ADVERTISEMENT

ಪ್ರಜಾವಾಣಿ ಚರ್ಚೆ: ಜನತಂತ್ರದ ಆಧಾರ ಸ್ತಂಭಗಳು ಅಪಾಯದಲ್ಲಿ...

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆಯೇ?

​ಪ್ರೊ.ಬಿ.ಕೆ.ಚಂದ್ರಶೇಖರ್ ಬೆಂಗಳೂರು
Published 16 ಏಪ್ರಿಲ್ 2021, 19:30 IST
Last Updated 16 ಏಪ್ರಿಲ್ 2021, 19:30 IST
   

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯುತ್ತಿರುವುದು ಯಾರ ಅನುಕೂಲಕ್ಕಾಗಿ? ಮಮತಾ ಬ್ಯಾನರ್ಜಿ ಅವರು ಪ್ರಚಾರ ನಡೆಸುವುದಕ್ಕೆ 24 ತಾಸು ನಿಷೇಧ ಹೇರಿದ್ದ ಚುನಾವಣಾ ಆಯೋಗವು ಪ್ರಧಾನಿ ಮತ್ತು ಗೃಹ ಸಚಿವರ ಪ್ರಚೋದನಕಾರಿ ಭಾಷಣಗಳ ಕುರಿತು ಚಕಾರ ಎತ್ತದಿರುವುದು ಎದ್ದು ಕಾಣುತ್ತದೆ. ನ್ಯಾಯಾಂಗ ಕೂಡಾ ಈ ರೀತಿಯ ವಿಶ್ವಾಸಾರ್ಹತೆಯ ಕೊರತೆಗೆ ಹೊರತಾಗಿಲ್ಲ

ಪ್ರೊ. ಬಿ.ಕೆ. ಚಂದ್ರಶೇಖರ್

‘ನೀವು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಸಿಬಿಐನಂಥ ಸಂವಿಧಾನದತ್ತ ಪ್ರಮುಖ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ನಾಶ ಮಾಡುತ್ತಿದ್ದೀರಿ. ಪ್ರಜಾಪ್ರಭುತ್ವ ಮತ್ತು ಆಳ್ವಿಕೆಯ ದಮನವಿದು. ಯೋಜನಾ ಆಯೋಗವನ್ನು ತೃಣೀಕರಿಸುತ್ತಿದ್ದೀರಿ!’

– ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2013ರ ಜೂನ್ ತಿಂಗಳಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ಕುರಿತು ಹೇಳಿದ್ದ ಮಾತಿದು.

ADVERTISEMENT

ಅದೇ ಮೋದಿ, ಪ್ರಧಾನಿ ಹುದ್ದೆಗೇರಿ ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾದ ಸಂಸತ್ತನ್ನು ನಿರ್ಲಕ್ಷಿಸಿ 2016ರ ನ. 8ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ನೋಟು ರದ್ದತಿ ನಿರ್ಧಾರ ಪ್ರಕಟಿಸಿದರು. ನೋಟು ರದ್ದು ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ಸರ್ಕಾರಕ್ಕೆ ಶಿಫಾರಸು ಬರಬೇಕು. ಹಾಗಾಗಿ, ಹಿಂದಿನ ದಿನ ಸಂಜೆ 5.30ಕ್ಕೆ ಆರ್‌ಬಿಐಗೆ ಸಂದೇಶ ಕಳುಹಿಸಿ ಒಪ್ಪಿಗೆ ಪಡೆದುಕೊಂಡಿದ್ದರು.

ಮರುದಿನ ಸಂಜೆ ಸಚಿವ ಸಂಪುಟದ ಅನುಮೋದನೆ ಪಡೆದ ನಂತರ ರಾತ್ರಿ 8 ಗಂಟೆಗೆ ಈ ಬಗ್ಗೆ ಘೋಷಣೆ ಮಾಡಿದರು. ಅಷ್ಟೇ ಸಾಲದು ಎಂಬಂತೆ, ತಮ್ಮ ನಿರ್ಧಾರವನ್ನು ಹೊರಗೆ ಪ್ರಕಟಿಸಿ, ಈ ಬಗ್ಗೆ ಸಂಸತ್ತಿನ ಚರ್ಚೆಯಲ್ಲಿ ಪಾಲ್ಗೊಳ್ಳುವುದು ಅನಾವಶ್ಯಕ ಎಂದರು ಪ್ರಧಾನಿ. ಅವರ ಪಕ್ಷದ ‘ಸಹಕಾರೀ ಒಕ್ಕೂಟ’ದ ಭರವಸೆಯನ್ನೂ ಉಲ್ಲಂಘಿಸಿದರು. ಮುಖ್ಯವಾಗಿ ಸಂಸತ್ತಿಗೆ ಅವರ ಉತ್ತರದಾಯಿತ್ವವೇ ಇಲ್ಲದಂತಾಯಿತು!

