ADVERTISEMENT

ಕೇಶವರೆಡ್ಡಿ ಹಂದ್ರಾಳ ಅವರ ಕಥೆ 'ಅಣು'

ಕೇಶವರೆಡ್ಡಿ ಹಂದ್ರಾಳ
Published 8 ಡಿಸೆಂಬರ್ 2019, 8:58 IST
Last Updated 8 ಡಿಸೆಂಬರ್ 2019, 8:58 IST
   

ಅರ್ಧ ಗಂಟೆಯಲ್ಲಿ ಜೋರು ಮಳೆ ಕಡಿಮೆಯಾಗಿತ್ತು. ಅವನು ಖಾಲಿಯಾಗಿದ್ದ. ಮೆದುಳನ್ನು ಆವರಿಸಿದ್ದ ಮತ್ತು ಮಾಯವಾಗಿತ್ತು. ಕೆಂಪು ಜಿರೋ ಕ್ಯಾಂಡಲ್ ಬಲ್ಪಿನ ಬೆಳಕಿನಲ್ಲಿ ಎದ್ದು ಬಟ್ಟೆಯಾಕಿಕೊಂಡಿದ್ದ. ಅವಳೂ ಎದ್ದು ನೈಟಿ ಧರಿಸಿದ್ದಳು. ಇಂಥ ಸುಖದ ಅಮಲಿನಲ್ಲಿ ಹಿಂದೆಂದು ಮುಳುಗಿದ ನೆನಪೇ ಅವಳಿಗಾಗಿರಲಿಲ್ಲ. ಅವನು ಶೂ ಹಾಕಿಕೊಳ್ಳುತ್ತಿದ್ದ. ಸಣ್ಣದಾಗಿ ಮಳೆ ಹನಿಯುತ್ತಿತ್ತು..

ಅವನು ಒಳ ಬರುವುದಕ್ಕೂ ಸಣ್ಣದಾಗಿ ಸುರಿಯುತ್ತಿದ್ದ ಮಳೆ ಜೋರಾಗುವುದಕ್ಕೂ ಒಂದೇ ಆಗಿತ್ತು. ಸ್ವಲ್ಪ ತೊಯ್ದಿದ್ದ ಅವನ ತಲೆಯನ್ನು ಒರೆಸಿಕೊಳ್ಳಲು ಅವಳು ಚಿಕ್ಕ ಟವಲ್ಲೊಂದನ್ನು ಕೊಡುತ್ತಾ ‘ಮಳೆಗಾಲದಲ್ಲಿ ಅರ್ಧ ಮುಂಬಯಿಯ ಬದುಕು ಬಗ್ಗಡವೆದ್ದು ಹೋಗುತ್ತದೆ. ಆದರೆ ಮಳೆಗಾಲದಲ್ಲೇ ನಮಗೆ ಗಿರಾಕಿಗಳು ಜಾಸ್ತಿ. ಮುಂಬಯಿಯ ಥರ್ಟಿ ಪರ್ಸೆಂಟ್ ಜನ ಇಲಿ, ಜಿರಲೆಗಳಂತೆ ಫುಟ್ಪಾತ್ ಮೇಲೆಯೇ ಬದುಕು ಸವೆಸುತ್ತಾರೆ. ಅಂದ ಹಾಗೆ ನಿನ್ನನ್ನು ಈ ನಾಗ್ಪಾಡ್ ಏರಿಯಾದಲ್ಲಿ ಮೊದಲ ಬಾರಿಗೆ ನೋಡ್ತಾ ಇದ್ದೀನಿ, ನೀನೇನೂ ರೆಗ್ಯುಲರ್ ಗಿರಾಕಿಯಲ್ಲ. ಎಲ್ಲಿಂದ ಬಂದದ್ದು...’ ಕೇಳಿದ್ದಳವಳು.

ಅವನು ತೆಳ್ಳಗೆ ಕಮಟು ವಾಸನೆ ಬರುತ್ತಿದ್ದ ಟವಲ್ಲಿನಿಂದ ತಲೆ ಒರೆಸಿಕೊಳ್ಳುತ್ತಾ ‘ತುಂಬಾ ದೂರದಿಂದ’ ಎಂದ. ‘ಎಲ್ಲಿ ಉಳಿದುಕೊಂಡಿದ್ದೀಯ. ಏಕವಚನ ಬಳಸುತ್ತಿರುವುದಕ್ಕೆ ಕ್ಷಮೆಯಿರಲಿ, ನಮಗಿಲ್ಲಿ ರೂಢಿಯಾಗಿಬಿಟ್ಟಿದೆ. ಏಕವಚನ ಪ್ರೀತಿಯ, ಸುಖದ ಸಾಂದ್ರತೆಯನ್ನು ಹೆಚ್ಚಿಸುತ್ತದೆಂದು ಇಷ್ಟೆಲ್ಲಾ ವರ್ಷಗಳ ಅನುಭವದಲ್ಲಿ ನಾನು ಕಂಡುಕೊಂಡ ಸತ್ಯ...’ ನಕ್ಕಿದ್ದಳು ಅವಳು ಮುಖದ ತುಂಬಾ.

ADVERTISEMENT

‘ನೋ ಪ್ರಾಬ್ಲಂ, ಹೋಟೆಲ್ ತಾಜ್‌ನಲ್ಲಿ ಉಳಿದುಕೊಂಡಿದ್ದೀನಿ...’ ಅವನು ಸುಳ್ಳನ್ನೇನೂ ಹೇಳಿರಲಿಲ್ಲ. ‘ಆಂ, ಗೇಟ್ ವೇ ಆಫ್ ಇಂಡಿಯಾ ಎದುರಿಗಿರುವ ತಾಜ್ ಹೋಟೆಲ್ಲಾ?’ ಕೇಳಿದ್ದಳವಳು ಮತ್ತೆ ಅನುಮಾನದಿಂದ.

