ADVERTISEMENT

ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ. ನೀವು ಯಾವ ಲೆಕ್ಕ ಎಂದವರ ಮತ್ತೆ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:13 IST
Last Updated 21 ಸೆಪ್ಟೆಂಬರ್ 2021, 4:13 IST
   

ಮಂಗಳೂರು: ‘ಹಿಂದೂ ವಿರೋಧಿ ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ. ನೀವು ಯಾವ ಲೆಕ್ಕ’ ಎಂದು ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಮತ್ತೆ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಮುಖರಾದ ಕುಳಾಯಿಯ ರಾಜೇಶ್ ಪವಿತ್ರನ್ (40), ಅಡ್ಕಾರಿನ ಸಂದೀಪ್ ಗಣೇಶ್ ಶೆಟ್ಟಿ (40), ಬಂಟ್ವಾಳದ ಪ್ರೇಮ್ ರಾಜೇಶ್ ಶೆಟ್ಟಿ (48) ಬಂಧಿತರು. ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರನನ್ನು ಭಾನುವಾರ ಬಂಧಿಸಲಾಗಿತ್ತು.

2019ರಲ್ಲಿ ನಾಥೂರಾಮ್ ಗೋಡ್ಸೆ ಜನ್ಮ ದಿನಾಚರಣೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಪ್ರಕಟಿಸಿದ್ದ ಸಂಬಂಧ, ಧರ್ಮೇಂದ್ರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

2017ರ ಡಿಸೆಂಬರ್ 22ರಂದು ಕರಾವಳಿ ಉತ್ಸವದಲ್ಲಿ ನಟ ಪ್ರಕಾಶ್ ರಾಜ್ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಅವರ ಮೇಲೆ ಮೊಟ್ಟೆ ಎಸೆದ ಬಗ್ಗೆ ರಾಜೇಶ್ ಪವಿತ್ರನ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹನಿಟ್ರ್ಯಾಪ್ ನಡೆಸಿದ ಬಗ್ಗೆ ಕೂಡ ಈ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಒಂಬತ್ತು ವರ್ಷಗಳ ಹಿಂದೆ ಗಾಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಖುಲಾಸೆಗೊಂಡಿತ್ತು. ಇನ್ನುಳಿದ ಆರೋಪಿಗಳಾದ ಕಮಲಾಕ್ಷ ಪಡೀಲ್, ಸುಧಾಕರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಉಲ್ಲಾಸ್ ಪತ್ತೆಗೆ ಜಾಲ ಬೀಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.