
ಕೆ.ಜಿ.ರಾಘವನ್
ಭಾರತೀಯ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಜನ್ಮತಳೆದ ಸಂಸ್ಥೆ ಭಾರತೀಯ ವಿದ್ಯಾ ಭವನ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧುನಿಕ ಜಗತ್ತಿಗೆ ಪ್ರಸಾರ ಮಾಡುವ ಜತೆಗೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದೆ. ವಿದೇಶದಲ್ಲಿಯೂ ಶಾಖೆಗಳನ್ನು ಹೊಂದಿದೆ. 1966ರಲ್ಲಿ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿ ಪ್ರಾರಂಭವಾದ ಬೆಂಗಳೂರು ಕೇಂದ್ರಕ್ಕೆ ಈಗ ವಜ್ರ ಮಹೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ ಕೆ.ಜಿ. ರಾಘವನ್ ಅವರ ಜತೆಗೆ ನಡೆಸಿದ ಸಂದರ್ಶನ ಇಲ್ಲಿದೆ.
ಭಾರತೀಯ ವಿದ್ಯಾ ಭವನ ಹುಟ್ಟಿದ್ದು ಹೇಗೆ?
ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣವನ್ನು ಉತ್ತೇಜಿಸಲು 1938ರಲ್ಲಿ ಕೆ.ಎಂ. ಮುನ್ಷಿ ಅವರು ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಖ್ಯಾತ ವಕೀಲರಾಗಿದ್ದ ಅವರು, ಕೇಂದ್ರ ಸಚಿವರಾಗಿದ್ದರು. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಸಾಹಿತಿ ಮತ್ತು ಶಿಕ್ಷಣ ತಜ್ಞರೂ ಆಗಿದ್ದರು. ದೂರದೃಷ್ಟಿಯಿಂದ ಸ್ಥಾಪಿಸಿದ್ದ ಈ ಸಂಸ್ಥೆಗೆ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರು, ಎಸ್. ರಾಧಾಕೃಷ್ಣನ್ ಸೇರಿ ಅನೇಕ ರಾಷ್ಟ್ರೀಯ ನಾಯಕರು ಮತ್ತು ವಿದ್ವಾಂಸರ ಬೆಂಬಲವಿತ್ತು.
ಭಾರತೀಯ ವಿದ್ಯಾ ಭವನವು ಹೇಗೆ ಭಿನ್ನ?
ಸಂಸ್ಥೆಯು ದೇಶ–ವಿದೇಶಗಳು ಸೇರಿ 350 ಶಾಖೆಗಳನ್ನು ಹೊಂದಿದೆ. 400 ಶಾಲೆಗಳನ್ನು ನಡೆಸುತ್ತಿದೆ. ಆಲದಮರದ ರೀತಿ ಬೆಳೆದಿದ್ದು, ಇಲ್ಲಿ ಜಾತಿ, ಮತ, ಪಂಥ, ಧರ್ಮ, ಭಾಷೆಯ ಯಾವುದೇ ಭೇದಭಾವವಿಲ್ಲ. ‘ಆನೋ ಭದ್ರಾ ಕೃತವೋ ಯಾಂತು ವಿಶ್ವತಃ’, ‘ವಸುಧೈವ ಕುಟುಂಬಕಂ’ ಮತ್ತು ‘ಅಮೃತಂ ತು ವಿದ್ಯಾ’ ಎಂಬ ಸಂಸ್ಕೃತದ ನುಡಿಗಟ್ಟುಗಳ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಗೌರವಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಸಂಸ್ಥೆ ನೀಡುವ ಪ್ರಮಾಣಪತ್ರಗಳು ವಿಶೇಷ ಮಹತ್ವ ಹೊಂದಿವೆ. ಅನೇಕ ಕಲಾವಿದರು ನಾವು ನೀಡಿದ ಪ್ರಮಾಣಪತ್ರವನ್ನೇ ದಾಖಲೆಯಾಗಿ ನೀಡಿ, ಸರ್ಕಾರದಿಂದ ಕಾರ್ಯಕ್ರಮಗಳು ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿರುವುದು ಸಂತೋಷ ತಂದಿದೆ.