‘ಹೌದು, ಏಕೆ?’ ಒತ್ತಿ ಕೇಳಿದ್ದ. ‘ರೈಲು ಬಿಡಬೇಡ. ಹೋಟೆಲ್ ತಾಜನ್ನು ನಾನೂ ನೋಡಿದ್ದೀನಿ, ಗೇಟ್ ವೇ ಆಫ್ ಇಂಡಿಯಾದ ಮುಂದೆ ನಿಂತು. ದಿನವೊಂದಕ್ಕೆ ಒಂದು ರೂಮಿನ ಬಾಡಿಗೆಯೇ ಕನಿಷ್ಠ ಹದಿನೈದಿಪ್ಪತ್ತು ಸಾವಿರವಂತೆ. ಅದರಲ್ಲಿ ಉಳಿಯೋರು ಈ ಯಲ್ಲೋ ಏರಿಯಾ ನಾಗ್ಪಾಡಿಗೆ ಏಕೆ ಬರ್ತಾರೆ? ಹತ್ತು ಸಾವಿರಕ್ಕೆ ಸಿನಿಮಾ ಹುಡ್ಗೀರೇ ಸಿಗೋವಾಗ...’ ಅವಳ ಮಾತುಗಳಲ್ಲಿ ಈಗ ನಿಜವಾಗಿಯೂ ವ್ಯಂಗ್ಯ ತುಂಬಿಕೊಂಡಿತ್ತು.

ಅವನು ಅವಳ ಹಳೆಯ ಮಂಚದ ಹಾಸಿಗೆಯ ಮೇಲೆ ಕುಳಿತು ಶೂ ಬಿಚ್ಚುವಾಗ ಅವನ ಪ್ಯಾಂಟ್ ಜೇಬಿನಿಂದ ಎರಡು ಸಾವಿರ ರೂಪಾಯಿ ನೋಟಿನ ಕಟ್ಟೊಂದು ಸ್ಲಿಪ್ ಆಗಿ ಕೆಳಗೆ ಬಿದ್ದಿತ್ತು. ಅವಳು ಬಗ್ಗಿ ಅದನ್ನು ಎತ್ತಿ ಅವನ ಕೈಗೆ ಕೊಡುತ್ತಾ ‘ಮಂಚ ಚಿಕ್ಕದು ಹುಷಾರಾಗಿ ಮಲಗಬೇಕು...‌’ ಎಂದು ಮಂಚದ ಕೊನೆಗಿದ್ದ ದಿಂಬು ಎತ್ತಿ, ಕಾಂಡೋಮ್ ಒಂದನ್ನು ತೆಗೆದು ಅವನ ಪಕ್ಕಕ್ಕೆಸೆದು ‘ಒಂದು ಗಂಟೆ ನಿನ್ನ ಟೈಮು. ಗಂಟೆ ಮೇಲೆ ಹತ್ತು ನಿಮಿಷ ಆದರೂ ನೂರು ರೂಪಾಯಿ ಎಕ್ಸ್ಟ್ರಾ ಕೊಡ್ಬೇಕು. ಆದರೆ ಇಲ್ಲಿಗೆ ಬರುವ ಬಹುತೇಕ ಗಂಡಸರು ಹದಿನೈದಿಪ್ಪತ್ತು ನಿಮಿಷಗಳಲ್ಲಿ ಜಾಗ ಖಾಲಿ ಮಾಡಿ ಹೋಗುತ್ತಾರೆ. ಸುಖದ ಬೆನ್ನಿಗೆ ಸದಾ ಸೂತಕದ ಛಾಯೆ’ ನಗುತ್ತಾ ಅವಳು ಮೇಲುಡುಪು ತೆಗೆಯಲು ಪ್ರಾರಂಭಿಸಿದಳು.

‘ನನಗೆ ಕಾಂಡೋಮ್ ಬೇಡ. ಪೂರ್ತಿ ರಾತ್ರಿಗೆ ಎಷ್ಟು ಚಾರ್ಜ್ ಮಾಡ್ತೀಯ...’ ಗಂಭೀರವಾಗಿಯೇ ಕೇಳಿದ್ದ. ‘ಎರಡೂವರೆ ಸಾವಿರ. ಹಾಫ್ ಚಿಕನ್ ಬಿರಿಯಾನಿ ಕೂಡ ಸಿಗ್ತದೆ ನಿಂಗೆ...’ ಅವಳು ವ್ಯಾವಹಾರಿಕ ಧ್ವನಿಯಲ್ಲಿಯೇ ಹೇಳಿದ್ದಳು.

‘ಕ್ಯಾಶ್ ಅಂಡ್ ಕ್ಯಾರಿ. ಮೊದಲೇ ಫುಲ್ ಪೇಮೆಂಟ್ ಆಗಬೇಕು. ಇಲ್ಲಿನ ನಿಯಮವೇ ಹಾಗೆ ...’ ಅವಳ ಮಾತು ಮುಗಿಯುವ ಮುನ್ನವೇ ಅವನು ಜೇಬಿನಿಂದ ಎರಡು ಸಾವಿರ ರೂಪಾಯಿಯ ಮೂರು ನೋಟುಗಳನ್ನು ತೆಗೆದು ಅವಳ ಕೈಗೆ ಇಟ್ಟಿದ್ದ . ಅವಳು ಮಾತ್ರ ಎರಡು ನೋಟುಗಳನ್ನು ಇಟ್ಟುಕೊಂಡು ಇನ್ನೊಂದನ್ನು ಅವನ ಶರ್ಟಿನ ಜೇಬಿನಲ್ಲಿ ತುರುಕಿದ್ದಳು. ‘ಚಿಲ್ಲರೆ ಇಲ್ಲವಾ’ ಕೇಳಿದ್ದಳು.

