ADVERTISEMENT

‘ಸುಮಸಿರಿ’ಯ ಸಸ್ಯ ಶ್ಯಾಮಲೆ

ಹ.ಸ.ಬ್ಯಾಕೋಡ
Published 24 ಡಿಸೆಂಬರ್ 2018, 19:30 IST
Last Updated 24 ಡಿಸೆಂಬರ್ 2018, 19:30 IST
ಕೈತೋಟದಲ್ಲಿರುವ ನಿಂಬೆಗಿಡದೊಂದಿಗೆ ರವೀಂದ್ರನಾಥ ಮಯ್ಯ -ಚಿತ್ರಗಳು: ಲೇಖಕರವು
ಕೈತೋಟದಲ್ಲಿರುವ ನಿಂಬೆಗಿಡದೊಂದಿಗೆ ರವೀಂದ್ರನಾಥ ಮಯ್ಯ -ಚಿತ್ರಗಳು: ಲೇಖಕರವು   

ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕೋಟೇಶ್ವರ ಬಡಾಕೆರೆಯ ರವೀಂದ್ರನಾಥ ಮಯ್ಯ, ಮನೆ ಕಟ್ಟುವ ಮುನ್ನವೇ ಅಂಗಳದಲ್ಲೊಂದು ಕೈತೋಟವಿರಲೇ ಬೇಕು ಎಂದು ತೀರ್ಮಾನಿಸಿದ್ದರು. ಅದಕ್ಕಾಗಿ ಜಾಗವನ್ನು ಮೀಸಲಿಟ್ಟಿದ್ದರು. ಮನೆ ಕಟ್ಟಿದ ನಂತರ ಆ ಜಾಗದಲ್ಲೀಗ ವಿವಿಧ ಹೂವಿನ ಗಿಡಗಳ ಅಪರೂಪದ ಸಸ್ಯಗಳ ತೋಟವೊಂದು ನಳ ನಳಿಸುತ್ತಿದೆ.

ವೃತ್ತಿಯಲ್ಲಿ ವಕೀಲರಾದ ರವೀಂದ್ರನಾಥ ಮಯ್ಯ ಪರಿಸರ ಪ್ರಿಯರು ಕೂಡ. ಅದಕ್ಕಾಗಿಯೇ ಮನೆಗೆ ‘ಸುಮಸಿರಿ’ ಎಂದು ಹೆಸರಿಟ್ಟಿದ್ದಾರೆ. ಹನ್ನೆರಡು ಸೆಂಟ್ ಜಾಗದಲ್ಲಿ ಪುಟ್ಟದೊಂದು ಪರಿಸರ ಸ್ನೇಹಿ ಮನೆ ಕಟ್ಟಿಕೊಂಡಿದ್ದಾರೆ. ಮನೆಯ ಮುಂದಿನ ಕೈತೋಟದಲ್ಲಿ ಅಡಿ ಅಡಿಗೂ ಅಪರೂಪದ ಗಿಡಗಳನ್ನು ನೆಟ್ಟಿದ್ದಾರೆ. ಅವುಗಳನ್ನು ನೋಡಲು ಒಂದು ದಿನವೇ ಬೇಕು.

ಏನೇನಿವೆ ಕೈತೋಟದಲ್ಲಿ...
ಕರಾವಳಿಯಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುವಂತಹ ಕಿತ್ತಳೆ, ಮೊಸಂಬಿ, ಮಹಾರಾಷ್ಟ್ರದ ಕೋಕಂ, ಎಗ್‍ಪ್ರೂಟ್, ಬಟರ್ ಫ್ರೂಟ್, ಅಂಜೂರ, ಖರ್ಜೂರದ ಗಿಡಗಳನ್ನು ಬೆಳೆದಿದ್ದಾರೆ.

ADVERTISEMENT

ಗಿಡಗಳನ್ನು ಬೆಳೆಸಲು ಮಯ್ಯ ಅವರು ಪಂಚಾಯಿತಿ ನೀರಿನ ಸಂಪರ್ಕ ನೆಚ್ಚಿಕೊಂಡಿಲ್ಲ. ಮನೆಯ ಅಂಗಳದಲ್ಲಿ ಪುಟ್ಟ ಬಾವಿ ತೊಡಿಸಿದ್ದಾರೆ. ಆ ಬಾವಿಯಲ್ಲಿ ಸಾಕಷ್ಟು ನೀರು ಇದೆ. ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು ಈ ಬಾವಿಯಲ್ಲಿ ಸಂಗ್ರಹಿಸುತ್ತಾರೆ. ಉಳಿದ ಭಾಗದಲ್ಲಿ ಸುರಿಯುವ ಮಳೆ ನೀರನ್ನು ಆವರಣದಲ್ಲಿ ಇಂಗುವಂತೆ ಮಾಡಿದ್ದಾರೆ.