ಬೆಂಗಳೂರು ಕೇಂದ್ರವು ಕೈಗೊಂಡ ಪ್ರಮುಖ ಕಾರ್ಯಕ್ರಮಗಳು ಏನು?
ಶ್ರೀರಾಂಪುರದಲ್ಲಿ 15 ವರ್ಷಗಳಿಂದ ಭವನ್ ಬಿಬಿಎಂಇ ಶಾಲೆಯನ್ನು ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ನಡೆಸುತ್ತಿದ್ದೇವೆ. ಈ ಹಿಂದೆ ಬಿಬಿಎಂಪಿ ಆ ಶಾಲೆಯನ್ನು ನಮಗೆ ವಹಿಸಿತ್ತು. ಅಲ್ಲಿ 800 ಮಕ್ಕಳಿದ್ದಾರೆ. ವ್ಯಾಸಂಗ ಮಾಡುತ್ತಿರುವವರಲ್ಲಿ ಬಹುತೇಕರು ಕೊಳೆಗೇರಿ ಮಕ್ಕಳಾಗಿದ್ದಾರೆ. ಚಾಮರಾಜಪೇಟೆಯಲ್ಲಿ ಭವನ್ ಬೆಂಗಳೂರು ಪ್ರೆಸ್ ಎಂಬ ಇನ್ನೊಂದು ಶಾಲೆ ನಡೆಸುತ್ತಿದ್ದೇವೆ. ಶಾಲೆ ಪ್ರಾರಂಭವಾದಾಗಿನಿಂದ ಆ ಪ್ರದೇಶದಲ್ಲಿ ಅಪರಾಧ ಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು ಪೋಲೀಸ್ ಮೂಲಗಳು ತಿಳಿಸಿವೆ. ಅಲ್ಲಿ ಪಠ್ಯಕ್ರಮದ ಜತೆಗೆ ಭಾರತೀಯ ಸಂಸ್ಕೃತಿ, ಕಲೆ, ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ನೀಡುತ್ತಿದ್ದೇವೆ. ಮುಂದಿನ ವರ್ಷ ಪೂರ್ತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲು ಕಾರ್ಯಯೋಜನೆ ರೂಪಿಸಲಾಗಿದೆ.
ವಿದ್ಯಾ ಭವನದ ಯೋಜನೆ, ಕಾರ್ಯಕ್ರಮಗಳಿಗೆ ಅನುದಾನ ಹಾಗೂ ಬೆಂಬಲ ಹೇಗಿದೆ?
ಜನರು, ಕಾರ್ಪೊರೇಟ್ ಕಂಪನಿಗಳ ಬೆಂಬಲದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಇನ್ಫೊಸಿಸ್ ಜತೆಗೆ ಸೇರಿ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದೇವೆ. ರಾಜ್ಯದ ವಿವಿಧೆಡೆ ವೀಕ್ಷಕರು ಇರುವ ಕಡೆ ಹೋಗಿ, ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಸರಣಿಯಡಿ ಸಾವಿರಕ್ಕೂ ಅಧಿಕ ಕಾರ್ಯಕ್ರಮ ನಡೆಸಿದ್ದೇವೆ. ಇನ್ಫೊಸಿಸ್ ಸಂಸ್ಥೆಯು ನಮ್ಮ ಕೇಂದ್ರಕ್ಕೆ ಸಾಕಷ್ಟು ಬೆಂಬಲ ನೀಡಿದೆ. ಅವರ ಸಹಯೋಗದಲ್ಲಿ ವಿವಿಧ ರಾಜ್ಯಗಳಲ್ಲಿಯೂ ಕಾರ್ಯಕ್ರಮ ಮಾಡಿದ್ದೇವೆ. ಈ ವಿಶೇಷ ಕಾರ್ಯಕ್ರಮಗಳ ಜತೆಗೆ ವಾರ್ಷಿಕ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಹಲವರು ನಮ್ಮಲ್ಲಿ ದತ್ತಿನಿಧಿ ಇರಿಸಿರುವುದ
ರಿಂದಲೂ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.
