ADVERTISEMENT

PV Web Exclusive | ಬೆಣ್ಣೆಯಂತೆ ಕರಗಿತು ಅದಾನಿ ಕಂಪನಿಗಳ ಸಂಪತ್ತು

‘ಬ್ಯಾಡ್‌ ನ್ಯೂಸ್‌’ನಿಂದ ₹ 1.58 ಲಕ್ಷ ಕೋಟಿ ಬಂಡವಾಳ ಕುಸಿತ

ವಿನಾಯಕ ಭಟ್ಟ‌
Published 20 ಜೂನ್ 2021, 14:50 IST
Last Updated 20 ಜೂನ್ 2021, 14:50 IST
ಷೇರುಪೇಟೆಯಲ್ಲಿ ಸುದ್ದಿಯಲ್ಲಿರುವ ಅದಾನಿ ಸಮೂಹದ ಕಂಪನಿಗಳು
ಷೇರುಪೇಟೆಯಲ್ಲಿ ಸುದ್ದಿಯಲ್ಲಿರುವ ಅದಾನಿ ಸಮೂಹದ ಕಂಪನಿಗಳು   

ಕಳೆದ ವಾರವಷ್ಟೇ ಏಷ್ಯಾದ ಅತಿ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ ಅವರ ಸಂಭ್ರಮವನ್ನು ಒಂದು ‘ಕೆಟ್ಟ ಸುದ್ದಿ’(ಬ್ಯಾಡ್‌ ನ್ಯೂಸ್‌) ಷೇರುಪೇಟೆಯಲ್ಲಿ ಕ್ಷಣಮಾತ್ರದಲ್ಲೇ ಕಿತ್ತುಕೊಂಡಿತು. ಷೇರುಪೇಟೆಯಲ್ಲಿ ನೋಂದಾಯಿತ ಅದಾನಿ ಸಮೂಹದ ಆರು ಕಂಪನಿಗಳ ಮಾರುಕಟ್ಟೆ ಬಂಡವಾಳವು ಬಿಸಿ ತಾಗಿದ ಬೆಣ್ಣೆಯಂತೆ ಕರಗಿಹೋಯಿತು. ಆರು ಅದಾನಿ ಕಂಪನಿಗಳ ಮಾರುಕಟ್ಟೆ ಬಂಡವಾಳವು ಒಂದು ವಾರದ ಅವಧಿಯಲ್ಲೇ ₹ 1.58 ಲಕ್ಷ ಕೋಟಿ ಕುಸಿತ ಕಂಡಿತು.

ಷೇರುಪೇಟೆಯೇ ಹಾಗೆ. ಒಂದು ‘ಒಳ್ಳೆಯ ಸುದ್ದಿ’ ಬಂದಾಗ ಕಂಪನಿಯ ಷೇರು ನಾಗಾಲೋಟದಲ್ಲಿ ಓಡುತ್ತದೆ. ‘ಕೆಟ್ಟ ಸುದ್ದಿ’ ಬಂದಾಗ ಅಷ್ಟೇ ಬೇಗನೆ ಪ್ರಪಾತದತ್ತ ಮುಖಮಾಡುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಅದಾನಿ ಸಮೂಹದ ಕಂಪನಿಗಳ ಷೇರುಗಳು.

ಅದಾನಿ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಮೂರು ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌.ಪಿ.ಐ) ಡಿಮ್ಯಾಟ್‌