ಬಾವಿಯ ಅಕ್ಕ ಪಕ್ಕ ಚಂದ್ರಬಾಳೆ, ಪುಟ್ಟಬಾಳೆ, ನೇಂದ್ರಬಾಳೆ, ಮಂಗಳಬಾಳೆ, ರಸಬಾಳೆ ಸೇರಿದಂತೆ ಒಟ್ಟು ಆರು ಬಗೆಯ ವೈವಿಧ್ಯಮಯ ಬಾಳೆಗಿಡಗಳನ್ನು ಬೆಳೆಸಿದ್ದಾರೆ. ಇಪ್ಪತ್ತೆರಡಕ್ಕೂ ಹೆಚ್ಚು ಅಡಿಕೆ ಮರಗಳಿವೆ. ನಾಲ್ಕು ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಮನೆಯ ಹಿಂಬದಿಯಲ್ಲಿ ನಾಲ್ಕು ಜಾತಿಯ ಹಲಸಿನ ಗಿಡಗಳಿವೆ. ಮಲೆನಾಡಿನ ದೀವಿ ಹಲಸು ತಳಿಯೂ ಇದೆ. ಇದು ಅಂಟಿಲ್ಲದ ಹಲಸು. ಇಂಥ ಹಲಸಿನೊಂದಿಗೆ ಕಾಲಪಾಡಿ ಮಾವು, ತ್ರಿಫಲ ಮಾವು, ರತ್ನಗಿರಿ ಆಪೂಸ್, ಬೆನೆಟ್ ಆಪೂಸ್, ಗಿಳಿಮೂತಿ ಮಾವು ಸೇರಿದಂತೆ ಒಟ್ಟು ಆರು ಬಗೆಯ ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ಇಷ್ಟೇ ಅಲ್ಲದೆ ಎಂಟು ಬಗೆಯ ಪಪ್ಪಾಯಿ ಗಿಡಗಳನ್ನು ಬೆಳೆಸಿದ್ದಾರೆ.

ಅಲ್ಲದೆ ಸರ್ದಾರ್ ಪೇರಲ, ಅಲಹಾಬಾದಿ, ಕೆ.ಜಿಗುವಾ, ಬನ್ನೆರಳೆ, ಲಿಚಿ, ರಾಮಫಲ, ಸೀತಾಫಲ, ಗೇರು, ಸಿಹಿ ಅಮಟೆ, ಜಂಬುನೇರಳೆ, ಸಪೋಟ, ಬೆಟ್ಟದ ನೆಲ್ಲಿ ಗಿಡ, ದೊಡ್ಡ ನೆಲ್ಲಿ ಗಿಡ, ಲಿಂಬೆ ಗಿಡ, ಸಿಹಿ ಕಂಚು (ಚಕ್ಕೋತ) ಸೇರಿದಂತೆ ಗಜನಿಂಬೆಯನ್ನು ಬೆಳೆದಿದ್ದಾರೆ.

ನುಗ್ಗೆ, ಕರಿಬೇವು, ಕಹಿಬೇವು, ಬಿಜ ಪತ್ರೆ, ಬನ್ನಿಮರ, ಪಾರಿಜಾತ, ಇಪ್ಪತ್ತು ಬಗೆಯ ದಾಸವಾಳ, ಹನ್ನೆರಡು ಬಗೆಯ ಗುಲಾಬಿ ಗಿಡಗಳೊಂದಿಗೆ ಸಂಪಿಗೆ, ಮೊಟ್ಟೆ ಸಂಪಿಗೆ ಹೂವಿನ ಗಿಡಗಳು ಎತ್ತರಕ್ಕೆ ಬೆಳೆಯುವಂತೆ ಮಾಡಿದ್ದಾರೆ.