ಬೆಂಗಳೂರಿನಲ್ಲಿರುವ ವಿದ್ಯಾ ಭವನದ ಶಾಲೆಯ ವೈಶಿಷ್ಟ್ಯ...
ಶ್ರೀರಾಂಪುರದಲ್ಲಿರುವ ವಿದ್ಯಾ ಭವನದ ಶಾಲೆಗೆ ಬರುವ ಮಕ್ಕಳಲ್ಲಿ ಹೆಚ್ಚಿನವರು ಕೊಳೆಗೇರಿಯವರು. ಬಹುತೇಕ ಮಕ್ಕಳ ಕುಟುಂಬದಲ್ಲಿ ಅವರೇ ಶಾಲೆ ಮೆಟ್ಟಿಲು ಏರಿದ ಮೊದಲಿಗರು. ಬೆಂಗಳೂರಿನಲ್ಲಿರುವ ಎರಡೂ ಶಾಲೆಗಳು ಆಂಗ್ಲ ಮಾಧ್ಯಮ ಸಿಬಿಎಸ್‌ಸಿ ಪಠ್ಯಕ್ರಮ ಹೊಂದಿವೆ. ಸ್ಮಾರ್ಟ್ ಮತ್ತು ಎಲೆಕ್ಟ್ರಾನಿಕ್ ಬೋರ್ಡ್‌ಗಳು, ಸುಸಜ್ಜಿತ ಸಭಾಂಗಣ, ಕೊಠಡಿ, ಪೀಠೋಪಕರಣ, ಕಂಪ್ಯೂಟರ್ ಶಿಕ್ಷಣ, ಪ್ರಯೋಗಾಲಯ, ಗ್ರಂಥಾಲಯ ಹೊಂದಿವೆ. ಶೇಕಡ 100 ರಷ್ಟು ಫಲಿತಾಂಶ ಬರುತ್ತಿದೆ.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವ್ಯಾಪಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಕಲೆ, ಸಾಹಿತ್ಯ, ಸಂಗೀತ ಅಸ್ಮಿತೆಯನ್ನು ಹೇಗೆ ಉಳಿಸಿಕೊಳ್ಳಬಹುದು?
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಂಗೀತ–ನೃತ್ಯದಂತಹ ಕಾರ್ಯಕ್ರಮಗಳನ್ನು ನೇರವಾಗಿ ಕಣ್ತುಂಬಿಕೊಳ್ಳುವಾಗ ಆಗುವ ಅನುಭವವೇ ಬೇರೆ. ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ನೆರವಿನಿಂದ ಸಂಗೀತ ಕೇಳುವುದಕ್ಕೂ, ಕಲಾವಿದರ ಎದುರು ಕುಳಿತು ಕೇಳುವುದಕ್ಕೂ ವ್ಯತ್ಯಾಸವಿದೆ. ಆದ್ದರಿಂದ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಂಗೀತ–ನೃತ್ಯದಂತಹ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆಯಾಗದು.
ಯುವಜನರು ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸವಾಲಿದೆ ಅಲ್ಲವೆ?
ಹೌದು, ಭಾರತೀಯ ಸಂಸ್ಕೃತಿಗೆ ಅಷ್ಟಾಗಿ ಪ್ರಚಾರ ಸಿಕ್ಕಿಲ್ಲ. ತಂತ್ರಜ್ಞಾನದ ಪ್ರಯೋಜನವನ್ನೂ ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ. ಈಗ ಆ ಕೆಲಸ ಆಗುತ್ತಿದೆ. ಯೂಟ್ಯೂಬ್‌ನಲ್ಲಿ ಇಲ್ಲಿನ ಪ್ರಸಿದ್ಧ ಕಲಾವಿದರ ಪ್ರದರ್ಶನಗಳು ಕಾಣಸಿಗುತ್ತವೆ. ನಮ್ಮ ಸಂಸ್ಕೃತಿಯ ಬಗ್ಗೆ ಪ್ರಚಾರ ಮಾಡಿದರೆ, ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆ ಕಡಿಮೆಯಾಗಲಿದೆ.
ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರದ ಮುಂದಿನ ಯೋಜನೆಗಳು...
ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕೇಂದ್ರದಲ್ಲಿ ಕಾರ್ಯಚಟುವಟಿಕೆ ವಿಸ್ತರಿಸಲು ಸ್ಥಳಾವಕಾಶದ ಕೊರತೆಯಿದೆ. ಆದ್ದರಿಂದ ಬೇರೆಡೆ ಸ್ಥಳ ಗುರುತಿಸಿ, ಅಲ್ಲಿ ವೈವಿಧ್ಯಮಯ ಕಾರ್ಯಕ್ರಮ ಮಾಡಬೇಕೆಂಬ ಕನಸಿದೆ. ದೊಡ್ಡ ಗ್ರಂಥಾಲಯ ನಿರ್ಮಾಣ, ಸಂಶೋಧನೆಗಳಿಗೆ ಅವಕಾಶ, ವೃದ್ಧಾಶ್ರಮ ನಿರ್ಮಾಣ, ಪ್ರಕೃತಿ ಚಿಕಿತ್ಸೆ ಸೇರಿ ಹಲವು ಸಮಾಜಮುಖಿ ಕಾರ್ಯಯೋಜನೆಯನ್ನು ಅನುಷ್ಠಾನ ಮಾಡುವ ಗುರಿಯಿದೆ. ಈ ಸಂಬಂಧ ‘ವಿಷನ್ 2030’ ರೂಪಿಸಲಾಗಿದೆ.
60ನೇ ವರ್ಷ ಸಂಭ್ರಮದ ಪ್ರಯುಕ್ತ ‘ಸಂತವಾಣಿ’ ಕಾರ್ಯಕ್ರಮ ರೂಪಿಸಿದ್ದೀರಿ. ಇದರ ವಿಶೇಷತೆ ಏನು?
ಈ ಸಂಭ್ರಮದ ಮೊದಲ ಕಾರ್ಯಕ್ರಮ ‘ಸಂತವಾಣಿ’. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ. ಆ ವಿವಿಧತೆ ಕಾಯ್ದುಕೊಳ್ಳಬೇಕು. ದೇಶದಲ್ಲಿ ಬಂದು ಹೋದ ಮಹಾನ್ ಸಂತರು ತಮ್ಮ ಗುರಿ ಸಾಧಿಸಲು ಬೇರೆ ಬೇರೆ ಮಾರ್ಗ ಅನುಸರಿಸಿದರೂ ಅವರ ಆಶಯ ಒಂದೇ ಆಗಿತ್ತು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ಸೇರಿ ಎಲ್ಲ ಧರ್ಮದವ ರನ್ನು ಒಳಗೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ.
ಭಾರತದ ಸಂತರ ಸಂದೇಶ ಧರ್ಮಗಳ ಸಾರ ಪರಂಪರೆಯನ್ನು ಪರಿಚಯಿಸಲೆಂದೇ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನ.10ರಿಂದ ನ.21ರವರೆಗೆ ‘ಸಂತವಾಣಿ’ ಉತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಚಲನಚಿತ್ರ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಾಟಕ ತಜ್ಞರಿಂದ ವಿಚಾರ ಮಂಡನೆ ಪುಸ್ತಕ ಪ್ರದರ್ಶನ ಆಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.