ADVERTISEMENT

ಎಲ್ಲ ಕಾಲದಲ್ಲೂ ಬೆಳೆಯುವ ಶೇಂಗಾ ಸಂಶೋಧನೆ

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಗೆ ಸಿದ್ಧವಾದ ಏಳು ಹೊಸ ತಳಿಗಳು

ಬಸವರಾಜ ಸಂಪಳ್ಳಿ
Published 25 ಅಕ್ಟೋಬರ್ 2019, 17:50 IST
Last Updated 25 ಅಕ್ಟೋಬರ್ 2019, 17:50 IST
ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿರುವ ಗೆಜ್ಜೆ ಶೇಂಗಾ
ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿರುವ ಗೆಜ್ಜೆ ಶೇಂಗಾ   

ಹುಬ್ಬಳ್ಳಿ: ಹಿಂಗಾರು, ಮುಂಗಾರು ಮತ್ತು ಬೇಸಿಗೆ ಕಾಲದಲ್ಲೂ ಬೆಳೆಯಬಹುದಾದ ಗೆಜ್ಜೆ ಶೇಂಗಾ, ಬದಲಾದ ಹವಾಗುಣಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಇರುವ ಸಜ್ಜೆ ಸೇರಿದಂತೆ ಏಳು ಹೊಸ ತಳಿಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿದೆ.

ಅಲ್ಪಾವಧಿಯಲ್ಲಿ ಅಧಿಕ ಇಳುವರಿ ಬರುವ ಸೋಯಾ ಅವರೆ, ಯಾಂತ್ರಿಕ ಕೊಯ್ಲಿಗೂ ಸೂಕ್ತವಾದ ಕಡಲೆ, ಹೆಕ್ಟೇರ್‌ಗೆ 200 ಟನ್‌ ಇಳುವರಿ ಬರುವಂತಹ ಕಬ್ಬನ್ನು ವಿಶ್ವವಿದ್ಯಾಲಯ ಸಂಶೋಧಿಸಿದ್ದು, ಬಿಡುಗಡೆಗೆ ಅಣಿಯಾಗಿದೆ. ಈ ಹೊಸ ತಳಿಗಳು ಭವಿಷ್ಯದಲ್ಲಿ ರೈತರ ಆದಾಯ ಹೆಚ್ಚಿಸಲು ನೆರವಾಗಲಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಪಿ.ಎಲ್‌.ಪಾಟೀಲ, ‘ಏಳೆಂಟು ವರ್ಷಗಳ ಶ್ರಮದ ಫಲವಾಗಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ರೈತರ ಹೊಲದಲ್ಲಿ ಮೂರು ವರ್ಷಗಳ ಕಾಲ ಪ್ರಾಯೋಗಿಕವಾಗಿ ಬೆಳೆಯಲಾಗಿದೆ. ಯಶಸ್ಸು ಕೂಡ ಸಿಕ್ಕಿದೆ’ ಎಂದರು.

ADVERTISEMENT

‘ಸದ್ಯದ ತಳಿಗಳಿಗಿಂತ ಹೊಸ ತಳಿಗಳು ಶೇ 8ರಿಂದ 10ರಷ್ಟು ಹೆಚ್ಚು ಇಳುವರಿ ಬರುತ್ತವೆ. ಅಲ್ಲದೇ, ರೋಗ ನಿರೋಧಕ ಶಕ್ತಿ ಹೊಂದಿವೆ. ಹೊಸ ತಳಿಗಳು ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯಲು ಹೆಚ್ಚು ಸೂಕ್ತವಾಗಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.