ADVERTISEMENT

PV Web Exclusive: ಕಡ್ಡಿರಾಂಪುರವೀಗ ಹೋಂ ಸ್ಟೇ ತಾಣ

ವಿರೂಪಾಪುರ ಗಡ್ಡೆಯಲ್ಲಿ ತೆರವು ಕಾರ್ಯಾಚರಣೆ ನಂತರ ಗರಿಗೆದರಿದ ಪ್ರವಾಸಿ ಚಟುವಟಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಜನವರಿ 2021, 6:13 IST
Last Updated 5 ಜನವರಿ 2021, 6:13 IST
ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮ
ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮ   

ಹೊಸಪೇಟೆ: ತಾಲ್ಲೂಕಿನ ಹಂಪಿ ಸಮೀಪದ ಪುಟ್ಟ ಗ್ರಾಮ ಕಡ್ಡಿರಾಂಪುರವೀಗ ಹೋಂ ಸ್ಟೇ ತಾಣವಾಗಿ ಬದಲಾಗುತ್ತಿದೆ.

ತುಂಗಭದ್ರಾ ನದಿ ದಂಡೆಯಲ್ಲಿನ ವಿರೂಪಾಪುರ ಗಡ್ಡೆಯಲ್ಲಿನ ರೆಸಾರ್ಟ್‌, ಹೋಂ ಸ್ಟೇಗಳು ಸ್ವದೇಶ–ವಿದೇಶದ ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು. ಆದರೆ, ಅಲ್ಲಿ ತೆರವು ಕಾರ್ಯಾಚರಣೆ ಕೈಗೊಂಡ ನಂತರ ಒಂದೇ ಒಂದು ರೆಸಾರ್ಟ್‌, ಹೋಂ ಸ್ಟೇಗಳು ಉಳಿದಿಲ್ಲ.

ಈಗ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಡ್ಡಿರಾಂಪುರದವರು ಪ್ರವಾಸಿಗರ ಆಕರ್ಷಣೆಗೆ ಮುಂದಾಗಿದ್ದಾರೆ. ಹೊರಗಿನವರು ಗ್ರಾಮದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದ್ದಾರೆ. ಈ ಗ್ರಾಮಕ್ಕೆ ಹೊಂದಿಕೊಂಡಿರುವ ಹೊಸ ಹಂಪಿಯೂ ಹೊರತಾಗಿಲ್ಲ.

ADVERTISEMENT

ಲಾಕ್‌ಡೌನ್‌ ತೆರವಾದ ನಂತರ ಹಂಪಿಗೆ ನಿತ್ಯ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಪ್ರವಾಸೋದ್ಯಮ ವೇಗವಾಗಿ ಮೊದಲಿನ ಹಳಿಗೆ ಬರತೊಡಗಿದೆ. ಅದೇ ವೇಗದಲ್ಲಿ ಕಡ್ಡಿರಾಂಪುರ, ಹೊಸ ಹಂಪಿಯಲ್ಲಿ ಪ್ರವಾಸಿ ಚಟುವಟಿಕೆಗಳು ಗರಿಗೆದರಿವೆ. ಅಲ್ಲಿನ ಕಟ್ಟಡಗಳು ರಾತ್ರೋರಾತ್ರಿ ಹೋಂ ಸ್ಟೇಗಳಾಗಿ ಬದಲಾಗಿವೆ. ಸಣ್ಣಪುಟ್ಟ ಹೋಟೆಲ್‌ಗಳ ಒಳವಿನ್ಯಾಸ ಬದಲಾಗುತ್ತಿದೆ. ತೋಟದ ಮನೆಗಳು ರೆಸಾರ್ಟ್‌ ರೂಪ ಪಡೆದುಕೊಳ್ಳುತ್ತಿವೆ. ಬರುವ ದಿನಗಳಲ್ಲಿ ಇದು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎನ್ನುತ್ತಾರೆ ಸ್ಥಳೀಯರು, ಹಂಪಿ ಮಾರ್ಗದರ್ಶಿಗಳು.

‘ಹಂಪಿಗೆ ಬರುವ ಪ್ರವಾಸಿಗರು ಕನಿಷ್ಠ ನಾಲ್ಕೈದು ದಿನವಾದರೂ ಹಂಪಿಯಲ್ಲಿ ಕಳೆಯಲು ಇಷ್ಟಪಡುತ್ತಾರೆ. ಬಿಸಿಲಿನ ಕಾರಣಕ್ಕಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸ್ಮಾರಕಗಳನ್ನು ನೋಡಲು ಹೆಚ್ಚಿನವರು ಇಷ್ಟಪಡುತ್ತಾರೆ. ಅದಕ್ಕಾಗಿ ಹಂಪಿ ಸನಿಹದಲ್ಲಿ ಇರುವ ಸ್ಥಳವನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಬಹುತೇಕರು ವಿರೂಪಾಪುರ ಗಡ್ಡೆಯಲ್ಲಿ ತಂಗುತ್ತಿದ್ದರು. ಅಲ್ಲಿ ತೆರವು ಕಾರ್ಯಾಚರಣೆ ನಂತರ ಏನೂ ಉಳಿದಿಲ್ಲ. ಈಗ ಕಡ್ಡಿರಾಂಪುರ, ಹೊಸ ಹಂಪಿಯಲ್ಲಿ ರೆಸಾರ್ಟ್‌, ಹೋಂ ಸ್ಟೇಗಳು ತಲೆ ಎತ್ತಿದ್ದು, ಪ್ರವಾಸಿಗರು ಈ ಕಡೆ ಮುಖ ಮಾಡಿದ್ದಾರೆ’ ಎನ್ನುತ್ತಾರೆ ಹಿರಿಯ ಮಾರ್ಗದರ್ಶಿ ಗೋಪಾಲ.

