
ಬಿ.ಟಿ.ಜಾಹ್ನವಿ
ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ತೀರ್ಪುಗಾರಳಾಗಿದ್ದು ನಿಜಕ್ಕೂ ಒಂದು ಸವಾಲಿನ ಸಂಗತಿಯೇ ಆಗಿತ್ತು. ಯಾಕಂದ್ರೆ ನಂಗೆ ಸಿಕ್ಕಿದ್ದ ಕಥೆಗಳು ಅವುಗಳದೇ ಆದ ವಿಶಿಷ್ಟತೆ, ಪ್ರಾದೇಶಿಕತೆ ಮತ್ತು ಭಿನ್ನ ವಸ್ತು ಆಯ್ಕೆ ಮಾಡಿಕೊಂಡಿದ್ದು, ಹೊಸತನದಿಂದ, ಚುರುಕಿನಿಂದ, ವೈವಿಧ್ಯತೆಯಿಂದ ಕೂಡಿದ್ದವು. ವಿಭಿನ್ನ ಜೀವನಾನುಭವ, ಹೊಸ ಚಿಂತನೆ, ಹೊಸ ದಿಕ್ಕು ಹಿಡಿದು ಹೊಂಟ ಕಥೆಗಳು ನೀಡಿದ ಅನುಭವ ವಿಶಿಷ್ಟವಾದ್ದು, ಅಂತೆಯೇ ಆಯ್ಕೆ ಕೂಡ ಕಷ್ಟಕರವಗಿದ್ದುದೂ ಸತ್ಯ. ಇಂದಿನ ಬದಲಾದ ಆಧುನಿಕ ಜಗತ್ತಿಗನುಗುಣವಾಗಿ ವೈವಿಧ್ಯಮಯ ಭಾಷೆ, ಶೈಲಿ, ಕಥಾವಸ್ತು, ನಿರೂಪಣೆ. ಕಥೆಗಾರಿಕೆ ಇಲ್ಲಿನ ಕಥೆಗಳಲ್ಲಿ ಕಾಣಬಹುದಾಗಿದೆ. ಅಂತೆಯೇ ಬಡತನ, ಜಾತಿ, ಧರ್ಮ, ದ್ವೇಷ, ವೈಷಮ್ಯ, ಸಂಬಂಧಗಳ ಅಭದ್ರತೆ, ಕುಟುಂಬಗಳ ವಿಘಟನೆ, ಮನುಷ್ಯನ ಸಣ್ಣತನ, ಸ್ವಾರ್ಥ, ದುರಾಸೆ, ಲೋಲುಪತೆ ಕಥಾವಸ್ತುವಾಗಿವೆ. ಈ ಎಲ್ಲವನ್ನೂ ಮೀರಿ ಜೀವನಪ್ರೀತಿಯೂ ಉಳಿದು ಕೊಂಡಿರುವುದು ಒಂದು ಸಮಾಧಾನಕರ ಅಂಶ.
ಅದರಲ್ಲಿ ಮೊದಲ ಬಹುಮಾನ ಪಡೆದ ಕಥೆ ‘ಪತನ’. ರಾಮೇಶ್ವರಿ ಒಂಟಿ ವೃದ್ಧೆ ಮತ್ತು ಗಂಡ ಮಗನೊಟ್ಟಿಗೆ ವಾಸಿಸುತ್ತಿದ್ದ ರಾಮೇಶ್ವರಿ ಮಗಳ ವಯಸ್ಸಿನ ರಂಜಿತ ಇಬ್ಬರ ಜೀವನದ ಪತನಗಳನ್ನು ಸಾರುವ ಕಥೆ. ಆದರೂ ಕಡೆಗೆ ಒಂದು ಬಾಳಿ ಬದುಕಬೇಕಾದ ಜೀವವು ಪತನಗೊಳ್ಳುವ ನಡೆಯಲ್ಲಿ ಹಠಾತ್ತನೆ ತಿರುವು ಪಡೆದು ಜೀವನಪ್ರೀತಿ ಕಾಣಿಸಿ ಧನ್ಯಗೊಳ್ಳುವುದೇ ಇಲ್ಲಿನ ವಿಶೇಷತೆ. ಎಷ್ಟೇ ಕತ್ತರಿಸಿದರೂ ಬಿಡದೆ ಜಿಗಿದು ಹಬ್ಬುವ ಗಿಡವಿಲ್ಲಿ ಸುಂದರ ರೂಪಕ. ಒಟ್ಟಾರೆ ಕಥೆಯಲ್ಲಿ ಹೆಣ್ಮಕ್ಕಳ ಮನೋಕ್ಷೋಭೆಯನ್ನು ಎಲ್ಲೂ ಮಿತಿಮೀರದಂತೆ ಒಂದೇ ಹಿಡಿತದಲ್ಲಿ ತಣ್ಣಗೆ ಹಿಡಿದಿಟ್ಟಿರುವ ರೀತಿ ಮೆಚ್ಚುಗೆ. ಉದ್ದಕ್ಕೂ ಕಾಣುವ ಒಂದು ಗೂಢ, ನಿಗೂಢ ಮೌನ ನಮ್ಮೊಳಗನ್ನ ಕಲಕುತ್ತದೆ.
ಎರಡನೇ ಬಹುಮಾನ ಪಡೆದ ಕಥೆ ‘ಒಂದು ತೇಗದ ಕುರ್ಚಿ’. ಪತ್ರಕರ್ತ ಮಾಲತೇಶ ತನ್ನೂರಿನಲ್ಲಿ ಬಾಲ್ಯದಿಂದಲೂ ಊರಗೌಡನ ದವಲತ್ತನ್ನು ನೋಡಿ, ಅನುಭವಿಸಿ ಬೆಳೆದವನು. ಏನೇ ಪಂಚಾಯ್ತಿ ಆದರೂ ಗೌಡನ ಬಳಿಗೇ ಹೋಗಬೇಕಾದ ಸಂದರ್ಭ. ಅನೇಕ ಸಂದರ್ಭಗಳಲ್ಲಿ ಮಾಲತೇಶನ ಅಪ್ಪನಿಗಾಗುವ ಅವಮಾನ ನೋಡಿ ಬೆಳೆದ ಮಾಲತೇಶ ಅತೀವ ನೋವೂ ಅನುಭವಿಸಿ ಕಣ್ಣೀರಾಗುತ್ತಿದ್ದ. ತಾನು ಒಮ್ಮೆಯಾದರೂ ಆ ಕುರ್ಚಿಯ ಮೇಲೆ ಕೂರಬೇಕು ಅದೇ ಗತ್ತು ಪ್ರದರ್ಶಿಸಬೇಕು ಎಂದೇ ಹಪಹಪಿಸುತ್ತಾನೆ. ಆದರೆ ಕಡೆಯಲ್ಲಿ ಅನಾಥ ಹೆಣವಾಗಿ ಹೋಗುವ ಗೌಡ, ಒಲೆಗೆ ಕಟ್ಟಿಗೆಯಾಗಿ ಉರಿದು ಬೂದಿಯಗುವ ತೇಗದ ಕುರ್ಚಿ ಅವನೊಳಗೆ ಜಾಗೃತಗೊಳ್ಳುತ್ತಿದ್ದ ಗೌಡಿಕೆಯ ಪ್ರವೃತ್ತಿಯೂ ಸುಟ್ಟು ಬೂದಿ ಮಾಡುತ್ತದೆ. ಕುರ್ಚಿಯೊಂದನ್ನು ರೂಪಕವಾಗಿಟ್ಟುಕೊಂಡು ಜೀವನದ ಸತ್ಯದರ್ಶನ ಮಾಡಿಸುವ ಲೇಖಕರ ಶೈಲಿ ವಿಭಿನ್ನವಾಗಿದ್ದು ಓದುಗರನ್ನು ಸೆಳೆದು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ಮೂರನೆಯ ಬಹುಮಾನ ಪಡೆದ ಕಥೆ ‘ಚಂದ್ರಾಮ ಕನ್ನಡಿ ಹರಳ’. ಇವತ್ತಿನ ಕಾಲಮಾನದಲ್ಲಿ ಹಿಂದೂ-ಮುಸಲ್ಮಾನರ ನಡುವಿನ ಸೋದರತ್ವ ಇಲ್ಲವಾಗುತ್ತಿದೆ. ಪರಸ್ಪರರ ನಡುವಿನ ದ್ವೇಷ, ಭಯ, ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಕಥೆಯೇ ‘ಚಂದ್ರಾಮ ಕನ್ನಡಿ ಹರಳ’. ಕ್ಷುಲ್ಲಕ ಕಾರಣಕ್ಕೆ ಊರಿಂದ ಬಹಿಷ್ಕಾರಕ್ಕೆ ಒಳಗಾಗುವ ಕಾಶೀಮ ಮತ್ತು ಅವನು ತನಗಾದ ಅನ್ಯಾಯಕ್ಕೆ ತೋರುವ ತಣ್ಣನ ಪ್ರತಿಭಟನೆ ಮತ್ತು ಪ್ರತಿರೋಧದ ಕಥೆಯೇ ಚಂದ್ರಮ ಕನ್ನಡಿ ಹರಳ. ಇಂದು ಮನಸ್ಸುಗಳು ಎಷ್ಟರ ಮಟ್ಟಿಗೆ ಮಲಿನಗೊಂಡಿದೆ, ಮಳೆಯಿಲ್ಲದೆ ಊರಿಗೆ ಬರ ಬಂದರೆ ಅಂತಃಕರಣವೇ ಇರದ ಊರಿನ ಜನರ ಎದೆಗಳೂ ಬರಡಾಗಿ ಹೋದದ್ದು ಇವತ್ತಿನ ದುರಂತ.
ಇನ್ನು ಮೆಚ್ಚುಗೆ ಪಡೆದ ಐದು ಕಥೆಗಳಲ್ಲಿ ಒಂದಾದ ‘ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ’ ಕತೆಯಲ್ಲಿ ಹಸಿದ ಹೊಟ್ಟೆ ತುಂಬಿಸುವುದೇ ಆದ್ಯತೆ ಆದಾಗ ಶಿಷ್ಟಾಚಾರಗಳು ಕೆಲಸಕ್ಕೆ ಬಾರವು ಎಂಬುದನ್ನು ತುಂಬಾ ಕುತೂಹಲಕಾರಿಯಾಗಿ ಹೆಣೆಯಲಾಗಿದೆ. ಇನ್ನು ‘ತುಳಸಿ’ ಓರ್ವ ಪಾಪದ ಹೆಣ್ಣುಮಗಳ ಕಥೆ ಮತ್ತು ವ್ಯಥೆ. ನಿರೂಪಣೆ, ಕಥೆ ಹೇಳುವ ರೀತಿ, ಶೈಲಿ ಬಹಳವೇ ಚನ್ನ. ಸಾಮಾನ್ಯ ಕಥಾವಸ್ತುವೇ ಆದರೂ ವಿಶೇಷ ಅಂದ್ರೆ ಸಣ್ಣದಾಗಿ ಶೋಷಣೆಗೆ, ಮನೆಯವರೆಲ್ಲರ ಸ್ವಾರ್ಥಕ್ಕೆ ಬಲಿಯಾಗುತ್ತಲೇ ತುಳಸಿ ಸಿಂಚನಾಳಿಗೆ ತಾಯಿಯ ಸ್ವರೂಪಳಾಗಿ ಅವಳನ್ನು ಗೆದಿಯುವ ಕ್ರಿಯೆಯಲ್ಲಿಯೇ ಕಥೆಯು ವಿಶಿಷ್ಟವಾಗಿ ನಿಲ್ಲುತ್ತದೆ.
ಮನುಷ್ಯನ ಸ್ವಾರ್ಥ ಮತ್ತು ಒಟ್ಟಾರೆಯಾಗಿ ಸಾಂಪ್ರದಾಯಿಕ ಸಮಾಜ ಸಂವಿಧಾನಾತ್ಮಕವಾದಂತಹ ಬದಲಾವಣೆಯನ್ನ ಒಪ್ಪಿಕೊಳ್ಳಲಾರದ ಸ್ಥಿತಿಯನ್ನು ಬಹಳ ಸೂಚ್ಯವಾಗಿ ಹೇಳುತ್ತದೆ ‘ಸಂವಿಧಾನ ಅಂದದ್ದೇ ಕಾರಣವಾಗಿ’ ಕಥೆ.
‘ಚಾವಡಿ ಮತ್ತು ನಡುಮನೆಯ ಮಧ್ಯದಲ್ಲೊಂದು ಆಳ ಕಣಿವೆ’ ಕಥೆಯು ಎಳೆ ಮನಸ್ಸುಗಳಲ್ಲಿ ಹುಟ್ಟಿಸುವ ಕನಸುಗಳು, ಭ್ರಮೆಗಳು, ಅವುಗಳ ನಡುವಿನ ಕಂದಕ ಅದರಲ್ಲಿ ಸಿಲುಕಿ ನಲುಗುವ, ನಾಶವಾಗುವ ದುರಂತವನ್ನು ಮನಮುಟ್ಟುವಂತೆ ಬಿಚ್ಚಿಡುತ್ತದೆ. ‘ಆಕಾಶ ಮತ್ತು ಪಕ್ಷಿ’ ಎಲ್ಲಾ. ಭಾವನಾತ್ಮಕ ಸಂಬಂಧಗಳು ರಕ್ತಸಂಬಂಧಕ್ಕಿಂತಲೂ ಮಿಗಿಲು ಎಂಬುದನ್ನು ತುಂಬಾ ಮನೋಜ್ಞವಾಗಿ ಕತೆ ತಿಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.