ಮತಗಟ್ಟೆಗಳಿಗೆ ಜನರು ಬಂದು ತಮ್ಮ ಆಯ್ಕೆಯನ್ನು ಸೂಚಿಸಿದ ಬಳಿಕ ಅದನ್ನು ಪ್ರಾಮಾಣಿಕವಾಗಿ ರಕ್ಷಿಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಸಂವಿಧಾನದ 324ನೇ ವಿಧಿಯು ಚುನಾವಣಾ ಪ್ರಕ್ರಿಯೆಗೆ ಅಗತ್ಯವಾದ ಎಲ್ಲ ಅಧಿಕಾರವನ್ನು ನೀಡಿ ಸ್ವಾಯತ್ತ ಸಂಸ್ಥೆಯಾಗಿ ಸೃಷ್ಟಿಸಿದೆ. ಅಂದರೆ, ಚುನಾವಣಾ ಆಯೋಗವು ಕಾರ್ಯಾಂಗದ ಮರ್ಜಿಯೊಳಗೆ ಇಲ್ಲ. ಹೀಗಿದ್ದರೂ ಚುನಾವಣಾ ಆಯೋಗವು ಆಳುವ ಪಕ್ಷಕ್ಕೆ ಆಗಾಗ ಅನುಕೂಲ ಮಾಡಿಕೊಟ್ಟ ಆಪಾದನೆಯಿಂದ ಹೊರಬರಲು ಸಾಧ್ಯವಾಗಿಲ್ಲ.

ಸೋಲು-ಗೆಲುವು ಮತ್ತು ಕೆಲವು ಪಕ್ಷಗಳ ಅಳಿವು-ಉಳಿವಿನ ಪ್ರಶ್ನೆಗಳಲ್ಲದೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳೇ ಕಂಡೂ ಕಾಣದಂತೆ ಅಪಾಯಕ್ಕೆ ಒಳಗಾಗಿವೆ. ಹೀಗಾಗಿ, ಕೆಲವು ಪಕ್ಷಾತೀತ, ಪ್ರತಿಷ್ಠಿತ, ಮಾಜಿ ಉನ್ನತ ಅಧಿಕಾರಿಗಳು ಸೇರಿದಂತೆ, ನಾಗರಿಕ ಸಂಸ್ಥೆಗಳು ಕಳಕಳಿಯಿಂದ ಚುನಾವಣಾ ಆಯೋಗದ ಪ್ರತಿ ನಿರ್ಧಾರವನ್ನು, ನಿಷ್ಕ್ರಿಯತೆಯನ್ನು ಸಾರ್ವಜನಿಕವಾಗಿ ಪರಿಶೀಲಿಸುತ್ತಿರುವುದು ಉತ್ತಮ ಹಾಗೂ ಗಮನಾರ್ಹ ಬೆಳವಣಿಗೆ.

2019ರ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಯಿಂದ ಸೇನೆಯ ದುರುಪಯೋಗ, ಮಾಧ್ಯಮಗಳಿಂದಾದ ಉಲ್ಲಂಘನೆಯ ವಿರುದ್ಧ ಅಧಿಕಾರ ಚಲಾಯಿಸುವ ಅನಿವಾರ್ಯತೆ ಇದ್ದರೂ ಚುನಾವಣಾ ಆಯೋಗ ಕೈಕಟ್ಟಿ ಕುಳಿತಿತ್ತು. ಈ ವಿಚಾರ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ, ವಿರೋಧ–ವಿಶ್ಲೇಷಣೆಗೆ ಒಳಗಾಗಿದ್ದರೂ ಆಯೋಗ ಮಾತ್ರ ದಿವ್ಯ ಮೌನ ವಹಿಸಿತ್ತು. ಕೇಂದ್ರದ ಆಡಳಿತಾರೂಢ ಬಿಜೆಪಿ ತನ್ನ ಚುನಾವಣೆಯ ವೆಚ್ಚಗಳಿಗೆ ‘ಚುನಾವಣಾ ಬಾಂಡ್’ ರೂಪಿಸಿತ್ತು. ಆ ಮೂಲಕ, ಆ ಪಕ್ಷ ಸಾವಿರಾರು ಕೋಟಿ ಹಣ ಸಂಗ್ರಹಿಸಿತ್ತು. ಈ ಪ್ರಕ್ರಿಯೆಯ ಬಗ್ಗೆಯೂ ಚುನಾವಣಾ ಆಯೋಗ ಜಾಣ ಕುರುಡು ಪ್ರದರ್ಶಿಸಿತ್ತು!

