಲ್ಯಕ್ಕೊಮ್ಮೆ ಹೊರಳಿದರು ಅಭಿಷೇಕ್‌.

ಸಂಗ್ರಹಗಳು ಹೇಳುವ ಕಥೆ ಕೇಳಿ
ಹೀಗೆ ‘ಮ್ಯಾಪ್‌’ ಒಳಗೆ ಅಭೀಷೇಕ್‌ ಅವರ ಜೊತೆ ಹೆಜ್ಜೆ ಹಾಕುತ್ತಲೇ ಸ್ವಾಗತಿಸಿದ್ದು, ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಶಿಲ್ಪಿ ಸ್ಟೀಫನ್‌ ಕಾಕ್ಸ್‌ ಅವರ ‘ಋಷೀಸ್‌’ ಕಲಾಕೃತಿಗಳು. ಅಗ್ನಿಶಿಲೆಯಿಂದ ಕೆತ್ತಲಾದ ಇವುಗಳು ಪೌರಾಣಿಕ ವ್ಯಕ್ತಿಗಳ ಮೂರ್ತರೂಪವಾಗಿವೆ. ಒಳಹೆಜ್ಜೆ ಇಡುತ್ತಿದ್ದಂತೆಯೇ ಕಲಾಲೋಕವೊಂದು ತೆರೆದುಕೊಳ್ಳುತ್ತದೆ. ಕಲೆಯಲ್ಲಿ ಮಹಿಳೆಯ ಪ್ರತಿರೂಪವನ್ನು ಮ್ಯಾಪ್‌ನಲ್ಲಿರುವ ಸಂಗ್ರಹಗಳ ಮೂಲಕ ಇಲ್ಲಿ ಕಾಣಬಹುದಾಗಿದೆ. ಸ್ತ್ರೀತ್ವ ಹಾಗೂ ಲಿಂಗದ ಬಗ್ಗೆ ಇರುವ ಪೂರ್ವಗ್ರಹವನ್ನು ಪುನರ್‌ ವ್ಯಾಖ್ಯಾನಿಸುವತ್ತ ಇವುಗಳ ಚಿತ್ತವಿದೆ. ದೇವತೆಗಳು ಹಾಗೂ ಮರ್ತ್ಯು, ಲೈಂಗಿಕತೆ ಹಾಗೂ ಅಭಿಲಾಷೆ, ಶಕ್ತಿ ಹಾಗೂ ಹಿಂಸೆ ಹಾಗೂ ಸಂಘರ್ಷ ಮತ್ತು ಪ್ರತಿರೋಧ ಎಂಬ ನಾಲ್ಕು ಪ್ರಮುಖ ಕಥನರೂಪದ ಮಸೂರಗಳಿಂದ ಈ ಕಲಾಕೃತಿಗಳನ್ನು ನೋಡಿ ವಿಶ್ಲೇಷಿಸಬಹುದಾಗಿದೆ. 10ನೇ ಶತಮಾನದಿಂದ ಹಿಡಿದು ಪ್ರಸ್ತುತ ಕಾಲದವರೆಗಿನ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಇಲ್ಲಿ ವಿಷಯಾಧಾರಿತವಾಗಿ ಪ್ರದರ್ಶಿಸಲಾಗಿದೆ.

ಇವುಗಳ ವೀಕ್ಷಣೆಯ ನಡುವೆಯೇ ಮ್ಯಾಪ್‌ ರಚನೆಯ ಉದ್ದೇಶ ವಿವರಿಸಿದ ಅಭಿಷೇಕ್‌, ‘ಕಲೆ ಎನ್ನುವುದು ನಮ್ಮ ಜೀವನದ ಭಾಗ. ಆದರೆ ಈ ಬದುಕಿನ ಜಂಜಾಟದಲ್ಲಿ ಒಂದು ಕ್ಷಣವೂ ಅದನ್ನು ನಾವು ಗಮನಿಸುತ್ತಿಲ್ಲ. ಉದಾಹರಣೆಗೆ ನಿಮ್ಮ ಸುತ್ತಲೂ ಇರುವ ಮಹಿಳೆಯರು ಉಡುವ ಕೈಮಗ್ಗದ ಸೀರೆ, ಹಾಕುವ ರಂಗೋಲಿ, ಪೂಜಾ ಸ್ಥಳದ ಅಲಂಕಾರ ಹೀಗೆ ಹಲವು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ. ಭಾರತೀಯರಿಗೆ ಕಲೆಯ ಜೊತೆಗಿನ ಸಂಬಂಧ ಇಂದು ಮೊನ್ನೆಯದಲ್ಲ. ಆದರೆ ಕಳೆದ 30–40 ವರ್ಷದಿಂದ ಈ ಕೊಂಡಿ ಕಳಚುತ್ತಿದೆ. ನಾವು ಕಲೆಯನ್ನು ಒಂದು ‘asset class’ ಆಗಿ ನೋಡುತ್ತಿರುವುದು ಇದಕ್ಕೆ ಕಾರಣ. ಜನರನ್ನು ಮತ್ತೆ ಕಲೆಯ ಕೊಂಡಿಯಲ್ಲಿ ಜೋಡಿಸಬೇಕು’ ಎಂದರು.

