ಚಿತ್ರಗಳು: ಎಂ.ಎಸ್.ಮಂಜುನಾಥ್
ಮಲೆನಾಡು ಭಾಗದಲ್ಲಿ ಹಸೆ ಚಿತ್ತಾರಕ್ಕೆ ಹೆಸರುವಾಸಿ ದೀವರ ಸಮುದಾಯ. ಇವರ ಜೀವನ ಶೈಲಿಯನ್ನು ಪ್ರತಿಬಿಂಬಿಸುವ, ಸಂಸ್ಕೃತಿಯನ್ನು ಪ್ರತಿನಿಧಿಸುವ ‘ಲಾಂಗ್ವೇಜ್ ಆಫ್ ಲೈನ್ಸ್’ ಕಲಾ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
ಚಾವಣಿಗೆ ತಟ್ಟಿ ಚಾಚಾ ಚಾವಣಿಗೆ
ಚಿತ್ತಾರ ಇನ್ಯಾರೆ ಬರೆಯೋರು
ಚಿತ್ತಾರ ಇನ್ಯಾರೆ ಬರೆಯೋರು
ಚಿತ್ತಾರ ಬರಿಯಂದ್ರೆ, ಮಂದಾರ ಬರುದಾಳೆ
ಮಂದಾರದ ಮ್ಯಾಲೆ ಮಾದನ ಕೈ..
ಚಿತ್ತಾರದ ಕಡೆಗೆ ನಡುದಾಳೆ ತಂಗ್ಯಮ್ಯ...
ಮಲೆನಾಡಿನ ನೆಲಮೂಲದ ಸಂಸ್ಕೃತಿಯಾದ ‘ದೀವರ’ರ ಪದಗಳನ್ನು ಪದ್ಮಾವತಿ ಮತ್ತು ಸುಧಾ ಅವರು ಹಾಡುತ್ತಿದ್ದರೆ, ಅಲ್ಲಿದ್ದವರು ತಲ್ಲೀನರಾಗಿ ಆಲಿಸುತ್ತಿದ್ದರು. ಇಂಥ ಪದಗಳನ್ನು ಕೇಳುವ ಅಪರೂಪದ ಅವಕಾಶ ಸಿಕ್ಕಿದ್ದು ದೊಮ್ಮಲೂರಿನಲ್ಲಿರುವ ‘ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (ಬಿಐಸಿ) ನಲ್ಲಿ ‘ಸೆಂಟರ್ ಫಾರ್ ರಿವೈವಲ್ ಆಫ್ ಇಂಡೀಜಿನಿಯಸ್ ಆರ್ಟ್’ ಆಯೋಜಿಸಿದ್ದ ‘ಲಾಂಗ್ವೇಜ್ ಆಫ್ ಲೈನ್ಸ್’ ಕಲಾ ಪ್ರದರ್ಶನದಲ್ಲಿ.
ಈ ಕಲಾ ಪ್ರದರ್ಶನದಲ್ಲಿ ದೀವರ ಸಮುದಾಯದ ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಸ್ಮಿತಾ ತುಮಲೂರು ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದ ‘ಚಿತ್ರ’ಗಳು ಹಾಗೂ ದೀವರ ಸಂಸ್ಕೃತಿಯ ಭಾಗದಂತಿರುವ ಹಲವು ಕಲಾವಿದೆಯರು ರಚಿಸಿರುವ ‘ಹಸೆ ಚಿತ್ತಾರ’ಗಳಿದ್ದವು. ಇವುಗಳ ಜೊತೆಗೆ ಭತ್ತದ ಮಂಟಪ ಹಾಗೂ ಬೂ ಮಣ್ಣಿ ಬುಟ್ಟಿ ಚಿತ್ತಾರ ಕಲೆಯು ಮಲೆನಾಡಿನ ಸೊಬಗನ್ನು ಮರು ಸೃಷ್ಟಿಸಿದ್ದವು. ‘ಚಿತ್ತಾರ’ ಕಲೆ ಕುರಿತು ವಿಚಾರ ಸಂಕಿರಣ ಹಾಗೂ ಆಸಕ್ತರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
ಮಲೆನಾಡಿನ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಕಡೆಗಳಲ್ಲಿ ವಾಸವಿರುವ ‘ದೀವರ’ ಸಮುದಾಯವು ತಮ್ಮ ವಿಭಿನ್ನ ಆಚರಣೆ, ಕಲೆ ಹಾಗೂ ಸಂಸ್ಕೃತಿಯ ಜೊತೆಗೆ ಅವರ ‘ಹಸೆ ಚಿತ್ತಾರ’ ಕಲೆಯು ಕೂಡ ಅಷ್ಟೇ ವಿಭಿನ್ನ ಮತ್ತು ವಿಶೇಷ.
