ADVERTISEMENT

ಪ್ರಶ್ನೋತ್ತರ | ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಿಕೊಳ್ಳಬೇಕೆ? ಇಲ್ಲಿದೆ ಮಾಹಿತಿ

ಯು.ಪಿ.ಪುರಾಣಿಕ್
Published 6 ಜುಲೈ 2021, 19:41 IST
Last Updated 6 ಜುಲೈ 2021, 19:41 IST
ಪುರಾಣಿಕ್
ಪುರಾಣಿಕ್   

ಹೆಸರು, ಊರು ಬೇಡ

* ಪ್ರಶ್ನೆ: ನಾನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ನ ಹಣ ತುಂಬಲಾಗದೆ ₹ 60 ಸಾವಿರಕ್ಕೆ ಒ.ಟಿ.ಎಸ್‌ ಪಡೆದು ತೀರಿಸಿದ್ದೆ. ಇದರಿಂದಾಗಿ ನನಗೆ ಎಲ್ಲಿಯೂ ಸಾಲ ದೊರೆಯುತ್ತಿಲ್ಲ. ಕೆಲವು ದಿನಗಳ ಹಿಂದೆ ನನಗೊಂದು ಇ–ಮೇಲ್‌ ಬಂದಿದೆ. ನೀವು ₹ 800 ತಕ್ಷಣ ಕಳಿಸಿ, ಸಿಬಿಲ್‌ ರೇಟಿಂಗ್‌ ಸರಿಪಡಿಸಲಾಗುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ಇದನ್ನು ನಂಬಬಹುದೇ ತಿಳಿಸಿ.

ಉತ್ತರ: ಇತ್ತೀಚಿನ ದಿನಗಳಲ್ಲಿ ನಮ್ಮ ಮೊಬೈಲ್‌ಗಳಿಗೆ, ‘ಲಾಟರಿ ಹೊಡೆದಿದೆ, ಆದಾಯ ತೆರಿಗೆ ರೀಫಂಡ್‌ ಬಂದಿದೆ’ ಹಾಗೂ ‘ಬಹುಮಾನ ಬಂದಿದೆ’ ಎಂಬ ಹತ್ತು ಹಲವು ಸುಳ್ಳು ಇ–ಮೇಲ್‌ಗಳು, ಎಸ್‌ಎಂಎಸ್‌ಗಳು, ವಾಟ್ಸ್‌ಆ್ಯಪ್‌ ಸುದ್ದಿಗಳು ಬರುತ್ತಿರುವುದನ್ನು ನೋಡುತ್ತಿದ್ದೇವೆ. ಅದೇ ರೀತಿ ನೀವು ₹ 800 ತುಂಬಿ ಸಿಬಿಲ್‌ ರೇಟಿಂಗ್‌ ಉತ್ತಮ ಮಾಡಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಹಣ ಕಳುಹಿಸಲು ಹೋಗದಿರಿ. ನಮ್ಮ ಓದುಗರಿಗೊಂದು ಕಿವಿಮಾತು. ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ತುಂಬಲು ಒ.ಟಿ.ಎಸ್‌. (ಒನ್‌ ಟೈಮ್‌ ಸೆಟಲ್‌ಮೆಂಟ್‌) ಪಡೆದಿದ್ದರೆ ಸಾಲದ ಕಂತು ಮತ್ತು ಬಡ್ಡಿ (ಇಎಂಐ) ಸರಿಯಾಗಿ ತುಂಬದಿರುವಲ್ಲಿ ಅಥವಾ ಜಾಮೀನು ಹಾಕಿ ಸಾಲಗಾರ ಸಮಯಕ್ಕೆ ಸರಿಯಾಗಿ ಮರುಪಾವತಿಸದೆ ಚೆಕ್‌ ಬೌನ್ಸ್‌ ಆದರೆ, ಮುಂದೆ ಯಾವುದೇ ಬ್ಯಾಂಕ್‌ನಲ್ಲಿ ಸಾಲ ದೊರೆಯುವುದಿಲ್ಲ. ಯುವಕರು ಉದ್ಯೋಗ ಹುಡುಕಿ ಹೋಗುವಾಗ ಕೂಡಾ ಸಿಬಿಲ್ ರೇಟಿಂಗ್ಸ್‌ ನೋಡುತ್ತಾರೆ. ಬಹಳಷ್ಟು ಜನರು ಕ್ರೆಡಿಟ್‌ ಕಾರ್ಡ್‌ನ ದುರ್ಬಳಕೆ ಮಾಡಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕ ಶಿಸ್ತು ಹಾಗೂ ಹಾಸಿಗೆ ಇದ್ದಷ್ಟು ಕಾಲು ಚಾಚುವ ಅಭ್ಯಾಸವಿದ್ದರೆ ಜೀವನ ಸುಖಮಯವಾಗುತ್ತದೆ.

