
ರಂಗಸ್ಥಳ ಪ್ರವೇಶಿಸಲು ಸಜ್ಜಾಗಿರುವ ಯಕ್ಷಗಾನ ವೇಷಧಾರಿಗಳು, ಶಾಲೆಗೆ ಹೊರಟು ನಿಂತ ಮಕ್ಕಳು, ಕುಂಭಮೇಳದಲ್ಲಿ ಸಿಕ್ಕ ನಾಗಾ ಸಾಧುಗಳು..
ಹೀಗೆ ಇವರೆಲ್ಲ ಮಣ್ಣಿನಲ್ಲಿ ರೂಪುಗೊಂಡು ನಮ್ಮ ಮುಂದೆ ಕಲಾಕೃತಿಗಳಾಗಿ ಹೊರಟರೆ ಹೇಗನಿಸುತ್ತದೆ? ಉಡುಪಿಯ ಪಲಿಮಾರಿನ ಅಳವೆಯಲ್ಲಿರುವ ‘ಚಿತ್ರಾಲಯ’ ಕಲಾ ಗ್ಯಾಲರಿಯ ಒಳಹೊಕ್ಕರೆ ಬಹುತೇಕ ಇಂಥ ಕಲಾಕೃತಿಗಳು ಜೀವ ತುಂಬಿಕೊಂಡು ನಲಿದಾಡಿದಂತೆ ಭಾಸವಾಗುತ್ತವೆ.
ಕಣ್ಮನ ಸೆಳೆಯುವ ಜೇಡಿಮಣ್ಣಿನ ಶಿಲ್ಪಗಳಿಗೆ ಜೀವ ತುಂಬಿದವರು ಉಡುಪಿಯ ಪಲಿಮಾರು ಗ್ರಾಮದ ವೆಂಕಟರಮಣ ಕಾಮತ್.
ಇವರ ‘ಚಿತ್ರಾಲಯ’ ಕಲಾ ಗ್ಯಾಲರಿಗೆ ಕಾಲಿಟ್ಟರೆ ಇಂಥ ನೂರಾರು ಮಣ್ಣಿನ ಕಲಾಕೃತಿಗಳು ಸಂಭಾಷಿಸುತ್ತವೆ. ಅವುಗಳ ರಚನೆ ಒಂದಕ್ಕಿಂತ ಒಂದು ಭಿನ್ನ ಹಾಗೂ ಅತ್ಯಾಕರ್ಷಕ.
ಕಾಮತರು ಹದಿನೈದು ವರ್ಷಗಳಿಂದ ಈ ರೀತಿ ಶಿಲ್ಪಕೃತಿಗಳನ್ನು ರೂಪಿಸುತ್ತಿದ್ದಾರೆ. ಅಂದಹಾಗೆ ಇವರು ಯಾವುದೇ ಬಗೆಯ ಕೋರ್ಸ್ ಮಾಡಿ, ಯಾರಿಂದಲೋ ಕಲಿತು ಈ ಕಲಾಕೃತಿಗಳನ್ನು ರೂಪಿಸುತ್ತಿಲ್ಲ. ಹವ್ಯಾಸವಾಗಿ ಶುರು ಮಾಡಿದ್ದು ಈಗ ಚಂದದ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.
‘ಬಾಲ್ಯದಿಂದಲೇ ಮಣ್ಣಿನ ಜೊತೆ ನಂಟಿತ್ತು. ಚಿಕ್ಕವನಿದ್ದಾಗ ಮನಸ್ಸಿಗೆ ಬಂದೆ ಜೇಡಿಮಣ್ಣಿನಲ್ಲಿ ಶಿಲ್ಪಗಳನ್ನು ಮಾಡಲು ಪ್ರಾರಂಭಿಸಿದೆ. ನಂತರದ ದಿನಗಳಲ್ಲಿ ಬೇರೆ ಬೇರೆ ರೀತಿಯ ಕಲಾಕೃತಿಗಳನ್ನು ಮಾಡಲು ಆರಂಭಿಸಿದೆ. ವಿಭಿನ್ನ ಶೈಲಿಯ ಕಲಾಕೃತಿಗಳಿಗೆ ಎಲ್ಲರಿಂದಲೂ ಮೆಚ್ಚುಗೆ ಲಭಿಸಿತು. ನನ್ನ ಶಿಲ್ಪಕಲಾಕೃತಿಗಳನ್ನು ನೋಡಿದ ಉಡುಪಿಯ ಬಲರಾಮ್ ಭಟ್ ಮತ್ತು ಗಂಜೀಫಾ ರಘುಪತಿ ಭಟ್ಟರು ಇದೇ ರೀತಿಯ ಶಿಲ್ಪಗಳನ್ನು ರಚಿಸುವಂತೆ ಉತ್ತೇಜನ ನೀಡಿದರು. ಹವ್ಯಾಸ ಇವತ್ತು ಈ ಮಟ್ಟಕ್ಕೆ ಬಂದು ನಿಂತಿದೆ’ ಎಂದು ತಮ್ಮ ಕಲಾಪಯಣವನ್ನು ಮೆಲುಕು ಹಾಕುತ್ತಾರೆ ವೆಂಕಟರಮಣ ಕಾಮತ್.
ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಮನೆಗೆ ಬೇಕಾದ ಹೆಂಚುಗಳನ್ನು ತಯಾರಿಸಲು ಮತ್ತು ಕುಂಬಾರರು ಆವೆಮಣ್ಣು ಅಥವಾ ಜೇಡಿಮಣ್ಣಿನಿಂದ ವಿವಿಧ ಬಗೆಯ ಮಡಕೆಗಳನ್ನು ತಯಾರಿಸುವುದು ವಾಡಿಕೆ. ಅಂಟಿನ ಗುಣ ಹೊಂದಿರುವ ಈ ಮಣ್ಣೇ ಕಾಮತರ ಕಲಾಕೃತಿಗಳಿಗೆ ಮುಖ್ಯ. ಇವರು ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸಿ ಮಾರಾಟ ಮಾಡುತ್ತಾರೆ. ಜತೆಗೆ ಅಲ್ಲಲ್ಲಿ ಕಲಾಕೃತಿ ಪ್ರದರ್ಶನಗಳನ್ನು ಮಾಡುತ್ತಾರೆ. ಈಗ ಆಸಕ್ತರಿಗೆ ತಮ್ಮ ಕಲಾ ಗ್ಯಾಲರಿಯಲ್ಲಿ ತರಬೇತಿಯನ್ನೂ ಪ್ರಾರಂಭಿಸಿದ್ದಾರೆ.
‘ಈ ಕಲಾಕೃತಿಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಆವೆಮಣ್ಣನ್ನು ತಂದು, ಅದನ್ನು ಹದವಾಗಿ ನೀರಿನಲ್ಲಿ ಮಿಶ್ರಣ ಮಾಡಿ ಕಲ್ಪನೆಗೆ ತಕ್ಕಂತೆ ಶಿಲ್ಪಗಳನ್ನು ರಚಿಸುತ್ತೇನೆ. ನಂತರ ಆ ಮಣ್ಣಿನ ಶಿಲ್ಪಗಳನ್ನು ಹತ್ತಿರವಿರುವ ಹಂಚಿನ ಕಾರ್ಖಾನೆಗೆ ತೆಗೆದುಕೊಂಡು ಹೋಗಿ ಅಗತ್ಯಕ್ಕೆ ತಕ್ಕಂತೆ ಅದನ್ನು ಬೆಂಕಿಯಲ್ಲಿ ಸುಡಬೇಕು. ಸ್ವಲ್ಪ ಸಮಯದ ನಂತರ ಮಣ್ಣಿನ ಶಿಲ್ಪಗಳಿಗೆ ವಿಭಿನ್ನ ಬಣ್ಣಗಳ ಲೇಪನವನ್ನು ಮಾಡಲಾಗುತ್ತದೆ. ಒಂದೊಂದು ಕಲಾಕೃತಿಗಳನ್ನು ಮಾಡಲು ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳು ಬೇಕಾಗುತ್ತವೆ’ ಎನ್ನುತ್ತಾರೆ ಕಾಮತ್.
ಇವರು ರಚಿಸಿರುವ ಕಲಾಕೃತಿಗಳು ಚಿತ್ರಾಲಯ ಕಲಾ ಗ್ಯಾಲರಿಯಲ್ಲಿ ಬಹಳ ಅಚ್ಚುಕಟ್ಟಾಗಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ದೇಶ ವಿದೇಶಗಳಿಂದ ಕಲಾವಿದರು ಮತ್ತು ಕಲಾ ವಿದ್ಯಾರ್ಥಿಗಳು, ಕಲಾ ವಿಮರ್ಶಕರು ಬಂದು ಕಲಾಕೃತಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಶಿಲ್ಪ ಕಲಾಕೃತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿದೆ.