ADVERTISEMENT

PV Web Exclusive | ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ!

ಮಂಜುಶ್ರೀ ಎಂ.ಕಡಕೋಳ
Published 2 ನವೆಂಬರ್ 2020, 10:07 IST
Last Updated 2 ನವೆಂಬರ್ 2020, 10:07 IST
ಮೊಟ್ಟೆ
ಮೊಟ್ಟೆ   
""
""
""
""
""
""
""

‘ಚೋಟು, ಮೋಟು, ಪಪ್ಪು, ರಾಜು ಮಂಡೇ ಟು ಸಂಡೇ ದಿನ್ ಹೋ ಯಾ ರಾತ್, ರೋಜ್ ಖಾವೋ ಅಂಡೇ’ ಅನ್ನುವ 1990ರ ದಶಕದ ಜಾಹೀರಾತು ನೆನಪಿದೆಯೇ? ‘ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೇ’ (ಭಾನುವಾರ ಅಥವಾ ಸೋಮವಾರ ನಿತ್ಯವೂ ತಿನ್ನಿ ಮೊಟ್ಟೆ) ಅನ್ನುವ ಜಾಹೀರಾತಿನ ಕೊನೆಯ ಸಾಲು ಮೊಟ್ಟೆಪ್ರಿಯರ ಮನದಲ್ಲಿ ಇನ್ನೂ ಅಚ್ಚೊತ್ತಿದೆ.

ಈಗೇಕೆ ಮೊಟ್ಟೆ ಪುರಾಣ ಅಂತೀರಾ? ಖಂಡಿತಾ ಮೊಟ್ಟೆಯ ಪುರಾಣಕ್ಕೂ ಒಂದು ಇತಿಹಾಸವಿದೆ. ಅಂದ ಹಾಗೆ ಇಂದು (ನವೆಂಬರ್ 2) ಪಾಶ್ಚಾತ್ಯರ ಪಾಲಿಗೆ ಡೆವಿಲ್ಡ್ ಎಗ್ಸ್ ಡೇ ಅಂತೆ. ದೆವ್ವದ ಮೊಟ್ಟೆಗಳಾ ಅಂತ ಹುಬ್ಬೇರಿಸಬೇಡಿ. ಡೆವಿಲ್ಡ್ ಎಗ್ಸ್ ಅನ್ನೋದು ಪ್ರಾಚೀನ ರೋಮನ್ನರು ರೂಪಿಸಿದ ಮೊಟ್ಟೆಯ ಆಹಾರದ ಒಂದು ಬಗೆಯಷ್ಟೇ. ಇದು ಜಗತ್ತಿನ ಅತ್ಯಂತ ಪುರಾತನ ಮೊಟ್ಟೆ ಪಾಕವಿಧಾನ ಕೂಡಾ. ಮೊಟ್ಟೆಯ ಪೌಷ್ಟಿಕಾಂಶವನ್ನು ಸಾರುವ ಕಾರಣಕ್ಕಾಗಿ ಈ ಬಗೆಯ ದಿನವೊಂದನ್ನು ರೂಪಿಸಿರಬಹುದು ಅನ್ನುತ್ತಾರೆ ಮೊಟ್ಟೆ ತಜ್ಞರು.