‘ಇಲ್ಲ, ನನಗೆ ಚಿಲ್ಲರೆ ವಾಪಸ್ಸು ಬೇಕಿಲ್ಲ ಕೂಡಾ...’ ಹೇಳಿದ್ದನವನು. ‘ಏನಂದೆ, ಕಾಂಡೋಮ್ ಬೇಡವಾ. ಕಾಂಡೋಮ್ ಕಂಪಲ್ಸರಿ ಇಲ್ಲಿ. ನನ್ನದು ಸರ್ಟಿಫಿಕೆಟ್ ಇದೆ ನೋಡು, ಎಚ್ಐವಿ ನೆಗೆಟಿವ್. ಎರಡು ತಿಂಗಳಿಗೊಮ್ಮೆ ಚೆಕಪ್ ಮಾಡಿ ಇದನ್ನು ರಿನ್ಯೂವಲ್ ಮಾಡಿ ಕೊಡ್ತಾರೆ. ಇದಕ್ಕೂ ಒಂದು ಸಾವಿರ ಪೀಕ್ತಾನೆ ಗೌರ್ಮೆಂಟ್ ಆಸ್ಪತ್ರೆಯ ದೇಸಾಯಿ ಡಾಕ್ಟರು. ನಿನ್ನ ಹತ್ತಿರ ಸರ್ಟಿಫಿಕೆಟ್ ಇದ್ಯಾ...’ ನಗುತ್ತಾ ಕೇಳಿದ್ದಳು.

‘ಯಾರಾದರೂ ಸರ್ಟಿಫಿಕೆಟ್ ಜೇಬಲ್ಲಿ ಇಟ್ಕೊಂಡು ತಿರುಗ್ತಾರಾ...’ ಅವನು ತಮಾಷೆಯಾಗಿಯೇ ಮಾತನಾಡಿದ್ದ . ಅವಳು ಅವನ ಕೆನ್ನೆ ಚಿವುಟಿ ‘ಯೋಚಿಸಬೇಡ ಐ ಬಿಲೀವ್ ಯೂ ಕಂಪ್ಲೀಟ್ಲಿ. ಈ ಹದಿನೈದು ವರ್ಷಗಳಲ್ಲಿ ನಾನು ಎಂತೆಂಥವರನ್ನೋ ನೋಡಿದ್ದೀನಿ. ನಿನಗೆ ಗೊತ್ತಾ, ನಾನು ಹರಿದ ಕಾಂಡೋಮ್ ಒಂದರ ಫಲ ಎಂದು ಅಮ್ಮ ಸಾಯುವವರೆಗೂ ಹೇಳುತ್ತಲೇ ಇದ್ದಳು. ಕಾಂಡೋಮ್ ಮಿಸ್ಟೇಕಿನಿಂದಾಗಿ ಹುಟ್ಟಿದ ನನ್ನಂತೋರು ಬಹಳಷ್ಟು ಜನರಿದ್ದಾರೆ ಇಲ್ಲಿ. ಹರಿದ ಕಾಂಡೋಮ್ ಮಾರಿದವರೂ ಕೋಟ್ಯಧಿಪತಿಗಳಾಗಿದ್ದಾರೆ’ ನಕ್ಕಿದ್ದಳು.

‘ಏನು ಓದಿದ್ದೀಯ, ಇಂಗ್ಲಿಷ್ ಚೆನ್ನಾಗಿ ಮಾತನಾಡ್ತಿದ್ದೀಯ...’ ಮೆಚ್ಚಿ ಕೇಳಿದ್ದನವನು.

‘ಬರಿ ದೇಹ ಬಯಸಿ ಬರುವವರು ಇಲ್ಲಿ ಮಾತನಾಡುವುದೇ ಕಮ್ಮಿ. ಆದರೆ ದೇಹದ ಸುಖ ಮೀರಿ ಬರುವವರೊಂದಿಗೆ ಸಂವಾದಿಸಲು ಭಾಷೆ ಅವಶ್ಯಕವಾಗಿಬಿಡುತ್ತದೆ. ಇಲ್ಲಿ ಬದುಕಲು ದೇಹದಷ್ಟೇ ಭಾಷೆಯೂ ಮುಖ್ಯವಾಗುತ್ತದೆ ಒಮ್ಮೊಮ್ಮೆ. ಅಂಥ ದೊಡ್ಡ ಓದೇನೂ ನಾನು ಓದಿಲ್ಲ. ಆದರೆ ಮನುಷ್ಯರನ್ನು ಓದುವುದನ್ನು ಚೆನ್ನಾಗಿ ಕಲಿತಿದ್ದೇನೆ. ಇವೊತ್ತು ಥಂಡಿ ಜೋರಾಗಿಯೇ ಇದೆ. ಏನಾದರೂ ಡ್ರಿಂಕ್ಸ್ ತಗೊತೀಯ. ನನ್ನ ಹತ್ತಿರ ಚೀಪ್ ಲಿಕ್ಕರ್ ಅರ್ಧ ಬಾಟಲ್ ಇದೆ. ಹೋದವಾರ ಎಕ್ಸೈಸ್ ಡಿಪಾರ್ಟಮೆಂಟಿನ ಅಟೆಂಡರ್ ಒಬ್ಬ ಬಂದಿದ್ದ; ಫುಲ್ ಬಾಟಲ್ ಹಿಡಿದು. ಅವನು ಒಂದು ಪೆಗ್ಗೂ ಕುಡಿದಿರಲಿಲ್ಲ, ಬರಿ ನನ್ನನ್ನು ಕುಡಿಯುತ್ತಲೇ ಸೋತು ಸುಣ್ಣವಾಗಿ ಹೋದ. ನಿಮ್ಮಂಥೋರು ಸ್ಕಾಚ್ ಕುಡಿಯೋದು. ಆದರೆ ಚೀಪ್ ಲಿಕ್ಕರ್ ಕೊಡೋ ಕಿಕ್ಕನ್ನ, ಅಮಲನ್ನ ಸ್ಕಾಚ್ ಕೊಡೊದಿಲ್ಲ ಅನ್ನೋ ಸತ್ಯ ನಂಗೆ ಗೊತ್ತು. ಕಿಕ್ ಇಲ್ಲದ ಡ್ರಿಂಕ್ಸನ್ನು ಕುಡಿದೂ ಪ್ರಯೋಜನವೇನು ...’ ಅವಳ ಮಾತುಗಳ ಮಾಯೆಯಲ್ಲಿ ಸಿಲುಕಿದವನಂತೆ ಅವನು ‘ಆಗಲಿ...’ ಎಂದ.

