ADVERTISEMENT

ಪ್ರೊ ಕಬಡ್ಡಿ ಲೀಗ್‌: ಸೆಮಿಫೈನಲ್ಸ್‌ಗೆ ಬೆಂಗಳೂರು ಬುಲ್ಸ್‌

ಪವನ್‌ ರೇಡಿಂಗ್‌ ಸಾಹಸದಲ್ಲಿ ಬುಲ್ಸ್‌ಗೆ ಜಯ; ಸೆಮಿಫೈನಲ್‌ನಲ್ಲಿ ಡೆಲ್ಲಿ ಎದುರಾಳಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 2:29 IST
Last Updated 15 ಅಕ್ಟೋಬರ್ 2019, 2:29 IST
ಯು.ಪಿ.ಯೋಧಾ ಮತ್ತು ಬೆಂಗಳೂರು ಬುಲ್ಸ್‌ ತಂಡದ ನಡುವಿನ ಪಂದ್ಯ
ಯು.ಪಿ.ಯೋಧಾ ಮತ್ತು ಬೆಂಗಳೂರು ಬುಲ್ಸ್‌ ತಂಡದ ನಡುವಿನ ಪಂದ್ಯ   

ಅಹಮದಾಬಾದ್: ಆರಂಭದಲ್ಲಿ ಪರದಾಡಿದ ನಂತರ ಅಬ್ಬರಿಸಿದ ಪವನ್‌ ಶೆರಾವತ್‌ ಅಮೋಘ ರೇಡಿಂಗ್‌ ಮೂಲಕ ಬೆಂಗಳೂರು ಬುಲ್ಸ್‌ ತಂಡ ಸೆಮಿಫೈನಲ್‌ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರೊ ಕಬಡ್ಡಿ ಲೀಗ್‌ನಲ್ಲೇ ಮೊದಲ ಬಾರಿ ಟೈಬ್ರೇಕರ್‌ಗೆ ಹೋದ ಪ್ಲೇ ಆಫ್‌ ಪಂದ್ಯದಲ್ಲಿ ಬುಲ್ಸ್‌ ತಂಡ ಸೋಮವಾರ 48–45 ರಿಂದ ಯು.ಪಿ.ಯೋಧಾ ತಂಡವನ್ನು ಮೂರು ಪಾಯಿಂಟ್‌ಗಳಿಂದ ಸೋಲಿಸಿತು.

ಕಳೆದ ಬಾರಿ ವಿಜೇತರಾಗಿದ್ದ ಬುಲ್ಸ್‌ ತಂಡ ಸೆಮಿಫೈನಲ್‌ನಲ್ಲಿ ದಬಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ.

ಟ್ರಾನ್ಸ್‌ ಸ್ಟೇಡಿಯಾದ ಏಕಾ ಅರೇನಾದಲ್ಲಿ ನಡೆದ ಪಂದ್ಯ ನಿಗದಿತ 40 ನಿಮಿಷಗಳ ಆಟದ 36–36 ಪಾಯಿಂಟ್‌ಗಳಿಂದ ಸಮನಾಗಿತ್ತು. ಹೆಚ್ಚುವರಿ ಆಟದ ಮೊದಲ ಮೂರು ನಿಮಿಷಗಳ ನಂತರ ಯೋಧಾ ತಂಡ 39–38 ರಲ್ಲಿ ಒಂದು ಪಾಯಿಂಟ್‌ ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ವಿರಾಮದ ನಂತರದ ಮೂರು ನಿಮಿಷಗಳ ಆಟದಲ್ಲಿ ಬುಲ್ಸ್ 10 ಪಾಯಿಂಟ್‌ ಗಳಿಸಿ ಗೆಲುವಿನ ಸಂಭ್ರಮ ಆಚರಿಸಿತು.