ADVERTISEMENT
ಗೌತಮ್‌ ಅದಾನಿ

ಖಾತೆಗಳನ್ನು ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ (ಎನ್‌.ಎಸ್‌.ಡಿ.ಎಲ್‌) ಸ್ಥಗಿತಗೊಳಿಸಿದೆ ಎಂದು ಪ್ರತಿಷ್ಠಿತ ವಾಣಿಜ್ಯ ಪತ್ರಿಕೆಯೊಂದು ಪ್ರಕಟಿಸಿದ ವರದಿಯು ಷೇರುಪೇಟೆಯಲ್ಲಿ ತಲ್ಲಣವನ್ನೇ ಮೂಡಿಸಿತ್ತು. ದಿಗಿಲುಗೊಂಡ ಹಲವು ಹೂಡಿಕೆದಾರರು ಜೂನ್‌ 14ರಂದು ಮಾರುಕಟ್ಟೆ ಆರಂಭಗೊಂಡ ಕ್ಷಣದಿಂದಲೇ ಅದಾನಿ ಸಮೂಹದ ಎಲ್ಲಾ ಕಂಪನಿಗಳ ಷೇರುಗಳನ್ನು ಮಾರಲು ಮುಂದಾದರು. ಪರಿಣಾಮ ಬೆಳಿಗ್ಗೆ ಅದಾನಿ ಕಂಪನಿಯ ಷೇರಿನ ಮೌಲ್ಯವು ಶೇ 25ರವರೆಗೂ ಕುಸಿದಿತ್ತು. ಮಧ್ಯಾಹ್ನದ ವೇಳೆಗೆ ಅದಾನಿ ಸಮೂಹವು, ‘ನಮ್ಮ ಕಂಪನಿಯ ವಿದೇಶಿ ಬಂಡವಾಳ ಹೂಡಿಕೆದಾರರ ಯಾವುದೇ ಖಾತೆ ಸ್ಥಗಿತಗೊಂಡಿಲ್ಲ. ಇದು ಹೂಡಿಕೆದಾರರನ್ನು ದಿಕ್ಕುತಪ್ಪಿಸಲು ರೂಪಿಸಿರುವ ಷಡ್ಯಂತ್ರವಾಗಿದೆ’ ಎಂದು ಸ್ಪಷ್ಟೀಕರಣವನ್ನೂ ನೀಡಿತು. ಇದರಿಂದಾಗಿ ಷೇರಿನ ಬೆಲೆ ತುಸು ಚೇತರಿಸಿಕೊಂಡಿತಾದರೂ ಇಡೀ ವಾರ ಮಾರಾಟದ ಒತ್ತಡವನ್ನು ಎದುರಿಸಬೇಕಾಯಿತು.

ಮಾರಿಷಸ್‌ ಮೂಲದ ವಿದೇಶಿ ಬಂಡವಾಳ ಹೂಡಿಕೆದಾರ ಸಂಸ್ಥೆಗಳಾದ ‘ಅಲಬುಲಾ ಇನ್‌ವೆಸ್ಟ್‌ ಫಂಡ್‌’, ‘ಕ್ರೆಸ್ಟಾ ಫಂಡ್‌’ ಹಾಗೂ ‘ಎಪಿಎಂಎಸ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌’ ಸಂಸ್ಥೆಗಳು ಸುಮಾರು ₹ 42,000 ಕೋಟಿ ಬಂಡವಾಳವನ್ನು ಅದಾನಿ ಸಮೂಹದ ನಾಲ್ಕು ಕಂಪನಿಗಳಲ್ಲಿ ಹೂಡಿಕೆ ಮಾಡಿವೆ. ಬಂಡವಾಳ ಮೂಲದ ಬಗ್ಗೆ ದಾಖಲೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಈ ಮೂರು ಕಂಪನಿಗಳ ಖಾತೆಗಳನ್ನು ಎನ್‌ಎಸ್‌ಡಿಎಲ್‌ ಸ್ಥಗಿತಗೊಳಿಸಿದೆ ಎಂದು ಪತ್ರಿಕೆಯು ವರದಿಯನ್ನು ಪ್ರಕಟಿಸಿತ್ತು. ಬಳಿಕ ಅದಾನಿ ಕಂಪನಿ ಹಾಗೂ ಎಫ್‌.ಪಿ.ಐ ಕೂಡ ವರದಿಯಲ್ಲಿನ ಅಂಶಗಳನ್ನು ಅಲ್ಲಗಳೆದಿತ್ತು. ಎನ್‌ಎಸ್‌ಡಿಎಲ್‌ ಕೂಡ ಖಾತೆಯನ್ನು ಸ್ಥಗಿತಗೊಳಿಸಿಲ್ಲ ಎಂಬ ಸ್ಪಷ್ಟೀಕರಣವನ್ನೂ ನೀಡಿತ್ತು. ಆದರೆ, ಈ ‘ಕೆಟ್ಟ ಸುದ್ದಿ’ ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದ್ದು, ಅದಾನಿ ಕಂಪನಿಗಳ ಷೇರು ಖರೀದಿಗೆ ಹೆಚ್ಚಿನ ಉತ್ಸಾಹ ತೋರಿಸಿಲ್ಲ.