ಅವಳು ಬಾಗಿಲ ಬಳಿ ನಿಂತು ‘ಏ ಸಲ್ಮಾನ್ ...’ ಎಂದು ಕೂಗಿದ್ದಳು. ಹದಿನಾಲ್ಕು ಹದಿನೈದು ವರ್ಷಗಳಿರಬಹುದಾದ ಹುಡುಗ ಬಂದು ನಿಂತಿದ್ದ. ಬಾಗಿಲ ಕಿಂಡಿಯಲ್ಲಿ ಕಾಣಿಸುತ್ತಿದ್ದ ಹುಡುಗನ ಕೈಲಿ ಅವಳು ಕಾಸು ಮತ್ತು ಹಳೆಯ ಕೊಡೆಯನ್ನೊಂದು ಕೊಡುತ್ತಾ ‘ಎರಡು ಹಾಫ್ ಚಿಕನ್ ಬಿರಿಯಾನಿ. ಕಾಕಾನಿಗೆ ಹೇಳು ತುಂಬಾ ಬಿಸಿಯಿರಬೇಕು ಮತ್ತು ಸ್ಪೈಸಿಯಾಗಿರಬೇಕು. ನನಗೆ ಅಂದರೆ ಒಳ್ಳೆಯ ಪೀಸ್ ಹಾಕ್ತಾನೆ. ಹಾಗೆ ಎರಡು ಲೀಟರ್ ಮಿನಿರಲ್ ವಾಟರ್, ಅರ್ಧ ಲೀಟರ್ ಸೋಡಾ. ಹಾಂ, ಮರೆತಿದ್ದೆ ಎರಡು ಮಗಾಯ್ ಬೀಡಾ. ನೀನು ಐವತ್ತು ಇಟ್ಕೊ...’ ಎಂದಿದ್ದಳು. ಹುಡುಗ ಮುಖ ಅರಳಿಸುತ್ತಾ ‘ಒಳ್ಳೆ ಗಿರಾಕಿ ಸಿಕ್ಕಿದಂಗೆ ಕಾಣ್ತಿದೆ ...’ ಎಂದು ನಕ್ಕು ಕೊಡೆ ಬಿಚ್ಚಿಕೊಂಡು ಮರೆಯಾಗಿದ್ದ.

ಪ್ರಿಯ ವಾಚಕ ಮಹನೀಯರೇ, ನೀವು ಗೂಗಲ್ ಮ್ಯಾಪನ್ನು ಓಪನ್ ಮಾಡಿ ‘ಮುಂಬಯಿ ರೆಡ್ ಲೈಟ್ ಏರಿಯಾ’ ಎಂದು ಟೈಪ್ ಮಾಡಿ. ಮೊದಲು ಪ್ರಪಂಚದ ಮ್ಯಾಪ್ ಚಿಕ್ಕದಾಗಿ ಉದಯವಾಗುವುದರೊಂದಿಗೆ ಭಾರತದ ಭೂಪಟವು ದೊಡ್ಡದಾಗಿ ಹರಡಿಕೊಳ್ಳುತ್ತಾ ಅದರಲ್ಲಿ ಮುಂಬಯಿ ನಗರವು ಮತ್ತಷ್ಟು ದೊಡ್ಡದಾಗಿ ಆಕಾರ ಪಡೆದುಕೊಂಡು ಅದರ ಮಧ್ಯ ಭಾಗದಲ್ಲಿ ಕೆಂಪು ಕೆಂಪು ಚುಕ್ಕೆಗಳ ತರ ಕಾಣುವುದೇ ರೆಡ್ ಲೈಟ್ ಏರಿಯಾ ಅಥವಾ ಯಲ್ಲೋ ಏರಿಯಾ ಅಥವಾ ನಾಗ್ಪಾಡ್ ಏರಿಯಾ ಅಥವಾ ಲಾಲ್ ಬಜಾರ್ ಏರಿಯಾ ಅಥವಾ ಕಾಮಾಟಿಪುರ! ಹೆಣ್ಣನ್ನು ಇಲ್ಲಿ ಸರಕುಗಳಂತೆ ಮಾರಾಟ ಮಾಡಲಾಗುತ್ತದೆ. ಆದರೆ ಇಲ್ಲಿ ಸೂಳೆಗಾರಿಕೆ ಮಾಡುವವರೆಲ್ಲಾ ಬದುಕಿಗಾಗಿಯೇ ಮಾಡುತ್ತಾರೆಂಬುದು ಮಾತ್ರ ನಿಶ್ಚಿತ.