‘ಹಂಪಿ ಬಹುದೊಡ್ಡ ಪ್ರವಾಸಿ ತಾಣವಾಗಿ ಬದಲಾದ ನಂತರ ಸಹಜವಾಗಿಯೇ ಸುತ್ತಮುತ್ತಲಿನ ಗ್ರಾಮಸ್ಥರು ವ್ಯವಹಾರದಲ್ಲಿ ನಿಪುಣರಾಗಿದ್ದಾರೆ. ಅವರಿಗೆ ಹೇಗೆ ಹಣ ಗಳಿಸಬೇಕು ಎನ್ನುವುದು ಗೊತ್ತಾಗಿದೆ. ಹೊಸ ಹೊಸ ವ್ಯವಹಾರಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಕಡ್ಡಿರಾಂಪುರ, ಹೊಸ ಹಂಪಿಯವರು ಮಾಡುತ್ತಿದ್ದಾರೆ. ಈ ಎರಡೂ ಗ್ರಾಮಗಳಲ್ಲೀಗ ಪ್ರವಾಸೋದ್ಯಮದ ಹೊಸ ಶಕೆ ಆರಂಭವಾಗಿದೆ ಎನ್ನಬಹುದು. ಬರುವ ದಿನಗಳಲ್ಲಿ ಇನ್ನಷ್ಟು ಮನೆಗಳು, ಕಟ್ಟಡಗಳು ಹೋಂ ಸ್ಟೇಗಳಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ’ ಎನ್ನುತ್ತಾರೆ ಗ್ರಾಮದ ಬಸವರಾಜ.

‘ಒಂದು ಸಾವಿರದಿಂದ ಹತ್ತು ಸಾವಿರದ ವರೆಗೆ ಬಾಡಿಗೆ ಇರುವ ಹೋಂ ಸ್ಟೇಗಳಿವೆ. ಎಂಟರಿಂದ ಹತ್ತು ಜನರಿರುವ ಗುಂಪು ಇದ್ದರೆ ಅವರಿಗೆ ಬಾಡಿಗೆ ಹಂಚಿಕೊಂಡು ವಾಸ್ತವ್ಯ ಮಾಡಲು ಅನುಕೂಲವಾಗುತ್ತದೆ. ಹೀಗಾಗಿಯೇ ದುಬಾರಿ ಹೋಟೆಲ್‌ಗಳ ಮೊರೆ ಹೋಗುವುದರ ಬದಲು ಹೋಂ ಸ್ಟೇಗಳತ್ತ ಜನ ಮುಖ ಮಾಡುತ್ತಿದ್ದಾರೆ. ದಿನೇ ದಿನೇ ಹೋಂ ಸ್ಟೇಗಳಿಗೆ ಬೇಡಿಕೆ ಹೆಚ್ಚುತ್ತಿದೆ’ ಎಂದರು.

ಇಷ್ಟೇ ಅಲ್ಲ, ಕಡ್ಡಿರಾಂಪುರ, ಹೊಸ ಹಂಪಿಯ ಕೃಷಿ ಜಮೀನುಗಳು ಕೃಷಿಯೇತರ ಜಮೀನುಗಳಾಗಿ ಬದಲಾಗಿ ಲೇಔಟ್‌ಗಳಾಗುತ್ತಿವೆ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಯೋಜನೆಗಳು ರೂಪುಗೊಳ್ಳುತ್ತಿವೆ. ಬಂಡವಾಳ ಹೂಡಿಕೆಗೆ ಹೊರಗಿನವರು ಧಾವಿಸುತ್ತಿದ್ದಾರೆ. ಈಗಿನ ವೇಗ ನೋಡಿದರೆ ಈ ಎರಡೂ ಗ್ರಾಮಗಳು ಬರುವ ದಿನಗಳಲ್ಲಿ ಹಳ್ಳಿಯ ಸೊಗಡು ಕಳೆದುಕೊಂಡು ನಗರಗಳಂತೆ ಬದಲಾದರೂ ಅಚ್ಚರಿ ಪಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.