ADVERTISEMENT

ಈ ಬಾರಿ ಬುಲ್ಸ್‌ ‘ಪ್ಲೇ ಆಫ್‌’ ಹಂತ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪವನ್‌ ‘ನಾಲ್ಕು ಪಾಯಿಂಟರ್‌’ಗಳ ಎರಡು ರೇಡ್‌ ಸೇರಿದಂತೆ ಒಟ್ಟು 20 ಪಾಯಿಂಟ್ಸ್‌ ಹೆಕ್ಕಿ ಹೊನಲು ಬೆಳಕಿನಲ್ಲಿ ಮಿಂಚಿದರು. ಸುಮಿತ್‌ ಆರು ಪಾಯಿಂಟ್‌ ಗಳಿಸಿದರೆ, ಮಹೇಂದರ್‌ ಟ್ಯಾಕ್ಲಿಂಗ್‌ನಲ್ಲಿ ನಾಲ್ಕು ಪಾಯಿಂಟ್‌ ಪಡೆದರು. ಯೋಧಾ ಪರ ರಿಷಾಂಕ್‌ ದೇವಾಡಿಗ 11 ಮತ್ತು ಶ್ರೀಕಾಂತ್‌ ಜಾಧವ್‌ 9 ಪಾಯಿಂಟ್ಸ್‌ ಗಳಿಸಿದರು.

ಹೆಚ್ಚುವರಿ ಅವಧಿಯಲ್ಲಿ ಕೊನೆಯ ಮೂರು ನಿಮಿಷಗಳಿದ್ದಾಗ ಯೋಧಾ 40–39ರಲ್ಲಿ ಮುಂದಿತ್ತು. ಈ ಹಂತದಲ್ಲಿ ಪವನ್‌ ಸೂಪರ್‌ ರೇಡ್‌ನಲ್ಲಿ ನಾಲ್ಕು ಪಾಯಿಂಟ್‌ ಗಳಿಸಿ ಬುಲ್ಸ್‌ ತಂಡಕ್ಕೆ 43–40 ಲೀಡ್‌ ಒದಗಿಸಿದರು. ಕೊನೆಯ ಎರಡು ನಿಮಿಷಗಳಿದ್ದಾಗ ಮೂರು ಪಾಯಿಂಟ್‌ ಸಹಿತ ಎದುರಾಳಿಯನ್ನು ಆಲೌಟ್‌ ಮಾಡಿದ್ದರಿಂದ ಬುಲ್ಸ್‌ 47–42 ಮುನ್ನಡೆ ಸಾಧಿಸಿ ಗೆಲುವನ್ನು ಖಚಿತಪಡಿಸಿಕೊಂಡಿತು.

ಪಂದ್ಯದಲ್ಲಿ ಉತ್ತಮ ಆರಂಭ ಮಾಡಿದ್ದ ಯೋಧಾ ಏಳನೇ ನಿಮಿಷವೇ ಎದುರಾಳಿಯನ್ನು ಆಲೌಟ್‌ ಮಾಡಿ 11–4ರಲ್ಲಿ ಉತ್ತಮ ಮುನ್ನಡೆ ಪಡೆದಿತ್ತು. ಅಪಾಯಕಾರಿ ರೈಡರ್‌ ಪವನ್‌ ಅವರನ್ನು ಆಶು ಸಿಂಗ್‌ ಎರಡು ಬಾರಿ ಟ್ಯಾಕಲ್‌ ಮಾಡಿ ಬುಲ್ಸ್‌ ತಂಡಕ್ಕೆ ಕಡಿವಾಣ ಹಾಕಿದ್ದರು. ಗಿಲ್‌ ಮತ್ತು ಜಾಧವ್‌ ಟಚ್‌ ಪಾಯಿಂಟ್‌ಗಳನ್ನು ಗಳಿಸಿದ್ದರು.

ಆದರೆ ಕೆಲ ನಿಮಿಷಗಳಲ್ಲೇ ಲಯ ಕಂಡುಕೋಂಡ ಪವನ್‌ ಸೂಪರ್‌ರೈಡ್‌ ಮೂಲಕ ತಂಡದ ಪ್ರತಿಹೋರಾಟಕ್ಕೆ ನೆರವಾದರು. 14ನೇ ನಿಮಿಷ ಆ ಸೂಪರ್‌ರೇಡ್‌ನಲ್ಲಿ ಮೂರು ಪಾಯಿಂಟ್‌ ಗಳಿಸಿದ ಅವರು ಈ ಆವೃತ್ತಿಯಲ್ಲಿ 250 ಟಚ್‌ ಪಾಯಿಂಟ್‌ ಪೂರೈಸಿದರು. ಎರಡು ರೈಡ್‌ಗಳ ನಂತರ ಸಚಿನ್‌ ಅವರನ್ನು ಟಚ್‌ ಮಾಡಿ ಹಿಂತಿರುಗುವ ಮೂಲಕ ಒಟ್ಟಾರೆ ಪ್ರೊ ಲೀಗ್‌ನಲ್ಲಿ 650 ಪಾಯಿಂಟ್‌ ಕಲೆಹಾಕಿದ ಸಾಧನೆಗೆ ಪಾತ್ರರಾದರು.