ADVERTISEMENT

**
ಶಾಂತಾ, ಮೂಡುಬಿದಿರೆ

* ಪ್ರಶ್ನೆ: ನಾನು ಗೃಹಿಣಿ. ನನಗೆ ನನ್ನ ತಂದೆಯವರಿಂದ 10 ಸೆಂಟ್ಸ್‌ ಜಾಗ ದಾನ ಪತ್ರ ಮುಖೇನ ಬಂದಿದೆ. ನನ್ನ ವಯಸ್ಸು 56 ವರ್ಷ. ನನಗೆ 28 ವರ್ಷದ ಮಗ, 30 ವರ್ಷದ ಮಗಳು ಇದ್ದಾರೆ. ಇಬ್ಬರಿಗೂ ಮದುವೆ ಆಗಿದೆ. 10 ಸೆಂಟ್ಸ್‌ ಜಾಗ ಮಾರಾಟ ಮಾಡಬೇಕೆಂದಿದ್ದೇನೆ. ಇದರ ಬೆಲೆ ₹ 75 ಲಕ್ಷ. ನಾನು ₹ 25 ಲಕ್ಷ ಇರಿಸಿಕೊಂಡು ಉಳಿದ ₹ 50 ಲಕ್ಷ ಮಕ್ಕಳಿಗೆ ಸರಿಸಮನಾಗಿ ಹಂಚಬೇಕೆಂದಿದ್ದೇನೆ. ತೆರಿಗೆ ವಿಚಾರದಲ್ಲಿ ಮಾಹಿತಿ ಇಲ್ಲ. ನಿಮ್ಮ ಅಂಕಣವನ್ನು ಪ್ರತೀ ಬುಧವಾರ ಓದುತ್ತಿದ್ದೇನೆ. ನೀವು ಇದೇ ವಿಚಾರದಲ್ಲಿ ಹಲವರಿಗೆ ಸಲಹೆ ನೀಡಿದ್ದನ್ನು ನೋಡಿದ್ದೇನೆ. ನನಗೂ ಸೂಕ್ತ ಸಲಹೆ ನೀಡಿ.

ಉತ್ತರ: ಸ್ಥಿರ ಆಸ್ತಿ ಮಾರಾಟ ಮಾಡಿದಾಗ ಬಂಡವಾಳ ವೃದ್ಧಿ ತೆರಿಗೆ ಬಂದೇ ಬರುತ್ತದೆ. ತೆರಿಗೆ ಉಳಿಸಲು ಸೆಕ್ಷನ್ 54ಇಸಿ ಆಧಾರದ ಮೇಲೆ ಗರಿಷ್ಠ ₹ 50 ಲಕ್ಷ ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ 5 ವರ್ಷಗಳ ಅವಧಿಗೆ ಇಡಬಹುದು ಅಥವಾ ಸಂಪೂರ್ಣ ಹಣದಿಂದ ಬೇರೊಂದು ಮನೆ ಮಾಡಿಕೊಳ್ಳಬಹುದು. ನಿಮಗೆ 10 ಸೆಂಟ್ಸ್‌ ಜಾಗ, 2000ನೇ ಇಸವಿಗೂ ಮುಂಚೆ ನಿಮ್ಮ ತಂದೆಯವರಿಂದ ಬಂದಂತೆ ಕಾಣುತ್ತದೆ. ಇದು ನಿಜವಾದಲ್ಲಿ 2001ರ ಏಪ್ರಿಲ್‌ 1ರ ಈ ಜಾಗದ ಸರ್ಕಾರಿ ಬೆಲೆಯನ್ನು ನಿಮ್ಮ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿಚಾರಿಸಿ ತಿಳಿಯಿರಿ. 2001ರಲ್ಲಿ ಕಾಸ್ಟ್‌ ಆಫ್‌ ಇನ್‌ಫ್ಲೇಷನ್‌ ಇಂಡೆಕ್ಸ್‌ 100 ಇದ್ದು ಈಗ 301 ಆಗಿದೆ. ಅಂದರೆ ನಿಮ್ಮ ಜಾಗದ 2001ರ ಬೆಲೆಯ ಮೂರರಷ್ಟನ್ನು ಈಗ ಮಾರಾಟ ಮಾಡಿ ಬರುವ ಹಣದಿಂದ ಕಳೆದು ಉಳಿದ ಹಣಕ್ಕೆ ಮಾತ್ರ ತೆರಿಗೆ ಕೊಡಬಹುದು ಅಥವಾ ಇಲ್ಲಿ ತಿಳಿಸಿದಂತೆ ಸರ್ಕಾರಿ ಬಾಂಡ್‌ ಖರೀದಿಸಬಹುದು. ಸರ್ಕಾರಿ ಬಾಂಡ್‌ ಕೊಳ್ಳುವಾಗ ವಿಂಗಡಿಸಿ ನಿಮ್ಮ ಹೆಸರಿನಲ್ಲಿ ಕೊಂಡು ಮಕ್ಕಳಿಗೆ ನಾಮ ನಿರ್ದೇಶನ ಮಾಡಬಹುದು. ಏನಾದರೂ ಸಂಶಯ ಇದ್ದರೆ ನನಗೆ ಕರೆ ಮಾಡಿ.