ಬೇಯಿಸಿದ ಮೊಟ್ಟೆ

ಡೆವಿಲ್ಡ್ ಎಗ್ಸ್ ಅಮೆರಿಕದಲ್ಲಿ ಬಹು ಜನಪ್ರಿಯವಾಗಿರುವ ಆಹಾರ. ಬೇಯಿಸಿದ ಮೊಟ್ಟೆಯ ಬಿಳಿಯ ಭಾಗದೊಳಗಿರುವ ಹಳದಿ ಭಾಗವನ್ನು (ಅರಿಶಿನ ಭಾಗ, ಭಂಡಾರ ಅಂತಲೂ ಕರೆಯುತ್ತಾರೆ) ತೆಗೆದು ಅದಕ್ಕೆ ತುಸು ಉಪ್ಪು, ಕಾಳುಮೆಣಸಿನ ಪುಡಿ ಅಥವಾ ಬೇಕಾದ ಮಸಾಲೆ ಪುಡಿಯನ್ನು ಉದುರಿಸಿ ಅದನ್ನು ಚೆನ್ನಾಗಿ ಕಲಸಿ, ಬಿಳಿಭಾಗದ ಮೇಲೆ ಅಲಂಕರಿಸುವುದೇ ಡೆವಿಲ್ಡ್ ಎಗ್. ಇದಕ್ಕೂ ದೆವ್ವಕ್ಕೂ ಹೇಗೆ ಸಂಬಂಧವಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಬೇಯಿಸಿದ ಮೊಟ್ಟೆಯ ಬಿಳಿ ಭಾಗದ ಮೇಲೆ ಅಲಂಕೃತ ಹಳದಿ ಭಾಗವನ್ನಿಟ್ಟು ತಿನ್ನುವ ಕ್ರಮವಷ್ಟೇ ಇಲ್ಲಿ ಮುಖ್ಯ. ಅಮೆರಿಕದ ಶಾಪಿಂಗ್ ಮಳಿಗೆಗಳಲ್ಲಿ ಈ ರೀತಿಯ ಅಲಂಕೃತ ಮೊಟ್ಟೆಯ ಪ್ಯಾಕೇಟ್ ಕೂಡಾ ಸಿಗುತ್ತದೆ.

ADVERTISEMENT
ಹಾಫ್ ಬಾಯಲ್ಡ್ ಎಗ್

ಪ್ರಪಂಚದ ನಾನಾ ಭಾಗಗಳಲ್ಲಿ ಪ್ರಾದೇಶಿಕ ಆಹಾರ ವಿಧಾನಗಳ ಮೂಲಕ ಮೊಟ್ಟೆಯ ಖಾದ್ಯಗಳು ತಯಾರಾಗುತ್ತವೆ. ಫ್ರಾನ್ಸ್‌, ಜರ್ಮನಿ, ನೆದರ್ಲೆಂಡ್ಸ್‌ನಲ್ಲಿ ಬೇಯಿಸಿದ ಮೊಟ್ಟೆಯ ಮೇಲೆ ತಾಜಾ ಟೊಮೆಟೊ, ಪಾರ್ಸ್ಲಿ (ಕೊತ್ತಂಬರಿ ಸೊಪ್ಪಲ್ಲ) ಅಲಂಕರಿಸಿ ತಿನ್ನುವುದು ವಾಡಿಕೆಯಾದರೆ, ಸ್ವೀಡನ್‌ನಲ್ಲಿ ಮೊಟ್ಟೆಯ ಜತೆಗೆ ಕತ್ತರಿಸಿದ ಚೀವ್ಸ್ (ನೋಡಲು ಥೇಟ್‌ ಈರುಳ್ಳಿ ಸೊಪ್ಪಿನ ರೀತಿ ಇರುತ್ತದೆ) ಮತ್ತು ಕ್ರೀಮ್ ಬೆರೆಸಿ ತಿನ್ನುತ್ತಾರಂತೆ.

ಬ್ರೆಡ್ ಆಮ್ಲೆಟ್

ಇನ್ನು ಭಾರತದಲ್ಲಿ ಮೊಟ್ಟೆಯ ತಯಾರಾಗುವ ವಿವಿಧ ರೀತಿಯ ಆಹಾರದ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಬೇಯಿಸಿದ ಮೊಟ್ಟೆ, ಮೊಟ್ಟೆ ಬಿರಿಯಾನಿ, ಬ್ರೆಡ್ ಆಮ್ಲೇಟ್, ಮೊಟ್ಟೆ ಸಾರು, ಮೊಟ್ಟೆ ಕರಿ, ಮೊಟ್ಟೆ ಪಲ್ಯ, ಸಾದಾ ಆಮ್ಲೇಟ್, ಮೊಟ್ಟೆ ಬೋಂಡಾ, ಮೊಟ್ಟೆ ಫ್ರೈ, ಎಗ್ ರೈಸ್, ಎಗ್‌ ನ್ಯೂಡಲ್ಸ್‌, ಮೊಟ್ಟೆ ಪೆಪ್ಪರ್ ಫ್ರೈ, ಮೊಟ್ಟೆ ಸ್ಯಾಂಡ್‌ವಿಚ್, ಎಗ್‌ಬುರ್ಜಿ, ಒಂದೇ ಎರಡೇ...