ವಿರಾಮದ ವೇಳೆ ಯೋಧಾ ತಂಡ 20–17ರಲ್ಲಿ ಮುಂದಿತ್ತು. ಉತ್ತರಾರ್ಧದಲ್ಲೂ ಶ್ರೀಕಾಂತ್‌ ಮತ್ತು ರಿಷಾಂಕ್‌ ಅವರ ಆಟದಿಂದ ಬಹುಪಾಲು ಅವಧಿಯಲ್ಲಿ ಮುನ್ನಡೆ ಪಡೆದಿತ್ತು. ನಾಲ್ಕು ನಿಮಿಷಗಳಿದ್ದಾಗ ಸೂಪರ್‌ ಟೆನ್‌ ಸಾಧಿಸಿದ ಪವನ್‌ ಹಿನ್ನಡೆಯನ್ನು 33–34ಕ್ಕೆ ಇಳಿಸಿದರು. ಮರು ರೇಡ್‌ನಲ್ಲಿ ಶ್ರೀಕಾಂತ್‌ ಜಾಧವ್‌ ಅವರನ್ನು ಸೌರಬ್‌ ನಂದಲ್‌ ಹಿಡಿದಾಗ ಸ್ಕೋರ್‌ ಮೊದಲ ಬಾರಿ 34–34ರಲ್ಲಿ ಸಮನಾಯಿತು. ಕೊನೆಯ ಅರ್ಧ ನಿಮಿಷವಿದ್ದಾಗ 36–35ರಲ್ಲಿ ಬುಲ್ಸ್‌ ಮುಂದಿತ್ತು. ಸುರೇಂದರ್‌ ಗಿಲ್‌ ಕೊನೆಯ ರೇಡ್‌ನಲ್ಲಿ ಪಾಯಿಂಟ್‌ ಗಳಿಸಿದ್ದರಿಂದ ಸ್ಕೋರ್‌ ಸಮಬಲಗೊಂಡಿತು.

ಯು ಮುಂಬಾಗೆ ಜಯ:ಎಲಿಮಿನೇಷನ್‌ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ 46–38 ಪಾಯಿಂಟ್‌ಗಳಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸುಲಭವಾಗಿ ಸೋಲಿಸಿತು. ಮುಂಬಾ ಸೆಮಿಫೈನಲ್‌ನಲ್ಲಿ ಬೆಂಗಾಲ್‌ ವಾರಿಯರ್ಸ್‌ ಎದುರು ಆಡಲಿದೆ.

ಮುಂಬಾ ಪರ ರೇಡರ್‌ಗಳಾದ ಅಭಿಷೇಕ್‌ ಸಿಂಗ್‌ 16, ಅರ್ಜುನ್‌ ದೇಶ್ವಾಲ್‌ 15 ಪಾಯಿಂಟ್ಸ್‌ ಸಂಗ್ರಹಿಸಿದರೆ, ಫಜಲ್‌ ಅಟ್ರಾಚಲಿ ಮೂರು ಟ್ಯಾಕ್ಲಿಂಗ್‌ ಪಾಯಿಂಟ್‌ ಗಳಿಸಿದರು. ಹರಿಯಾಣ ಪರ ರೇಡರ್‌ಗಳಾದ ವಿಕಾಸ್‌ ಖಂಡೋಲಾ 13, ಪ್ರಶಾಂತ್‌ ಕುಮಾರ್‌ ರೈ ಮತ್ತು ವಿನಯ್‌ ತಲಾ 9 ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.