ADVERTISEMENT

28ರಿಂದ ಮುಂಗಾರು ಬೀಜ ಮೇಳ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 11:38 IST
Last Updated 1 ಜುಲೈ 2019, 11:38 IST
ಬೀಜ ಮೇಳ
ಬೀಜ ಮೇಳ   

ಬಿತ್ತಿದರೆ ಕಾಳು ಹನಿ ಹನಿಯಾಗಿ
ಬರ್ತಾಳೆ ತಾಯಿ ತೆನೆ ತೆನೆಯಾಗಿ

ಬೀಜ ಕೃಷಿಯ ಜೀವಾಳ. ಒಕ್ಕಲು ಮಕ್ಕಳ ಜೀವನಾಡಿ. ಸಾವಿರಾರು ವರ್ಷಗಳಿಂದ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ ಜೊತೆಯಾಗಿ ಬೀಜ ಬೆಸೆದುಕೊಂಡು ಬಂದಿದೆ. ರೈತ ಸಮುದಾಯ ಬೀಜ ವೈವಿಧ್ಯವನ್ನು ಜೋಪಾನ ಮಾಡಿ, ಅಭಿವೃದ್ಧಿಗೊಳಿಸಿ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ತಂದಿದ್ದಾರೆ.
ಇಂಥ ಅಮೂಲ್ಯ ಬೀಜ ಸಂಪತ್ತಿಗೆ ಅಪಾಯ ಎದುರಾಗಿದೆ. ಹೈಬ್ರಿಡ್ ಮತ್ತು ಕುಲಾಂತರಿ ಬೀಜಗಳು ರೈತರ ಬೀಜ ಸ್ವಾತಂತ್ರ್ಯಕ್ಕೆ ಸವಾಲಾಗಿವೆ. ಇಳುವರಿಯೇ ಮೂಲ ಮಂತ್ರವಾಗಿ, ದೇಸಿ ತಳಿಗಳ ರುಚಿ, ಸ್ವಾದ, ಸೊಗಡು, ಬರ ನಿರೋಧಕ ಗುಣ ವಿಶೇಷತೆಗಳೆಲ್ಲಾ ಮೂಲೆ ಗುಂಪಾಗಿದೆ. ಬೀಜ ಸಂಸ್ಕೃಂತಿ ಕೊನೆಯುಸಿರೆಳೆಯುತ್ತಿದೆ.

ನಾಡ ತಳಿಗಳನ್ನು ಮತ್ತೆ ವಾಪಸು ತರುವ ಉದ್ದೇಶದಿಂದ ಸಹಜ ಸಮೃದ್ದ ಬಳಗವು ನಬಾರ್ಡ್‌ ಜೊತೆ ಸೇರಿ ‘ಮುಂಗಾರು ಬೀಜ ಮೇಳ’ವನ್ನು ಮೈಸೂರಿನ ನಂಜರಾಜೇ ಬಹದ್ದೂರು ಛತ್ರದಲ್ಲಿ ದಿನಾಂಕ 28, 29 ಮತ್ತು 30 ಜೂನ್ ರಂದು ಏರ್ಪಡಿಸಿದೆ. ಕರ್ನಾಟಕದ ಐವತ್ತಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಈ ಬೀಜಮೇಳದಲ್ಲಿ ಪಾಲ್ಗೊಳ್ಳಲಿವೆ.

ADVERTISEMENT

ವಿವಿಧ ಬಗೆಯ ದೇಸಿ ಭತ್ತ, ಸಿರಿಧಾನ್ಯ, ತರಕಾರಿ ಬೀಜ, ಗೆಡ್ಡೆ ಗೆಣಸು ಮತ್ತು ಹಣ್ಣು ಹಂಪಲಿನ ಗಿಡಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ. ಅಂಗಳಕ್ಕೊಂದು ಚೆಂದದ ಕೈತೋಟ ಮಾಡುವ ಮಾಹಿತಿ ಸಿಗಲಿದೆ. ಹಲಸು ಕಸಿ ಕಟ್ಟುವ ಕೌಶಲ್ಯದ ಪ್ರಾಯೋಗಿಕ ತರಬೇತಿ ಇದೆ.

29 ನೇ ಜೂನ್, ಶನಿವಾರ ‘ಸಾವಯವ ಬೀಜೋತ್ಪಾದನೆ ತರಬೇತಿ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಸರನ್ನು ನೊಂದಾಯಿಸಬಹುದು.
30ನೇ ಜೂನ್ ಭಾನುವಾರದಂದು ಸಂಜೆ 4 ಘಂಟೆಗೆ ‘ಬೀಜ ವಿನಿಮಯ ಕಾರ್ಯಕ್ರಮ’ ಏರ್ಪಡಿಸಲಾಗಿದೆ. ಆಸಕ್ತರು ತಮ್ಮ ಸಂಗ್ರಹದ ಬೀಜ, ಗಿಡ, ಬಳ್ಳಿ ಮತ್ತು ಕೃಷಿ ಪುಸ್ತಕಗಳನ್ನು ವಿನಿಮಯಕ್ಕೆ ತರಬಹುದು. ವಿವರಗಳಿಗೆ: ಆಶಾಕುಮಾರಿ 7019458671 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.