ರಾಷ್ಟ್ರೀಯ ಷೇರುಪೇಟೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯ ಷೇರಿನ ಬೆಲೆಯು ₹ 367.75ರಷ್ಟು (ಶೇ –22.61) ಕುಸಿದಿದ್ದು, ಮಾರುಕಟ್ಟೆ ಬಂಡವಾಳವು ₹ 40,446 ಕೋಟಿಯಷ್ಟು ಕರಗಿಹೋಯಿತು. ಅದಾನಿ ಟ್ರಾನ್ಸ್‌ಮಿಷನ್‌ ಕಂಪನಿಯ ಷೇರಿನ ಮೌಲ್ಯವು ₹362.45ರಷ್ಟು (ಶೇ –22.61) ಕಡಿಮೆಯಾಗಿದ್ದು, ಮಾರುಕಟ್ಟೆ ಬಂಡವಾಳದಲ್ಲಿ ₹ 39,863 ಕೋಟಿಯಷ್ಟು ಕಡಿಮೆಯಾಗಿದೆ. ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್‌ ಎಕಾನಾಮಿಕ್‌ ಜೋನ್‌ ಕಂಪನಿಯ ಷೇರಿನ ಬೆಲೆಯು ₹ 145.40ರಷ್ಟು (ಶೇ –20.94) ಕುಸಿದಿದ್ದು, ₹ 29,687 ಕೋಟಿಯಷ್ಟು ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ.

ಅದಾನಿ ಗ್ರೀನ್‌ ಎನರ್ಜಿ ಷೇರಿನ ಮೌಲ್ಯವು ₹ 150.15ರಷ್ಟು (ಶೇ –12.33) ಕಡಿಮೆಯಾಗಿದ್ದು, ₹ 23,484 ಕೋಟಿಯಷ್ಟು ಮಾರುಕಟ್ಟೆ ಬಂಡವಾಳ ಕರಗಿಹೋಗಿದೆ. ಅದಾನಿ ಪವರ್‌ ಕಂಪನಿಯ ಷೇರಿನ ಬೆಲೆಯು ₹ 33.40ರಷ್ಟು (ಶೇ –22.61) ಕುಸಿದಿದ್ದು, ಮಾರುಕಟ್ಟೆ ಬಂಡವಾಳದಲ್ಲಿ ₹ 12,882 ಕೋಟಿಯಷ್ಟು ಕಡಿಮೆಯಾಗಿದೆ. ಅದಾನಿ ಎಂಟರ್‌ಪ್ರೈಸಸ್‌ ಷೇರಿನ ಮೌಲ್ಯವು ₹ 114.10ರಷ್ಟು (ಶೇ –7.12) ಕಡಿಮೆಯಾಗಿದ್ದು, ₹12,549 ಕೋಟಿಯಷ್ಟು ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ.

ತಗ್ಗಿದ ಲಾಭದ ಪ್ರಮಾಣ:

ಅದಾನಿ ಕಂಪನಿಗಳ ಷೇರುಮೌಲ್ಯ ಕುಸಿತ

ದೇಶದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಅದಾನಿ ಸಮೂಹದ ಕಂಪನಿಗಳ ಷೇರು ಹೂಡಿಕೆದಾರರಿಗೆ ಭಾರಿ ಪ್ರಮಾಣದಲ್ಲಿ ಲಾಭವನ್ನು ತಂದುಕೊಡುತ್ತಿದ್ದವು. ಈದೀಗ ಬಿತ್ತರಗೊಂಡ ‘ಕೆಟ್ಟ ಸುದ್ದಿ’ ಅದಾನಿ ಕಂಪನಿಗಳ ಷೇರಿನ ಬೆಲೆ ಏರಿಕೆಯ ನಾಗಾಲೋಟಕ್ಕೆ ಕಡಿವಾಣ ಹಾಕಿದ್ದು, ಹೂಡಿಕೆದಾರರ ಲಾಭದ ಪ್ರಮಾಣವನ್ನು ಕಡಿಮೆಗೊಳಿಸಿದೆ.

