
ಆ ಯುವಕನ ಕೈಯಲ್ಲಿದ್ದ ಬಕೆಟ್‌ನಲ್ಲಿ ಸಾವಯವ ಗೊಬ್ಬರ ತುಂಬಿತ್ತು. ಆತ ಗದ್ದೆಯ ನಡುಮಧ್ಯದಲ್ಲಿ ನಿಂತು ಅದನ್ನು ಮಣ್ಣಿಗೆ ಸೇರಿಸುತ್ತಿದ್ದ. ಆ ದಾರಿಯಲ್ಲಿ ಓಡಾಡುವವರು ಅರೆಕ್ಷಣ ನಿಂತು ಆತನನ್ನು ಬೆರಗಿನಿಂದ ನೋಡುತ್ತಾ, ಮುಸಿಮುಸಿ ನಗುತ್ತಾ ಮುಂದೆ ಸಾಗುತ್ತಿದ್ದರು. ದಾರಿಹೋಕರು ಹೀಗೆ ವರ್ತಿಸಲು ಕಾರಣವಿತ್ತು. ಆತ ವಿದೇಶಿಯಾಗಿದ್ದ! ಪಕ್ಕಾ ಮಂಡ್ಯದ ರೈತನಂತೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ.
ವಿದೇಶಿ ಯುವಕ–ಯುವತಿ ಜೊತೆಯಾಗಿ ಪಾತಿ ಮಾಡಿ ಸಸಿಗಳನ್ನು ನೆಡುವುದು. ಯುವಕನೊಬ್ಬ ನಿಕ್ಕರ್ ಧರಸಿ, ತಲೆಗೆ ಟೋಪಿ ಹಾಕಿಕೊಂಡು ಬೆವರಿನಲ್ಲಿ ಸ್ನಾನ ಮಾಡುತ್ತಾ, ಕೃಷಿ ಹೊಂಡದ ಬದುವನ್ನು ಗುದ್ದಲಿಯಿಂದ ಸರಿಪಡಿಸುವ ದೃಶ್ಯಗಳನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಸಮೀಪದ ಪಾಲಹಳ್ಳಿಯ ವೆಂಕಟೇಶ್ ಅವರ ತೋಟದಲ್ಲಿ ಸಾಮಾನ್ಯವಾಗಿ ಕಾಣಬಹುದು. ಏಕೆಂದರೆ, ವೆಂಕಟೇಶ್ ತಮ್ಮ ತೋಟವನ್ನು ‘ಕೃಷಿ ಪ್ರವಾಸೋದ್ಯಮ’ದ ತಾಣವನ್ನಾಗಿ ರೂಪಿಸಿದ್ದಾರೆ.
ಇವರ ತೋಟದತ್ತ ಇಟಲಿ, ಜರ್ಮನಿ, ಐರ್ಲೆಂಡ್, ಫ್ರಾನ್ಸ್, ಹಂಗೇರಿ, ಜಿಂಬಾಬ್ವೆ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ರೈತರು ಮತ್ತು ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯುವಕ–ಯುವತಿಯರು ಬರಲಾರಂಭಿಸಿದ್ದಾರೆ. ನಮ್ಮದೇ ದೇಶದ ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಲೂಧಿಯಾನ ಕಡೆಗಳಿಂದಲೂ ರೈತರು ಬರುತ್ತಿದ್ದಾರೆ. ದಿನಗಳು ಕಳೆದಂತೆ ಹೀಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಚರ್ಚೆಯ ಹಂತದಲ್ಲಿರುವ ಕೃಷಿ ಪ್ರವಾಸೋದ್ಯಮ ಯೋಜನೆಯನ್ನು ಸರ್ಕಾರ ಜಾರಿಗೆ ತಂದರೆ ಕೃಷಿ ಕ್ಷೇತ್ರ ಮತ್ತಷ್ಟು ಪ್ರಗತಿ ಕಾಣಲಿದೆ.ಶಿಲ್ವಾ, ಕೃಷಿ ಅಧಿಕಾರಿ ಶ್ರೀರಂಗಪಟ್ಟಣ