ಸದ್ಯ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಎಂಟು ಹಂತಗಳಲ್ಲಿ ನಡೆಯುತ್ತಿರುವುದು ಯಾರ ಅನುಕೂಲಕ್ಕಾಗಿ? ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 24 ಗಂಟೆ ಪ್ರಚಾರ ಮಾಡುವುದಕ್ಕೆ ನಿಷೇಧ ಹೇರಿದ ಚುನಾವಣಾ ಆಯೋಗ, ಪ್ರಧಾನಿ ಮತ್ತು ಗೃಹ ಸಚಿವರ ಪ್ರಚೋದನಕಾರಿ ಭಾಷಣಗಳ ಕುರಿತಂತೆ ಚಕಾರ ಎತ್ತದಿರುವುದು ಎದ್ದು ಕಾಣುತ್ತದೆ. ಇದೀಗ ಆಯೋಗಕ್ಕೆ ಟಿಎಂಸಿ ಮನವಿ ಸಲ್ಲಿಸಿ ಅದರ ಪಕ್ಷಪಾತ ಹಾಗೂ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ನ್ಯಾಯಾಂಗ ಕೂಡಾ ಈ ರೀತಿಯ ವಿಶ್ವಾಸಾರ್ಹತೆಯ ಕೊರತೆಗೆ ಹೊರತಾಗಿಲ್ಲ. 2018ರಲ್ಲಿ ಕೆಲವು ಸತ್ಕೀರ್ತಿ ಗಳಿಸಿದ್ದ, ಇನ್ನೂ ಸೇವೆಯಲ್ಲಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮಾಧ್ಯಮ ಮುಂದೆ ಬಂದು ಅಂದಿನ ಮುಖ್ಯನ್ಯಾಯಮೂರ್ತಿಯವರು ಸರ್ಕಾರಕ್ಕೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದರು! ಬಳಿಕ, ನಿವೃತ್ತಿಯ ನಂತರ ರಾಜ್ಯಸಭೆ ಸದಸ್ಯತ್ವ ಕೊಡುವ ಆಶ್ವಾಸನೆಯನ್ನು ಮುಖ್ಯ ನ್ಯಾಯಮೂರ್ತಿಯಾದ ರಂಜನ್‌ ಗೊಗೊಯಿ ಅವರಿಗೆ ಸೇವೆಯಲ್ಲಿದ್ದಾಗಲೇ ಸರ್ಕಾರ ನೀಡಿರುವುದು ಗುಟ್ಟಾಗಿ ಉಳಿದಿಲ್ಲ. ಅದೇ ರೀತಿ, ಮಹಾರಾಷ್ಟ್ರದ ನ್ಯಾಯಾಧೀಶ ಲೋಯಾ ಅವರ ಅನುಮಾನಾಸ್ಪದ ಸಾವು ಮುಂಬೈ ಹೈಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದ್ದಾಗಲೇ ಸುಪ್ರೀಂ ಕೋರ್ಟಿಗೆ ವರ್ಗಾವಣೆ ಮಾಡಿಸಿದ್ದು ಯಾರೆಂಬುದು ಎಲ್ಲರಿಗೂ ತಿಳಿದ ವಿಷಯವೇ! ಕಾರ್ಯಾಂಗದ ಈ ರೀತಿಯ ಮಧ್ಯಪ್ರವೇಶ ಆಕಸ್ಮಿಕವಲ್ಲ. ಬದಲಾಗಿ ವ್ಯವಸ್ಥಿತವಾದ ನಿರ್ಧಾರ. ಪ್ರಜಾತಂತ್ರದ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವಕ್ಕೇ ಕೊಡುತ್ತಿರುವ ಕೊಡಲಿ ಪೆಟ್ಟು!

ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಆದಾಯ ತೆರಿಗೆ (ಐ.ಟಿ) ಇಲಾಖೆಯನ್ನು ಕೂಡಾ ಕೇಂದ್ರ ಸರ್ಕಾರ ತನ್ನಿಷ್ಟದಂತೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಐಟಿ, ಇ.ಡಿ, ಸಿಬಿಐ ಸಂವಿಧಾನಾತ್ಮಕವಾಗಿ ತಮ್ಮ ಕರ್ತವ್ಯ ನಿಭಾಯಿಸುವ ಬಗ್ಗೆ ತಕರಾರಿಲ್ಲ. ಆದರೆ, ಚುನಾವಣೆಗಳು ಹತ್ತಿರ ಬಂದಾಗ ವಿರೋಧಿಗಳನ್ನು ಹತ್ತಿಕ್ಕಲು ಈ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇಂಥ ದಾಳಿಗಳ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸುವ ಯತ್ನ ನಡೆಯುತ್ತಿದೆ. ಇದು ರಾಜಕೀಯ ದುಷ್ಟತನದ ಪರಮಾವಧಿಯಲ್ಲದೆ ಇನ್ನೇನು?

‘ಪಂಜರ’ದೊಳಗಿನ ಗಿಣಿ ಸಿಬಿಐ!

‘ದೆಹಲಿ ವಿಶೇಷ ಪೊಲೀಸ್ ಕಾರ್ಯ ಸಂಸ್ಥೆ ಕಾಯ್ದೆ’ ಅಡಿಯಲ್ಲಿ 1946ರಿಂದಲೂ ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಅಪರಾಧಗಳ ತನಿಖೆಗೆ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಆ ಸರ್ಕಾರಗಳ ಪೂರ್ವಾನುಮತಿ ಅಗತ್ಯ. ಕೆಲವು ಸರ್ಕಾರಗಳು ‘ಮುಕ್ತ’ ಅನುಮತಿ ನೀಡಿದರೆ, ಇನ್ನೂ ಕೆಲವು ರಾಜ್ಯಗಳು ಅನುಮತಿ ನೀಡುವ ಅಥವಾ ನಿರಾಕರಿಸುವ ಹಕ್ಕು ಉಳಿಸಿಕೊಂಡಿವೆ. ಈ ಸೆಕ್ಷನ್‌ ದಶಕಗಳಿಂದ ಚರ್ಚೆಗೆ, ಟೀಕೆಗೆ ಒಳಗಾಗುತ್ತಲೇ ಇದೆ. ಈ ಸೆಕ್ಷನ್‌ ಅಡಿಯಲ್ಲಿ ತನಿಖೆಗೆ ಅನುಮತಿ ಕೊಡುವ ಮತ್ತು ಅದನ್ನು ಹಿಂಪಡೆಯುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಅಂದರೆ, ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ತೋರಿರುವ ಪಕ್ಷಾತೀತ ಗೌರವ. ಜೊತೆಗೆ, ಸಿಬಿಐ ‘ಸ್ವಾಯತ್ತ’ ಸಂಸ್ಥೆ ಎಂಬುದು ಪಳೆಯುಳಿಕೆಯ ನಂಬಿಕೆ. ‘ಈ ಸ್ವಾಯತ್ತ ಸಂಸ್ಥೆಯ ‘ನಿಷ್ಪಕ್ಷಪಾತಿತನ’ದ ಬಗ್ಗೆ ಸಂಶಯವೇಕೆ’ ಎಂದು ಪ್ರಶ್ನಿಸುವ ಕೇಂದ್ರದ ನಡೆ, ಜಾಣತನದ ರಾಜಕೀಯವಷ್ಟೆ. ಇತ್ತೀಚಿನ ದಿನಗಳಲ್ಲಿ ಸಿಬಿಐ ಕೂಡಾ ಕೇಂದ್ರದ ‘ಪಂಜರ’ದೊಳಗಿನ ಗಿಣಿ ಎಂಬ ಮೂದಲಿಕೆಗೆ ಗುರಿಯಾಗಿದೆ.

- ಲೇಖಕ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.