ADVERTISEMENT

ಒಳನೋಟ: ಜೀವ ಉಳಿಸಲೆಂದು ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಉದ್ಯಮಕ್ಕೆ ಉರುಳು

ವಿಜಯ್ ಜೋಷಿ
Published 30 ಮೇ 2021, 7:23 IST
Last Updated 30 ಮೇ 2021, 7:23 IST
   

ಬೆಂಗಳೂರು: ಪಾತ್ರೆ ತಯಾರಿಸುವ ಉದ್ದಿಮೆಯನ್ನು ಏಳು ವರ್ಷಗಳಿಂದ ನಡೆಸುತ್ತಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಬಿ. ಯೋಗಾನಂದ್ (ಹೆಸರು ಬದಲಿಸಲಾಗಿದೆ). ಹಿಂದಿನ ವರ್ಷದ ಲಾಕ್‌ಡೌನ್‌ನ ತೊಂದರೆಯನ್ನು ನಿಭಾಯಿಸಿಕೊಂಡ ಅವರಿಗೆ, ಈ ಬಾರಿಯ ಲಾಕ್‌ಡೌನ್‌ ಬಲವಾದ ಏಟು ನೀಡಿದೆ.

‘ಹಿಂದಿನ ವರ್ಷ ಕಾರ್ಮಿಕರಿಗೆ ಸಂಬಳ ಕೊಡಲು ಹೆಣಗಾಡಿದೆ. ಮೊದಲ ತಿಂಗಳು ಪೂರ್ತಿ ಸಂಬಳ, ನಂತರದಲ್ಲಿ ಅರ್ಧದಷ್ಟು ಕೊಟ್ಟಿದ್ದಾಯಿತು. ಆತ್ಮನಿರ್ಭರ ಪ್ಯಾಕೇಜ್‌ನ ಪ್ರಯೋಜನ ದೊರೆತು, ತುಸು ಸಹಾಯ ಆಯಿತು. ಉದ್ದಿಮೆ ಸುಧಾರಿಸಿಕೊಳ್ಳುತ್ತಿತ್ತು. ಎಲ್ಲವೂ ಚೆನ್ನಾಗಿ ಆಗುವ ಹಂತ ಬಂದಾಗ ಮತ್ತೆ ಲಾಕ್‌ಡೌನ್‌ ಬಂತು. ಇದು ಬಹಳ ಏಟು ಕೊಟ್ಟಿದೆ’ ಎಂದು ಯೋಗಾನಂದ್ ಹೇಳುತ್ತಾರೆ.

‘ಈಗ ನಮಗೆ ನಿಜವಾದ ಪೆಟ್ಟು ಬಿದ್ದಿದೆ. ಈ ಬಾರಿ ಜನ ಹೆದರಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್‌ ತೆರವಾದ ನಂತರ, ಇನ್ನು ಲಾಕ್‌ಡೌನ್‌ ಇರಲಾರದು ಎಂಬ ಭರವಸೆ ಇತ್ತು. ಆದರೆ, ಈಗ ಹಾಗಿಲ್ಲ. ಮೂರನೆಯ ಅಲೆಯ ಹೊತ್ತಿಗೆ ಇನ್ನೊಂದು ಲಾಕ್‌ಡೌನ್‌ ಬರುತ್ತದೆಯೇ ಎಂಬ ಭಯ ಇದೆ’ ಎಂದು ಅವರು ಸಂಕಟ ಹೇಳಿ ಕೊಂಡರು.

ADVERTISEMENT

ಜೀವ ಉಳಿಸಲೆಂದು ಜಾರಿಗೆ ತಂದ ಲಾಕ್‌ಡೌನ್‌, ತಯಾರಿಕಾ ವಲಯದ ಉದ್ಯಮಗಳ ಮೇಲೆ ಉಂಟುಮಾಡಿದ ಪರಿಣಾಮದ ಒಂದು ಚಿತ್ರಣ ಇದು. ‘ಹಿಂದಿನ ವರ್ಷದ ಲಾಕ್‌ಡೌನ್‌ ನಂತರ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮ ವಲಯದ ಕೆಲವರಿಗೆ ಉದ್ಯಮವನ್ನು ಮತ್ತೆ ಕಟ್ಟಲು ಆಗಲಿಲ್ಲ. ಎಂಎಸ್‌ಎಂಇ ವಲಯದ ಅಂದಾಜು ಶೇಕಡ 30ರಷ್ಟು ಉದ್ಯಮಗಳು ಬಾಗಿಲು ಹಾಕಿದವು. ಈಗಿನ ಲಾಕ್‌ಡೌನ್‌ ಮೊದಲ ಬಾರಿಯ ಲಾಕ್‌ಡೌನ್‌ಗಿಂತ ಜಾಸ್ತಿ ಏಟು ಕೊಡುತ್ತದೆ’ ಎಂದು ಉದ್ಯಮಿ ಜೆ. ಕ್ರಾಸ್ತ ಹೇಳುತ್ತಾರೆ.