ಜೂನ್‌ 14ರಂದು ಬೆಳಿಗ್ಗೆ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರಿನ ಬೆಲೆ ₹ 400ರಷ್ಟು ಕುಸಿದಿತ್ತು. ಕಂಪನಿ ಸ್ಪಷ್ಟೀಕರಣ ನೀಡಿದ ಬಳಿಕ ಚೇತರಿಸಿಕೊಂಡು ₹ 100.15ರಷ್ಟು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು. ಮರುದಿನ ₹ 37.40ರಷ್ಟು ಏರಿಕೆಯನ್ನೂ ಕಂಡಿತ್ತು. ಬಳಿಕ ಮಾರಾಟ ಒತ್ತಡಕ್ಕೆ ಸಿಲುಕಿ ಎರಡು ದಿನ ಬೆಲೆ ಇಳಿಕೆಯಾಗಿತ್ತು. ಜೂನ್‌ 18ರಂದು ಹೂಡಿಕೆದಾರರು ಈ ಷೇರು ತೋರಿದ ಉತ್ಸಾಹದಿಂದಾಗಿ ₹ 119.80ರಷ್ಟು ಬೆಲೆ ಹೆಚ್ಚಾಗಿದೆ. 52 ವಾರಗಳ ಅವಧಿಯಲ್ಲಿ ₹ 145.20ಕ್ಕೆ ಕುಸಿದಿದ್ದ ಈ ಕಂಪನಿಯ ಷೇರಿನ ಬೆಲೆಯು, ಗರಿಷ್ಠ ಮಟ್ಟ ₹ 1,717.20ಕ್ಕೆ ತಲುಪಿತ್ತು. ಷೇರಿನ ಮೌಲ್ಯವು ಮೂರು ತಿಂಗಳ ಅವಧಿಯಲ್ಲಿ ಶೇ 70ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 906ರಷ್ಟು (9X) ಲಾಭವನ್ನು ತಂದುಕೊಟ್ಟಿದೆ.

14ರಂದು ಅದಾನಿ ಪೋರ್ಟ್ಸ್‌ ಕಂಪನಿಯ ಷೇರಿನ ಬೆಲೆ ₹ 71.30 (ಶೇ8.49)ರಷ್ಟು ಕುಸಿದಿತ್ತು. ಸತತ ನಾಲ್ಕು ದಿನಗಳ ಕಾಲ ಇಳಿಮುಖದಲ್ಲಿ ಸಾಗುತ್ತಿದ್ದ ಷೇರಿನ ಬೆಲೆಯು 18ರಂದು ₹47.45ರಷ್ಟು (ಶೇ 7.33) ಏರಿಕೆ ಕಂಡಿದೆ. 52 ವಾರಗಳ ಅವಧಿಯಲ್ಲಿ ಕನಿಷ್ಠ ಮಟ್ಟ ₹ 298ರಿಂದ ಗರಿಷ್ಠ ಮಟ್ಟ ₹ 901ರವರೆಗೆ ತಲುಪಿತ್ತು. ಮೂರು ತಿಂಗಳಲ್ಲಿ ಶೇ 2.16ರಷ್ಟು ಏರಿಕೆ ಕಂಡಿರುವ ಈ ಕಂಪನಿಯ ಷೇರು, ಒಂದು ವರ್ಷದ ಅವಧಿಯಲ್ಲಿ ಶೇ 101ರಷ್ಟು ಲಾಭವನ್ನು ತಂದುಕೊಟ್ಟಿದೆ.

ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯ ಷೇರು ಈ ವಾರವಿಡೀ ಮಾರಾಟದ ಕನಿಷ್ಠ ಮಿತಿಯನ್ನು (ಲೋವರ್‌ ಸರ್ಕ್ಯೀಟ್‌) ತಲುಪುತ್ತಿದೆ. 52 ವಾರಗಳ ಅವಧಿಯಲ್ಲಿ ಕನಿಷ್ಠ ಮಟ್ಟ ₹ 135.10ರಿಂದ ಗರಿಷ್ಠ ಮಟ್ಟ ₹ 1,679ರವರೆಗೆ ತಲುಪಿತ್ತು. ಕಳೆದ ಮೂರು ತಿಂಗಳಲ್ಲಿ ಶೇ 69ರಷ್ಟು ಏರಿಕೆ ಕಂಡಿರುವ ಈ ಷೇರು, ಒಂದು ವರ್ಷದ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 826 (8X) ಲಾಭವನ್ನು ನೀಡಿದೆ.

