ADVERTISEMENT

ಎಂ.ಎಸ್.ಧೋನಿ ಮಾರ್ಗದರ್ಶನದಿಂದ ಟೀಮ್ ಇಂಡಿಯಾಗೆ ಲಾಭ: ವೀರೇಂದ್ರ ಸೆಹ್ವಾಗ್

ಪಿಟಿಐ
Published 18 ಸೆಪ್ಟೆಂಬರ್ 2021, 7:20 IST
Last Updated 18 ಸೆಪ್ಟೆಂಬರ್ 2021, 7:20 IST
ವೀರೇಂದ್ರ ಸೆಹ್ವಾಗ್ ಮತ್ತು ಎಂ.ಎಸ್.ಧೋನಿ (ಪಿಟಿಐ ಸಂಗ್ರಹ ಚಿತ್ರ)
ವೀರೇಂದ್ರ ಸೆಹ್ವಾಗ್ ಮತ್ತು ಎಂ.ಎಸ್.ಧೋನಿ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಮಾರ್ಗದರ್ಶಕರಾಗಿರುವುದರಿಂದ ಟೀಮ್ ಇಂಡಿಯಾಗೆ ಪ್ರಯೋಜನವಾಗಲಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಧೋನಿ ಮಾರ್ಗದರ್ಶಕರಾಗಿರುವುದರಿಂದ ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಅವರ ಸಹವರ್ತಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಅನೇಕ ಆಟಗಾರರ ಪ್ರತಿಭೆ ಅರಳಲಿವೆ’ ಎಂದು ಹೇಳಿದ್ದಾರೆ.

‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವ ಆಯ್ಕೆಯನ್ನು ಧೋನಿ ಅವರು ಸ್ವೀಕರಿಸಿರುವುದು ತುಂಬಾ ಸಂತಸ ಮೂಡಿಸಿದೆ. ಧೋನಿ ಅವರು ಭಾರತೀಯ ಕ್ರಿಕೆಟ್‌ನ ಮುಖ್ಯವಾಹಿನಿಗೆ ಬರಬೇಕೆಂಬುದು ಅನೇಕರ ಬಯಕೆಯಾಗಿದೆ ಎಂಬುದು ತಿಳಿದಿದೆ. ಮಾರ್ಗದರ್ಶಕರಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ’ ಎಂದು ಸೆಹ್ವಾಗ್ ಹೇಳಿದ್ದಾರೆ.

ಧೋನಿ ಜತೆ ಹಲವು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿರುವ ಸೆಹ್ವಾಗ್‌ಗೆ, ನಾಯಕನಾಗಿ ಧೋನಿ ಅವರ ಸಾಮರ್ಥ್ಯ ಮತ್ತು ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಮನೋಗತ ಅರಿತು ನಿಭಾಯಿಸುವ ರೀತಿ ಬಗ್ಗೆ ಚೆನ್ನಾಗಿ ತಿಳಿದಿದೆ.

‘ಒಬ್ಬ ಕೀಪರ್ ಆಗಿ, ಧೋನಿ ಅವರು ಫೀಲ್ಡರ್‌ಗಳ ನಿಯೋಜನೆ ಬಗ್ಗೆ ಅಸಾಧಾರಣ ತಿಳಿವಳಿಕೆಯನ್ನು ಹೊಂದಿದ್ದಾರೆ. ಇದು ಈ ವಿಶ್ವಕಪ್‌ನಲ್ಲಿ ಬೌಲಿಂಗ್ ಘಟಕಕ್ಕೆ ಸಹಾಯ ಮಾಡಲಿದೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.