ಕ್ಯಾನ್ವಾಸ್, ಬಣ್ಣ, ಕುಂಚಗಳ ಜೊತೆಗೆ ಸೃಜನಶೀಲತೆಯ ಒಂದಂಶ ಹೊಳೆದರೆ ಸಾಕು, ನುರಿತ ಚಿತ್ರಕಲಾವಿದರಿಂದ ಅತ್ಯುತ್ತಮವಾದ ಕಲಾಕೃತಿಗಳು ಜೀವತಳೆಯುತ್ತವೆ. ಇದರಂತೆ ಒಬ್ಬೊಬ್ಬ ಕಲಾವಿದ ಒಂದೊಂದು ‘ವಸ್ತು’ವಿನ ಮೇಲೆ ಸರಣಿ ಕಲಾಕೃತಿಗಳನ್ನು ರಚಿಸಿ ಜನಮನ ಸೆಳೆದ ಕಲಾವಿದರು ಅನೇಕರು. ರಾಯಚೂರಿನ ಯುವ ಕಲಾವಿದ ಭೀಮರಾವ್ ಅವರು ಗುಬ್ಬಿಯನ್ನು ‘ವಸ್ತು’ವನ್ನಾಗಿಸಿಕೊಂಡು ತಮ್ಮ ಮನೋಲಹರಿಯನ್ನು ಕ್ಯಾನ್ವಾಸ್ ಮೇಲೆ ಹರಡಿದ್ದಾರೆ.
ಸ್ವಚ್ಛಂದವಾಗಿ ಹಾರಾಡುವ ಗುಬ್ಬಿಯು ಕ್ಯಾನ್ವಾಸ್‌ನಲ್ಲಿ ಬಂಧಿಯಾಗಿ ಸಮಾಜದಲ್ಲಿನ ಆಗುಹೋಗುವ ಅನೇಕ ಜ್ವಲಂತ ಸಮಸ್ಯೆಗಳನ್ನು ಅನಾವರಣ ಮಾಡುತ್ತಾ ಹೋಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ತಂತ್ರಜ್ಞಾನದ ದುಷ್ಪರಿಣಾಮ, ಮಹಿಳಾ ಲೋಕದ ತಲ್ಲಣಗಳು, ನಿಸರ್ಗದ ಮೇಲೆ ಆಗುತ್ತಿರುವ ದೌರ್ಜನ್ಯ, ವನ್ಯಜೀವಿಗಳ ಅವಸಾನ,
ಮೂಢನಂಬಿಕೆಗಳಿಂದ ಪಕ್ಷಿಸಂಕುಲದ ನಾಶ, ನೀರಿನ ಉಳಿತಾಯ, ಕಾರ್ಪೋರೇಟ್ ವ್ಯವಸ್ಥೆಯ ಕುಟಿಲತೆ...ಹೀಗೆ ಗುಬ್ಬಿ ಪ್ರಚಲಿತ ವಿದ್ಯಮಾನಗಳ ಸಂಕೇತವಾಗಿದೆ. ಅವರು ಇಪ್ಪತ್ತೈದಕ್ಕೂ ಹೆಚ್ಚು ವಿಶೇಷ ಕಲಾಕೃತಿಗಳನ್ನು ರಚನೆ ಮಾಡಿದ್ದು ಅವು ಕಲಾಸಕ್ತರ, ನೋಡುಗರ ಮನಸೆಳೆದಿವೆ.