**
ನಾಗರಾಜ, ರಾಜಾಜಿನಗರ, ಬೆಂಗಳೂರು

*
ಪ್ರಶ್ನೆ:
ನಾನು ₹ 5 ಲಕ್ಷವನ್ನು ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಬೇಕೆಂದಿದ್ದೇನೆ. ದಯಮಾಡಿ ಸಲಹೆ ನೀಡಿ.

ಉತ್ತರ: ಷೇರು ಮಾರುಕಟ್ಟೆಯಲ್ಲಿ 6,800ಕ್ಕೂ ಹೆಚ್ಚಿನ ಕಂಪನಿಗಳ ಷೇರುಗಳ ವಹಿವಾಟು ನಡೆಯುತ್ತಿರುತ್ತದೆ. ಸ್ಮಾಲ್‌ಕ್ಯಾಪ್‌, ಮಿಡ್‌ಕ್ಯಾಪ್‌, ಲಾರ್ಜ್‌ ಕ್ಯಾಪ್‌ ಷೇರುಗಳು ವ್ಯವಹಾರಕ್ಕೆ ದೊರೆಯುತ್ತವೆ. ನೀವು ಸೂಚ್ಯಂಕದ (ನಿಫ್ಟಿ–50, ಸೆನ್ಸೆಕ್ಸ್‌–30) ಷೇರುಗಳನ್ನು ಮಾತ್ರ ಆರಿಸಿಕೊಳ್ಳಿ. ಯಾವುದೇ ಕಂಪನಿಯ ಒಂದೇ ಒಂದು ಷೇರು ಕೂಡಾ ಕೊಳ್ಳಬಹುದು ಹಾಗೂ ಮಾರಾಟ ಮಾಡಬಹುದು. ವ್ಯವಹಾರ ಮಾಡುವ ಮುನ್ನ ಬ್ರೋಕರ್‌ ಮುಖಾಂತರ ಡಿಮ್ಯಾಟ್‌ ಖಾತೆ ಪ್ರಾರಂಭಿಸಿ. ಸೂಚ್ಯಂಕ ಬಹಳ ಕೆಳಗೆ ಬಂದಾಗ ಕೊಂಡು ಮೇಲೆ ಹೋದಾಗ ಮಾರಾಟ ಮಾಡಿ ಲಾಭ ಗಳಿಸಿರಿ. ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಜ್ಞಾನ, ಅನುಭವ, ಅಧ್ಯಯನದ ಅವಶ್ಯಕತೆ ಇದೆ. ಇದೊಂದು ಊಹಾಪೋಹ ಹಾಗೂ ಅನಿಶ್ಚಿತತೆಯ ಹೂಡಿಕೆಯಾದ್ದರಿಂದ ನೀವು ತಜ್ಞರ ಸಲಹೆ ಪಡೆದೇ ಹೂಡಿಕೆ ಮಾಡುವುದು ಲೇಸು.

ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡುವಾಗ ಇಂಡೆಕ್ಸ್‌, ಆರ್ಬಿಟ್ರೇಜ್‌ ಹಾಗೂ ಡೆಟ್‌ ಫಂಡ್‌ಗಳನ್ನು ಆರಿಸಿಕೊಳ್ಳುವುದು ಒಳಿತು. ಈ ಮೂರು ಬಗೆಯ ಫಂಡ್‌ಗಳು ನಿಮಗೆ ಹೂಡಿಕೆಗೆ ಸೂಕ್ತ. ಇಲ್ಲಿ ಆಪತ್ತು ಕಡಿಮೆ ಹಾಗೂ ಉತ್ತಮ ವರಮಾನ ನಿರೀಕ್ಷಿಸಬಹುದು. ಯಾವುದಾದರೂ ಒಂದು ಫಂಡ್‌ನಲ್ಲಿ ‘ಎಸ್‌ಐಪಿ’ ಮೂಲಕ ಹೂಡಿಕೆ ಆರಂಭಿಸಿ. ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಏರಿಳಿತ ಇದ್ದೇ ಇರುತ್ತದೆಯಾದರೂ ಆರಿಸಿಕೊಳ್ಳುವಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.