ಈ ವರ್ಷದ ಲಾಕ್‌ಡೌನ್‌ನಿಂದಾಗಿ ತಯಾರಿಕಾ ವಲಯಕ್ಕೆ ಆಗಿರುವ ನಷ್ಟ ಎಷ್ಟೆಂಬುದನ್ನು ಅಂದಾಜಿಸುವುದೂ ಕಷ್ಟ ಎಂದು ಉದ್ಯಮಿ ಡಿ. ಮುರಳೀಧರ ಹೇಳುತ್ತಾರೆ. ‘ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ತಯಾರಿಕಾ ವಲಯದ ಚಟುವಟಿಕೆಗಳು ಶೇಕಡ 25ರಿಂದ ಶೇ 30ರಷ್ಟು ತಗ್ಗಿವೆ. ರಾಷ್ಟ್ರಮಟ್ಟದಲ್ಲಿ ತಯಾರಿಕಾ ವಲಯದಲ್ಲಿ ಆಗಿರುವ ಇಳಿಕೆ ಗಮನಿಸಿ, ಅದರ ಆಧಾರದಲ್ಲಿ ರಾಜ್ಯದಲ್ಲಿ ಇಷ್ಟು ಕಡಿಮೆ ಆಗಿರಬಹುದು ಎಂದು ಅಂದಾಜಿಸಿದ್ದೇವೆ’ ಎಂದು ಮುರಳೀಧರ ವಿವರಿಸಿದರು.

‘ಹಿಂದಿನ ವರ್ಷ ಸಾಲದ ಕಂತುಗಳ ಮರುಪಾವತಿಗೆ ತುಸು ವಿನಾಯಿತಿ ನೀಡಿದ್ದರೂ, ನಂತರದಲ್ಲಿ ತಯಾರಿಕಾ ವಲಯದ ಹಲವು ಉದ್ಯಮಗಳ ಸಾಲದ ಖಾತೆಗಳು ಎನ್‌ಪಿಎ (ವಸೂಲಾಗದ ಸಾಲ) ಆಗಿವೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ವಿವರಿಸಿದರು. ಉದ್ಯಮಗಳ ಹಣಕಾಸಿನ ಸ್ಥಿತಿ ಸರಿಹೋಗಲು ಕನಿಷ್ಠ ಎರಡು ವರ್ಷ ಬೇಕು ಎಂಬುದು ಅವರ ಅಭಿಪ್ರಾಯ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಅವರು ಲಾಕ್‌ಡೌನ್‌ನ ಪರಿಣಾಮಗಳ ಬಗ್ಗೆ ಕೆಲವು ವಿವರ ನೀಡಿದರು. ‘ಲಾಕ್‌ಡೌನ್‌ ತೆರವಾದ ನಂತರ ಉದ್ಯಮದಲ್ಲಿ ತುಸು ಚೇತರಿಕೆ ಕಾಣಿಸುತ್ತಿತ್ತು. ಆದರೆ, ಮತ್ತೆ ಲಾಕ್‌ಡೌನ್‌ ಬಂದ ಕಾರಣ ಚಟುವಟಿಕೆಗಳು ನೆಲಕಚ್ಚಿವೆ. ಜೂನ್‌ 7ರ ನಂತರ ಚಟುವಟಿಕೆ ಆರಂಭಿಸಲು ಸರ್ಕಾರ ಅವಕಾಶ ನೀಡಿದರೂ, ಅಂದಾಜು ಶೇಕಡ 30ರಷ್ಟು ಕೈಗಾರಿಕೆಗಳ ಬಾಗಿಲು ತೆರೆಯುವುದಿಲ್ಲ’ ಎಂದು ಹೇಳಿದರು.

