ADVERTISEMENT

ಕೃಷಿ ಮೇಳ: ಬೇಕರಿ ತಿನಿಸು ತಯಾರಿಕೆಗೆ ಉತ್ಸಾಹ

ಮಹಿಳೆಯರ ಗಮನ ಸೆಳೆದ ತರಬೇತಿ ಮಳಿಗೆ; ಪ್ರದರ್ಶನದ ಜೊತೆಗೆ ಮಾರಾಟ

ಗುರು ಪಿ.ಎಸ್‌
Published 16 ನವೆಂಬರ್ 2018, 20:15 IST
Last Updated 16 ನವೆಂಬರ್ 2018, 20:15 IST
ಬೇಕರಿ ತಿಂಡಿಗಳನ್ನು ತಯಾರಿಸುವ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು –ಪ್ರಜಾವಾಣಿ ಚಿತ್ರ
ಬೇಕರಿ ತಿಂಡಿಗಳನ್ನು ತಯಾರಿಸುವ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:ರಾಗಿ ಗೋಡಂಬಿ ಬಿಸ್ಕತ್ತು ಮಾಡುವುದು ಹೇಗೆ? ತಿನ್ನುವ ಚಮಚ ತಯಾರಿಸುವಾಗ ಯಾವ ‘ಸ್ಕಿಲ್‌’ ಬಳಸಬೇಕು? ಬರಗು ಮಸಾಲ ಬಿಸ್ಕತ್ತನ್ನು ರೆಡಿ ಮಾಡುವುದು ಹೇಗೆ? ಮಕ್ಕಳಿಗೆ ರುಚಿಸಲೂ ಬೇಕು, ಆರೋಗ್ಯವೂ ಕೆಡಬಾರದು, ಅಂತಹ ತಿಂಡಿಗಳಿದ್ದರೆ ಹೇಳಿ...

ಇಂತಹ ಹಲವು ಪ್ರಶ್ನೆಗಳು ಮಹಿಳೆಯರು, ಯುವತಿಯರಿಂದ ತೂರಿ ಬರುತ್ತಿದ್ದರೆ, ಬೇಕರಿ ತರಬೇತಿ ಕೇಂದ್ರದ ಸಿಬ್ಬಂದಿಯು ಅಷ್ಟೇ ಸಮಾಧಾನದಿಂದ ಉತ್ತರ ನೀಡುತ್ತಿದ್ದರು.

ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಕೇಂದ್ರದ ಮಳಿಗೆಯು ಈ ರೀತಿ ಮಹಿಳೆಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ಉಪ್ಪು ಮತ್ತು ಸಿಹಿ ಬಿಸ್ಕತ್ತು, ಸಾಮೆ, ಕಿರುಧಾನ್ಯ, ಗೋಡಂಬಿ ಬಿಸ್ಕತ್ತು ಸೇರಿದಂತೆ ನೂರಾರು ಬಗೆಯ ಸಿಹಿ ತಿಂಡಿಗಳು, ಕೇಕ್‌ನ ಪ್ರದರ್ಶನ ಮತ್ತು ಮಾರಾಟ ನಡೆದಿತ್ತು. ಬೇಕರಿ ತಂತ್ರಜ್ಞಾನ ತರಬೇತಿಯ ಕುರಿತೂ ಮಹಿಳೆಯರು ಮಾಹಿತಿ ಪಡೆದರು.

‘ಕೇಂದ್ರದ ವತಿಯಿಂದ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. 14 ವಾರಗಳ ತರಬೇತಿಗೆ ₹5,000 ಮತ್ತು ಒಂದು ತಿಂಗಳ ತರಬೇತಿಗೆ ₹1,700 ಶುಲ್ಕವನ್ನು ನಿಗದಿ ಮಾಡಲಾಗಿದೆ’ ಎಂದು ಕೃಷಿ ವಿ.ವಿ ಬೇಕರಿ ತರಬೇತಿ ಘಟಕದ ಸಿಬ್ಬಂದಿ ಅನಸೂಯಾ ಹೇಳಿದರು.

ಕೇಕ್‌ ಮತ್ತು ಕೇಕ್‌ ಅಲಂಕಾರ, ಗೃಹಮಟ್ಟದ ಬೇಕರಿ ತಿನಿಸು, ಹಾಲು ಮತ್ತು ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆ, ಆಹಾರ ಮತ್ತು ಪೋಷಣೆ, ರಾಗಿಯ ವಿವಿಧ ಆಹಾರಗಳ ತಯಾರಿಕೆ, ಕಿರುಧಾನ್ಯಗಳ ಮೌಲ್ಯವರ್ಧನೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಸಾಂಬಾರು ಪುಡಿಗಳ ತಯಾರಿಕೆ ಕುರಿತೂ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಆಹಾರ ತಯಾರಿಕೆ ಮಾತ್ರವಲ್ಲದೆ, ಈ ಉತ್ಪನ್ನಗಳ ಮಾರಾಟದ ಕುರಿತು ತರಬೇತಿ ನೀಡಲಾಗುತ್ತದೆ. ವಿಶೇಷ ಸಂದರ್ಭದಲ್ಲಿ ದೊಡ್ಡ ಕಾರ್ಯಕ್ರಮಗಳಿಗೆ ಅಂದರೆ, ಕ್ರಿಸ್‌ಮಸ್‌ ಕೇಕ್‌ಗಳ ಪೂರೈಕೆ ಹೇಗೆ ಮಾಡಬೇಕು ಎಂಬುದನ್ನೂ ಹೇಳಿಕೊಡಲಾಗುತ್ತದೆ ಎಂದು ಅನಸೂಯಾ ತಿಳಿಸಿದರು.

‘ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಈ ಕೆಲಸದಲ್ಲಿ ಯಶಸ್ವಿಯಾದರೆ, ಸಣ್ಣ ಉದ್ಯಮ ವನ್ನಾಗಿಯೂ ಕೈಗೊಳ್ಳಬಹುದು’ ಎಂದು ಅವರು ಸಲಹೆ ನೀಡಿದರು.

* ಸಿಹಿ ತಿನಿಸು ತಯಾರಿಸುವುದು ಗೊತ್ತಿದೆ. ಆದರೆ ಈ ಜ್ಞಾನವನ್ನೇ ಉದ್ಯಮವನ್ನಾಗಿ ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಈ ಮೇಳದಲ್ಲಿ ತಿಳಿಯುವಂತಾಯಿತು

-ವಿ.ಜಿ. ನಾಗವೇಣಿ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.