ADVERTISEMENT

ನಕಲಿ ಮಾಲೀಕನ ಸೃಷ್ಟಿಸಿ ನಿವೇಶನ ಮಾರಾಟ ಜಾಲ

ನಗರದ ವಿವಿಧ ಠಾಣೆಗಳಲ್ಲಿ 15 ಎಫ್‌ಐಆರ್: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:35 IST
Last Updated 9 ಸೆಪ್ಟೆಂಬರ್ 2022, 19:35 IST
   

ಬೆಂಗಳೂರು: ನಕಲಿ ಮಾಲೀಕ ಹಾಗೂ ದಾಖಲೆ ಸೃಷ್ಟಿಸಿ ನಿವೇಶನ ಮಾರುತ್ತಿದ್ದ ಜಾಲದ ಬಗ್ಗೆ ನಗರದ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ರೂವಾರಿಗಳ ಪತ್ತೆಗಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಇತರೆ ಸಂಸ್ಥೆಗಳು ಅಭಿವೃದ್ಧಿಪಡಿಸಿದ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಜಾಲ, ಅದೇ ನಿವೇಶನಗಳನ್ನು ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಿತ್ತು. ಜಾಲದ ಸುಳಿವು ಪತ್ತೆ ಮಾಡಿದ್ದ ನಿವೇಶನಗಳ ಕೆಲ ಅಸಲಿ ಮಾಲೀಕರು, ಪೊಲೀಸರಿಗೆ ದೂರು ನೀಡಿದ್ದರು. ಇದರನ್ವಯ 15 ಎಫ್‌ಐಆರ್‌ಗಳು ದಾಖಲಾಗಿದ್ದವು.

‘ಶೇಷಾದ್ರಿಪುರ, ಮಾರತಹಳ್ಳಿ, ಕುಮಾರಸ್ವಾಮಿ ಲೇಔಟ್, ಕೆಂಪೇಗೌಡನಗರ, ಯಲಹಂಕ ನ್ಯೂ ಟೌನ್, ಜಿಗಣಿ ಹಾಗೂ ಇತರೆ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ವಿಶೇಷ ತಂಡಗಳು ಪ್ರಕರಣದ ತನಿಖೆ ಆರಂಭಿಸಿವೆ. ಹಲವರನ್ನು ಬಂಧಿಸಿವೆ. ಜಾಲದ ರೂವಾರಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಖಾಲಿ ನಿವೇಶನ ಮೇಲೆ ಕಣ್ಣು: ‘ಹೊರ ದೇಶ ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವ ಹಲವರು, ಬೆಂಗಳೂರಿನಲ್ಲಿ ನಿವೇಶನ ಖರೀದಿಸಿದ್ದಾರೆ. ಅವರೆಲ್ಲರೂ ನಿವೇಶನಗಳಲ್ಲಿ ಯಾವುದೇ ಮನೆ ಅಥವಾ ಕಟ್ಟಡ ನಿರ್ಮಿಸಿಲ್ಲ. ಹೀಗಾಗಿ, ನಿವೇಶನಗಳು ಖಾಲಿ ಇವೆ. ಇವುಗಳ ಮೇಲೆಯೇ ಆರೋಪಿಗಳು ಕಣ್ಣು ಹಾಕುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಖಾಲಿ ನಿವೇಶನ ಗುರುತಿಸುತ್ತಿದ್ದ ಆರೋಪಿಗಳು, ಅಸಲಿ ಮಾಲೀಕರ ವಿವರ ಪತ್ತೆ ಮಾಡುತ್ತಿದ್ದರು. ಅದೇ ಮಾಲೀಕರ ಹೆಸರಿನಲ್ಲೇ ಮತ್ತೊಬ್ಬ ನಕಲಿ ಮಾಲೀಕನನ್ನು ಸೃಷ್ಟಿಸುತ್ತಿದ್ದರು. ಅದಕ್ಕೆ ತಕ್ಕಂತೆ ನಕಲಿ ದಾಖಲೆಗಳನ್ನೂ ಹೊಂದಿಸಿಕೊಳ್ಳುತ್ತಿದ್ದರು. ತುರ್ತಾಗಿ ನಿವೇಶನ ಮಾರಾಟಕ್ಕಿರುವುದಾಗಿ ಪ್ರಚಾರ ಮಾಡುತ್ತಿದ್ದರು’ ಎಂದು ಹೇಳಿದರು.

‘ನಿವೇಶನ ಖರೀದಿಸಲು ಆಸಕ್ತಿ ತೋರಿಸುತ್ತಿದ್ದವರ ಜೊತೆ ಮಾತುಕತೆ ನಡೆಸುತ್ತಿದ್ದ ಆರೋಪಿಗಳು, ಬ್ಯಾಂಕ್ ಸಾಲ ಸಹ ಕೊಡಿಸುವುದಾಗಿ ಹೇಳುತ್ತಿದ್ದರು. ಬ್ಯಾಂಕ್‌ ಸಿಬ್ಬಂದಿಯೂ ಆರೋಪಿಗಳ ಜೊತೆ ಶಾಮೀಲಾಗಿದ್ದರಿಂದ ಕೆಲವೇ ದಿನಗಳಲ್ಲಿ ಸಾಲ ಮಂಜೂರಾಗುತ್ತಿತ್ತು’ ಎಂದೂ ತಿಳಿಸಿದರು.

ಆರು ಮಂದಿ ವಶಕ್ಕೆ: ಬನಶಂಕರಿ ಬಿಡಿಎ ಲೇಔಟ್‌ನಲ್ಲಿರುವ ನರಸಯ್ಯ ಎಂಬುವರಿಗೆ ಸೇರಿದ್ದ 60x40 ಅಳತೆಯ ನಿವೇಶನವನ್ನು ಆರೋಪಿಗಳು ಅಕ್ರಮವಾಗಿ ಮಾರಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣಗಳು ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.