ADVERTISEMENT

ಸಂಪಾದಕೀಯ | ಜಿಡಿಪಿ: ಸಮಾಧಾನಕರ ಹೌದು, ಸಂಭ್ರಮಿಸಬೇಕಾದ ಸಂದರ್ಭ ಅಲ್ಲ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 19:31 IST
Last Updated 3 ಸೆಪ್ಟೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿನ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಹೋಲಿಸಿದರೆ, ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡ 20.1ರಷ್ಟು ಬೆಳವಣಿಗೆ ದಾಖಲಿಸಿದೆ. ಹಿಂದಿನ ವರ್ಷದ ಏಪ್ರಿಲ್–ಜೂನ್‌ ಅವಧಿಯಲ್ಲಿ ದೇಶದಲ್ಲಿ ಅತ್ಯಂತ ಕಠಿಣ ಸ್ವರೂಪದ ಲಾಕ್‌ಡೌನ್‌ ಜಾರಿಯಲ್ಲಿ ಇತ್ತು. ಆ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ನಡೆದಿದ್ದು ತೀರಾ ಕಡಿಮೆ ಪ್ರಮಾಣದಲ್ಲಿ. 2020ರ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು ದಾಖಲೆಯ ಶೇಕಡ (–)24.4ರಷ್ಟು ಕುಸಿತ ಕಂಡಿತ್ತು. ಅಂದಿನ ಜಿಡಿಪಿಗೆ ಹೋಲಿಕೆ ಮಾಡಿ ನೋಡಿದಾಗ, 2021ರ ಜೂನ್ ತ್ರೈಮಾಸಿಕದ ಜಿಡಿಪಿಯು ಶೇಕಡ 20.1ರಷ್ಟು ಏರಿಕೆ ಕಂಡಿದೆ.

ದೇಶದ ಜಿಡಿಪಿ ಯಾವುದೇ ತ್ರೈಮಾಸಿಕದಲ್ಲಿ ಕಂಡ ದಾಖಲೆಯ ಬೆಳವಣಿಗೆ ಇದು ಎಂಬುದು ನಿಜ. ಆದರೆ, ಹೋಲಿಕೆ ಮಾಡಿ ನೋಡುವ ತ್ರೈಮಾಸಿಕದ ಮಟ್ಟ ಬಹಳ ಕಡಿಮೆ ಇತ್ತು, ಹಾಗಾಗಿ ಈ ಬಾರಿಯ ಜಿಡಿಪಿಯ ಬೆಳವಣಿಗೆಯು ಶೇಕಡಾವಾರು ಲೆಕ್ಕಾಚಾರದಲ್ಲಿ ದೊಡ್ಡದಾಗಿ ಕಾಣಿಸುತ್ತಿದೆ ಎಂಬುದನ್ನು ಮರೆಯುವಂತೆ ಇಲ್ಲ. 2019ರ ಜೂನ್ ತ್ರೈಮಾಸಿಕದಲ್ಲಿನ ದೇಶದ ಜಿಡಿಪಿ ಮಟ್ಟಕ್ಕೆ ಹೋಲಿಸಿದರೆ, ಜಿಡಿಪಿಯು ಈಗಲೂ ಕೆಳಮಟ್ಟದಲ್ಲಿಯೇ ಇದೆ.

ಈಗ ದೇಶವು ಸಾಧಿಸಿರುವ ಜಿಡಿಪಿ ಬೆಳವಣಿಗೆಯು ಈ ಹಿಂದೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಾಡಿದ್ದ ಅಂದಾಜಿಗಿಂತ ಕಡಿಮೆ ಮಟ್ಟದಲ್ಲಿಯೇ ಇದೆ. ಬೆಳವಣಿಗೆಯು ಶೇಕಡ 21.4ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿತ್ತು. ಇಷ್ಟು ಹೇಳಿದ ಮಾತ್ರಕ್ಕೆ, ಈ ಬಾರಿಯ ಜಿಡಿಪಿ ಅಂಕಿ–ಅಂಶಗಳಲ್ಲಿ ಒಳ್ಳೆಯ ಸಂಗತಿಗಳೇ ಇಲ್ಲವೆಂದು ಭಾವಿಸಬೇಕಿಲ್ಲ. ಈ ಅಂಕಿ–ಅಂಶಗಳು ಒಂದಿಷ್ಟು ಸಮಾಧಾನವನ್ನು ಖಂಡಿತ ಮೂಡಿಸುತ್ತವೆ; ಆದರೆ ದೊಡ್ಡ ಮಟ್ಟದಲ್ಲಿ ಸಂಭ್ರಮಪಡುವ ಸಂದರ್ಭ ಇದಲ್ಲ.