ಕೈತೋಟ ಹಸಿರಾಗಿಸಲು ಮಯ್ಯ ಅವರೊಂದಿಗೆ ಪತ್ನಿ ಗಾಯತ್ರಿ, ಮಗ ಸುಮಂತ್ ಮತ್ತು ಮಗಳು ಸಿರಿ ಕೈ ಜೋಡಿಸಿದ್ದಾರೆ. ಅವರೆಲ್ಲರೂ ಬಿಡುವಿನ ವೇಳೆಯಲ್ಲಿ ಗುದ್ದಲಿ ಸಲಿಕೆ ಹಿಡಿದು ಕೈತೋಟದಲ್ಲಿ ಬೆಂಡೆ, ಬದನೆ, ತೊಂಡೆ, ಬಸಳೆ, ಕೆಸವು ಸೇರಿದಂತೆ ಹದಿನೈದಕ್ಕೂ ಹೆಚ್ಚು ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಇನ್ನಷ್ಟು ವೆರೈಟಿಯ ಗಿಡಗಳು
ಬಿಡುವಿನ ವೇಳೆಯಲ್ಲಿ ಆಕಳ ಸಗಣಿ ಹಾಗೂ ದೊಡ್ಡ ದೊಡ್ಡ ಮರಗಳ ತರಗೆಲೆಗಳನ್ನು ತಂದು ಗಿಡಗಳ ಬುಡದಲ್ಲಿ ಹಾಕಿ ಗೊಬ್ಬರ ತಯಾರು ಮಾಡುತ್ತಾರೆ. ಗಿಡಗಳಿಗೆ ಕ್ರೀಮಿ ಕೀಟಗಳು ಬಾಧಿಸದಂತೆ ಎಚ್ಚರವಹಿಸಿದ್ದಾರೆ ಮಯ್ಯ. ಹೀಗಾಗಿಯೇ ಮನೆಯಂಗಳ ಅಂದವಾಗಿ ಕಾಣುತ್ತಿದೆ. ಮನೆಗೆ ಬಂದವರು ಖುಷಿಯಿಂದ ಅಂಗಳದಲ್ಲಿ ಗಿಡಗಳ ನಡುವೆಯೇ ಕುಳಿತುಕೊಳ್ಳಲು ಬಯಸುತ್ತಾರೆ ಎನ್ನುತ್ತಾರೆ ರವೀಂದ್ರನಾಥ ಮಯ್ಯ. ಕೈತೋಟದಲ್ಲಿ ಸಾಕಷ್ಟು ತರಕಾರಿಗಳನ್ನು ಬೆಳೆದಿರುವುದರಿಂದ, ತರಕಾರಿ ತರಲು ಪೇಟೆಗೆ ಹೋಗುವುದಿಲ್ಲ. ಇನ್ನು ಸಣ್ಣಪುಟ್ಟ ಕಾಯಿಲೆಗೆ ಮದ್ದು ಮಾಡಿ ಕೊಳ್ಳಲು ಔಷಧ ಸಸ್ಯಗಳನ್ನು ಬೆಳೆಸಿದ್ದಾರೆ. ಹಾಗಾಗಿ ಆಸ್ಪತ್ರೆಗೆ ಹೋಗುವ ಸಂದರ್ಭವು ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯ ಸುತ್ತಮುತ್ತ ಗಿಡ ಮರಗಳು ಬಹಳಷ್ಟು ಬೆಳೆದಿರುವುದರಿಂದ ಪರಿಶುದ್ಧ ತಣ್ಣನೆಯ ಗಾಳಿ ಬರುತ್ತದೆ. ಒಟ್ಟಿನಲ್ಲಿ ಮನೆಯ ಸುತ್ತಮುತ್ತಲಿನ ಕೈತೋಟದಿಂದ ಉತ್ತಮ ಆರೋಗ್ಯವಂತೂ ಸಿಕ್ಕಿದೆ ಎಂದು ರವೀಂದ್ರನಾಥ ಮಯ್ಯ ನಗುಮೊಗದಿಂದಲೇ ಹೇಳುತ್ತಾರೆ.

ಬೇಸರವಾದಾಗ ಕೈತೋಟದಲ್ಲಿನ ಗಿಡ ಮರಗಳ ಕೆಳಗೆ ಕುಳಿತು ವಿರಮಿಸಿದಾಗ ಬೇಸರ ಮಾಯವಾಗುತ್ತದೆ. ‘ಗಿಡಗಳ ನಡುವೆ ಆಗಾಗ ಅನೇಕ ಹಕ್ಕಿಗಳು ಗೂಡು ಕಟ್ಟಿ ಮರಿ ಮಾಡಿ, ಹೋಗುತ್ತವೆ. ಅವುಗಳ ಅಂದವನ್ನು ನೋಡುವ ಭಾಗ್ಯ ನಮಗೆ ಸಿಕ್ಕಿದೆ’ ಎನ್ನುತ್ತಾರೆ ಗಾಯತ್ರಿ.

ಕೈತೋಟ ನಿರ್ಮಾಣದ ಮಾಹಿತಿಗಾಗಿ ಸಂಪರ್ಕಿಸುವ ಮಯ್ಯ ಅವರ ಮೊಬೈಲ್ ಸಂಖ್ಯೆ: 94820 35968.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.