‘ದೊಡ್ಡ ಉದ್ದಿಮೆಗಳಿಗೆ ಸಣ್ಣ ಉದ್ದಿಮೆಗಳಿಂದ ಉತ್ಪನ್ನಗಳ ಪೂರೈಕೆ ಆಗುತ್ತದೆ. ನಮ್ಮಿಂದ ಸಿಗದಿದ್ದರೆ ಅವೇ ಉತ್ಪನ್ನಗಳನ್ನು ದೊಡ್ಡ ಉದ್ದಿಮೆಗಳು ಹೊರರಾಜ್ಯಗಳಿಂದ ತರಿಸಿಕೊಳ್ಳುತ್ತವೆ. ನಂತರ ಮತ್ತೆ ಅವರು ನಮ್ಮ ಬಳಿ ಎಂದಿಗೂ ಬರುವುದಿಲ್ಲ’ ಎಂದು ಅರಸಪ್ಪ ಆತಂಕದಿಂದ ಹೇಳಿದರು.

‘ದಿಢೀರ್ ಲಾಕ್‌ಡೌನ್‌ ಬೇಡ’
ಎರಡು ಲಾಕ್‌ಡೌನ್‌ಗಳನ್ನು ಕಂಡಿರುವ ಉದ್ಯಮ ವಲವು, ‘ಇದನ್ನು ದಿಢೀರ್ ಎಂದು ಜಾರಿಗೊಳಿಸಬಾರದು’ ಎಂದು ಹೇಳುತ್ತಿದೆ. ‘ಲಾಕ್‌ಡೌನ್ ಜಾರಿಗೊಳಿಸಿದ ನಂತರ, ಅದರಿಂದಾಗುವ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು’ ಎಂದು ಎಫ್‌ಕೆಸಿಸಿಐನ ತೆರಿಗೆ ಸಮಿತಿ ಅಧ್ಯಕ್ಷ ಎನ್. ನಿತ್ಯಾನಂದ ಅಭಿಪ್ರಾಯಪಟ್ಟರು.

‘ಲಾಕ್‌ಡೌನ್‌ನಿಂದಾಗಿ ಕಾರ್ಮಿಕರಿಗೆ ವೇತನ ಕೊಡುವುದೂ ಕಷ್ಟವಾಗುತ್ತದೆ. ಅದರಿಂದ ಕಾನೂನು ಸಮಸ್ಯೆ ಸೃಷ್ಟಿಯಾಗುತ್ತದೆ. ಚಟುವಟಿಕೆ ನಿಂತ ಕಾರಣಕ್ಕೆ ಉತ್ಪನ್ನಗಳಿಗೆ ದೊಡ್ಡ ಉದ್ಯಮಗಳಿಂದ ಬಂದಿದ್ದ ಬೇಡಿಕೆ ರದ್ದಾಗಬಹುದು. ಬ್ಯಾಂಕ್‌ಗಳಿಗೆ ಮಾಡಬೇಕಿರುವ ಪಾವತಿ, ಪೂರೈಕೆದಾರರಿಗೆ ಕೊಡಬೇಕಿರುವ ಹಣಕ್ಕೆ ತೊಂದರೆ ಆಗುತ್ತದೆ’ ಎಂದು ಅವರು ಸಮಸ್ಯೆಗಳು ಹನುಮಂತನ ಬಾಲದಂತೆ ಬೆಳೆಯುವುದನ್ನು ವಿವರಿಸಿದರು.

***

ನಮಗೂ ನಮ್ಮ ಕೆಲಸಗಾರರ ಆರೋಗ್ಯ ಮುಖ್ಯ. ಅವರಿಗೆ ನಾವೇ ಲಸಿಕೆ ಕೊಡಿಸಲು ಸಿದ್ಧರಿದ್ದೇವೆ. ಲಸಿಕೆ ಹಾಕಿಸಿಕೊಂಡವರಿಗೆ ಕೆಲಸ ಮಾಡಲು ಅವಕಾಶ ಕೊಡಬೇಕು.
-ಪೆರಿಕಲ್ ಎಂ. ಸುಂದರ್

***

ಲಾಕ್‌ಡೌನ್‌ ಅಂದರೆ ಉದ್ಯಮಗಳನ್ನು ಮುಚ್ಚುವುದು ಎಂಬಂತಾಗಬಾರದು. ಕೈಗಾರಿಕಾ ಪ್ರಾಂಗಣದಲ್ಲಿ ಅನ್ಯರಿಗೆ ಪ್ರವೇಶ ನಿಷೇಧ, ಲಸಿಕೆ ಹಾಕಿಸಿಕೊಂಡವರಿಗೆ ಕೆಲಸಕ್ಕೆ ಅವಕಾಶ... ಈ ರೀತಿ ಇರಬೇಕು.
-ಎನ್. ನಿತ್ಯಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.