ನೈಸರ್ಗಿಕವಾಗಿ ಸಿಗುವ ಹಣ್ಣು, ಕೆಂಪು ಮಣ್ಣು, ಅಕ್ಕಿಯನ್ನು ಬಳಸಿಕೊಂಡು ಕೆಂಪು, ಕಪ್ಪು, ಹಳದಿ, ಬಿಳಿ ಬಣ್ಣಗಳನ್ನು ತಯಾರಿಸುತ್ತಾರೆ. ಪುಂಡಿ ಗಿಡದ ನಾರನ್ನು ಕುಂಚದ ರೀತಿಯಲ್ಲಿ ಉಪಯೋಗಿಸಿಕೊಂಡು ದೀವರ ಸಮುದಾಯದ ಮಹಿಳೆಯರು ಆ ಬಣ್ಣಗಳ ಮೂಲಕವೇ ರೇಖಾಚಿತ್ರಗಳಲ್ಲಿ ತಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುತ್ತಾರೆ.
ಕಲಾಪ್ರದರ್ಶನದಲ್ಲಿ ಹಸೆ ಚಿತ್ತಾರದ ಕಲಾಕೃತಿಗಳು
‘ಹಸೆ ಚಿತ್ತಾರ’ ಎನ್ನುವುದು ದೀವರ ಸಮುದಾಯಕ್ಕೆ ಸೇರಿದ ವಿಶೇಷ ಚಿತ್ರಕಲೆ. ಕೇವಲ ನೈಸರ್ಗಿಕ ಬಣ್ಣವನ್ನು ಉಪಯೋಗಿಕೊಂಡು ರೇಖಾಚಿತ್ರಗಳಂತಹ ರಚನೆಗಳ ಮೂಲಕವೇ ಒಂದು ಸಮುದಾಯದ ಜೀವನಶೈಲಿ, ಆಚರಣೆ, ಸಂಸ್ಕೃತಿಯನ್ನು ಅನಾವರಣ ಮಾಡುವ ಶಕ್ತಿ ‘ಹಸೆ ಚಿತ್ತಾರ’ಕ್ಕಿದೆ.
‘ನಾವು ಪ್ರಕೃತಿಯ ಮಕ್ಕಳು, ಪರಿಸರದ ನಡುವೇ ಹುಟ್ಟಿ ಬೆಳೆದವರು. ನಮ್ಮ ಕಲೆ, ಆಚಾರ, ವಿಚಾರ ಎಲ್ಲವೂ ಪ್ರಕೃತಿಯೊಂದಿಗೆ ಸೇರಿಕೊಂಡಿವೆ. ಅವುಗಳನ್ನೇ ಬಳಸಿಕೊಂಡು ನಾವು ‘ಹಸೆ ಚಿತ್ತಾರ’ ಬಿಡಿಸುತ್ತೇವೆ’ ಎನ್ನುತ್ತಾರೆ ದೀವರ ಸಮುದಾಯದ ಸುಧಾ.
‘ಇದು ನಮ್ಮ ತಾಯಿ ಕಲಿಸಿದ ಕಲೆ. ‘ಚಿತ್ತಾರ’ ಕಲೆಯನ್ನು ನಮ್ಮ ಸಮುದಾಯದಲ್ಲಿ ಹಬ್ಬಗಳು, ಮದುವೆ ಇತ್ಯಾದಿ ಯಾವುದೇ ಸಂಭ್ರಮದ ಶುಭ ಕಾರ್ಯಗಳಿದ್ದರೂ ಅಲ್ಲಿ ‘ಚಿತ್ತಾರ’ ಇರಲೇಬೇಕು’ ಎನ್ನುತ್ತಾರೆ ಪದ್ಮಾವತಿ.
ಇಂತಹ ಅಪರೂಪದ ‘ಚಿತ್ತಾರ’ ಕಲೆಯನ್ನು ಬೆಂಗಳೂರಿಗೆ ತಂದವರು ಸೆಂಟರ್ ಫಾರ್ ರಿವೈವಲ್ ಆಫ್ ಇಂಡೀಜಿನಿಯಸ್ ಆರ್ಟ್‌ನ ಸ್ಥಾಪಕಿ ಗೀತಾ ಭಟ್. ಸುಮಾರು 20 ವರ್ಷಗಳಿಂದಲೂ ‘ದೀವರ’ ಸಮುದಾಯದ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣವೇ ‘ಚಿತ್ತಾರ’.
‘ಚಿತ್ತಾರ ಕಲೆಗೆ ಮನಸೋತ ನಾನು, ಎರಡು ದಶಕಗಳಿಂದಲೂ ಸೆಂಟರ್ ಫಾರ್ ರಿವೈವಲ್ ಆಫ್ ಇಂಡೀಜಿನಿಯಸ್ ಆರ್ಟ್ ಮೂಲಕ ದೀವರ ಸಮುದಾಯದ ಆಚಾರ-ವಿಚಾರ, ಸಂಸ್ಕೃತಿ, ಕಲೆಗಳ ಕುರಿತು ಅಧ್ಯಯನ ಮಾಡುತ್ತಿದ್ದೇನೆ. ಇದೊಂದು ಅದ್ಭುತ ಅನುಭವ. ಈ ರೀತಿಯ ಸಂಸ್ಕೃತಿಯೊಂದು ನಮ್ಮ ರಾಜ್ಯದಲ್ಲಿದೆ ಎನ್ನುವುದೇ ಬಹಳಷ್ಟು ಜನರಿಗೆ ತಿಳಿದಿಲ್ಲ. ಇಂತಹ ಸಂಸ್ಕೃತಿ, ಕಲೆಯನ್ನು ಹೊರ ಜಗತ್ತಿಗೆ ತಿಳಿಸುವುದೇ ನಮ್ಮ ಉದ್ದೇಶ’ ಎನ್ನುತ್ತಾರೆ ಗೀತಾ ಭಟ್.
ಕಲಾ ಪ್ರದರ್ಶನ ನೋಡಲು ಬಂದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಪೂರ್ಣಚಂದ್ರ, ‘ಇದು ನಮ್ಮ ಮಣ್ಣಿನ ಕಲೆ, ಮಲೆನಾಡಿನ ಸೊಬಗಿನ ಕಲೆ ಚಿತ್ತಾರ. ಹಸೆ ಚಿತ್ತಾರವು ತಲತಲಾಂತರದಿಂದ ಬಂದ ಮಲೆನಾಡಿನ ಕಲೆ. ನನ್ನ ಊರಿನಲ್ಲಿ ಕಾಣಸಿಗುವಂತಹ ಹಸೆ ಚಿತ್ತಾರವನ್ನು ಬೆಂಗಳೂರಿನಲ್ಲಿ ನೋಡಿ ತುಂಬಾ ಖುಷಿಯಾಯಿತು’ ಎಂದು ಹೆಮ್ಮೆಯಿಂದ ಹೇಳಿದರು.
ಕಲೆಯೊಂದು ಸಂಸ್ಕೃತಿ, ಸಮುದಾಯದ ಪ್ರತಿರೂಪದಂತೆ ‘ದೀವರ’ ಸಮುದಾಯದ ಜೀವನಶೈಲಿಯಲ್ಲೇ ‘ಚಿತ್ತಾರ’ ಉಳಿದುಕೊಂಡು ಬಂದಿದೆ. ಅಲ್ಲಿನ ಮಹಿಳೆಯರ ಸೌಂದರ್ಯ ಪ್ರಜ್ಞೆ ಹಾಗೂ ಜೀವನಾಸಕ್ತಿಯ ಪ್ರತೀಕವಾಗಿರುವ ‘ದೀವರ’ ಕಲೆಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಂಡು ಹೋಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.