ADVERTISEMENT

ಹೊಸ ವರ್ಷಕ್ಕೆ ರೆಡಿ ಆಯ್ತು ಚಂದನ್ ಶೆಟ್ಟಿ ಹೊಸ ಹಾಡು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 14:26 IST
Last Updated 27 ಡಿಸೆಂಬರ್ 2020, 14:26 IST
ಚಂದನ್‌ ಶೆಟ್ಟಿ ಅವರ ಹೊಸ ಪಾರ್ಟಿ ಫ್ರೀಕ್ ಹಾಡು
ಚಂದನ್‌ ಶೆಟ್ಟಿ ಅವರ ಹೊಸ ಪಾರ್ಟಿ ಫ್ರೀಕ್ ಹಾಡು   

ರ‍್ಯಾಪ್‌ ಹಾಡುಗಳ ಮೂಲಕ ಯುವ ಹೃದಯಗಳಿಗೆ ಲಗ್ಗೆ ಹಾಕುವ ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಈಗ ಹೊಸತೊಂದು ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಯುನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೂಡಿಬಂದ ಈ ಪಾರ್ಟಿ ಫ್ರೀಕ್ ಹಾಡು ಶನಿವಾರ ಯುನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಠಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು.

ಈ ಮ್ಯೂಸಿಕ್ ವಿಡಿಯೊಗೆ ಚೈತನ್ಯ ಲಕಂಸಾನಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ ಚೈತನ್ಯ ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕು ಎಂಬ ಉದ್ದೇಶದಿಂದ ಯುನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ಈ ಹಾಡಿಗೆ ಸಾಹಿತ್ಯ, ಸಂಗೀತ ಹಾಗೂ ಸ್ವರ ನೀಡಿರುವುದು ಚಂದನ್ ಶೆಟ್ಟಿ. ‘ಒಂದು ವಾರದ ಹಿಂದಷ್ಟೇ ಈ ಆಡಿಯೊ ಸಂಸ್ಥೆ ಹುಟ್ಟಿದೆ. ಒಂದೇ ವಾರದಲ್ಲಿ ಯೂಟ್ಯೂಬ್‌ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸ‌ ಪ್ರತಿಭೆಗಳಿಗೋಸ್ಕರ ಈ ವಾಹಿನಿಯನ್ನು ತೆರೆಯಲಾಗಿದೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಚಂದನ್‌.

ADVERTISEMENT

ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್‌ಗಳಿದ್ದಾರೆ. 100ಕ್ಕೂ ಅಧಿಕ ಸ್ಥಳೀಯ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಆ್ಯನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.