ಮನುಷ್ಯರಿಗೆ ಹತ್ತಿರವಾದ ಗುಬ್ಬಿಯನ್ನು ಇಟ್ಟುಕೊಂಡು ಪ್ರಾಯೋಗಿಕವಾಗಿ ಗಂಭೀರವಾದ ವಿಚಾರಗಳನ್ನು ಕ್ಯಾನ್ವಾಸ್ ಮೇಲೆ ಅಭಿವ್ಯಕ್ತಗೊಳಿಸುತ್ತಾ ಹೋಗಿದ್ದಾರೆ. ಅಕ್ರಲಿಕ್, ಆಯಿಲ್ ಕಲರ್, ವಾಟರ್ ಕಲರ್, ಮಿಕ್ಸ್ ಮೀಡಿಯಾದಲ್ಲಿ ಅರಳಿದ ಈ ಕಲಾಕೃತಿಗಳನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಕಲಾವಿದ ಭೀಮರಾವ್ ಆರಂಭದಲ್ಲಿ ಮಹಿಳಾ ಸಮಸ್ಯೆಗಳ ಸರಣಿಯನ್ನು ಮಾಡುತ್ತಿದ್ದರು. ಹಿರಿಯ ಕಲಾವಿದರ ಸಲಹೆಯಂತೆ ಸೃಜಶೀಲತೆಯ ನಿಟ್ಟಿನಲ್ಲಿ ಗುಬ್ಬಿಯ ಮೂಲಕ ಸ್ತ್ರೀ ಸಂವೇದನೆ ಸೇರಿದಂತೆ ಜಗತ್ತಿನ ಮನುಕುಲದ, ವನ್ಯಜೀವಿಗಳ ಬವಣೆಗಳನ್ನು ಹೇಳುತ್ತಾ ಹೊರಟಿದ್ದಾರೆ.
ಚಿತ್ರಕಲೆಯಲ್ಲಿ ಎಂ.ವಿ.ಎ ಅಭ್ಯಾಸ ಮಾಡಿದ ಭೀಮರಾವ್, ವಿವಿಧ ವಿಶ್ವವಿದ್ಯಾಲಯಗಳು ಏರ್ಪಡಿಸಿದ್ದ ಚಿತ್ರಕಲಾ ಶಿಬಿರಗಳು, ಕಾರ್ಯಗಾರಗಳಲ್ಲಿ ಪಾಲ್ಗೊಂಡು ತಮ್ಮ ಕೌಶಲವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಗುಬ್ಬಿ ಕಲಾಕೃತಿಗಳನ್ನು ಹಂಪಿ, ಹಾವೇರಿ, ಕಲಬುರಗಿ, ಬೀದರ್, ರಾಯಚೂರು, ಬೆಂಗಳೂರು ಅಲ್ಲದೇ ಕೊಚ್ಚಿ, ಕೊಯಮತ್ತೂರು, ಹೈದರಾಬಾದ್, ಉಜ್ಜಯಿನಿ, ಮಧ್ಯಪ್ರದೇಶ–ಹೀಗೆ ಹೊರನಾಡುಗಳಲ್ಲಿಯೂ ಪ್ರದರ್ಶನ ಮಾಡಿದ್ದಾರೆ. ಆನ್‌ಲೈನ್ ಚಿತ್ರಕಲಾ ಸ್ಪರ್ಧೆಗಳಲ್ಲಿ ಇವರ ಕಲಾಕೃತಿಗಳಿಗೆ ಪ್ರಶಸ್ತಿ, ಪುರಸ್ಕಾರಗಳು ಒಲಿದು ಬಂದಿವೆ. ಮುಖ್ಯವಾಗಿ ದೇಶದ ಅನೇಕ ರಾಜ್ಯಗಳಲ್ಲಿನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಲ್ಲಿಯೂ ಸ್ಥಳದಲ್ಲೇ ಗುಬ್ಬಿಯ ‘ವಸ್ತು’ ಇಟ್ಟುಕೊಂಡು ಮಾಡಿದ ಕಲಾಕೃತಿಗಳಿಗೆ ಬಹುಮಾನಗಳು ಸಂದಿವೆ.
ಸಾಮಾನ್ಯವಾಗಿ ಪ್ರಾಣಿ, ಪಕ್ಷಿಗಳು ಎಂಥವರನ್ನಾದರೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತವೆ. ಇದೇ ವಿಚಾರವನ್ನು ಇಟ್ಟುಕೊಂಡು, ಗುಬ್ಬಿಗಳ ಮೂಲಕ ಈ ಯುಗದ ಕಥೆ–ವ್ಯಥೆಯನ್ನು ಹೇಳುವ ಯುವ ಕಲಾವಿದ ಭೀಮರಾವ್ ಅವರ ಕಳಕಳಿ, ಚಿತ್ರಕಲಾ ನೈಪುಣ್ಯತೆ ನಿಜಕ್ಕೂ ಶ್ಲಾಘನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.