ADVERTISEMENT

ಇದು ರಾವಣನ ರಾಮಾಯಣ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 19:45 IST
Last Updated 6 ಜನವರಿ 2020, 19:45 IST
‘ಪೌಲಸ್ತ್ಯನ ಪ್ರಣಯ ಕತೆ’ ನಾಟಕದ ದೃಶ್ಯ
‘ಪೌಲಸ್ತ್ಯನ ಪ್ರಣಯ ಕತೆ’ ನಾಟಕದ ದೃಶ್ಯ   

ರಾವಣ ಖಳನಾಯಕನಲ್ಲ, ಪ್ರತಿನಾಯಕ ಹಾಗೂ ಕಥಾ ನಾಯಕನೂ ಹೌದು. ಮನುಷ್ಯಸಹಜ ಗುಣಗಳ ರಾವಣ ಉತ್ತಮ ರಾಜ ಹಾಗೆಯೇ ದೌರ್ಬಲ್ಯಗಳ ದಾಸನೂ ಹೌದು.ರಾಮನಿಂದಲೇ ಯುದ್ಧಕಂಕಣ ಕಟ್ಟಿಸಿಕೊಂಡ ಧೀಮಂತ.

ಹನುಮಂತ ನಗರದ ಕೆ.ಎಚ್‌. ಕಲಾಸೌಧದಲ್ಲಿ ಭಾನುವಾರಸಂಧ್ಯಾ ಕಲಾವಿದರು ಅಭಿನಯಿಸಿದ ‘ಪೌಲಸ್ತ್ಯನ ಪ್ರಣಯ ಕತೆ’ ನಾಟಕ ಅಪ್ಪಟ ರಾವಣನ ನಾಟಕ. ಇಲ್ಲಿ ರಾವಣ ಖಳನಾಯಕನಲ್ಲ, ಉದಾರ ಮತ್ತು ವಿಶಾಲ ಹೃದಯದ ನಾಯಕ. ಮಾನವೀಯ ಗುಣಗಳ ಗಣಿ. ಒಳ್ಳೆಯ ಪತಿ, ತಂದೆ ಮತ್ತು ಅಣ್ಣ.ಆಧ್ಯಾತ್ಮಿಕ ಚಿಂತನೆಯ ನೆಲೆಯಲ್ಲಿ ಉನ್ನತ ಸ್ತರಕ್ಕೆರುವ ರಾವಣನ ಪಾತ್ರ ಬೇರೊಂದೇ ಖದರನ್ನು ಪಡೆದುಕೊಳ್ಳುವುದು ಈ ನಾಟಕಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು. `ಪೌಲಸ್ತ್ಯನ ಪ್ರಣಯ ಕತೆ’ ಲತಾ ಅವರ ತೆಲುಗಿನ ಕಾದಂಬರಿ. ವಂಶಿಯವರಿಂದ ಕನ್ನಡಕ್ಕೆ ಅನುವಾದಿತವಾಗಿ, ನಂತರ ಅದು ನಟ-ನಾಟಕಕಾರ-ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮ ಅವರಿಂದ ಹೊಸ ಆಯಾಮದ ಅದ್ಭುತ ನಾಟಕವಾಗಿ ಹೊರಹೊಮ್ಮಿದೆ. ರಾವಣನ ದೃಷ್ಟಿಯಲ್ಲಿ ಸೃಷ್ಟಿ ತಳೆವ ಈ ನಾಟಕದಲ್ಲಿ ರಾಮಾಯಣದ ನಡೆ ಕುತೂಹಲ ಕೆರಳಿಸುತ್ತದೆ.

ರಾಮಾಯಣದ ಸಮಷ್ಟಿ ಕತೆಯನ್ನು ಹರಿತ ಸಂಭಾಷಣೆ, ಪರಿಣಾಮಕಾರಿ ಸನ್ನಿವೇಶಗಳ ಸೃಷ್ಟಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಅರಣ್ಯಕಾಂಡದಿಂದ ಸುಂದರಕಾಂಡದವರೆಗಿನ ಎಲ್ಲ ಘಟನೆಗಳನ್ನೂ ವಿಷ್ಕಂಭಕವಾಗಿ ಕೇವಲ ಹನ್ನೆರೆಡು ನಿಮಿಷಗಳಲ್ಲಿ ನಿರೂಪಿಸುವ ರಂಗತಂತ್ರ ಅಪೂರ್ವವಾಗಿದೆ. ರಂಗದ ನಿಗದಿತ ಮೂರುಭಾಗಗಳಲ್ಲಿ ,ನೆರಳು ಬೆಳಕಿನ ತಂತ್ರಗಳಲ್ಲಿ ಸಂಭವಿಸುವ ಘಟನೆಗಳು ಪ್ರೇಕ್ಷಕರಿಗೆ ನೂತನ ಅನುಭವ ಕಟ್ಟಿಕೊಟ್ಟವು.

ADVERTISEMENT

ರಾವಣ ಹಾಗೂ ಸೀತೆಯ ನಡುವಣ ಸಂಭಾಷಣೆಯಿಂದ ತಂದೆ-ಮಗಳಷ್ಟೇ ಆರ್ದ್ರರಾಗುವುದಿಲ್ಲ, ಪ್ರೇಕ್ಷಕರ ಕಣ್ಣಂಚುಗಳೂ ಪಸೆಯಾಗುತ್ತವೆ.ಸ್ತ್ರೀವಾದೀನೆಲೆಯಲ್ಲಿ ರಾಮನೊಡನೆ ವಾಗ್ವಾದಕ್ಕಿಳಿಯುವ, ಸ್ತ್ರೀ ಶೋಷಣೆಯ ವಿರುದ್ಧ ಬಂಡೇಳುವ ಮಂಡೋದರಿಯ ಚಿಂತನಶೀಲ ಮಾತುಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿವೆ. ಅಂತಿಮ ದೃಶ್ಯದಲ್ಲಿ, ಪೌಲಸ್ಥ್ಯನು ರಾಮನ ಕೈಯಲ್ಲಿ ಯುದ್ಧಕಂಕಣ ಕಟ್ಟಿಸಿಕೊಂಡು ನಿರ್ಗಮಿಸುವ ದೃಶ್ಯ ನೋಡುಗರ ಹೃದಯವನ್ನು ಭಾರವಾಗಿಸುತ್ತದೆ.ಪೂರ್ವಾಭಿಪ್ರಾಯ ನಿರ್ಮಿತ ಪಾತ್ರಗಳನ್ನು ಮುರಿದು ಕಟ್ಟುವ ಕೆಲಸದಲ್ಲಿ ನಾಟಕಕಾರ ಎಸ್.ವಿ. ಕೃಷ್ಣಶರ್ಮ ಅವರ ಚಿಂತನಾಕ್ರಮ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಯಶಸ್ಸು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.