
ಬೆಂಗಳೂರು: ಕೋವಿಡ್ ಲಸಿಕೆ ಪೂರೈಕೆ ತಡವಾಗುವುದರಿಂದ 18 ರಿಂದ 44 ವರ್ಷ ವಯಸ್ಸಿನವರಿಗೆ ಮೇ 1 ರಿಂದ ಲಸಿಕೆ ನೀಡುವುದಿಲ್ಲ. ಮೇ ಮೂರನೇ ವಾರದಿಂದ ಲಸಿಕೆ ಅಭಿಯಾನ ಆರಂಭಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ವರ್ಗಕ್ಕೆ ಉಚಿತ ಲಸಿಕೆ ನೀಡುವ ಉದ್ದೇಶದಿಂದ ಈಗಾಗಲೇ 1 ಕೋಟಿ ಡೋಸ್ ಲಸಿಕೆಗೆ ಸರ್ಕಾರ ಬೇಡಿಕೆ ಸಲ್ಲಿಸಿದೆ. ಅಲ್ಲದೆ, ಹೆಚ್ಚುವರಿಯಾಗಿ ಇನ್ನೂ 1 ಕೋಟಿ ಡೋಸ್‌ಗಳಿಗೆ ಕಾರ್ಯಾದೇಶ ನೀಡಲಾಗಿದೆ. ಲಸಿಕೆ ಕಂಪನಿಗಳು ಹೆಚ್ಚುವರಿ ಲಸಿಕೆ ಉತ್ಪಾದನೆ ಆರಂಭಿಸಿದ್ದು, ಮೇ ಎರಡನೇ ವಾರ ಮೊದಲ ಬ್ಯಾಚ್‌ನ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ತಯಾರಿಕೆ ಕಂಪನಿಗಳು ಮೇ ಎರಡನೇ ವಾರದ ಬಳಿಕ ಪೂರೈಕೆ ಮಾಡುವುದಾಗಿ ಭರವಸೆ ನೀಡಿವೆ. ಅದಕ್ಕೂ ಮೊದಲು ಕನಿಷ್ಠ 10 ಲಕ್ಷ ಡೋಸ್‌ಗಳಂತೆ ಪೂರೈಕೆ ಆರಂಭಿಸಲು ಕೋರಿಕೆ ಸಲ್ಲಿಸಲಾಗಿದೆ ಎಂದರು.
ಕೋವಿಡ್ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಈ ವರ್ಗದವರಿಗೆ ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಮಾಡುತ್ತಿದೆ. ಈಗ 5 ಲಕ್ಷ ಡೋಸ್‌ಗಳು ಲಭ್ಯತೆ ಇವೆ. ಏ. 30ರಂದು 10 ಲಕ್ಷ ಡೋಸ್ ಬರಲಿದೆ ಎಂದು ಲಸಿಕೆ ಕುರಿತ ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.