ADVERTISEMENT

ಭತ್ತದ ಗದ್ದೆಗೆ ಸೀರೆಯ ಬೇಲಿ

ಗಣಪತಿ ಹಾಸ್ಪುರ
Published 24 ಡಿಸೆಂಬರ್ 2018, 19:30 IST
Last Updated 24 ಡಿಸೆಂಬರ್ 2018, 19:30 IST
   

ಕಾಡು ಪ್ರಾಣಿ, ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ವೈವಿಧ್ಯಮಯ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆಯಾ ಪ್ರಾದೇಶಿಕತೆಗೆ ಅನುಸಾರವಾಗಿ, ಆ ರಕ್ಷಣಾ ವಿಧಾನಗಳು ರೂಪುಗೊಳ್ಳುತ್ತವೆ.

ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಸೊಪ್ಪಿನ ಮಡಿಗಳಿಗೆ, ಬಣ್ಣ ಬಣ್ಣದ ಸೀರೆ ಕಟ್ಟುತ್ತಾರೆ. ಇದರಿಂದ ಸೊಪ್ಪಿನ ಬೀಜಗಳನ್ನು ಕೋಳಿಗಳಿಂದ ರಕ್ಷಿಸಿಕೊಳ್ಳುತ್ತಾರಂತೆ.

ಇದೇ ರೀತಿ ಶಿರಸಿ ಸಮೀಪದ ಮಂಚಿಕೇರಿ ಬಳಿಯ ಹಳ್ಳಿಗಳಲ್ಲಿನ ಭತ್ತದ ಗದ್ದೆಯ ಸುತ್ತ ಇದೇ ರೀತಿ ಬಣ್ಣ ಬಣ್ಣದ ಸೀರೆಗಳನ್ನು ಕಟ್ಟಿದ್ದಾರೆ. ಇತ್ತೀಚೆಗೆ ಆ ದಾರಿಯಲ್ಲಿ ಹೋಗುವಾಗ, ಗದ್ದೆಗಳಿಗೆ ಸೀರೆಯನ್ನು ಬೇಲಿಯಂತೆ ಕಟ್ಟಿದ್ದನ್ನು ನೋಡಿದೆ. ಯಾತಕ್ಕಾಗಿ ಹೀಗೆ ಕಟ್ಟಿದ್ದಾರೆಂದು ಯೋಚಿಸಲಾರಂಭಿಸಿದೆ. ಇದು ಬೆಳೆ ರಕ್ಷಣೆಗಾಗಿ ಇದನ್ನು ಕಟ್ಟಿದ್ದಾರೆಂಬುದು ಸ್ಪಷ್ಟವಾಗಿತ್ತು. ಆದರೂ, ತಿಳಿಯುವ ಕುತೂಹಲಕ್ಕಾಗಿ ಮುಂದೆ ಹೆಜ್ಜೆ ಹಾಕಿದೆ.

ADVERTISEMENT

ಭತ್ತದ ಗದ್ದೆಯ ಆಸುಪಾಸಿನಲ್ಲಿ ಅರಣ್ಯ ಪ್ರದೇಶವಿದೆ. ಇಲ್ಲಿ ಕಾಡು ಪ್ರಾಣಿಗಳು ಹೆಚ್ಚಾಗಿ ಅಡ್ಡಾಡುತ್ತಿರುತ್ತವೆ. ಈ ಸಮಯದಲ್ಲಿ ಪ್ರಾಣಿಗಳು ಬೆಳೆದಿರುವ ಫಸಲನ್ನು ಕಂಡು, ಗದ್ದೆಗೆ ಇಳಿದು ಧ್ವಂಸ ಮಾಡುತ್ತವೆ. ‘ಪ್ರಾಣಿಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಹೀಗೆ ಸೀರೆ ಪರದೆ ಕಟ್ಟಿದ್ದೇವೆ. ಇವೆಲ್ಲ ಹಳೆಯ ಸೀರೆಗಳು’ ಎಂದು ಅಲ್ಲಿದ್ದ ರೈತರು ಅಭಿಪ್ರಾಯ ಹಂಚಿಕೊಂಡರು. ಬೆಳೆ ರಕ್ಷಣೆಗಾಗಿ ಸೀರೆಯ ಬೇಲಿ ಕಟ್ಟುವ ವಿಧಾನ ಬಹಳ ಹಿಂದಿನಿಂದಲೂ ಚಾಲ್ತಿ ಇದೆ ಎಂದು ಹೇಳಿದರು.

ಈ ಸೀರೆ ಪರದೆಯನ್ನಾಗಿಸುವುದರಿಂದ ಮಂಗಗಳು ಹಾವಳಿ ತಡೆಗಟ್ಟಬಹುದಮತೆ. ಬಣ್ಣ ಬಣ್ಣದ ಸೀರೆಗಳಿದ್ದರೆ, ಅವುಗಳು ಹೆದರಿ, ಗದ್ದೆ ಬಯಲಿಗೆ ಬರುವುದಿಲ್ಲ. ಇನ್ನು ಹಕ್ಕಿಗಳು, ಕೋಳಿಗಳು ಗಾಳಿಗೆ ಅಲುಗಾಡುವ ಬಣ್ಣದ ಸೀರೆಗಳನ್ನು ಕಂಡು ಹೆದರುತ್ತವಂತೆ. ಈ ಸೀರೆ ಬೇಲಿ ಹಾಕಿದ ಮೇಲೆ, ಪ್ರಾಣಿಗಳು, ಪಕ್ಷಿಗಳ ಉಪಟಳ ಕಡಿಮೆಯಾಗಿದೆ ಎನ್ನುತ್ತಾರೆ ಭತ್ತ ಬೆಳೆಯುವ ಕೃಷಿಕರು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.