ಗಂಡಂದಿರು ಹೆಂಡತಿಯರಿಗೆ, ತಂದೆ ತಾಯಿಗಳು ತಮ್ಮ ಮಕ್ಕಳಿಗೆ, ಸಹೋದರರು ತಮ್ಮ ಸಹೋದರಿಯರಿಗೆ ಗಿರಾಕಿಗಳನ್ನು ಹುಡುಕುವಲ್ಲಿ ಉತ್ಸಾದಿಂದ ನಿರತರಾಗಿರುತ್ತಾರೆ. ಮುಂಬಯಿಯಲ್ಲಿ ವಾಸಿಸುವ ಅಂಬಾನಿ, ಅಮಿತಾಬ್, ಸಲ್ಮಾನ್, ಸಚಿನ್ ಮುಂತಾದ ಖ್ಯಾತನಾಮರಿಗಿಂತ ನೂರು ಪರ್ಸೆಂಟಿಗೂ ಹೆಚ್ಚಿನ ನೆಮ್ಮದಿಯ ಬದುಕನ್ನು ಈ ಲಾಲ್ ಬಜಾರ್ ಏರಿಯಾದ ಜನ ತಮ್ಮದನ್ನಾಗಿಸಿ ಕೊಳ್ಳುವುದರಲ್ಲಿ ಬಹಳ ನಿಸ್ಸೀಮರು. ಏಕೆಂದರೆ, ಹೊಟ್ಟೆ ಮತ್ತು ಹೊಟ್ಟೆ ಕೆಳಗಿನ ಎರಡು ತೃಪ್ತಿ ಮಾತ್ರ ಇವರ ಗುರಿ! ನೂರಾರು ಕನಸುಗಳನ್ನು ಹೊತ್ತು ಪ್ರತಿನಿತ್ಯ ಮುಂಬಯಿಗೆ ಬರುವ ಸಾವಿರಾರು ಜನ ತಮ್ಮ ಕನಸುಗಳು ವಾಸ್ತವದ ಬಂಡೆಗಲ್ಲಿನಡಿ ಸಿಲುಕಿ ನಜ್ಜುಗುಜ್ಜಾದಾಗ ನಾಗ್ಪಾಡಿನಲ್ಲೋ, ಧಾರಾವಿಯಲ್ಲೋ ದೊಪ್ಪನೆ ಬಂದು ಬೀಳುತ್ತಾರೆ!

ಸಲ್ಮಾನ್ ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪ್ರಯಾಸದಿಂದ ಹಿಡಿದುಕೊಂಡು ಬಂದು ಬಾಗಿಲು ತಟ್ಟಿದ್ದ. ಅವಳು ಬ್ಯಾಗ್‌ ಪಡೆದು ಬಾಗಿಲು ಮುಚ್ಚಿಕೊಂಡಿದ್ದಳು. ಅದು ಆರಡಿ ಅಗಲ ಎಂಟಡಿ ಉದ್ದದ ಕೊಠಡಿ. ಬಹುತೇಕ ಅಲ್ಲಿ ಅದೇ ಸೈಜಿನ ಕೊಠಡಿಗಳೇ. ದೊಡ್ಡ ಕೊಠಡಿಗಳನ್ನು ಕಾರ್ಡ್ ಬೋರ್ಡ್‌ಗಳಿಂದ ವಿಭಾಗಿಸಿ ಮೂರ್ನಾಲ್ಕು ಕೊಠಡಿಗಳನ್ನು ಮಾಡಿರುವುದೂ ಉಂಟು. ಹಾಗಾಗಿ ಒಂದು ಕೊಠಡಿಯಲ್ಲಿ ಉತ್ಪತ್ತಿಯಾಗುವ ಸುಖದ ನರಳುವಿಕೆ, ಬಿಸಿಯುಸಿರು ಮತ್ತೊಂದು ಕೊಠಡಿಯಲ್ಲೂ ಹರಡಿಕೊಳ್ಳುವುದುಂಟು.

ಸಲ್ಮಾನ್ ಎನ್ನುವ ಹುಡುಗ ಹೋಟೆಲ್ಲಿಗೆ ಹೋಗಿ ಬರುವುದರೊಳಗೆ ಅವನು, ಅವಳು ಬೆತ್ತಲೆಯಾಗಿ ಒಮ್ಮೆ ಸುಖ ಅನುಭವಿಸಿ ಬಟ್ಟೆ ಧರಿಸಿ ಕುಳಿತಿದ್ದರು. ಅವನು ‘ನಾನು ಹೊರಡುತ್ತೇನೆ...’ ಎಂದು ಅವಸರಿಸಿದಾಗ ಅವಳು ಅಚ್ಚರಿಯಿಂದ ‘ಅರೆ, ಹೆಂಗಾದರಾಗಲಿ ನೀನೊಳ್ಳೆ ಗಿರಾಕಿ ನೋಡು. ಇಡೀ ರಾತ್ರಿಗೆ ಬುಕ್ ಮಾಡಿ ಆಗಲೇ ಹೊರಟು ನಿಂತಿದ್ದೀಯಲ್ಲ. ಇನ್ನರ್ಧ ಗಂಟೆ ಇರು. ಡ್ರಿಂಕ್ಸ್ ಮಾಡಿ ಬಿರಿಯಾನಿ ತಿಂದರೆ ಮತ್ತೆ ನನ್ನೊಂದಿಗೆ ಮಲಗಲು ರೆಡಿ ಆಗ್ತೀಯ ...’ ಎಂದು ಗ್ಲಾಸಿಗೆ ವಿಸ್ಕಿಯನ್ನು, ಸೋಡಾವನ್ನು ಬೆರೆಸಿ ಅವನ ಕೈಗಿಟ್ಟಿದ್ದಳು. ಅವನು ಮರುಮಾತನಾಡದೆ ಗ್ಲಾಸ್ ಬಾಯಿಗಿಟ್ಟುಕೊಂಡು ಗುಟುಕರಿಸಿದ್ದ. ಅವಳೂ ವಿಸ್ಕಿಗೆ ನೀರು ಬೆರೆಸಿಕೊಂಡು ಬೆರಳಿನಿಂದ ಅದ್ದಿ ಮೂರು ಬಾರಿ ಕೊಠಡಿಯೆಂಬ ತನ್ನ ಅರಮನೆಗೂ ಮಂಚವೆಂಬ ಸುಪ್ಪತ್ತಿಗೆಗೂ ಚಿಮುಕಿಸಿ ಒಂದೇ ಬಾರಿಗೆ ಅರ್ಧ ಗ್ಲಾಸ್ ಕುಡಿದಿದ್ದಳು. ‘ಏಕೆ ಹಾಗೆ ಮಾಡಿದ್ದು ...’ ಅವನು ಅರ್ಥವಾಗದವನಂತೆ ನಗುತ್ತಾ ಕೇಳಿದ್ದ.

