ADVERTISEMENT

ಬಣ್ಣದಲ್ಲಿ ಮಿಂದೆದ್ದ ಚಿಣ್ಣರು

ಮಹದೇವಶೆಟ್ಟಿ.ಕೆ.ಸಿ
Published 26 ಏಪ್ರಿಲ್ 2019, 20:00 IST
Last Updated 26 ಏಪ್ರಿಲ್ 2019, 20:00 IST
.
.   

ಶಾಲಾದಿನಗಳ ಸಂಕೋಲೆಯನ್ನು ಕಳಚಿಕೊಂಡು ಬಂದ ಚಿಣ್ಣರು ಬೇಸಿಗೆಯ ರಜೆಯ ಮಜವನ್ನು ವಿಭಿನ್ನ ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಜೆಎಸ್‌ಎಸ್‌ನ ಚಿತ್ರಕಲಾ ಶಿಬಿರ, ರಂಗಾಯಣದ ಚಿಣ್ಣರ ಮೇಳ, ನಟನದ ರಜಾಮಜಾ, ಅರಮನೆ ಸ್ಕೂಲ್ ಆಫ್ ಆರ್ಟ್, ಕಲಾತರಂಗ ಸ್ಕೂಲ್ ಆಫ್ ಆರ್ಟ್, ಆರ್ಟ್ಜ್ ಸ್ಟೂಡಿಯೋ ವಿತ್ ಗ್ಯಾಲರಿ. ದೃಶ್ಯ ಧಾಮ, ಧ್ವನ್ಯಲೋಕದ ಚಿಣ್ಣರ ವನ... ಹೀಗೆ ನಗರದ ಹಲವಾರು ಬಡಾವಣೆಗಳಲ್ಲಿ ವಿವಿಧ ಶಾಲೆಗಳು, ಸಂಘ ಸಂಸ್ಥೆಗಳು, ನುರಿತ ಕಲಾವಿದರು ಚಿಕ್ಕಮಕ್ಕಳ ಶಿಬಿರಗಳನ್ನು, ಕಲಾಮೇಳಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುತ್ತಿದ್ದಾರೆ.

ಮಕ್ಕಳಿಗೆ ಎಲ್ಲವನ್ನು ಕಲಿಸಿ ಗೊಂದಲಗೊಳಿಸುವ ಬದಲು ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮಾತ್ರ ಆಳವಾದ ಶಿಕ್ಷಣವನ್ನು ಗಣನೀಯವಾಗಿ ನೀಡುವ ಸದುದ್ದೇಶವನ್ನಿಟ್ಟುಕೊಂಡು ಜೆಎಸ್‌ಎಸ್ ಸಂಸ್ಥೆಯು ನಗರದ ಬಾಲಜಗತ್ ಆವರಣದಲ್ಲಿ ಚಿತ್ರಕಲೆಗಾಗಿಯೇ ಬೇಸಿಗೆ ಚಿತ್ರಕಲಾ ಶಿಬಿರ ಏರ್ಪಡಿಸಿರುವುದು ಅಭಿನಂದನಾರ್ಹ.

ಜೆಎಸ್‌ಎಸ್ ಮಹಾವಿದ್ಯಾಪೀಠದ ಧಾರ್ಮಿಕದತ್ತಿ ವತಿಯಿಂದ ಕಳೆದ ಹದಿಮೂರು ವರ್ಷಗಳಿಂದ ಸುದೀರ್ಘವಾಗಿ ಚಿತ್ರಕಲೆ ಮತ್ತು ಕರಕುಶಲಕಲೆಯನ್ನು ಮಕ್ಕಳಿಗೆ ತಿಳಿಸಿ ಕಲಿಕೆಯ ಗಣಮಟ್ಟವನ್ನು ಹೆಚ್ಚಿಸುತ್ತಿದೆ. ಮಾನಸಿಕ ಮತ್ತು ಬೌದ್ಧಿಕವಾಗಿ ಪರಿವರ್ತನೆಗೊಳ್ಳುವ ಈ ಕಲಾ ಪ್ರಕಾರಗಳು ಮಕ್ಕಳ ಮನಸ್ಸಿನ ಮೇಲೆ ಅತೀವವಾದ ಅಹ್ಲಾದಕರವಾದ ಸಂತೋಷವನ್ನು ಉಂಟು ಮಾಡುವುದರ ಜೊತೆಗೆ ಆರೋಗ್ಯಕರವಾದ ಕ್ರಿಯಾಶೀಲತೆಯನ್ನು ಬೆಳೆಸುತ್ತಿದೆ.