(ಅಭಿಷೇಕ್‌ ಪೊದ್ದಾರ್‌)

ಇದೀಗ ಚಿತ್ರಕಲೆಗಳಿಂದ ಚಿತ್ರಪಟಗಳತ್ತ ಹೆಜ್ಜೆ ಇಡುವ ಸಮಯ. ಗ್ರಾಮೀಣ ಭಾರತದ ಸಂಸ್ಕೃತಿಯನ್ನು ತನ್ನ ಕ್ಯಾಮೆರಾದೊಳಗೆ ಸೆರೆಹಿಡಿದ ಕಲಾವಿದ ಜ್ಯೋತಿ ಭಟ್‌ ಅವರ ‘ಛಾಯಾ’ ಪಯಣದ ಜೊತೆಗೆ ‘ಟೈಂ ಆ್ಯಂಡ್‌ ಟೈಂ ಅಗೈನ್‌’ ಎಂಬ ಪ್ರದರ್ಶನದಲ್ಲಿ ಹೆಜ್ಜೆಹಾಕಿದೆವು. ಮ್ಯಾಪ್‌ನ ಪ್ರಮುಖ ಛಾಯಾಚಿತ್ರಗಳ ಸಂಗ್ರಹದಲ್ಲಿ ಜ್ಯೋತಿ ಭಟ್‌ ಅವರು ಸೆರೆಹಿಡಿದ ಸಾವಿರ ಚಿತ್ರಗಳಿದ್ದು, 60 ಸಾವಿರ ನೆಗೆಟಿವ್‌ಗಳು ಡಿಜಿಟಲ್‌ ರೂಪದಲ್ಲಿ ವೀಕ್ಷಿಸಲು ಲಭ್ಯವಿದೆ.

‘ಲಾಕ್‌ಡೌನ್‌ ಎನ್ನುವುದು ಜನರಿಗೆ ಕಲೆ, ಚಿತ್ರಕಲೆಯ ಮೇಲೆ ಮತ್ತೆ ಆಸಕ್ತಿ ಹುಟ್ಟಿಸಿದೆ ಅಲ್ಲವೇ’ ಎಂದು ಅಭಿಷೇಕ್‌ ಜೊತೆ ಮತ್ತೆ ಮಾತಿಗಿಳಿದೆ. ‘ಹೌದು, ಲಾಕ್‌ಡೌನ್‌ ಸಂದರ್ಭದಲ್ಲಿ ಹಲವರು ಚಿತ್ರಕಲೆಯ ಬಗ್ಗೆ ಇದ್ದ ಆಸಕ್ತಿಯನ್ನು ಮತ್ತೆ ಕಂಡುಕೊಂಡರು. ಈ ಹೆಜ್ಜೆ ಸ್ವಾಗತಾರ್ಹ. ಜೀವನದಲ್ಲಿ ಏನನ್ನೋ ಕಳೆದುಕೊಂಡಿದ್ದೇವೆ ಎಂದು ಆ ಸಂದರ್ಭದಲ್ಲಿ ಮತ್ತೆ ಮನಸ್ಸಿಗೆ ಅನ್ನಿಸಿತಲ್ಲವೇ? ಅಷ್ಟು ಸಾಕು. ಪ್ರತಿನಿತ್ಯದ ಜೀವನ ಎಷ್ಟು ಯಾಂತ್ರಿಕವಾಗಿದೆ ಎಂದರೆ, ಒಂದು ಸುಂದರ ಸೂರ್ಯೋದಯ, ಸೂರ್ಯಾಸ್ತವನ್ನೂ ನಾವು ಗಮನಿಸುತ್ತಿಲ್ಲ. ಕಲೆ ಎನ್ನುವುದೂ ಇದರಂತೆ’ ಎನ್ನುತ್ತಾ ಹೆಜ್ಜೆ ಹಾಕಿ ಶಿಲ್ಪಕಲೆಗಳ ಲೋಕಕ್ಕೆ ಬಂದೆವು.

