ADVERTISEMENT

ಗಂಧರ್ವ ತಾರೆಯರ ಅನಾವರಣ

ರೂಪಾ .ಕೆ.ಎಂ.
Published 28 ಸೆಪ್ಟೆಂಬರ್ 2025, 1:13 IST
Last Updated 28 ಸೆಪ್ಟೆಂಬರ್ 2025, 1:13 IST
<div class="paragraphs"><p>ಕಲಾಕುಂಚದಲ್ಲಿ ಗಂಧರ್ವಲೋಕದ ಅನನ್ಯ ತಾರೆಯರು</p></div>

ಕಲಾಕುಂಚದಲ್ಲಿ ಗಂಧರ್ವಲೋಕದ ಅನನ್ಯ ತಾರೆಯರು

   

ದೇವರು ಮತ್ತು ಮನುಷ್ಯರ ನಡುವಿನ ಭಾವ ಸೇತುಗಳು ಏನು ಎಂದರೆ ಪುರಾಣ ಕಾಲದಿಂದಲೂ ಚಿತ್ರಣಗೊಂಡಿರುವ ದೇವಗಣಗಳು, ಗಂಧರ್ವರು, ಕಿಂಪುರುಷರು ಮತ್ತು ಯಕ್ಷರು.

ನಾನಾ ಕಲಾ ಮಾಧ್ಯಮಗಳಲ್ಲಿ ರೂಪುಗೊಂಡ ಗಂಧರ್ವಲೋಕದ ಅನನ್ಯ ತಾರೆಗಳನ್ನು ಚಿತ್ರಿಸಿರುವ ಕಲಾಪರಂಪರೆಯ ಹಲವು ಸಾಧ್ಯತೆಗಳನ್ನು ಬೆಂಗಳೂರಿನ ‘ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿ’ಯು ಸಂಗ್ರಹಿಸಿ, ಪ್ರದರ್ಶಿಸಿದೆ. ನಾನಾ ಶತಮಾನಗಳಲ್ಲಿ ರಚನೆಗೊಂಡ ದೇವದೂತರು, ದೇವರ ವಾಹನಗಳ ಕಲಾಚಿತ್ರಣವನ್ನು ಅರಿಯಲು ಅಗತ್ಯವಾಗಿ ಪ್ರದರ್ಶನಕ್ಕೆ ಭೇಟಿ ನೀಡಬಹುದು.

ADVERTISEMENT

ದೇವರು ಎಂದರೆ ಯಾರು? ದೇವದೂತರು ಯಾರು? ಹೀಗೆ ಹಲವು ತಾತ್ವಿಕ ಪ್ರಶ್ನೆಗಳಿಗೆ ಪೌರಾಣಿಕ ಹಾಗೂ ಜನಪದೀಯ ಹಿನ್ನೆಲೆಯಲ್ಲಿ ಹಲವು ಕಥೆಗಳು ತೆರೆದುಕೊಳ್ಳುತ್ತವೆ. ಕಥನಕಲೆಯನ್ನು ಕೆತ್ತನೆ ಕಲೆಯ ಮೂಲಕ ಹಿಡಿದಿಡುವ ಆಯಾ ಕಾಲಘಟ್ಟದ ಸೊಗಸಾದ ಪ್ರಯತ್ನಗಳನ್ನು ಈ ಪ್ರದರ್ಶನವು ನೋಡುಗರಿಗೆ ಕಟ್ಟಿಕೊಡುತ್ತದೆ.

ಇಲ್ಲಿ ಸಂಗ್ರಹಗೊಂಡಿರುವ ಪ್ರತಿ ಕಲಾಕೃತಿಯ ಹಿಂದೆ ಕಥಾಲೋಕವೇ ಅಡಗಿದೆ. ಪೌರಾಣಿಕ ಹಾಗೂ ಜನಪದೀಯ ನೆಲೆಯಲ್ಲಿ ದಾಖಲಾಗಿರುವ ಕಥೆಗಳನ್ನು ಈ ಕಲಾಕೃತಿಗಳು ಉಸಿರಾಡುತ್ತಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

1920ರ ಸುಮಾರಿಗೆ ತಮಿಳುನಾಡಿನಲ್ಲಿ ರಚನೆಯಾದ ಬಹುವರ್ಣೀಯ ಮರ ಬಳಸಿ ಮಾಡಲಾದ ಶಿವನ ವಾಹನ ನಂದಿಕೇಶ್ವರ ಕಲಾಕೃತಿಯು ಮನ ಸೆಳೆಯುತ್ತದೆ.

ಭಾರತದಾದ್ಯಂತ ಹಲವು ಶಿವನ ದೇಗುಲಗಳ ಪ್ರಾಂಗಣದಲ್ಲಿ ನಂದಿಯು ಸದಾ ಜಾಗ್ರತೆಯ ಸಂಕೇತವಾಗಿ ಸ್ಥಾಪನೆಗೊಂಡಿದೆ. ಶಿವನ ಗರ್ಭಗುಡಿಯ ಕಡೆ ನಂದಿಯು ಮುಖಮಾಡಿರುತ್ತದೆ. ಬಾಲ ಮಡಚಿದ್ದರೂ ಸ್ಥಿರವಾಗಿರುತ್ತದೆ. ಕಂಗಳು ಅನಂತ ನೋಟವನ್ನು ತೆರೆದಿಡುತ್ತದೆ. ನಂದಿಯ ಕಿವಿಯಲ್ಲಿ ನಿಮ್ಮ ಬೇಡಿಕೆಯನ್ನು ಪಿಸುಗುಟ್ಟಿದರೆ, ಅದು ನೇರವಾಗಿ ಶಿವನನ್ನು ತಲುಪುತ್ತದೆ ಎಂದು ನಂಬಿಕೆಯೂ ಇದೆ. ನಂದಿಯ ಇಷ್ಟೆಲ್ಲ ಪ್ರವರಗಳನ್ನು ಬಹಳ ಸಲೀಸಾಗಿ ಅರಹುತ್ತದೆ ನಂದಿಕೇಶ್ವರನ ಕಲಾಕೃತಿ.

ಕುಂಚದಲ್ಲಿ ಅರಳಿದ ಗರುಡನ ಕಥೆಯನ್ನು ನೋಡುತ್ತಿರುವ ಕಲಾಪ್ರೇಮಿ

ಇನ್ನು ನಂದಿ ಹುಟ್ಟಿನ ಬಗ್ಗೆ ಇರುವ ಹಲವು ಕಥೆಗಳನ್ನು ಇಲ್ಲಿ ನೀಡಲಾಗಿದೆ. ಶಿಲಾದ ಎಂಬ ಋಷಿಯ ಸಾವಿರ ವರುಷದ ತಪ್ಪಸ್ಸಿನ ಫಲವಾಗಿ ಆತನದ್ದೇ ಬೆವರಿನಿಂದ ನಂದಿ ಹುಟ್ಟಿದೆನೆಂಬ ಕಥೆಯೂ ಇದೆ. ಇದಲ್ಲದೇ ಯಜ್ಞವೊಂದರ ಬೆಂಕಿಯಿಂದ ನಂದಿಯ ಜನನವಾಯಿತು ಎನ್ನುತ್ತದೆ ಮತ್ತೊಂದು ಕಥೆ. ಮತ್ತೊಂದು ಕುತೂಹಲಕಾರಿ ಎನಿಸುವ ಕಥೆಯೊಂದು ಇದೆ. ಅದೇನೆಂದರೆ ಪರಶಿವನು ಸ್ವತಃ ತನಗೊಬ್ಬ ಮಗ ಬೇಕೆಂದು ತಾನೇ ವರವಾಗಿ ನಂದಿಯನ್ನು ಪಡೆದುಕೊಂಡನಂತೆ. 

ಹುಟ್ಟು ಮತ್ತು ಸಾವನ್ನು ಮೀರಿದ ನಂದಿ, ಆರಂಭದಿಂದಲೂ ಎಲ್ಲ ಕಥೆಗಳಲ್ಲಿಯೂ ಪರಶಿವನೆಡೆಗೆ ಅನನ್ಯ ಭಕ್ತಿಯನ್ನು ತೋರಿಸುವ ವಾಹನವಾಗಿಯೂ ಅಗಾಧ ಶಕ್ತಿಯನ್ನು ಹೊಂದಿರುವ ದಿವ್ಯಾತ್ಮವಾಗಿಯೂ ಚಿತ್ರಿತಗೊಂಡಿದೆ.

ಇಲ್ಲಿ ಮತ್ತೊಂದು ಅಂಶವಿದೆ. ನಂದಿ ಶಿವನ ವಾಹನವಾಗಿದ್ದರೂ ಅಷ್ಟೆ ಆಗಿ ಉಳಿಯಲಿಲ್ಲ. ಅನನ್ಯ ಭಕ್ತಿಯಿಂದ ಶಿವನ ಪ್ರೀತಿಯನ್ನು ಅನಾಯಾಸವಾಗಿ ಗಳಿಸಿಬಿಟ್ಟ ನಂದಿ ಎಲ್ಲ ಗಣಗಳ ಮುಖ್ಯಸ್ಥನೂ ಆಗಿಬಿಟ್ಟ. ಗಣಗಳೆಂದರೆ ದೇವರ ಸೃಷ್ಟಿ ಹಾಗೂ ವಿನಾಶ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕಾಪಿಡುವವರು ಎನ್ನುವ ನಂಬಿಕೆಯೂ ಇದೆ.

ದ್ವಾರಪಾಲಕನಂತೆ ಇರುವ ನಂದಿಯ ಕಲಾಕೃತಿ ಹೇಳುವ ಕಥೆ ಕುತೂಹಲಕಾರಿಯಾಗಿದೆ. ಒಮ್ಮೆ ಶಿವನ ವೈಯಕ್ತಿಕ ಕೋಣೆಯನ್ನು ಅಪ್ಪಣೆ ಇಲ್ಲದೇ ನಂದಿ ಪ್ರವೇಶ ಮಾಡಿಬಿಟ್ಟನಂತೆ!. ಇದರಿಂದ ಸಿಟ್ಟಾದ ಶಿವ ಆತನನ್ನು ದ್ವಾರಪಾಲಕನಾಗಿ ಉಳಿಯುವಂತೆ ಆಜ್ಞಾಪಿಸಿದನಂತೆ. ಅಲ್ಲಿಂದ ನಂದಿಯು ಶಿವನ ದ್ವಾರಪಾಲಕನಾಗಿ ಹೊರಗುಳಿದ.

ಇನ್ನು 19 ರಿಂದ 20ನೇ ಶತಮಾನದ ಅವಧಿಯದ್ದೆಂದು ಹೇಳಲಾದ ಐರಾವತ ಆನೆಯ ಮರದ ಕಲಾಕೃತಿಯ ಕುಸುರಿಗಳು ಹೇಳುವ ಕಥೆ ವಿಶಿಷ್ಟವಾಗಿದೆ.

ಭಾರತೀಯ ಪುರಾಣಗಳಲ್ಲಿ ಆನೆಗಳು ಸಮೃದ್ಧಿ, ಫಲವತ್ತತೆ ಹಾಗೂ ಗಾಂಭೀರ್ಯದ ಸಂಕೇತ. ಇಂಥ ಆನೆಗಳು ರೆಕ್ಕೆ ಕಟ್ಟಿಕೊಂಡು ಹಕ್ಕಿಯಂತೆ ಹಾರಾಟ ಮಾಡಿದರೆ? ಎಷ್ಟೊಂದು ವಿಶಿಷ್ಟವಾದ ಪರಿಕಲ್ಪನೆಯಲ್ಲವೇ. ಅಪಾರಗಾತ್ರದ ಆನೆಯು ರೆಕ್ಕೆಗಳ ನೆವದಿಂದ ಹಾರಾಟ ಮಾಡುವುದೇ ಒಂದು ಚಂದದ ಯೋಚನೆಯಲ್ಲವೇ?

ಈ ಕೆತ್ತನೆಗಳು ಹೇಳುವುದಿಷ್ಟು: ಇಂದ್ರನ ಆಸ್ಥಾನದಲ್ಲಿರುವ ಶ್ವೇತವರ್ಣದ ಆನೆ ಅಂದರೆ ಐರಾವತಕ್ಕೆ ರೆಕ್ಕೆಗಳಿವೆ. ಇನ್ನೂ ಅದೃಷ್ಟದೇವತೆ ಎನಿಸಿಕೊಂಡ ಗಜಲಕ್ಷ್ಮಿಗೆ ರಕ್ಷಕನಾಗಿಯೂ ಆನೆಯಿರುತ್ತದೆ.

ಸೃಷ್ಟಿಕರ್ತ ಬ್ರಹ್ಮನು ಗರುಡನನ್ನು ಸೃಷ್ಟಿ ಮಾಡಿದ ನಂತರ ಉಳಿದುಹೋದ ಮೊಟ್ಟೆ ಚಿಪ್ಪಿನಿಂದ ಐರಾವತನನ್ನು ಸೃಷ್ಟಿಸಿದನಂತೆ. ಮತ್ತೊಂದು ಕಥೆಯಲ್ಲಿ ದೇವತೆಗಳು ಮತ್ತು ರಾಕ್ಷಸರ ನಡುವೆ ಅಮೃತಕ್ಕಾಗಿ ಕ್ಷೀರಸಾಗರದ ಮಥನವಾದಾಗ, ಹಾಲುನೊರೆಯಂಥ ಐರಾವತ ಎದ್ದು ಬಂದಿತಂತೆ! ಈ ಐರಾವತದ ಜತೆಗೆ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಹಾಗೂ ಕೌಸ್ತುಭಮಣಿಯೂ ಸೃಷ್ಟಿಯಾಯಿತಂತೆ.

ಇನ್ನು ಐರಾವತದ ವರ್ಣನೆಯೇ ಸೊಗಸಾಗಿದೆ. ನಾಲ್ಕು ದಂತಗಳು, ಹತ್ತು ರೆಕ್ಕೆಗಳಿದ್ದು, ಅದರ ಸೊಂಡಿಲು ಪಾತಾಳದಲ್ಲಿರುವ ನೀರನ್ನು ತಲುಪಬಲ್ಲದು. ಇನ್ನು ದಂತಗಳಿಗೆ ಪರ್ವತವನ್ನು ಬಗೆಯುವ ಶಕ್ತಿ ಇದೆ. ಬರಪೀಡಿತ ಭೂಮಿಯಲ್ಲಿ ಮಳೆ ಸುರಿಸಬಲ್ಲ ಐರಾವತವಿದು.

19ನೇ ಶತಮಾನದ ಕೊನೆಯ ಭಾಗದಲ್ಲಿ ಕಾಗದ ಮೇಲೆ ಚಿತ್ರಿತಗೊಂಡಿರುವ ಓಡುತ್ತಿರುವ ಸೂರ್ಯ ಮತ್ತು ಬೆನ್ನಟ್ಟುತ್ತಿರುವ ಚಂದ್ರನ ಕಲಾಕೃತಿಯು ರಾಜಸ್ಥಾನ ಮೂಲದ್ದು. ಸೂರ್ಯ ಬೆಳಕಿನ ಪ್ರಖರತೆಗೆ ಸಾಕ್ಷಿಯಾದರೆ, ಚಂದ್ರ ಹಾಲು ಬೆಳದಿಂಗಳ ರಾತ್ರಿಯನ್ನು ವ್ಯಾಖ್ಯಾನಿಸುತ್ತದೆ. ಇವರೆಡೂ ವಿಭಿನ್ನ ಅಸ್ತಿತ್ವಗಳು. ಆದರೆ, ಸಮಯದ ಹೆಣಿಗೆಯನ್ನು ಕಟ್ಟುವಲ್ಲಿ ಸೂರ್ಯ–ಚಂದ್ರರೇ ಪ್ರಮುಖ ಪಾತ್ರಗಳು. ಹಗಲು–ಇರುಳು ಎನ್ನುವುದು ಮನುಷ್ಯನಿಗೆ ಬಂದೊದಗುವ ಕಷ್ಟ–ಸುಖಗಳ ವ್ಯಾಖ್ಯಾನವೂ ಹೌದಲ್ಲವೇ. ಇವುಗಳಲ್ಲಾಗುವ ಏರಿಳಿತದಲ್ಲಿ ಬದುಕಿನ ಸಾರವೂ ಅಡಗಿದೆ ಎಂಬುದನ್ನು ಕಾಗದ ಕಲಾಕೃತಿ ನಾಜೂಕಾಗಿ ತಿಳಿಸುತ್ತದೆ. ಯುದ್ಧ ಸನ್ನದ್ಧನಾದ ಕಾರ್ತಿಕೇಯನಿಗೆ ನವಿಲು ವಾಹನವಾಗಿ ಬಂದು ಗೆಲ್ಲುವಂತೆ ಮಾಡುವುದು, ಹಿತ್ತಾಳೆ ಲೋಹದಲ್ಲಿ ನದಿ ಯಮುನೆಯನ್ನು ಹೆಣ್ಣಾಗಿ ಚಿತ್ರಿಸಿರುವುದನ್ನು ಈ ಪ್ರದರ್ಶನದಲ್ಲಿ ನೋಡಬಹುದು. ಕಾಗೆ, ನವಿಲು, ಮೂಷಿಕ ಹೀಗೆ ನಾನಾ ದೇವರುಗಳ ವಾಹನಗಳು ಇಲ್ಲಿ ತನ್ನದೇ ಕಥೆಯನ್ನು ಹೇಳುತ್ತವೆ.

ಕಲಾವಿದನ ಅನಾಮಿಕತೆಯು ಕಲಾಕೃತಿಗಳಿಗೆ ಕುತೂಹಲದ ಚೌಕಟ್ಟನ್ನು ಒದಗಿಸಿದೆ. ಮಕ್ಕಳು ಸೇರಿದಂತೆ ಕಲಾ ಕುತೂಹಲಿಗರೆಲ್ಲರೂ ಕಲಾಕೃತಿಗಳು ಹೇಳುವ ಒಂದೊಂದು ವಿಶೇಷ ಎನಿಸುವ ಕಥೆಯನ್ನು ಕೇಳಲು ಪ್ರದರ್ಶನಕ್ಕೆ ಭೇಟಿ ನೀಡಬಹುದು.

ಬೆಂಗಳೂರಿನ ಕಸ್ತೂರ ಬಾ ರಸ್ತೆಯ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿಯಲ್ಲಿ ಜನವರಿ 26ರವರೆಗೆ ಈ ಪ್ರದರ್ಶನ ಇರಲಿದೆ.

ನಂದಿಕೇಶ್ವರನ ಕಲಾಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.