ADVERTISEMENT

ಒಳನೋಟ: ‘ಪೋಷಣ ಅಭಿಯಾನ’ ಪೋಷಣೆಗೆ ಕೋವಿಡ್ ಅಡ್ಡಿ

ಅಭಿಯಾನಕ್ಕೆ 2018ರಲ್ಲಿ ಚಾಲನೆ: ಕೊನೆಯಿಂದ 2ನೇ ಸ್ಥಾನದಲ್ಲಿ ಕರ್ನಾಟಕ

ವರುಣ ಹೆಗಡೆ
Published 15 ಆಗಸ್ಟ್ 2021, 0:55 IST
Last Updated 15 ಆಗಸ್ಟ್ 2021, 0:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಆರು ವರ್ಷದೊಳಗಿನ ಮಕ್ಕಳು ಮತ್ತು ತಾಯಂದಿರಲ್ಲಿ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಪೋಷಣ ಅಭಿಯಾನ’ ರಾಜ್ಯದಲ್ಲಿ ಕೋವಿಡ್‌ನಿಂದಾಗಿ ನಿದ್ದೆಗೆ ಜಾರಿದೆ.

2018ರಲ್ಲಿ ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆ ವೇಳೆ ರಾಜ್ಯದಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಈ ಅಭಿಯಾನಕ್ಕಾಗಿ 19 ಜಿಲ್ಲೆಗಳನ್ನು ಆಯ್ಕೆ ಮಾಡಿತ್ತು. ನಂತರ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಯೋಜನೆ ಅನುಷ್ಠಾನಗೊಂಡಿತ್ತು.

ಯುನಿಸೆಫ್‌ ಸಹಯೋಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುವ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಒದಗಿಸಲಿದೆ. ನೀತಿ ಆಯೋಗಕ್ಕೆ ಪೋಷಣ ಅಭಿಯಾನದ ಮೇಲ್ವಿಚಾರಣೆ–ಮೌಲ್ಯಮಾಪನದ ಹೊಣೆ ನೀಡಲಾಗಿದೆ. ಈ ಆಯೋಗವು ಕಳೆದ ವರ್ಷ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿ ‘ಅಪೌಷ್ಟಿಕತೆ ನೀಗಿಸುವಲ್ಲಿ ಕರ್ನಾಟಕದ ಸಾಧನೆ ನಿರಾಶಾದಾಯಕ’ಎಂದು ತಿಳಿಸಿತ್ತು. ಇದನ್ನುಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ 19 ದೊಡ್ಡ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಕೊನೆಯಿಂದ ಎರಡನೇ ಸ್ಥಾನದಲ್ಲಿತ್ತು.

‘ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕೋವಿಡ್ ಅಡ್ಡಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಥಳೀಯರ ಬಗ್ಗೆ ತಿಳಿದಿರುವುದರಿಂದ ಕೋವಿಡ್ ಕಾರ್ಯದಲ್ಲಿ ತೊಡಗಿಸಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಅವರನ್ನು ಹೆಚ್ಚುವರಿ ಕೆಲಸದಿಂದ ಬಿಡುಗಡೆ ಮಾಡಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವ ಹಾಲಪ್ಪ ಆಚಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ಮಾಹಿತಿಯನ್ನು ಕಾಲ ಕಾಲಕ್ಕೆ ಮೊಬೈಲ್ ಆ್ಯಪ್ ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತದೆ. ಆದರೆ, ಅದರ ಮೌಲ್ಯಮಾಪನಕ್ಕೆ ಸೂಕ್ತ ವ್ಯವಸ್ಥೆಯಿಲ್ಲ’ ಎನ್ನುತ್ತಾರೆ ಇಲಾಖೆಯ ಮಾಜಿ ಸಚಿವೆ ಜಯಮಾಲಾ.

ಸ್ಮಾರ್ಟ್‌ಫೋನ್ ನಿರ್ವಹಣೆಯೇ ಸವಾಲು

ಅಂಗನವಾಡಿ ಕಾರ್ಯಕರ್ತರ ಮೂಲಕ ಪೋಷಣ ಅಭಿಯಾನವನ್ನು ಅನುಷ್ಠಾನ ಮಾಡಲಾಗುತ್ತಿದೆ. ಅಭಿಯಾನದಡಿ ಅವರಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿದೆ. ಅಭಿಯಾನ ನಡೆಸಿದ ಬಗ್ಗೆ ಪೋಟೋ ಸಹಿತ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ನೈಜ ಸಮಯ ಮತ್ತು ಸ್ಥಳದ ವಿವರ ಕೂಡ ದಾಖಲಾಗಬೇಕಾಗುತ್ತದೆ. ಸ್ಮಾರ್ಟ್‌ಫೋನ್ ಬಳಕೆ ಗೊತ್ತಿರದ ಅಂಗನವಾಡಿ ಕಾರ್ಯಕರ್ತೆಯರಿಗೆ ಇದು ಸಮಸ್ಯೆಯಾಗಿದೆ. ಈ ಕಾರ್ಯಕ್ಕೆ ಅವರು ಅನ್ಯರನ್ನು ಅವಲಂಬಿಸಬೇಕಾಗಿ ಬಂದಿದೆ.

‘ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರನ್ನು ತೂಕ ಮಾಡಿ, ಶ್ರೇಣಿ ನೀಡಲಾಗುತ್ತದೆ. ಕಡಿಮೆ ತೂಕ ಇರುವ ಅಪೌಷ್ಟಿಕ ಮಕ್ಕಳನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಮಕ್ಕಳ ಬೆಳವಣಿಗೆ ಟ್ರ್ಯಾಕ್ ಮಾಡಲು ಸ್ಮಾರ್ಟ್‌ಫೋನ್‌ ಸಹಕಾರಿ ಆದರೆ, ಕೆಲವೆಡೆ ಮಾತ್ರ ಈ ಅಭಿಯಾನ ಸಮರ್ಪಕವಾಗಿ ನಡೆಯುತ್ತಿದೆ’ ಎಂದು ಚೈಲ್ಡ್‌ ರೈಟ್‌ ಟ್ರಸ್ಟ್‌ನ ರಾಜ್ಯ ಸಂಚಾಲಕ ಸತೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.