ಹರ್ಬಲ್ ಆಮ್ಲೆಟ್

ಆನ್‌ಲೈನ್‌ನಲ್ಲಂತೂ ಮೊಟ್ಟೆಯಿಂದ ಮಾಡುವ ಥರಹೇವಾರಿ ರೆಸಿಪಿಗಳ ದಂಡೇ ಇದೆ. ಅದನ್ನು ಓದಿ ಅಡುಗೆ ಮಾಡಲು ಗೊತ್ತಿಲ್ಲದವರು ಸಹ ವಿಡಿಯೊ ನೋಡಿಯೇ ಸುಲಭವಾಗಿ ಅಡುಗೆ ಮಾಡಬಹುದು. ಬ್ಯಾಚುಲರ್‌ಗಳ ಪಾಲಿಗೆ ಮೊಟ್ಟೆಯಂಥ ಸುಲಭವಾದ ಆಹಾರ ವಿಧಾನ ಮತ್ತೊಂದಿಲ್ಲ. ಮೊಟ್ಟೆ ಬೇಯಿಸುವುದು ಮ್ಯಾಗಿಗಿಂತಲೂ ಸುಲಭ!. ಇನ್ನು ಕುಸ್ತಿಪಟುಗಳು, ಪೈಲ್ವಾನರು, ಡಯಟ್ ಮಾಡುವವರ ಮೆನುವಿನಲ್ಲಿ ಮೊಟ್ಟೆಗೆ ಅಗ್ರಸ್ಥಾನ. ಮಾಂಸಾಹಾರಕ್ಕಿಂತಲೂ ಮೊಟ್ಟೆ ಇವರ ಪಟ್ಟಿಯಲ್ಲಿ ಆದ್ಯತೆಯ ಸ್ಥಾನದಲ್ಲಿರುತ್ತದೆ. ಕೆಲವರು ಹಸಿ ಮೊಟ್ಟೆಯನ್ನೇ ಸೇವಿಸುವುದುಂಟು. ಆದರೆ, ವೈದ್ಯರ ಪ್ರಕಾರ ಹಸಿ ಮೊಟ್ಟೆಗಿಂತ ಬೇಯಿಸಿದ ಮೊಟ್ಟೆಯಲ್ಲಿಯೇ ಹೆಚ್ಚು ಪೋಷಕಾಂಶಗಳಿರುತ್ತವೆಯಂತೆ.

ಮೊಟ್ಟೆ ಬಿರಿಯಾನಿ

ಮೊಟ್ಟೆ ಮಾಂಸಾಹಾರವೋ, ಸಸ್ಯಾಹಾರವೋ ಎಂಬುದನ್ನು ಮನಸಿನಿಂದ ಬದಿಗಿಟ್ಟು ನೋಡಿದರೆ ಅದರ ರುಚಿಗೆ ಮರಳಾಗದವರು ವಿರಳ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮೊಟ್ಟೆ ಒದಗಿಸುವ ಪೌಷ್ಟಿಕಾಂಶವೂ ಅಪಾರ. ಅದಕ್ಕೆಂದೇ ವೈದ್ಯರು, ಪೌಷ್ಟಿಕಾಂಶ ತಜ್ಞರು ಮೊಟ್ಟೆಯನ್ನು ಸಂಪೂರ್ಣ ಸಮತೋಲಿತ ಆಹಾರ ಎಂದು ಅನುಮೋದಿಸುತ್ತಾರೆ. ಡೆವಿಲ್ಡ್ ಎಗ್, ವಿಶ್ವ ಮೊಟ್ಟೆ ದಿನ ಹೀಗೆ ದಿನಾಚರಣೆಗಳು, ಭಾಷೆ, ಧರ್ಮ, ಜಾತಿಯ ಹಂಗು ತೊರೆದು ಮೊಟ್ಟೆಯನ್ನು ನಿತ್ಯ ಸೇವಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ.ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮೊಟ್ಟೆ ಸುಲಭವಾಗಿ ಜೀರ್ಣವಾಗುವ ಆಹಾರವಾಗಿರುವುದು ಅದರ ಜನಪ್ರಿಯತೆ ಹೆಚ್ಚಲು ಕಾರಣವಿರಬಹುದು.