ಇಲ್ಲಿಗೆ ಬರುವ ದೇಶ–ವಿದೇಶಗಳ ರೈತರು ಜಮೀನು ಉಳುಮೆ ಮಾಡುವುದು, ಬಿತ್ತನೆ ಮಾಡುವುದು, ಗದ್ದೆಗೆ ಗೊಬ್ಬರ ಹಾಕುವುದು, ದ್ರಾವಣ ಸಿಂಪಡಿಸುವುದು, ಕೊಯ್ಲು ಮಾಡುವುದು ಹಾಗೂ ಒಕ್ಕಣೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವಾರ, ತಿಂಗಳುಗಟ್ಟಲೆ ಇಲ್ಲೇ ಇದ್ದು ಕೃಷಿ ಕಾರ್ಯದ ಬಗ್ಗೆ ಸಮಗ್ರ ಅನುಭವ ಪಡೆಯಲು ಯತ್ನಿಸುತ್ತಾರೆ. ಮೀನು, ಹಸು, ಮೇಕೆ ಮತ್ತು ಕೋಳಿ ಸಾಕಣೆ ಹಾಗೂ ವಿವಿಧ ದ್ರಾವಣಗಳ ತಯಾರಿಕೆ ಬಗೆಗೂ ವೆಂಕಟೇಶ್ ಮತ್ತು ಅವರ ಕುಟುಂಬದ ಸದಸ್ಯರು ತರಬೇತಿ ನೀಡುತ್ತಾರೆ. ವಿದೇಶಿ ಮತ್ತು ಭಾರತೀಯ ಕೃಷಿ ಪದ್ಧತಿಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತದೆ. ಹಬ್ಬ, ಜಾತ್ರೆ, ಉತ್ಸವಗಳಂತಹ ಆಚರಣೆಗಳ ಕುರಿತೂ ತಿಳಿಸಿಕೊಡಲಾಗುತ್ತದೆ. ಸ್ಥಳೀಯ ರೈತರು ಮತ್ತು ಅಧಿಕಾರಿಗಳನ್ನು ಕರೆಸಿ ಚರ್ಚಾಕೂಟ ಏರ್ಪಡಿಸಲಾಗುತ್ತದೆ. ಇಲ್ಲಿ ಉಳಿದುಕೊಳ್ಳುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸದ್ಯಕ್ಕೆ ಶುಲ್ಕ ನಿಗದಿ ಮಾಡಿಲ್ಲ. ಕೊಟ್ಟಷ್ಟು ಪಡೆಯುತ್ತಾರೆ.
ವೆಂಕಟೇಶ್ ಜಮೀನಿಗೆ ಭೇಟಿ ನೀಡಿದ ಕೃಷಿ ಆಸಕ್ತರು
‘ಕೃಷಿ ಪ್ರವಾಸೋದ್ಯಮ ಪರಿಕಲ್ಪನೆ ಸಾಕಾರಗೊಳ್ಳಲು ಪ್ರೇರಣೆ ನೀಡಿದವರು ಬೆಂಗಳೂರಿನ ಐ.ಟಿ. ಉದ್ಯೋಗಿಗಳಾದ ಜೆ. ಫ್ರಾಂಕ್ಲಿನ್ ಮತ್ತು ಸಂಗೀತಾ. ಅವರ ಮಾರ್ಗದರ್ಶನದಲ್ಲಿ ದೇಶ, ವಿದೇಶಗಳ ರೈತರ ಸಂಪರ್ಕ ಸಾಧ್ಯವಾಗಿದೆ. ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ನೇರ ಮಾರಾಟಕ್ಕೆ ಅನುಕೂಲವಾಗಿದೆ. ಅಕ್ಕಿ, ರಾಗಿ, ಹಣ್ಣು, ತರಕಾರಿ, ಸೊಪ್ಪು, ಹಾಲು, ತುಪ್ಪ, ಮೀನು, ಮೇಕೆ, ಎರೆಹುಳು ಗೊಬ್ಬರ ಮಾರಾಟ ಸೇರಿದಂತೆ ಇತರೆ ಮೂಲಗಳಿಂದ ವರ್ಷಕ್ಕೆ ₹10 ಲಕ್ಷದವರೆಗೆ ಗಳಿಸುತ್ತೇನೆ’ ಎಂದು ವೆಂಕಟೇಶ್ ಹೇಳುತ್ತಾರೆ.
