ADVERTISEMENT

ಸಂಪಾದಕೀಯ: ಸಾಲದ ಒತ್ತಡ ನಿವಾರಿಸುವ ಕ್ರಮ ಬೇಡಿಕೆ, ಉತ್ಪಾದಕತೆ ಹೆಚ್ಚಿಸಬೇಕು

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:30 IST
Last Updated 14 ಮೇ 2021, 19:30 IST
   

ಕೊರೊನಾ ಸೋಂಕಿನ ಎರಡನೆಯ ಅಲೆಯನ್ನು ನಿಭಾಯಿಸಲು ದೇಶದ ಬಹುತೇಕ ಕಡೆಗಳಲ್ಲಿ ಲಾಕ್‌ಡೌನ್‌ ಅಥವಾ ಒಂದಲ್ಲ ಒಂದು ಬಗೆಯ ನಿರ್ಬಂಧಗಳು ಜಾರಿಗೆ ಬಂದಿವೆ. ಇಂತಹ ‌ಸಂದರ್ಭದಲ್ಲಿ ವ್ಯವಸ್ಥೆಯಲ್ಲಿ ಹಣದ ಹರಿವು ಸರಾಗವಾಗಿ ಇರುವಂತೆ ಮಾಡುವ ಕೆಲವು ಪ್ರಯತ್ನ ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮುಂದಾಗಿದೆ.

ವೈರಾಣು ಹರಡುವುದನ್ನು ತಡೆಯುವ ಲಾಕ್‌ಡೌನ್‌ ಅಥವಾ ಇತರ ನಿರ್ಬಂಧ ಕ್ರಮಗಳು ಅರ್ಥ ವ್ಯವಸ್ಥೆಯ ಬಂಡಿ ಸುಗಮವಾಗಿ ಚಲಿಸದಂತೆ ಮಾಡುತ್ತಿವೆ. ಈ ಬಾರಿ ಕೇಂದ್ರ ಸರ್ಕಾರವು ಲಾಕ್‌ಡೌನ್‌ ಘೋಷಿಸಿಲ್ಲ; ಲಾಕ್‌ಡೌನ್‌ ಜಾರಿಗೆ ತರಬೇಕೋ ಬೇಡವೋ ಎಂಬುದನ್ನು ರಾಜ್ಯಗಳೇ ತೀರ್ಮಾನಿಸಬಹುದು ಎಂದು ಸ್ಪಷ್ಟ ಪಡಿಸಿದೆ. ಆರ್ಥಿಕವಾಗಿ ಹೆಚ್ಚು ಚಲನಶೀಲವಾಗಿರುವ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳು ಲಾಕ್‌ಡೌನ್‌ ಜಾರಿ ಗೊಳಿಸಿವೆ. ಇಂತಹ ಸಂದರ್ಭದಲ್ಲಿ ಆರ್‌ಬಿಐ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳು ಪಡೆದಿರುವ ₹ 25 ಕೋಟಿವರೆಗಿನ ಸಾಲದ ಮರುಪಾವತಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯವು ವ್ಯಕ್ತಿಗಳು ಪಡೆದಿರುವ ಸಾಲಕ್ಕೂ ಇದೆ. ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಗಳು ಬಾಗಿಲು ಮುಚ್ಚಿವೆ. ಕೈಗಾರಿಕೆಗಳಲ್ಲಿ ಸಿದ್ಧವಾದ ವಸ್ತುಗಳ ಮಾರಾಟಕ್ಕೆ ದೊಡ್ಡ ಅವಕಾಶ ಇಲ್ಲ – ಆನ್‌ಲೈನ್‌ ಮೂಲಕ ಮಾತ್ರ ಮಾರಾಟ ಮಾಡಬಹುದು.

