ADVERTISEMENT

ದಿನದ ಸೂಕ್ತಿ: ಸ್ವಲ್ಪಸುಖ - ಮಹಾದುಃಖ

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಮಾರ್ಚ್ 2021, 2:13 IST
Last Updated 30 ಮಾರ್ಚ್ 2021, 2:13 IST
ದುಡ್ಡು ದುಡ್ಡು
ದುಡ್ಡು ದುಡ್ಡು   

ಲೋಕಃ ಸ್ವಯಂ ಶ್ರೇಯಸಿ ನಷ್ಟದೃಷ್ಟಿ

ಯೋsರ್ಥಾನ್‌ ಸಮೀಹೇತ ನಿಕಾಮಕಾಮಃ ।

ಅನ್ಯೋನ್ಯವೈರಃ ಸುಖಲೇಶಹೇತೋ–

ADVERTISEMENT

ರನಂತದುಃಖಂ ಚ ನ ವೇದ ಮೂಢಃ ।।

ಇದರ ತಾತ್ಪರ್ಯ ಹೀಗೆ:

‘ಬಹಳ ಆಸೆಯಿಂದ ಹಣ ಬೇಡುವವನು ತಾನಾಗಿ ಶ್ರೇಯಸ್ಸನ್ನು ಕಾಣದೆ ಹಾಳಾಗುತ್ತಾನೆ. ಅಲ್ಪಸುಖಕ್ಕಾಗಿ ಪರಸ್ಪರ ದ್ವೇಷದಿಂದ ಕೊನೆಯಿಲ್ಲದ ವ್ಯಥೆಯನ್ನು ತಂದುಕೊಳ್ಳುತ್ತಾನೆ. ಮೂರ್ಖನಿಗೆ ಇದರ ಅರಿವೇ ಇರುವುದಿಲ್ಲ.’

ಈ ಸುಭಾಷಿತ ಹಲವು ಸಂಗತಿಗಳ ಬಗ್ಗೆ ಮಾತನಾಡುತ್ತಿದೆ. ಲೋಭ, ದೈನ್ಯ, ಸ್ವಾರ್ಥ, ಮೂರ್ಖತ್ವ, ವ್ಯಥೆ – ಹೀಗೆ ಹಲವು ಸಂಗತಿಗಳು, ಆದರೆ ಪರಸ್ಪರ ಸಂಬಂಧವಿರುವ ಸಂಗತಿಗಳ ಬಗ್ಗೆ ಮಾತನಾಡುತ್ತಿದೆ.

ದೈನ್ಯಕ್ಕೂ ಅತಿಯಾಸೆಗೂ ಸಂಬಂಧ ಇದೆ. ದೈನ್ಯಬುದ್ಧಿಯವನಿಗೆ ತೃಪ್ತಿ ಎಂಬುದೇ ಇರುವುದಿಲ್ಲ. ಮಾತ್ರವಲ್ಲ, ಯಾಚನೆಯ ಬುದ್ಧಿ ಇದ್ದವನಿಗೆ ದುಡಿದು ತಿನ್ನಬೇಕೆಂಬ ಛಲವೂ ಇರುವುದಿಲ್ಲ. ಇಂಥವನಿಗೆ ಶ್ರೇಯಸ್ಸು, ಎಂದರೆ ಆನಂದ ಹೇಗಾದರೂ ಸಿಕ್ಕೀತು? ಹೋಗಲಿ ಹೀಗೆ ಬೇಡುವುದರ ಮೂಲಕ ಅವನು ಏನಾದರೂ ಘನವಾದದ್ದನ್ನು ಸಾಧಿಸುತ್ತಾನೋ? ಅದೂ ಇಲ್ಲ. ಆ ಕ್ಷಣದ ಲಾಭಕ್ಕಾಗಿ ಅವನು ವ್ಯಕ್ತಿಗಳೊಂದಿಗೆ ದ್ವೇಷವನ್ನೂ ಕಟ್ಟಿಕೊಳ್ಳುತ್ತಾನೆ; ಅಷ್ಟೇಕೆ, ಜನರು ಅವನ ಬಗ್ಗೆ ತಿರಸ್ಕಾರಬುದ್ಧಿಯನ್ನೂ ಬೆಳೆಸಿಕೊಳ್ಳುತ್ತಾರೆ. ಆದರೂ ದೈನ್ಯಬುದ್ಧಿಯ ಮೂರ್ಖನಿಗೆ ಇದರ ಅರಿವೇ ಇರುವುದಿಲ್ಲ.

ಇನ್ನೊಂದು ಸುಭಾಷಿತವನ್ನು ನೋಡಿ:

ಲೋಭಾವಿಷ್ಟೋ ನರೋ ವಿತ್ತಂ ವೀಕ್ಷತೇ ನೈವ ಚಾಪದಮ್ ।

ದುಗ್ಧಂ ಪಶ್ಯತಿ ಮಾರ್ಜಾರೋ ಯಥಾ ನ ಲಗುಡಾಹತಿಮ್‌ ।।

ಎಂದರೆ ‘ಲೋಭಕ್ಕೆ ವಶನಾದವನು ಹಣವನ್ನು ಮಾತ್ರವೇ ನೋಡುತ್ತಾನೆ, ವಿಪತ್ತನ್ನು ಅವನು ಕಾಣುವುದೇ ಇಲ್ಲ. ಇದು ಹೇಗೆಂದರೆ ಬೆಕ್ಕು ಹಾಲನ್ನು ಮಾತ್ರವೇ ನೋಡುತ್ತದೆಯೇ ವಿನಾ ದೊಣ್ಣೆಪೆಟ್ಟನ್ನು ಯೋಚಿಸುವುದಿಲ್ಲವಲ್ಲವೆ?’

ನಮ್ಮ ಸದ್ಯದ ಆಮಿಷಗಳು ನಮ್ಮ ಭವಿಷ್ಯವನ್ನು ಹಾಳುಮಾಡುವಂತಾಗಬಾರದು. ಹೀಗಾಗಿ ನಮ್ಮ ಆಸೆ ನಮ್ಮನ್ನು ಯಾವ ಕಡೆಗೆ ಕರೆದುಕೊಂಡುಹೋಗುತ್ತಿದೆ ಎಂಬ ಅರಿವು ನಮ್ಮಲ್ಲಿ ಸದಾ ಎಚ್ಚರವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.