ಕರ್ನಾಟಕದವರೇ ಆದ ಎಲ್‌.ಎನ್‌. ತಲ್ಲೂರ್‌ ಇಲ್ಲಿ ತಮ್ಮ ಶಿಲ್ಪಕಲೆಗಳ ಮುಖಾಂತರ ನಿಮ್ಮೊಂದಿಗೆ ಸಂವಹನದಲ್ಲಿ ತೊಡಗಿಕೊಳ್ಳುತ್ತಾರೆ. ಪ್ಲೈವುಡ್‌, ಕಾಂಕ್ರೀಟ್‌, ಕಂಚು ಮತ್ತು ಡಿಜಿಟಲ್‌ ಮಾದರಿಯಲ್ಲಿ ನಿರ್ಮಾಣವಾದ ವಸ್ತುಗಳಿಂದ ಜೀವಪಡೆದ ತಲ್ಲೂರ್‌ ಅವರ ಶಿಲ್ಪಕಲೆಗಳು ಸಾಂಪ್ರದಾಯಿಕ ಕಲಾಕೃತಿಗಳಿಗೆ ವೈದೃಶ್ಯವಾಗಿವೆ.

ಚಿತ್ರಪಟಗಳಿಗೆ ಜೀವ: ಇಲ್ಲಿನ ಕೆಲ ಚಿತ್ರಕಲೆಗಳು ನೋಡುಗರೆದುರೇ ಜೀವತಳೆಯುತ್ತವೆ. ಮಂಜೀತ್‌ ಬಾವ ಅವರ ‘ಕೃಷ್ಣ ಈಟಿಂಗ್‌ ದಿ ಫೈಯರ್‌’ ಚಿತ್ರಕಲೆಯಿಲ್ಲಿ ಆ್ಯನಿಮೇಷನ್‌ ಮೂಲಕ ಜೀವ ಪಡೆಯುತ್ತದೆ. ಇಷ್ಟೇ ಅಲ್ಲದೆ ಕೆಲ ಚಿತ್ರಕಲೆಗಳು 3ಡಿ ರೂಪದಲ್ಲಿ ವೀಕ್ಷಣೆಗೆ ಲಭ್ಯವಿದ್ದು, ಕೃತಕ ಬುದ್ಧಮತ್ತೆ(ಎಐ) ಚಮತ್ಕಾರದಿಂದ ಇಡೀ ವಸ್ತು ಸಂಗ್ರಹಾಲಯವೇ ಜೀವತಳೆದು ವೀಕ್ಷಕರ ಎದುರಿಗೆ ನಿಲ್ಲುತ್ತದೆ.

ಇದು ಅಂತಿಂಥ ಮ್ಯೂಸಿಯಂ ಅಲ್ಲ!
ಉದ್ಯಾನ ನಗರಿಯ ಹೃದಯ ಭಾಗದಲ್ಲಿ ಇರುವ 44 ಸಾವಿರ ಚದರಡಿಯ ಮ್ಯಾಪ್‌ ಕಟ್ಟಡವನ್ನು ಬೆಂಗಳೂರು ಮೂಲದ ವಾಸ್ತುಶಿಲ್ಪಿಗಳಾದ ನಿಶಾ ಮ್ಯಾಥ್ಯೂ ಮತ್ತು ಸೌಮಿತ್ರೊ ಘೋಷ್‌ ವಿನ್ಯಾಸಗೊಳಿಸಿದ್ದಾರೆ. ಇದು ಸಾಮಾನ್ಯ ವಸ್ತುಸಂಗ್ರಹಾಲಯದಂತಿಲ್ಲ! ಇಂಗ್ಲೆಂಡ್‌ನಲ್ಲಿ ತಯಾರಾಗುತ್ತಿದ್ದ ಸ್ಟೈನ್‌ಲೆಸ್‌ ಸ್ಟೀಲ್‌ನ ನೀರಿನ ಟ್ಯಾಂಕ್‌ ಮಾದರಿಯಲ್ಲಿ ಈ ಕಟ್ಟಡ ವಿನ್ಯಾಸಗೊಂಡಿದೆ. ಇದೊಂದು ರೀತಿ ಪುಟ್ಟ ಚಿನ್ನಾಭರಣದ ಬಾಕ್ಸ್‌ಗೆ ರೂಪಕ. ಐದು ಅಂತಸ್ತಿನ ಸಂಗ್ರಹಾಲಯದಲ್ಲಿ ಕಲೆ, ಶಿಲ್ಪಕಲೆಗಳ ಸಂಗ್ರಹ, ಅಡಿಟೋರಿಯಂ, ಗ್ರಂಥಾಲಯ, ಮಲ್ಟಿ ಮೀಡಿಯಾ ಗ್ಯಾಲರಿ, ತಂತ್ರಜ್ಞಾನ ಕೇಂದ್ರ, ಅಧ್ಯಯನ ಕೇಂದ್ರ, ಸಂಶೋಧನಾ ಮತ್ತು ರಕ್ಷಣೆ ಘಟಕ, ಉಡುಗೊರೆಗಳ ಅಂಗಡಿ, ಕೆಫೆಟೇರಿಯಾ, ರೆಸ್ಟೋರೆಂಟ್‌ ಒಳಗೊಂಡಿದೆ. ಇಲ್ಲಿನ ಭೇಟಿಯ ಅನುಭವವೇ ವಿಭಿನ್ನ.

ಮ್ಯಾಪ್‌ನಲ್ಲಿ ಹುಸೇನ್‌ ಟ್ವಿನ್‌!
ಈ ವಸ್ತುಸಂಗ್ರಹಾಲಯದಲ್ಲಿ 10ನೇ ಶತಮಾನದಿಂದ ಹಿಡಿದು ಇಲ್ಲಿಯವರೆಗಿನ 60 ಸಾವಿರಕ್ಕೂ ಅಧಿಕ ಶಿಲ್ಪಕಲೆಗಳು, ಚಿತ್ರಕಲೆಗಳು, ಫೋಟೊಗಳ ಸಂಗ್ರಹವಿದೆ. ಮೊಘಲ್‌, ಜೈನ್‌, ರಜಪೂತರ ಕೈಬರಹಗಳಿರುವ ಚಿತ್ರಕಲೆಗಳು, ಚೋಳರ ಕಾಲದ ಕಂಚಿನ ಕೆತ್ತನೆಯ ಮೂರ್ತಿಗಳು, ದಕ್ಷಿಣ ಭಾರತದ ‘ಟೆಂಪಲ್‌ ಆರ್ಟ್‌’ ಇಲ್ಲಿವೆ. ಜೊತೆಗೆ ಭಾರತದ ಜವಳಿ ಸಂಪ್ರದಾಯಕ್ಕೆ ಉತ್ತಮ ಉದಾಹರಣೆಗಳಾಗಿರುವ ಕಲಂಕಾರಿ, ಪಟೋಲ ಮುಂತಾದುವುಗಳ ಸಂಗ್ರಹವಿದೆ. 19ನೇ ಶತಮಾನದಲ್ಲಿ ಆರಂಭವಾದ ಭಾರತದ ಪ್ರಿಂಟಿಂಗ್‌ ಮತ್ತು ಜಾಹೀರಾತು ಕೈಗಾರಿಕೆಯ ಬೆಳವಣಿಗೆಯನ್ನು ಎದುರಿಗಿರಿಸುವ ಸಂಗ್ರಹವೂ ಇಲ್ಲಿದೆ. ಜೊತೆಗೆ ಪ್ರಮುಖ ಛಾಯಾಗ್ರಾಹಕರು ತೆಗೆದ ಛಾಯಾಚಿತ್ರಗಳು, ರವಿ ವರ್ಮ, ರವೀಂದ್ರನಾಥ ಟ್ಯಾಗೋರ್‌, ಎಂ.ಎಫ್‌. ಹುಸೇನ್‌ ಸೇರಿದಂತೆ ಹತ್ತಾರು ಕಲಾವಿದರ ಚಿತ್ರಕಲೆಗಳ ಭಂಡಾರವೇ ಇಲ್ಲಿದೆ.

‘ನನಗೆ ಎಂ.ಎಫ್‌. ಹುಸೇನ್‌ ಅವರಂಥ ಖ್ಯಾತ ಕಲಾವಿದರ ಸಂಗಡ ಹೆಜ್ಜೆ ಇಡುವ ಅವಕಾಶ ದೊರಕಿತ್ತು. ಇಂಥ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ರೀತಿ ಅವಕಾಶವನ್ನು ಎಲ್ಲರಿಗೂ ಒದಗಿಸುವುದು ಹೇಗೆ? ಹುಸೇನ್‌ ಅವರ ಸ್ನೇಹವಿಲ್ಲದೇ ಇದ್ದರೂ ಅವರನ್ನು ನೇರವಾಗಿ ಭೇಟಿಯಾಗಿ, ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎನ್ನುವುದಕ್ಕೆ ಮ್ಯಾಪ್‌ನಲ್ಲಿ ಉತ್ತರವಿದೆ. ಇಲ್ಲಿ ಹುಸೇನ್‌ ಅವರ ಅವಳಿ (ಟ್ವಿನ್‌) ಇದೆ. ಇದರ ಜೊತೆ ಜನರು ಸಂವಾದ ನಡೆಸಬಹುದಾಗಿದೆ. ಹೊಲೊಗ್ರಫಿ ತಂತ್ರಜ್ಞಾನದಿಂದ ಇದು ಸಾಧ್ಯವಾಗಿದೆ’ ಎನ್ನುತ್ತಾರೆ ಅಭಿಷೇಕ್‌ ಪೊದ್ದಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.