ADVERTISEMENT

ಮಕ್ಕಳ ಚಿತ್ರಕಲೆಯು ಅತಿಯಾದ ಪ್ರಬುದ್ಧತೆಯನ್ನು ಹೊಂದಿರುತ್ತದೆ. ಯಾವುದೇ ಕಲ್ಮಷವಿಲ್ಲದ ಮಕ್ಕಳ ಕಲೆಯಲ್ಲಿ ವಾಸ್ತವದ ಸತ್ಯವನ್ನು ಕಾಣಬಹುದು. ಅವರಲ್ಲಡಗಿರುವ ನೈಜ ಸತ್ಯವನ್ನು ನೇರವಾಗಿ ವ್ಯಕ್ತಗೊಳಿಸಿರುತ್ತಾರೆ. ಗೀಚುವಿಕೆಯ ಹಂತದಿಂದ ತಾರುಣ್ಯದವರೆಗೆ ಮಕ್ಕಳ ಕಲೆಯು ಕಲುಷಿತಗೊಂಡಿರುವುದಿಲ್ಲ. ಆದರೆ ತದನಂತರದ ಮಕ್ಕಳ ಕಲೆಯು ಪೋಷಕರ, ಸಮಾಜದ, ಸ್ನೇಹಿತರ, ಶಿಕ್ಷಕರ ಒತ್ತಡಕ್ಕೆ ಮಣಿದು ವಾಸ್ತವತೆಯು ಮರೆಮಾಚುತ್ತದೆ.

ಆದರೆ ರೇಖೆ ಬಣ್ಣಗಳಿಂದ ಉಲ್ಬಣಗೊಳ್ಳುವ ಕ್ರಿಯಾಶೀಲತೆಯು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿ ಹಲವಾರು ಆಲೋಚನೆಗೆ, ಚಿಂತನೆಗೆ, ಅಧ್ಯಯನಕ್ಕೆ, ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ. ಇದರಿಂದ ಮುಂದೆ ಅವರ ಎಲ್ಲಾ ಬೆಳವಣಿಗೆಗೂ ಚಿತ್ರಕಲೆ ಶಕ್ತಿ ತುಂಬುತ್ತದೆ. ಅದು ಅದ್ಭುತ ಮತ್ತು ಅಮೂಲ್ಯವಾದ ದಾಖಲೆಯಾಗಿರುತ್ತದೆ.

ಮನೋವಿಜ್ಞಾನಿಗಳ ಹೇಳಿಕೆಗಳು ಮತ್ತು ಅಧ್ಯಯನದ ಪ್ರಕಾರ ಎಳೆ ವಯಸ್ಸಿನಲ್ಲಿ ಕಲಾತ್ಮಕತೆಯನ್ನು ಬೆಳೆಸಿಕೊಂಡು ದೃಶ್ಯ ಅಭಿವ್ಯಕ್ತಿಯಿಂದ ತನ್ನ ಮಾನಸಿಕ ಪ್ರಬುದ್ಧತೆಯನ್ನು ಪರಿಪಕ್ವಗೊಳಿಸಿ ಅದ್ವಿತೀಯ ಸಾಧನೆ ಮಾಡುತ್ತಾರೆ ಎನ್ನುತ್ತಾರೆ.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದೂರದೃಷ್ಟಿ ಮತ್ತು ಕಲಾತ್ಮಕ ಚಿಂತನೆಯಿಂದ ಮಕ್ಕಳ ಬೇಸಿಗೆ ಚಿತ್ರಕಲಾ ಶಿಬಿರ ಪ್ರತಿವರ್ಷವು ನಡೆಯುತ್ತಿದೆ. ಮಕ್ಕಳನ್ನು ನಾಲ್ಕು ಗೋಡೆಯ ಒಳಗೆ ಕೂಡಿಹಾಕುವ ಬದಲು ವಿಶಾಲವಾದ ಮರಗಳ ಅಡಿಯಲ್ಲಿ ಚಿತ್ರಕಲೆ ಮತ್ತು ಕರಕುಶಲಕಲೆಯನ್ನು ಕಲಿಯುತ್ತಿರುವುದು ನಿಜಕ್ಕೂ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಹಾಗೂ ಚಿತ್ರಕಲೆಯ ಪೋಷಣೆಗೆ ಪೂರಕ ವಾತಾವರಣವೆನಿಸಿದೆ. ನುರಿತ ಚಿತ್ರಕಲಾವಿದರು ಮತ್ತು ಕಲಾ ಶಿಕ್ಷಕರಾಗಿರುವ ಎನ್.ಬಿ.ಪಲ್ಲೇದ, ಟಿ.ಎಸ್.ಶಲಬಣ್ಣವರ್, ಡಿ.ಎಸ್.ನಾಗರಾಜು, ಬಿ.ಎಂ.ಕೆರೂರ್, ಅಲ್ಲಾಸಾಬ್‌ಗಡಾದ್, ಮೌನೇಶ್‌ ಬಡಿಗೇರ್, ವೆಂಕಟರಾಜು, ಕೆ.ವಿ.ಸ್ವಾಮಿ ಮುಂತಾದವರು ಮಕ್ಕಳಿಗೆ ಕಲೆಯ ಹಲವಾರು ಆಯಾಮಗಳನ್ನು ತಿಳಿಸಿ ಹೇಳಿಕೊಟ್ಟಿದ್ದಾರೆ.