ಅದಾನಿ ಗ್ರೀನ್ ಎನರ್ಜಿ ಕಂಪನಿಯ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ಕಳೆದ ಎರಡು ದಿನಗಳಿಂದ ಮಾರಾಟದ ಕನಿಷ್ಠ ಮಿತಿಯ ಮಟ್ಟವನ್ನು ತಲುಪುತ್ತಿದೆ. 52 ವಾರಗಳಲ್ಲಿ ಕನಿಷ್ಠ ಮಟ್ಟ ₹ 305.60ರಿಂದ ಗರಿಷ್ಠ ಮಟ್ಟ ₹1,390 ಅನ್ನು ಕಂಡಿರುವ ಈ ಕಂಪನಿಯ ಷೇರು ಮೂರು ತಿಂಗಳಲ್ಲಿ ಶೇ 6ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಶೇ 166ರಷ್ಟು ಲಾಭವನ್ನು ತಂದುಕೊಟ್ಟಿದೆ.

ಅದಾನಿ ಟ್ರಾನ್ಸ್‌ಮಿಷನ್‌ ಕಂಪನಿಯು ವಾರವಿಡೀ ‘ಲೋವರ್‌ ಸರ್ಕೀಟ್‌’ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. 52 ವಾರಗಳ ಅವಧಿಯಲ್ಲಿ ಕನಿಷ್ಠ ಮಟ್ಟ ₹ 216.50 ಹಾಗೂ ಗರಿಷ್ಠ ಮಟ್ಟ ₹ 1,644.95 ಕಂಡಿರುವ ಈ ಷೇರು ಮೂರು ತಿಂಗಳಲ್ಲಿ ಶೇ 60ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಶೇ 461ರಷ್ಟು (4X) ಲಾಭವನ್ನು ಹೂಡಿಕೆದಾರರಿಗೆ ನೀಡಿದೆ.

ಅದಾನಿ ಪವರ್‌ ಕಂಪನಿಯೂ ವಾರದ ಎಲ್ಲಾ ದಿನವೂ ಶೇ 5ರಷ್ಟು ಕುಸಿತ ಕಂಡಿದ್ದು, ‘ಲೋವರ್ ಸರ್ಕೀಟ್‌’ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. 52 ವಾರಗಳ ಅವಧಿಯಲ್ಲಿ ಕನಿಷ್ಠ ಮಟ್ಟ ₹ 34.35 ಹಾಗೂ ಗರಿಷ್ಠ ಮಟ್ಟ ₹ 166.90 ದಾಖಲಿಸಿರುವ ಈ ಕಂಪನಿಯ ಷೇರು ಮೂರು ತಿಂಗಳಲ್ಲಿ ಶೇ 28.74ರಷ್ಟು ಏರಿಕೆ ಕಂಡಿದೆ. ಒಂದು ವರ್ಷದಲ್ಲಿ ಶೇ 205ರಷ್ಟು ಲಾಭವನ್ನು ಹೂಡಿಕೆದಾರರು ಕಂಡಿದ್ದಾರೆ.

ಅದಾನಿ ಕಂಪನಿಗಳ ಷೇರಿನ ಬೆಲೆಯು ಅಲ್ಪಾವಧಿಯಲ್ಲೇ ಗಗನಕ್ಕೇರಿದ್ದರಿಂದ ಹೊಸ ರೀಟೇಲ್‌ ಹೂಡಿಕೆದಾರರಿಗೆ ಕೈಗೆಟುಕದಂತಾಗಿತ್ತು. ಇದೀಗ ಈ ಕಂಪನಿಗಳ ಷೇರಿನ ಬೆಲೆ ಇಳಿಕೆಯಾಗುತ್ತಿರುವುದರಿಂದ ರಿಟೇಲ್‌ ಹೂಡಿಕೆದಾರರಿಗೆ ಬಂಡವಾಳ ಹೂಡುವುದಕ್ಕೆ ಹೊಸ ಅವಕಾಶದ ಬಾಗಿಲು ತೆರೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.