ಸ್ಕಾಚ್ ಎಗ್ಸ್

ಮೊಟ್ಟೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದರೆ, ಕರ್ನಾಟಕ ದೇಶದಲ್ಲೇ 6ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, ಈ ಉದ್ಯಮ 11 ಲಕ್ಷಕ್ಕೂ ಹೆಚ್ಚಿನ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆಯಂತೆ. ಇಂಡಿಯನ್ ಮೆಡಿಕಲ್ ರಿಸರ್ಚ್ ಪ್ರಕಾರ, ಆರೋಗ್ಯವಂತ ವ್ಯಕ್ತಿಯೊಬ್ಬ ವರ್ಷಕ್ಕೆ 180 ಮೊಟ್ಟೆಗಳನ್ನು ಸೇವಿಸಬಹುದಂತೆ.ಮಧುಮೇಹಿಗಳು ಮತ್ತು ಕೊಲೆಸ್ಟ್ರಾಲ್ ಹೆಚ್ಚಿರುವವರು ವೈದ್ಯರ ಸಲಹೆ ಪಡೆದೇ ಮೊಟ್ಟೆ ಸೇವಿಸುವುದೊಳಿತು. ಕಾರ್ಬೋಹೈಡ್ರೇಟ್ಸ್‌ ಮತ್ತು ವಿಟಮಿನ್ ‘ಸಿ’ ಹೊರತುಪಡಿಸಿ ಉಳಿದೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಏಕೈಕ ಆಹಾರ ಪದಾರ್ಥ ಮೊಟ್ಟೆ. ಹಾಗಾಗಿಯೇ ‘ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ’ ಎನ್ನುವ ಮಾತು ಚಾಲ್ತಿಗೆ ಬಂದಿದೆ.

ಮೊಟ್ಟೆ ಕರಿ

ಮೊಟ್ಟೆಯಲ್ಲಿರುವ ಪೋಷಕಾಂಶಗಳು

* ಖನಿಜಾಂಶಗಳಾದ ಕ್ಯಾಲ್ಸಿಯಂ, ಸತು, ಕಬ್ಬಿಣಾಂಶ ಮತ್ತು ರಂಜಕದ ಅಂಶಗಳಿವೆ

* ಗುಣಮಟ್ಟದ ಪ್ರೋಟಿನ್‌ಗಳ ಆಗರ. 9 ಉಪ ಪ್ರೋಟಿನ್‌ಗಳು ಮೊಟ್ಟೆಯಲ್ಲಿವೆ

* ಶರೀರಕ್ಕೆ ಬೇಕಾದ ಒಳ್ಳೆಯ ಕೊಬ್ಬಿನಾಂಶ (ಎಚ್‌ಡಿಎಲ್) ಒದಗಿಸುತ್ತದೆ

* ವಿಟಮಿನ್ ಬಿ2, ವಿಟಮಿನ್ ಬಿ6 ಮತ್ತು ಬಿ–12 ಹೇರಳವಾಗಿದೆ

* ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶಗಳ ಆಗರ

* ದೇಹಕ್ಕೆ ಹೆಚ್ಚು ಪೋಷಕಾಂಶ ಒದಗಿಸುವ ಏಕೈಕ ಸಂಪೂರ್ಣ ಆಹಾರ ಮೊಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.