ವೆಂಕಟೇಶ್ ಹೈಸ್ಕೂಲ್ ಹಂತಕ್ಕೇ ಓದನ್ನು ಬಿಟ್ಟು ಅಪ್ಪನ ಜತೆ ನೇಗಿಲು ಹಿಡಿದವರು. ಐದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕವಾಗಿ ಭತ್ತ, ರಾಗಿ, ಕಬ್ಬು, ಇತರೆ ಬೆಳೆ ಬೆಳೆಯುತ್ತಿದ್ದರು. ಎಂಟು ವರ್ಷಗಳ ಹಿಂದೆ ಐ.ಟಿ ಉದ್ಯೋಗಿ ಸಂಗೀತಾ ಪಾಲಹಳ್ಳಿಯಲ್ಲಿ ಜಮೀನು ಖರೀದಿಸಲು ಬಂದಾಗ ವೆಂಕಟೇಶ್ ಅವರ ಪರಿಚಯವಾಗಿ ಸಾವಯವ ಕೃಷಿಯ ಬಗ್ಗೆ ಚರ್ಚಿಸಿದರು. ಆ ಚರ್ಚೆ ವೆಂಕಟೇಶ್ ಅವರ ಚಿಂತನೆಯ ದಿಕ್ಕನ್ನೇ ಬದಲಿಸಿತು. ಸಾಂಪ್ರದಾಯಿಕ ಕೃಷಿ ಪದ್ಧತಿ ಬಿಟ್ಟು ‘ಕೃಷಿ ಪ್ರವಾಸೋದ್ಯಮ’ದತ್ತ ಹೊರಳಿದರು.
ಈ ಮಣ್ಣಿನ ಸುವಾಸನೆ ಎಷ್ಟು ಚೆಂದ...
ಮಣ್ಣು ಮತ್ತು ಮನುಷ್ಯನ ಆರೋಗ್ಯಕ್ಕೆ ಆದ್ಯತೆ ನೀಡುವ ಸಾವಯವ ಕೃಷಿ ಚಟುವಟಿಕೆ ಆರಂಭವಾಯಿತು. ರಸಗೊಬ್ಬರ, ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಬೆಳೆಗಳ ವೃದ್ಧಿಗೆ ಜೀವಾಮೃತ, ಬೀಜಾಮೃತ, ಪಂಚಗವ್ಯ, ಗೋಕೃಪಾಮೃತ ಬಳಕೆ ಶುರುವಾಯಿತು. ಕೀಟಬಾಧೆ ತಡೆ ಮತ್ತು ರೋಗಗಳ ನಿಯಂತ್ರಣಕ್ಕೆ ನೀಮಾಸ್ತ್ರ, ಅಗ್ನಿಅಸ್ತ್ರಗಳೆಂಬ ಪರಂಪರಾಗತ ಸಸ್ಯಜನ್ಯ ಔಷಧ ತಯಾರಿಸುವುದನ್ನು ಕಲಿತು ಬೆಳೆಗಳಿಗೆ ಪ್ರಯೋಗಿಸಿ ಯಶಸ್ವಿಯಾಗಿ ಬೆಳೆಯನ್ನೂ ತೆಗೆದರು.
ವೆಂಕಟೇಶ್ ಬೆಳೆಯುವ ಭತ್ತ, ರಾಗಿ, ತರಕಾರಿ, ಸೊಪ್ಪು, ಹಣ್ಣುಗಳು ರಾಸಾಯನಿಕ ಮುಕ್ತ ಎಂದು ಸ್ವಯಂ ಸೇವಾ ಸಂಸ್ಥೆ ಪ್ರಮಾಣ ಪತ್ರ ನೀಡಿದೆ. ಇದರಿಂದ ಇವರ ಕೃಷಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ನಂಬಿಕೆ ಹೆಚ್ಚಾಗಿ ಬೇಡಿಕೆಯೂ ಹೆಚ್ಚಾಗಿದೆ.