ಮಕ್ಕಳಿಗೆ ಪ್ರತಿನಿತ್ಯ ಸ್ನ್ಯಾಕ್ಸ್, ಡ್ರಾಯಿಂಗ್ ಹಾಳೆ ನೀಡಿ ಶಿಬಿರದಲ್ಲಿ ನಿಸರ್ಗಚಿತ್ರ, ನಕ್ಷಾಚಿತ್ರ, ವಸ್ತುಚಿತ್ರ, ಭಾವಚಿತ್ರ, ವ್ಯಕ್ತಿಚಿತ್ರ, ಸ್ಮರಣಚಿತ್ರ, ಸರಳಗೈಚಿತ್ರ, ಸಂಯೋಜನಾಚಿತ್ರ, ಸ್ಥಿರಚಿತ್ರ, ಅಕ್ಷರಲೇಖನ, ಗ್ಲಾಸ್ ಪೇಂಟಿಂಗ್, ಕ್ಲೇಮಾಡ್ಲಿಂಗ್, ಪೇಪರ್‌ಕಟಿಂಗ್ ಹಾಗೂ ಕಸದಿಂದ ರಸವೆಂಬಂತೆ ನಿರುಪಯುಕ್ತ ವಸ್ತುಗಳಿಂದ ಕರಕುಶಲಕಲೆಯನ್ನು ಸಹ ರಚಿಸಿದ್ದಾರೆ. ಶಿಬಿರದಲ್ಲಿ ಒಂದು ದಿನ ಸೋಮನಾಥಪುರ, ತಲಕಾಡು, ಸುತ್ತೂರು ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡು ಅಲ್ಲಿ ನಿಸರ್ಗ ಚಿತ್ರಕಲೆ ಮತ್ತು ಕುಂಭಕಲೆಯ ಪ್ರಾತ್ಯಕ್ಷಿಕೆಯನ್ನು ನೀಡಿ ಕರೆತಂದಿದ್ದಾರೆ.

ಅಜ್ಜಿ ತಾತನ ಮನೆಗೆ ಶಿವಮೊಗ್ಗ, ಶಿರಸಿ, ಬೆಂಗಳೂರು ಮುಂತಾದ ದೂರದ ಊರಿನಿಂದ ಬಂದ ಮಕ್ಕಳು ಸೇರಿದಂತೆ ಮೈಸೂರಿನ ಹಲವಾರು ಬಡಾವಣೆಯ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮೂರು ಗುಂಪುಗಳನ್ನಾಗಿ ಮಾಡಿ ಅಭಿನಂದನ್, ಕುಸುಮಾಂಜಲಿ, ಪ್ರೀತಂ, ಎಂ.ಎನ್.ಕುಶಾಲ್, ಸಂಜನಾ ಹಾಗೂ ಆಯುಷ್‌ಗೌಡ ಇವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗಿದೆ.

1982ರಲ್ಲಿ ಮೈಸೂರಿನ ಹಿರಿಯ– ಕಿರಿಯ ಕಲಾವಿದರೆಲ್ಲರು ಸೇರಿ ಸ್ಥಾಪಿಸಿದ ಕಲಾವಿದರ ಸಂಘವು ಈ ಮಕ್ಕಳ ಬೇಸಿಗೆ ಚಿತ್ರಕಲಾ ಶಿಬಿರವನ್ನು ಇದೇ ಜಾಗದಲ್ಲಿ ನೆಡೆಸುತ್ತಿತ್ತು. ಅನಿವಾರ್ಯ ಕಾರಣಗಳಿಂದ 5 ವರ್ಷಗಳವರೆಗೆ ನಡೆಸಿ ನಿಲ್ಲಿಸಲಾಯಿತು. ಮುಂದೆ ಆಸಕ್ತರ ಒತ್ತಾಯಕ್ಕೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಜೆಎಸ್‌ಎಸ್ ಸಂಸ್ಥೆಯು ನಡೆಸಿಕೊಂಡು ಬರುತ್ತಿದೆ ಎನ್ನುತ್ತಾರೆ ಸಂಚಾಲಕ ಎಸ್.ಎಂ.ಜಂಬುಕೇಶ್ವರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.