ADVERTISEMENT

ಬಿಬಿಎಂಪಿ ಬಳಿ 40 ಸಾವಿರ ಕೋವಿಡ್‌ ಲಸಿಕೆ: ದಿಢೀರ್‌ ಬೇಡಿಕೆ ಹೆಚ್ಚಳ

ಅವಶ್ಯಕತೆಯಷ್ಟು ಲಸಿಕೆ ಪೂರೈಕೆ ಆಗುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 12 ಮೇ 2021, 21:40 IST
Last Updated 12 ಮೇ 2021, 21:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ದಾಸಪ್ಪ ಆಸ್ಪತ್ರೆಯ ಲಸಿಕೆ ದಾಸ್ತಾನು ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 40,000 ವ್ಯಾಕ್ಸಿನ್ ಲಭ್ಯ ಇದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ನಗರದಲ್ಲಿ ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಿಲ್ಲ. ಹಾಗಾಗಿ ಅವಶ್ಯಕತೆ ಇರುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಮೊದಲ ಡೋಸ್‌ ಹಾಕಿಸಿಕೊಂಡವರು ಎರಡನೇ ಡೋಸ್ ಪಡೆಯಬೇಕಿದೆ. ಅಂತಹವರಿಗೆ ಮೊದಲು ನೀಡುತ್ತೇವೆ. ಮೊದಲನೇ ಡೋಸ್ ಪಡೆಯುವವರಲ್ಲೂ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತದೆ. ಬಿಬಿಎಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾದ ನಂತರ 45 ವರ್ಷ ಮೇಲ್ಪಟ್ಟವರು ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಿದ್ದೇವೆ’ ಎಂದು ತಿಳಿಸಿದರು.

‘ಲಸಿಕೆ ದಾಸ್ತಾನು ಮಾಡಲು ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೂರೈಕೆ ಆದಷ್ಟು ಲಸಿಕೆಯನ್ನು ವಿತರಣೆ ಮಾಡುತ್ತಿದ್ದೇವೆ. ನಾಗರಿಕರು ಕೋವಿನ್‌ ಪೋರ್ಟಲ್‌ನಲ್ಲಿ ಮೊದಲೇ ನೋಂದಣಿ ಮಾಡಿಕೊಂಡು, ಸಮಯ ಹಾಗೂ ಸ್ಥಳ ನಿಗದಿಯಾದ ನಂತರವೇ ಲಸಿಕೆ ಕೇಂದ್ರಗಳಿಗೆ ಬರಬೇಕು. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಜನ ಗುಂಪುಗೂಡುವುದನ್ನು ತಡೆಯಬಹುದು’ ಎಂದರು.

ADVERTISEMENT

‘ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳೂ ಕೋವಿಡ್‌ ಲಸಿಕೆಯ ಅಭಾವ ಎದುರಿಸುತ್ತಿವೆ. ಕೆಲ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಪೂರೈಸುವಂತೆ ಬೇಡಿಕೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

‘ನಗರದಲ್ಲಿ ನಿತ್ಯ 35 ಸಾವಿರದಿಂದ 38 ಸಾವಿರ ಮಂದಿಗೆ ಕೋವಿಡ್‌ ಲಸಿಕೆ ಹಾಕಲಾಗುತ್ತಿದೆ. ಈ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಲಸಿಕೆ ಪೂರೈಸಿದೆ. ಆದರೆ, ಈಗ ಬೇಡಿಕೆ ದಿಢೀರ್‌ ಹೆಚ್ಚಳವಾಗಿದೆ. ಹಾಗಾಗಿ ಸಮಸ್ಯೆಯಾಗಿದೆ. ಬುಧವಾರವೂ ಸರ್ಕಾರದಿಂದ 40 ಸಾವಿರ ಕೋವಿಶೀಲ್ಡ್‌ ಲಸಿಕೆ ಪೂರೈಕೆ ಆಗಿದ್ದು, ಲಸಿಕಾ ಕೇಂದ್ರಗಳಿಗೆ ತಲುಪಿಸಿದ್ದೇವೆ. ಅದರಲ್ಲಿ ಶೇ 70ರಷ್ಟನ್ನು ಎರಡನೇ ಡೋಸ್‌ ಪಡೆಯುವವರಿಗೆ ಮೀಸಲಿಡಲಿದ್ದೇವೆ. ಇನ್ನುಳಿದ ಶೇ 30ರಷ್ಟನ್ನು ಮೊದಲ ಲಸಿಕೆ ಪಡೆಯುವ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ನೀಡಲಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸದ್ಯಕ್ಕೆ ನಿತ್ಯ 40 ಸಾವಿರ ಲಸಿಕೆ ಪೂರೈಕೆ ಆಗುತ್ತಿರುವುದರಿಂದ ಲಸಿಕೆ ಅಭಿಯಾನ ಸಂಪೂರ್ಣ ನಿಲ್ಲಿಸುವ ಪ್ರಮೇಯ ಎದುರಾಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಬಿಬಿಎಂಪಿ ಬಳಿ ಇಲ್ಲ ಕೋವ್ಯಾಕ್ಸೀನ್‌
‘ಕೋವ್ಯಾಕ್ಸೀನ್‌ ಲಸಿಕೆ ಸದ್ಯಕ್ಕೆ ಬಿಬಿಎಂಪಿ ಬಳಿ ಇಲ್ಲ. ಹಾಗಾಗಿ ಮೊದಲ ಡೋಸ್‌ ಕೊವ್ಯಾಕ್ಸೀನ್‌ ಪಡೆದವರಿಗೆ ಎರಡನೇ ಡೋಸ್‌ ನೀಡುವುದಕ್ಕೆ ಸಮಸ್ಯೆ ಆಗಿದೆ. ಮುಂದಿನ ವಾರ ಈ ಲಸಿಕೆ ಪೂರೈಕೆ ಆಗುವ ನಿರೀಕ್ಷೆ ಇದೆ’ ಎಂದು ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕೋವಿಡ್ ಪರೀಕ್ಷೆ: ಕಿಟ್‌ ಕೊರತೆ ಇಲ್ಲ’
ನಗರದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲು ಕಿಟ್‌ಗಳ ಕೊರತೆಯಾಗಲೀ, ಪ್ರಯೋಗಾಲಯಗಳ ಕೊರತೆಯಾಗಲಿ ಇಲ್ಲ. ಕೋವಿಡ್ ಲಕ್ಷಣ ಹೊಂದಿರುವವರಿಗೆ ಹಾಗೂ ಸೋಂಕಿತರ ಜೊತೆ ನೇರ ಸಂಪರ್ಕಕ್ಕೆ ಬಂದವರಿಗೆ ಹಾಗೂ ಸೋಂಕಿತರು ವಾಸವಿದ್ದ ಮನೆಯ ಸುತ್ತಮುತ್ತಲಿನವರಿಗೆ ತಕ್ಷಣವೇ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.