ಎರಡು ವರ್ಷ ಜತೆಗಿದ್ದು ಮಾರ್ಗದರ್ಶನ ನೀಡಿದ ಸಂಗೀತಾ ಮತ್ತು ಜೆ. ಫ್ರಾಂಕ್ಲಿನ್ ಅವರ ಸಲಹೆಯಂತೆ ವೆಂಕಟೇಶ್ ತಮ್ಮದೇ ಕಂಪನಿಯನ್ನು ‘ಕರ್ನಾಟಕ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ’ಯಲ್ಲಿ ನೋಂದಣಿ ಮಾಡಿಸಿದ್ದಾರೆ.
ತಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ‘ವರ್ಕ್ ಅವೆ ಇನ್ ಇಂಡಿಯಾ’ ಹೆಸರಿನ ವೆಬ್‌ಸೈಟ್ ಕೂಡ ರೂಪಿಸಿದ್ದಾರೆ. ಈ ವೆಬ್‌ಸೈಟ್ ದೇಶ, ವಿದೇಶಗಳ ರೈತರು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಐದು ಎಕರೆಯಲ್ಲಿ ಹತ್ತಾರು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಜಮುಡಿ, ರತ್ನಚೂಡಿ, ನವರ, ಬೆಳಗಾವಿ ಬಾಸುಮತಿ, ಸಿದ್ದಸಣ್ಣ, ಎಚ್‌ಎಂಟಿ ಹೆಸರಿನ ದೇಸಿ ತಳಿಯ ಸುವಾಸನೆಯುಕ್ತ ಭತ್ತ ಬೆಳೆಯುತ್ತಾರೆ. ರಾಗಿ, ಜೋಳ, ತೆಂಗು, ಬಾಳೆ ಇತರೆ ಹಣ್ಣು, ಸೊಪ್ಪು, ತರಕಾರಿಗಳನ್ನು ಬೆಳೆಯುತ್ತಾರೆ. ಇವರ ಬಳಿ ಗಿರ್, ಸಾಯಿವಾಲ್, ಹಳ್ಳಿಕಾರ್ ತಳಿಯ ಹಸುಗಳಿವೆ. ಮೇಕೆ ಮತ್ತು ಮೀನು ಸಾಕಣೆಯೂ ನಡೆಯುತ್ತದೆ. ನಾಟಿ ಹಸುವಿನ ಹಾಲು, ತುಪ್ಪ ಮಾರಾಟ ಮಾಡುತ್ತಾರೆ. ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮೈಸೂರಿನ ಹಿನಕಲ್‌ನಲ್ಲಿ ವೆಂಕಟೇಶ್ ಅಂಗಡಿಯನ್ನೂ ತೆರೆದಿದ್ದಾರೆ.
ರೈತರಿಗೆ ಮಣ್ಣಿನ ಗುಣಮಟ್ಟ ಮತ್ತು ಸಾವಯವ ಬೆಳೆ ಪದ್ದತಿ ಕುರಿತು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಇಲಾಖೆಗಳ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಇದೊಂದು ರೀತಿ ರೈತರ ತರಬೇತಿ ಕೇಂದ್ರವಾಗಿದೆ. ರೈತರು ಕೇವಲ ಕೃಷಿಯನ್ನೇ ನಂಬಿ ಬದುಕುವ ಕಾಲ ಹೋಗಿದೆ. ಈಗ ಕೃಷಿಯನ್ನು ಬೇರೆ ಬೇರೆ ಆಯಾಮಗಳಿಂದ ಆದಾಯದ ಮೂಲವನ್ನಾಗಿ ಮಾಡುವ ಅನ್ವೇಷಣಾ ಗುಣವನ್ನು ಬೆಳೆಸಿಕೊಳ್ಳಬೇಕು ಎನ್ನುವುದನ್ನು ವೆಂಕಟೇಶ್ ‘ಕೃಷಿ ಪ್ರವಾಸೋದ್ಯಮ’ದ ಮೂಲಕ ಸಾಧಿಸಿತೋರಿಸಿದ್ದಾರೆ. (ಸಂಪರ್ಕ ಸಂಖ್ಯೆ:91642 35333)
ರಾಸುಗಳೊಂದಿಗೆ ವೆಂಕಟೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.