ADVERTISEMENT

ಈ ಬಾರಿ ಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗಿನ ಅವಧಿಯಲ್ಲಿ ದೇಶವು ಕೋವಿಡ್‌ನ ಎರಡನೆಯ ಅಲೆಗೆ ಸಾಕ್ಷಿಯಾಗಿತ್ತು. ಎರಡನೆಯ ಅಲೆಯ ಸಂದರ್ಭ ದಲ್ಲಿ ವರದಿಯಾಗುತ್ತಿದ್ದ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯು ಮನುಷ್ಯರ ಆತ್ಮಸ್ಥೈರ್ಯ ಕುಂದಿಸುವಂತೆ ಇದ್ದವು. ಇಡೀ ದೇಶಕ್ಕೆ ಅನ್ವಯ ಆಗುವಂತಹ ಲಾಕ್‌ಡೌನ್‌ ಜಾರಿಗೆ ಬಂದಿರಲಿಲ್ಲವಾ ದರೂ, ದೇಶದ ಹಲವೆಡೆ ಸ್ಥಳೀಯ ಮಟ್ಟದ ಲಾಕ್‌ಡೌನ್‌ ಇತ್ತು. ಇಷ್ಟೆಲ್ಲ ಇದ್ದರೂ ಆರ್ಥಿಕ ಚಟು ವಟಿಕೆಗಳು ಕಳೆದ ಬಾರಿಗಿಂತ ಚೆನ್ನಾಗಿ ಆಗಿವೆ ಎಂಬುದು ಸಮಾಧಾನಕರ. ಆರ್ಥಿಕ ಆರೋಗ್ಯವನ್ನು ಹೇಳುವ ಕೆಲವು ವಲಯಗಳು ಒಳ್ಳೆಯ ಬೆಳವಣಿಗೆಯನ್ನು ಕಂಡಿವೆ.

ಆರ್ಥಿಕತೆಯ ಬೇರೆ ಬೇರೆ ವಲಯಗಳ ಬೆಳವಣಿಗೆ ಭಿನ್ನವಾಗಿ ಇದೆ. ಈ ಬಾರಿ ಮುಂಗಾರು ಮಳೆಯು ಒಂದೇ ರೀತಿಯಲ್ಲಿ ಇಲ್ಲವಾಗಿದ್ದ ಕಾರಣ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವಲಯಗಳು ಹಿನ್ನಡೆ ಅನುಭವಿಸಬಹುದು ಎಂಬ ಆತಂಕ ಇತ್ತು. ಆದರೆ, ಹಾಗೆ ಆಗಿಲ್ಲ. ಕೃಷಿ ವಲಯವು ಶೇಕಡ 4.52ರಷ್ಟು ಬೆಳವಣಿಗೆ ಸಾಧಿಸಿದೆ. ಸೇವಾ ವಲಯದಲ್ಲಿ ಕೂಡ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಕಂಡುಬಂದಿದೆ. ನಿರ್ಮಾಣ ವಲಯದಲ್ಲಿನ ಚಟುವಟಿಕೆಗಳು ಶೇಕಡ 69ರಷ್ಟು, ತಯಾರಿಕಾ ವಲಯವು ಶೇಕಡ 50ರಷ್ಟು, ಗಣಿಗಾರಿಕೆ ವಲಯವು ಶೇಕಡ 19ರಷ್ಟು ಬೆಳವಣಿಗೆ ದಾಖಲಿಸಿವೆ. ಖಾಸಗಿ ವಲಯದಿಂದ ಬಂದಿರುವ ಬೇಡಿಕೆಯು ಆರ್ಥಿಕ ಆರೋಗ್ಯದ ಸೂಚಕಗಳಲ್ಲಿ ಮುಖ್ಯವಾದುದು. ಇದು ಕೂಡ ಏರಿಕೆ ಕಂಡಿದೆ. ಆದರೆ, ಕೋವಿಡ್‌ ಪೂರ್ವದ ಮಟ್ಟಕ್ಕಿಂತ ಕಡಿಮೆ ಇದೆ. ರಫ್ತು ಪ್ರಮಾಣದಲ್ಲಿ ಏರಿಕೆ ಆಗಿದೆ. ಹೀಗಿದ್ದರೂ, ರಫ್ತಿನಲ್ಲಿ ನಮಗೆ ಕೋವಿಡ್‌ ಪೂರ್ವದ ಸ್ಥಿತಿಯನ್ನು ತಲುಪಲು ಆಗಿಲ್ಲ.