‘ಅತೃಪ್ತ ಆತ್ಮಗಳನ್ನು ಸಂತೃಪ್ತಿಪಡಿಸಲು...’ ಎಂದು ಹೇಳಿ ಮತ್ತೆ ವಿಸ್ಕಿಯನ್ನು ಗುಟುಕರಿಸಿದ್ದಳು. ‘ಅರ್ಥವಾಗಲಿಲ್ಲ...’ ಅವನು ಮತ್ತೆ ಕುತೂಹಲ ತೋರಿದ. ‘ನಮ್ಮ ಜೋಗತಿಯರು ಹೇಳುತ್ತಾರೆ, ಈ ಕಾಮಾಟಿಪುರದಲ್ಲಿ ಲಕ್ಷಾಂತರ ಆತ್ಮಗಳು ಅಂಡಲೆಯುತ್ತಿವೆಯಂತೆ. ಇಲ್ಲಿ ಪ್ರತಿನಿತ್ಯ ಸಾವಿರಾರು ದೇಹಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದಲೂ, ಅಂಥ ಯಾವುದಾದರೂ ಸಂಯೋಜನೆಯಲ್ಲಿ ಸೃಷ್ಟಿಯಾಗಬಹುದಾದಂಥ ಜೀವಾಣುವಿನಲ್ಲಿ ತೂರಿಕೊಂಡು ಅಸ್ತಿತ್ವ ಪಡೆದುಕೊಳ್ಳಲು ಈ ಆತ್ಮಗಳು ತಮ್ಮಲ್ಲಿ ತಾವೇ ಜಿದ್ದಿಗೆ ಬಿದ್ದಂತೆ ಪೈಪೋಟಿ ನಡೆಸುತ್ತಿರುತ್ತವಂತೆ. ಆದರೆ ಕಾಂಡೋಮ್ ಬಳಕೆಯಿಂದ ವೀರ್ಯಾಣು ಮತ್ತು ಗರ್ಭಾಣುಗಳ ಸಂಯೋಜನೆ ಸಾಧ್ಯವಾಗದೆ ಆ ಆತ್ಮಗಳು ನಿರಾಸೆಗೊಳ್ಳುತ್ತವಂತೆ. ಹಾಗಾಗಿ ಅವುಗಳನ್ನು ಹೀಗಾದರೂ ಸಂತೃಪ್ತಿಗೊಳಿಸದಿದ್ದರೆ ಅವು ನಮಗೆ ರೋಗ ರುಜಿನಗಳನ್ನು ತಂದೊಡ್ಡುತ್ತವಂತೆ. ನಾನು ವೃತ್ತಿಗೆ ಇಳಿದು ಹತ್ತಿರ ಹತ್ತಿರ ಹದಿನಾರು ವರ್ಷಗಳಾಗುತ್ತಾ ಬಂತು. ಒಂದು ದಿನವಾದರೂ ಕನಿಷ್ಠ ತಲೆನೋವು, ಜ್ವರ ಎಂದು ಮಲಗಿದವಳಲ್ಲ. ಮೆನ್ಸೆಸ್ ಆದಾಗಲೇ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡುವ ಅನೇಕ ರೆಗ್ಯುಲರ್ ಗಿರಾಕಿಗಳಿದ್ದಾರೆ. ಇದುವರೆಗೆ ಮೂವತ್ತು ಸಲವಾದರೂ ಮೆನ್ಸೆಸ್ ಆದಾಗ ಅಂಥ ಗಿರಾಕಿಗಳನ್ನು ನಾನು ತೃಪ್ತಿ
ಪಡಿಸಿದ್ದೇನೆ ...’ ಅವಳು ಖುಷಿಯಿಂದ ತನ್ನ ಗ್ಲಾಸಿನಲ್ಲಿದ್ದ ಡ್ರಿಂಕ್ಸ್ ಮುಗಿಸಿದ್ದಳು.

ಮತ್ತೆ ಎರಡೂ ಗ್ಲಾಸುಗಳಿಗೆ ವಿಸ್ಕಿ, ನೀರನ್ನು ಬೆರೆಸಿದ್ದಳು. ಡ್ರಿಂಕ್ಸ್ ಮಾಡುವಾಗ ಅವನಿಗೆ ಹಿಂದೆಂದೂ ಇಂಥ ಥ್ರಿಲ್ ಸಿಕ್ಕ ನೆನಪಾಗಲಿಲ್ಲ. ಮೈಮನಸ್ಸುಗಳು ಒಂಥರಾ ಚಿಲಿಪಿಲಿಗೊಳ್ಳಲು ಆರಂಭಿಸಿದವು. ತನ್ನ ಗ್ಲಾಸಿಗೆ ಇನ್ನೊಂದಿಷ್ಟು ನೀರನ್ನು ಬೆರೆಸಲು ಕೇಳಿದ್ದನವನು.

‘ಸುತ್ತಲೂ ಸಮುದ್ರವಿದ್ದರೂ ಮುಂಬಯಿಯಲ್ಲಿ ನೀರಿಗೆ ಭಂಗ. ಮುಂಬಯಿಯಲ್ಲಿ ಸ್ನಾನ ಮಾಡದವರು ಅತ್ತರನ್ನು ಯಥೇಚ್ಛವಾಗಿ ಸುರಿದುಕೊಳ್ಳುತ್ತಾರೆ ಹೆಣಗಳಿಗೆ ಅತ್ತರು ಹಾಕಿದಂತೆ ...’ ಅವಳ ಪ್ರಬುದ್ಧ ಮಾತುಗಳು ಅವನನ್ನು ಅಚ್ಚರಿಗೊಳಿಸಿದ್ದವು.