ಇಂತಹ ಸಂದರ್ಭದಲ್ಲಿ ಸಾಲದ ಮರುಪಾವತಿಯ ನಿಯಮಗಳಲ್ಲಿ ತುಸು ಸಡಿಲಿಕೆ ಅಗತ್ಯವಾಗಿತ್ತು. ಆದರೆ, ಸಾಲ ಮರುಪಾವತಿ ಅವಧಿ ವಿಸ್ತರಣೆ ಅಂದರೆ, ಬಡ್ಡಿಯು ಅಸಲಿಗೆ ಸೇರಿ, ಅದಕ್ಕೆ ಚಕ್ರಬಡ್ಡಿ ವಿಧಿಸುವುದು ಎಂದೂ ಅರ್ಥ. ಹೀಗಾದಾಗ, ಸಾಲ ಪಡೆದ ವ್ಯಕ್ತಿ ಮರುಪಾವತಿ ಮಾಡಬೇಕಾದ ಮೊತ್ತವು ಮರುಹೊಂದಾಣಿಕೆಗೂ ಮೊದಲು ಮಾಡಬೇಕಿದ್ದ ಮರುಪಾವತಿ ಮೊತ್ತಕ್ಕಿಂತ ತುಸು ಜಾಸ್ತಿಯೇ ಆಗುತ್ತದೆ. ಮಾರುಕಟ್ಟೆಗಳ ಬಾಗಿಲು ಮುಚ್ಚಿರುವ ಈ ಸಂದರ್ಭದಲ್ಲಿ ಎಷ್ಟು ಉದ್ಯಮ ಗಳಿಗೆ ಆರ್‌ಬಿಐ ಕಲ್ಪಿಸಿರುವ ಸೌಲಭ್ಯವನ್ನು ಪಡೆದುಕೊಳ್ಳುವ ಇರಾದೆ ಇದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ಉದ್ಯಮಗಳ ಹಣಕಾಸಿನ ಶಕ್ತಿ ಕ್ಷೀಣಿಸಿರುವ ಜೊತೆಜೊತೆಗೇ ಜನಸಾಮಾನ್ಯರ ಕೊಳ್ಳುವ ಶಕ್ತಿಯೂ ಕುಂದಿದೆ. ಲಾಕ್‌ಡೌನ್‌ ಕ್ರಮಗಳು ಇನ್ನೂ ಎಷ್ಟು ದಿನ ಚಾಲ್ತಿಯಲ್ಲಿ ಇರುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ, ಮಾರುಕಟ್ಟೆಯ ಬಾಗಿಲು ಯಾವಾಗ ಪುನಃ ತೆರೆದುಕೊಳ್ಳುತ್ತದೆ, ಬೇಡಿಕೆ ಚೇತರಿಕೆ ಯಾವಾಗ ಆಗುತ್ತದೆ ಎಂಬುದೂ ಸ್ಪಷ್ಟವಿಲ್ಲ. ಆರ್‌ಬಿಐ ಈಗ ಘೋಷಿಸಿರುವ ಕ್ರಮಗಳಲ್ಲಿ ಬಡ್ಡಿ ಮನ್ನಾ ಅಥವಾ ಸಾಲದ ಕಂತುಗಳ ಮರುಪಾವತಿಗೆ ವಿನಾಯಿತಿ (ಮೊರಟೋರಿಯಂ) ಇಲ್ಲ.

ಇದು ಆರ್‌ಬಿಐನ ಮಿತಿಯನ್ನೂ ಸೂಚಿಸುತ್ತದೆ. ಸಾಲದ ಮರುಪಾವತಿ ಅವಧಿಯ ಮರುಹೊಂದಾಣಿಕೆ ಯೋಜನೆಯ ಜೊತೆಯಲ್ಲೇ ಆರ್‌ಬಿಐ, ಕೆಲವು ಆದ್ಯತಾ ವಲಯಗಳಿಗೆ ತ್ವರಿತ ಸಾಲ ವಿತರಣೆಯ ಉದ್ದೇಶಕ್ಕೆ ₹ 50 ಸಾವಿರ ಕೋಟಿ ತೆಗೆದಿರಿಸುವುದಾಗಿ ಪ್ರಕಟಿಸಿದೆ. ವೈದ್ಯಕೀಯ ಉಪಕರಣ, ಲಸಿಕೆ ತಯಾರಿಸುವವರು ಸೇರಿದಂತೆ ಉದ್ಯಮದ ಕೆಲವು ವಲಯಗಳಿಗೆ ಇದರ ಪ್ರಯೋಜನ ಸಿಗಲಿದೆ.

ಆರೋಗ್ಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಇಂಥದ್ದೊಂದು ಕ್ರಮ ಅಪೇಕ್ಷಣೀಯ. ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕೊನೆಯ ಭಾಗದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಪುಟಿದೇಳುವ ರೀತಿಯಲ್ಲಿ ಸಾಗುತ್ತಿತ್ತು. ಆದರೆ ಎರಡನೆಯ ಅಲೆಯ ಕಾರಣದಿಂದಾಗಿ ಈಗ ಮೊದಲಿನ ವೇಗವನ್ನು ಅರ್ಥ ವ್ಯವಸ್ಥೆಯು ಕಳೆದುಕೊಂಡಿರುವಂತಿದೆ. ಹಲವು ರೇಟಿಂಗ್ಸ್ ಸಂಸ್ಥೆಗಳು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣದ ಅಂದಾಜನ್ನು ತಗ್ಗಿಸಿವೆ. ಇಂತಹ ಸಂದರ್ಭದಲ್ಲಿ ಆರ್‌ಬಿಐ ಮಾತ್ರವಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಉದ್ಯಮಗಳು ಹಾಗೂ ಸಾರ್ವಜನಿಕರ ನೆರವಿಗೆ ಧಾವಿಸುವುದು ಒಳಿತು. ಈಗ ಬೇಡಿಕೆಯೂ ತಗ್ಗಿದೆ, ಉತ್ಪಾದಕತೆಯೂ ಕಡಿಮೆ ಆಗಿದೆ. ಹಾಗಾಗಿ, ಸಾರ್ವಜನಿಕರ ಮತ್ತು ಉದ್ಯಮಗಳ ನೆರವಿಗೆ ಏಕಕಾಲದಲ್ಲಿ ಮುಂದಾಗಿ, ಮಾರುಕಟ್ಟೆ
ಯಲ್ಲಿ ಬೇಡಿಕೆ ಹೆಚ್ಚಿಸುವ ಮತ್ತು ಕೈಗಾರಿಕೆಗಳ ಉತ್ಪಾದಕತೆ ಜಾಸ್ತಿ ಮಾಡುವ ಕ್ರಮಗಳನ್ನು ಸರ್ಕಾರಗಳು ಘೋಷಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT