ಒಡಿಶಾದ ಮಾನಸ ರಂಜನ್ ಜೆನಾ ಅವರ ಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ಜುಲೈ 28ರ ವರೆಗೂ ನಡೆಯಲಿದೆ. ಇಲ್ಲಿ 46 ಕಲಾವಿದರ 60ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ಸಾಂಪ್ರದಾಯಿಕ ವಿನ್ಯಾಸಭರಿತ ಮರದ ಬಾಗಿಲಿಗೆ ಒರಗಿ ನಿಂತ ಯುವತಿ. ಯಾರೋ ಬರಲಿರುವ ನಿರೀಕ್ಷೆ ಸ್ಫುರಿಸುವ ಕಣ್ಣುಗಳು. ಕ್ಯಾನ್ವಾಸ್ ಮೇಲೆ ಅಕ್ರಿಲಿಕ್ ಬಣ್ಣದಲ್ಲಿ ಅರಳಿದ ಸೃಜನಾತ್ಮಕ ಸಂಯೋಜನೆಯ ‘ವೇಟಿಂಗ್’ ಕೃತಿ ಒಡಿಶಾದ ಖ್ಯಾತ ಕಲಾವಿದ ಮಾನಸ ರಂಜನ್ ಜೆನಾ ಅವರದ್ದು. ಈ ಕೃತಿಯು ಕಲಾ ಪ್ರದರ್ಶನಕ್ಕೆ ಪ್ರವೇಶಿಕೆಯಂತಿದೆ. ಸಾಂಪ್ರದಾಯಿಕತೆಯ ಸೊಬಗು ಈ ಚಿತ್ರದಲ್ಲಿ ಕೆಲವೇ ಬಣ್ಣಗಳಲ್ಲಿ ಮೂಡಿಬಂದಿರುವ ಪರಿಯನ್ನು ಕಣ್ತುಂಬಿಕೊಳ್ಳುವುದೇ ಖುಷಿ.
ತಮಿಳುನಾಡಿನ ಎಸ್. ಇಳಯರಾಜ ಅವರ ಕೃತಿ
ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಕಲಾಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆದ ಕೃತಿಯಿದು. ಇದರ ವರ್ಣ ಸಂಯೋಜನೆಯೂ ವಿಶಿಷ್ಟವಾಗಿದೆ. ಇದೇ ವರ್ಣ ಸಂಯೋಜನೆಯ ಮತ್ತೊಂದು ಚಿತ್ರವೂ ಇವರದ್ದೇ ಎಂದು ಹೇಳಬಹುದಾದ ಶೈಲಿಯನ್ನು ಇಲ್ಲಿ ಗುರುತಿಸಬಹುದು.
ಮೊದಲ ಬಾರಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಚಿತ್ರಕಲಾ ಕೃತಿಗಳನ್ನು ನೋಡುವ ಅವಕಾಶ ಸ್ಥಳೀಯ ಕಲಾ ಪ್ರೇಮಿಗಳು ಹಾಗೂ ಕಲಾ ವಿದ್ಯಾರ್ಥಿಗಳಿಗೆ ಲಭಿಸಿದೆ. ರೇಖೆ–ಬಣ್ಣಗಳಲ್ಲಿ ಜೀವನ ದರ್ಶನ, ಏನನ್ನೋ ಹೇಳಬಯಸುವ ತುಡಿತ, ನಿರೀಕ್ಷೆ, ವಿಡಂಬನೆ ಹಾಗೂ ವೈವಿಧ್ಯ ದೃಷ್ಟಿಕೋನಗಳು ಇಲ್ಲಿ ಕಾಣಸಿಕ್ಕವು.
ಲಲಿತಕಲಾ ಅಕಾಡೆಮಿ ಅಧ್ಯಕ್ ಪ.ಸ. ಕುಮಾರ್ ಅವರ ಕೃತಿ
ಹಲವು ಕಲಾವಿದರಿಗೆ ಮಹಿಳೆಯೇ ಪ್ರಮುಖ ವಸ್ತುವಾಗಿದ್ದಾರೆ. ಮಹಿಳೆಯ ಆಧುನಿಕ, ಸಾಂಪ್ರದಾಯಿಕ, ಚಿಂತಾಕ್ರಾಂತ, ನಿಷ್ಕಲ್ಮಶ, ಗಂಭೀರ, ಗಹನ ಮನಸ್ಥಿತಿಗಳ ಪ್ರತಿಬಿಂಬಗಳು ಬಣ್ಣದ ಚೌಕಟ್ಟಿನಲ್ಲಿ ಮಿಳಿತವಾಗಿವೆ.
ಖ್ಯಾತ ಕಲಾವಿದ ಎಂ.ವಿ. ಮಿಣಜಗಿ ಅವರ ಜಲವರ್ಣದ ನಿಸರ್ಗ ಚಿತ್ರಣಗಳ ಸರಣಿ ‘ರಾಗಮಾಲಾ’ದ ಎರಡು ಕೃತಿಗಳು ಪ್ರದರ್ಶನಕ್ಕೆ ಸುಂದರ ಮನ್ನುಡಿ ಬರೆದಿವೆ. ಬಣ್ಣದಲ್ಲದ್ದಿದ ಕುಂಚದ ಸ್ಟ್ರೋಕ್‌ಗಳು ಮೂಡಿಸುವ ನೈಜ ಪರಿಣಾಮ ಹಸಿರು ವನಸಿರಿಯ ಚಂದವನ್ನು ಇವರ ಕೃತಿಗಳು ಕಟ್ಟಿಕೊಟ್ಟಿವೆ.
ಗೋಪಾಲ್ ಸುಬೇದಾರ್ ಅವರ ಗ್ಲಾಸ್ ಪೇಂಟಿಂಗ್
ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರದರ್ಶನಕ್ಕೆ ಆಯ್ಕೆಯಾದ ಸಿ.ಡಿ. ಜಟ್ಟೆಣ್ಣವರ್ ಅವರ ಚಾರ್‌ಕೋಲ್ ಪೇಂಟಿಂಗ್ ‘ಗಾಂಧಿ ಭಾರತ’ ಭಿನ್ನವಾಗಿದೆ. ಹಿಂಸೆ ತ್ಯಜಿಸಿ ಅಹಿಂಸೆಯನ್ನು ನಮ್ಮದಾಗಿಸಿಕೊಳ್ಳಬೇಕಾದ ಅಗತ್ಯವನ್ನು ಸಾರಿ ಹೇಳುವ ಗಹನ ವಿಷಯವನ್ನು ಕಪ್ಪು–ಬಿಳುಪು ಬಣ್ಣಗಳಲ್ಲಿ ಪರಿಣಾಮಕಾರಿಯಾಗಿ ಸಮಕಾಲೀನ ಶೈಲಿಯಲ್ಲಿ ಹೇಳುತ್ತ ಪ್ರದರ್ಶನದ ಮೌಲ್ಯವನ್ನು ಹೆಚ್ಚಿಸಿದ್ದಾರೆ.
ತಮಿಳುನಾಡಿದ ಖ್ಯಾತ ಕಲಾವಿದ ಎಸ್. ಇಳಯರಾಜ ಅವರ ಕೃತಿ ಪ್ರದರ್ಶನದ ಪ್ರಮುಖ ಆಕರ್ಷಣೆ. ತೈಲವರ್ಣದಲ್ಲಿ ರಚಿಸಿರುವ ಹೂ ಮಾರುವ ಮಹಿಳೆ ನಮ್ಮ ಎದುರೇ ಕುಳಿತು ಸಂಭಾಷಿಸುತ್ತಿರುವಂತೆ ಭಾಸವಾಗುತ್ತದೆ. ಹಳ್ಳಿಗಾಡಿನವಳಾದರೂ ವ್ಯಕ್ತಿತ್ವದಲ್ಲಿ ಕಾಣುವ ಒಪ್ಪ–ಓರಣ ಗಮನ ಸೆಳೆಯುತ್ತದೆ. ಮುಖದಲ್ಲಿ ಅರಳಿದ ಹೌದೋ ಅಲ್ಲವೋ ಎನ್ನುವ ಮುಗುಳ್ನಗು, ಸೀರೆಯ ಅಂಚಿನ ಝರಿ, ಬುಟ್ಟಿಯಲ್ಲಿ ಮಾರಾಟಕ್ಕೆ ಉಳಿದ ಕೆಲವೇ ಹೂಗಳು ಚಿತ್ರದ ಸೌಂದರ್ಯ ಹೆಚ್ಚಿಸಿವೆ.
ಮಹಾರಾಷ್ಟ್ರದ ಭಾರ್ಗವ್ ಅರ ಕಲಾಕೃತಿ
ದನ ಕಾಯುವ ಮಹಿಳೆಯೊಬ್ಬಳು ಒಂದೆಡೆ ಕುಳಿತು ಏನೋ ಚಿಂತಿಸುತ್ತಿರುವ ಚಿತ್ರಣ ಮಹಾರಾಷ್ಟ್ರದ ಸಿದ್ಧಾರ್ಥ ಶಿಂಗಾಡೆ ಅವರ ಸಮಕಾಲೀನ ಶೈಲಿಯ ಕೃತಿಯ ವಸ್ತು. ವಿಷ ಕುಡಿದು ನೀಲಕಂಠನಾದ ಶಿವನ ಚಿತ್ರವೂ ಇದೇ ಶೈಲಿಯಲ್ಲೇ ಆಕರ್ಷಕವಾಗಿ ಮೂಡಿ ಬಂದಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅವರು ಪೆನ್ ಆ್ಯಂಡ್ ಇಂಕ್ ಮಾಧ್ಯಮದ ಕೃತಿ ಮೂರೇ ಬಣ್ಣಗಳಲ್ಲಿ ಮೇಳೈಸಿದೆ. ಕಪ್ಪು ಬಣ್ಣದ ಗಾಢ ಹಿನ್ನೆಲೆಯಲ್ಲಿ ದಂತವರ್ಣದ ಶಿಲೆಗಳ ಕಲಾಕೃತಿಯಂತೆ ತೋರುತ್ತದೆ.
ಡಿ.ವಿ. ಹಾಲಭಾವಿ ಅವರ ಗಿರಿಜಾ ಕಲ್ಯಾಣದ ಪ್ರಸಂಗದ ಸರಣಿ ಚಿತ್ರಗಳು ವಿಶಿಷ್ಟವಾಗಿದ್ದು, ಕಲಾ ವಿದ್ಯಾರ್ಥಿಗಳಿಗೆ ಮಹತ್ವಪೂರ್ಣ ಎನಿಸಿವೆ. ಅಂತರರಾಷ್ಟ್ರೀಯ ಕಲಾವಿದ ವಾಸುದೇವ್ ಕಾಮತ್ ತೈಲವರ್ಣದಲ್ಲಿ ರಚಿಸಿರುವ ವ್ಯಕ್ತಿಯ ಚಿತ್ರ ನೈಜ ಎನಿಸಿದರೆ, ಅವರ ಮತ್ತೊಂದು ಕೃತಿ ಫ್ಯಾಮಿಲಿ ಸೃಜನಾತ್ಮಕ ದೃಷ್ಟಿಕೋನವನ್ನೂ ಪರಿಚಯಿಸುತ್ತದೆ. ಹುಬ್ಬಳ್ಳಿಯ ಪ್ರತಾಪ ಬಹುರೂಪಿ ಅವರ ಕಲಾಕೃತಿಗಳಲ್ಲಿ ಹಂಪಿಯ ಕ್ರಿಯೇಟಿವ್ ಲ್ಯಾಂಡ್‌ಸ್ಕೇಪ್ ಆಕರ್ಷಕವಾಗಿದೆ.
ಹುಬ್ಬಳ್ಳಿಯ ಜಗನ್ನಾಥ ಸೋನಾವಣೆ ಅವರ ಮಿನಿಯೇಚರ್ ಕಲಾಕೃತಿ
ಮಹಾರಾಷ್ಟ್ರದ ಭಾರ್ಗವ್ ಅವರ ಕ್ರಿಯೇಟಿವ್ ಲ್ಯಾಂಡ್‌ಸ್ಕೇಪ್ ಚಿತ್ರಣವು ನಮ್ಮ ಸುತ್ತಮುತ್ತಲಿನ ಹಲವು ದೃಶ್ಯಗಳೇ ಎಷ್ಟು ಕಲಾತ್ಮಕವಾಗಿರುತ್ತವೆ ಎಂದು ಕನ್ನಡಿ ಹಿಡಿದಂತೆ ಇದೆ. ಒತ್ತಡದ ಬದುಕಿನಲ್ಲಿ ನಾವು ದಿನವೂ ಸಾಗುವ ಹಾದಿ, ನೋಡುವ ನಗರಗಳ ಕಟ್ಟಡಗಳು ಕಲಾವಿದನೊಬ್ಬನ ದೃಷ್ಟಿಯಲ್ಲಿ ಎಷ್ಟು ಸುಂದರವಾಗಿ ಕಾಣಬಹುದು ಎಂದು ಇಲ್ಲಿ ನೋಡಬಹುದು.
ಸಂಜೀವ್ ಸಕ್ಪಾಲ್ ಅವರ ಸಮಕಾಲೀನ ಶೈಲಿಯ ರಾಧಾ–ಕೃಷ್ಣ ಕೃತಿಯೂ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತದೆ. ಈ ಕೃತಿಯಲ್ಲಿ ರಾಧಾ–ಕೃಷ್ಣರಿಗೆ ಕಣ್ಣುಗಳು ಇಲ್ಲದಿದ್ದರೂ ಅವರ ಅನನ್ಯ ಪ್ರೀತಿ ಹೊರಹೊಮ್ಮುವಂತಿದೆ. ದಯಾನಂದ ಕಾಮಕರ್ ಅವರ ಸಮಕಾಲೀನ ಮಹಿಳೆ, ಕೊಳಲನೂದುವ ಮಹಿಳೆಯರ ಚಿತ್ರಣಗಳೂ ಸೃಜನಾತ್ಮಕ ಹಾಗೂ ಸಮಕಾಲೀನ ಶೈಲಿಗಳ ಶಕ್ತಿಯುತ ಅಭಿವ್ಯಕ್ತಿಯಾಗಿವೆ.
ದಯಾನಂದ ಕಾಮಕರ್ ಅವರ ಸಮಕಾಲೀನ ಕಲಾಕೃತಿ
ಕೃಷ್ಣನ ಲೀಲೆಗಳನ್ನು ಗ್ಲಾಸ್ ಪೇಂಟಿಂಗ್ ಸರಣಿ ಮಾಡಿರುವ ಗೋಪಾಲ್ ಸುಬೇದಾರ್ ಅವರ ಗ್ಲಾಸ್ ಪೇಂಟಿಂಗ್ ನೋಡಲೇಬೇಕಾದ ಕೃತಿ. ಹುಬ್ಬಳ್ಳಿಯ ಜಗನ್ನಾಥ ಸೋನಾವಣೆ ಅವರ ಮಿನಿಯೇಚರ್ ಕಲಾಕೃತಿ ಸೂಕ್ಷ್ಮರೇಖೆಗಳಲ್ಲಿ ಹಲವು ಕಥೆಗಳನ್ನು ಹೇಳುವ ಸಾಹಸ. ಇಂಥ ಶ್ರಮಪೂರ್ಣ ಕಲಾಕೃತಿಗಳನ್ನು ಮಾಡುವವರೂ ಈಚೆಗೆ ಅಪರೂಪ ಎನಿಸಿದ್ದಾರೆ.
ಮಹಾರಾಷ್ಟ್ರದ ಆದಿತ್ಯ ಚಾರಿ ಅವರ ಪೌರಾಣಿಕ ಕಲಾಕೃತಿ ರಿಯಲಿಸ್ಟಿಕ್ ಕೃತಿಗಳ ಸುಂದರತೆಯತ್ತ ಗಮನ ಸೆಳೆಯುತ್ತದೆ. ಇವರು ಬಾಹುಬಲಿ ಚಿತ್ರಕ್ಕೆ ಪಾತ್ರಗಳನ್ನು ಚಿತ್ರಿಸಿಕೊಟ್ಟ ಕಲಾವಿದರಾದ್ದರಿಂದ ಕೃತಿಯಲ್ಲಿ ಅಂಥದ್ದೇ ಶೈಲಿಯ ಝಲಕ್ ಕಂಡು ಬಂತು.
ಕರಿಯಪ್ಪ ಹಂಚಿನಮನಿ ಅವರ ಸಮಕಾಲೀನ ಚಿತ್ರ ಮೀನು ಮಾರುವವಳು ಗಾಢ ವರ್ಣ ಹಾಗೂ ಚಲನಶೀಲತೆಯ ಭಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಪರಾಗ್ ಬೋರ್ಸೆ ಅವರ ಗ್ರಾಮೀಣ ಮಹಿಳೆಯ ಚಿತ್ರಣದ ಕಲಾಕೃತಿ
ಸಂಜೀವ್ ಸಕ್ಪಾಲ್ ಅವರ ರಾಧಾಕೃಷ್ಣ ಕಲಾಕೃತಿ
ಸಿದ್ಧಾರ್ಥ ಶಿಂಗಾಡೆ ಅವರ ಕಲಾಕೃತಿ
ಹುಬ್ಬಳ್ಳಿಯ ಪ್ರತಾಪ ಬಹುರೂಪಿ ಅವರ ಹಂಪಿ ನಿಸರ್ಗ ಚಿತ್ರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.