‘ನೀನು ವಿಜ್ಞಾನಿಯಂತೆ ಮಾತನಾಡುತ್ತಿರುವೆ ...’ ಅವಳನ್ನು ದೀರ್ಘವಾಗಿ ಚುಂಬಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದ. ‘ಅರೆ, ನಾನೇನೂ ವಿಜ್ಞಾನಿಯಲ್ಲ. ಇಲ್ಲಿಗೆ ಎಲ್ಲಾ ತರಹದ, ಎಲ್ಲಾ ವಯೋಮಾನದ ಗಂಡಸರೂ ಬರುತ್ತಾರೆ. ಆಂ! ನಾನಾಗಲೇ ಹೇಳಿದೆನಲ್ಲಾ ಗೌರ್ಮೆಂಟ್ ಆಸ್ಪತ್ರೆಯ ಡಾಕ್ಟರ್ ದೇಸಾಯಿ. ಎಪ್ಪತ್ತು ವರ್ಷ ಈಗ. ಒಳ್ಳೆಯ ಕೆಲಸಗಾರ ಅಂಥ ಅವನ ಸೇವೆಯನ್ನು ಸರ್ಕಾರ ಮುಂದುವರಿಸುತ್ತಲೇ ಬಂದಿದೆ. ನನ್ನ ಬಳಿ ಹೆಲ್ತ್ ಸರ್ಟಿಫಿಕೆಟ್‌ಗೆ ದುಡ್ಡು ಪಡೆಯುವುದಿಲ್ಲ. ಬದಲಾಗಿ ಎರಡು ತಿಂಗಳಿಗೋ, ಮೂರು ತಿಂಗಳಿಗೋ ಒಮ್ಮೆ ತನ್ನ ಫ್ಲಾಟ್‌ಗೆ ಕರೆಸಿಕೊಳ್ತಾನೆ. ಇರುವ ಒಬ್ಬ ಮಗ ಅಮೆರಿಕದಲ್ಲಿದ್ದಾನಂತೆ. ಹೆಂಡತಿ ಸತ್ತು ಹದಿನೈದು ವರ್ಷಗಳ ಮೇಲಾಯಿತಂತೆ. ಬರುವಾಗ ಎರಡು ಸಾವಿರ ಕೊಡ್ತಾನೆ. ಒಂದು ಸಾರಿ ಡಾಕ್ಟರ್ ದೇಸಾಯಿ ಹೇಳಿದ ಮಾತುಗಳು ನನ್ನ ಮನಸ್ಸನ್ನು ಕೊರೆಯುತ್ತಲೇ ಇವೆ ... ‘ಅವಳು ಕುಡಿಯುವುದನ್ನು ಪೂರ್ತಿ ಮಾಡಿ ಬಿರಿಯಾನಿ ಪೊಟ್ಟಣಗಳನ್ನು ಬಿಚ್ಚತೊಡಗಿದಳು.

‘ಅಂಥ ಸಂಗತಿಯನ್ನೇನು ಹೇಳಿದ್ದರು ಡಾಕ್ಟರ್ ದೇಸಾಯಿ...’ ಕೇಳಿದ್ದನವನು. ಅವಳ ಮಾತುಗಳು ಅವನಿಗೆ ಒಂಥರಾ ಮೋಜು ಎನಿಸುವುದರ ಜೊತೆಗೆ ನೈಜವಾಗಿಯೂ ತೋರುತ್ತಿದ್ದವು. ‘ಡಾಕ್ಟರ್ ದೇಸಾಯಿಯವರ ಮಾತುಗಳು ನೆನಪಾಗಿಯೇ ಇವೊತ್ತು ಕಾಂಡೋಮ್ ಇಲ್ಲದೆ ನಿನ್ನ ಜೊತೆ ಮಲಗಿದ್ದು. ಗರ್ಭಕ್ಕೆ ಕಾರಣವಾಗುವ ವೀರ್ಯಾಣುವಾಗಲೀ ಗರ್ಭಾಣುವಾಗಲೀ ಕಣ್ಣಿಗೆ ಕಾಣುವುದಿಲ್ಲವಂತೆ. ಆದರೆ ಗಂಡು ಹೆಣ್ಣು ಕೂಡಿದಾಗ ಅವು ಸಂಯೋಜನೆಗೊಂಡು ಒಂದು ದೇಹ ಉತ್ಪತ್ತಿಯಾಗುತ್ತದಂತೆ. ಒಂದು ಸಣ್ಣ ಅಣುವಿನಲ್ಲಿ ಕೈ, ಕಾಲು, ಕಣ್ಣು, ಹೃದಯ, ಮೆದುಳು, ನರನಾಡಿಗಳು ಹೇಗೆ ಅಡಕವಾಗಿರುತ್ತವೆ ಎಂಬುದೇ ಒಂದು ದೊಡ್ಡ ವಿಸ್ಮಯ. ಪ್ರತಿ ಪ್ರಭೇದದಲ್ಲೂ ಅದೇ ಪ್ರಭೇದದ ಜೀವ ಉತ್ಪತ್ತಿಯಾಗುವುದು ಕೂಡ ಸೃಷ್ಟಿಯ ದೊಡ್ಡ ಅದ್ಭುತ ಎಂದು ಹೇಳುತ್ತಿದ್ದರು ದೇಸಾಯಿ ಡಾಕ್ಟರು.