ಈ ಬಾರಿಯ ಜಿಡಿಪಿ ಅಂಕಿ–ಅಂಶಗಳ ಆಧಾರದಲ್ಲಿ, ಅರ್ಥ ವ್ಯವಸ್ಥೆಯು ಮುಂದೆ ಯಾವ ಹಾದಿ ಯನ್ನು ಹಿಡಿಯಲಿದೆ ಎಂಬುದನ್ನು ಖಚಿತವಾಗಿ ಹೇಳಲು ಆಗದು. ಕೋವಿಡ್‌ನ ಮೂರನೆಯ ಅಲೆಯ ಭೀತಿಯಂತೂ ಇದ್ದೇ ಇದೆ. ಎರಡನೆಯ ಅಲೆಯೇ ಇನ್ನೂ ಪೂರ್ಣಗೊಂಡಿಲ್ಲ ಎಂದು ತಜ್ಞರು ಹೇಳಿ ದ್ದಾರೆ. ಹೀಗಿದ್ದರೂ, ಅರ್ಥ ವ್ಯವಸ್ಥೆಯಲ್ಲಿ ಒಂದಿಷ್ಟು ಚೈತನ್ಯ ಮರಳಿದೆ. ಆದರೆ ಇದು ಎಷ್ಟು ಕಾಲ ಉಳಿದುಕೊಳ್ಳಲಿದೆ, ಯಾವ ಪ್ರಮಾಣದಲ್ಲಿ ಏರಿಕೆ ಕಾಣಲಿದೆ ಎಂಬುದನ್ನು ಈಗಲೇ ಹೇಳಲು ಆಗದು. ಮುಂಗಾರು ಮಳೆಯ ಪರಿಣಾಮ ಪೂರ್ತಿಯಾಗಿ ಇನ್ನೂ ಕಾಣಿಸಿಲ್ಲ.

ಕೋವಿಡ್‌ನ ಮೂರನೆಯ ಅಲೆಯು ದೇಶದ ಆರ್ಥಿಕ ಚಟುವಟಿಕೆಗಳಿಗೆ ಅತಿಹೆಚ್ಚಿನ ಕೊಡುಗೆ ನೀಡುವ ರಾಜ್ಯಗಳಲ್ಲಿ ಜೋರಾಗಿ ಕಾಣಿಸಿ ಕೊಂಡರೆ ಜಿಡಿಪಿ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅರ್ಥಶಾಸ್ತ್ರಜ್ಞರು ಹಲವು ಬಾರಿ ಹೇಳಿದ್ದರೂ, ಜನರ ಕೈಗೆ ನೇರವಾಗಿ ಹಣ ವರ್ಗಾವಣೆ ಮಾಡಿ ಅವರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ ಆಗುವಂತಹ ಕ್ರಮಗಳನ್ನು ಸರ್ಕಾರಗಳು ಕೈಗೊಂಡಿಲ್ಲ. ಜನರು ಆರ್ಥಿಕವಾಗಿ ಬಲಗೊಳ್ಳದೆ ಯಾವ ಅರ್ಥ ವ್ಯವಸ್ಥೆಯೂ ಗಟ್ಟಿಗೊಳ್ಳುವುದಿಲ್ಲ. ಹೀಗಿರುವಾಗ ಅರ್ಥ ವ್ಯವಸ್ಥೆಯು ಕೋವಿಡ್‌ ಪೂರ್ವದ ಸ್ಥಿತಿಗೆ ತಕ್ಷಣಕ್ಕೆ ಬರುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ, ಈಗಿನ ಅಂಕಿ–ಅಂಶಗಳು ಒಂದಿಷ್ಟು ಸಮಾಧಾನವನ್ನೂ ಒಂದಿಷ್ಟು ಎಚ್ಚರವನ್ನೂ ಮೂಡಿಸಲು ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.