‘ಜೀವ ಸಂಕುಲದ ಎಲ್ಲಾ ಪ್ರಭೇದದ ಪ್ರಾಣಿಗಳಿಗೂ ಈ ಎಲ್ಲಾ ವಿಸ್ಮಯಕರ ಸಂಗತಿಗಳ ಬಗ್ಗೆ ಅಂಥ ಕುತೂಹಲವೇನೂ ಇರುವುದಿಲ್ಲವೆಂದು, ಅವಕ್ಕೇನಿದ್ದರೂ ಕೂಡುವ ಸಂಘರ್ಷದಿಂದ ಉಂಟಾಗುವ ಸುಖದ ಕಡೆಗೆ ಮಾತ್ರ ಲಕ್ಷ್ಯವಿರುತ್ತದೆಂದು ನನ್ನ ಮೈ ಪೂರಾ ಮೆಲ್ಲನೆ ಕಚ್ಚುತ್ತಾ ಹೇಳುತ್ತಿದ್ದರು. ಮನುಷ್ಯನಿಗೂ ಕೂಡ ಅಷ್ಟೆ, ಸ್ಖಲನದ ಸಮಯದಲ್ಲಿ ಗಂಡಸಿನ ಮನಸ್ಸೇ ಆಗಲಿ, ಹೆಂಗಸಿನ ಮನಸ್ಸೇ ಆಗಲಿ ಬ್ಲಾಂಕ್ ಆಗಿಬಿಡುತ್ತದಂತೆ. ಅದನ್ನೇ ಪರಮ ಸುಖವೆಂದು ಕರೆಯುವುದೆಂದು ಡಾಕ್ಟರ್ ದೇಸಾಯಿ ಬಡಬಡಿಸುತ್ತಿದ್ದರು ...’ ಅವಳು ಮಾತು ನಿಲ್ಲಿಸಿ ಬಿಚ್ಚಿದ ಒಂದು ಬಿರಿಯಾನಿ ಪೊಟ್ಟಣವನ್ನು ಅವನಿಗೆ ಕೊಟ್ಟು ಇನ್ನೊಂದನ್ನು ತಾನು ತಿನ್ನತೊಡಗಿದಳು. ಇಬ್ಬರೂ ಬಿರಿಯಾನಿ ಮುಗಿಸಿ ಬೀಡಾ ಹಾಕಿಕೊಂಡಿದ್ದರು. ಅವನು ತೂರಾಡಿಕೊಂಡು ಹೋಗಿ ಅವಳನ್ನು ಹಿಡಿದ. ಅವಳು ಅವನನ್ನು ಬೆತ್ತಲಾಗಿಸಿ, ತಾನೂ ಬೆತ್ತಲಾಗಿ ಮಂಚದ ಮೇಲೆ ಉರುಳಿದಳು. ಹೊರಗೆ ಮಳೆ ಜೋರಾಗಿ ಸುರಿಯುತ್ತಿತ್ತು. ಮಳೆಯ ಸದ್ದಿನಲ್ಲಿ ಇಬ್ಬರ ನರಳುವಿಕೆಯ ಸದ್ದು ಕೇಳದಾಗಿತ್ತು.

ಅರ್ಧ ಗಂಟೆಯಲ್ಲಿ ಜೋರು ಮಳೆ ಕಡಿಮೆಯಾಗಿತ್ತು. ಅವನು ಖಾಲಿಯಾಗಿದ್ದ. ಕೆಂಪು ಜಿರೋ ಕ್ಯಾಂಡಲ್ ಬಲ್ಬಿನ ಬೆಳಕಿನಲ್ಲಿ ಎದ್ದು ಬಟ್ಟೆಯಾಕಿಕೊಂಡಿದ್ದ. ಅವಳೂ ಎದ್ದು ನೈಟಿ ಧರಿಸಿದ್ದಳು. ಇಂಥ ಸುಖದ ಅಮಲಿನಲ್ಲಿ ಹಿಂದೆಂದು ಮುಳುಗಿದ ನೆನಪೇ ಅವಳಿಗಾಗಿರಲಿಲ್ಲ. ಅವನು ಶೂ ಹಾಕಿಕೊಳ್ಳುತ್ತಿದ್ದ. ಸಣ್ಣದಾಗಿ ಮಳೆ ಹನಿಯುತ್ತಿತ್ತು. ‘ಅರೆ, ಹೊರಟೇಬಿಟ್ಟೆಯಾ...’ ಕೇಳಿದ್ದಳು. ‘ಮರೆತಿದ್ದೆ, ನಾನು ಬೆಳಗಿನ ಜಾವ ಮೂರು ಗಂಟೆಯ ಫ್ಲೈಟಿಗೆ ಹೋಗಬೇಕು. ಹೋಟೆಲ್ಲಿಗೆ ಹೋಗಿ ಲಗೇಜ್ ತೆಗೆದುಕೊಂಡು ಹೋಗಬೇಕು...’ ಅವನು ತಗಡಿನ ಬಾಗಿಲನ್ನು ತಳ್ಳಿಕೊಂಡು ಹೊರನಡೆದ.

‘ಏಯ್ ಏನು ನಿನ್ನ ಹೆಸರು‌’ ಏನನ್ನೋ ಮುಖ್ಯವಾದದ್ದನ್ನು ಮರೆತವಳಂತೆ ಕೇಳಿದ್ದಳು. ಅವನು ಹಿಂತಿರುಗಿ ನೋಡಲಿಲ್ಲ. ‘ಒಳ್ಳೇ ಗಿರಾಕಿ’ ಅವಳು ಸ್ವಲ್ಪ ಜೋರಾಗಿಯೇ ಗೊಣಗಿಕೊಂಡಿದ್ದಳು. ಅವಳ ಧ್ವನಿ ಕೇಳಿ ಪಕ್ಕದ ಮನೆಯ ಲಕ್ಕೂಬಾಯಿ ‘ಏಯ್ ಚಮೇಲಿ ಗಿರಾಕಿಯೊಬ್ಬ ರೆಡಿ ಇದಾನೆ ಕಳಿಸಲ’ ಎಂದು ಕೇಳಿದ್ದಳು. ಅವಳು ‘ಬೇಡ ಅತ್ತೆ ಅರ್ಧ ಗಂಟೆಯ ಹಿಂದೆ ಮೆನ್ಸೆಸ್ ಆದೆ. ಒಂಥರಾ ಸುಸ್ತು ಬೇರೆ ..’ ಎಂದು ಸುಳ್ಳು ಹೇಳಿ ಬಾಗಿಲು ಹಾಕಿಕೊಂಡಿದ್ದಳು. ಇಡೀ ನಾಗ್ಪಾಡ್ ಏರಿಯಾ ಸುಖ ದುಃಖ ಎರಡರಲ್ಲೂ ಅನುಸಂಧಾನಗೊಂಡು ಹಿತವಾಗಿ ನರಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.