ಆ ದಿನ ಅನಿ ಮಂಗಳೂರು ಅವರು ಬಸ್ತಿ(ಭಿಕ್ಷಾಟನೆ) ಮುಗಿಸಿ ರಾತ್ರಿ ಮನೆ ತಲುಪುವ ಧಾವಂತದಲ್ಲಿದ್ದರು. ಆದರೆ ಅವರು ಲಿಂಗತ್ವ ಅಲ್ಪಸಂಖ್ಯಾತೆ ಎನ್ನುವುದು ಗೊತ್ತಾಗುತ್ತಿದ್ದಂತೆ ಆಟೊ ಚಾಲಕರು ಆಟೊ ನಿಲ್ಲಿಸದೆ ವೇಗವನ್ನು ಹೆಚ್ಚಿಸಿಕೊಂಡು ಹೋಗುತ್ತಿದ್ದರು. ಮನೆಯಲ್ಲಿ ತಾಯಿ ಒಬ್ಬರೇ ಇದ್ದಿದ್ದರಿಂದ ಅನಿ ಅವಮಾನದಿಂದ ಕುದಿಯುತ್ತಲೇ ದಾಪುಗಾಲು ಹಾಕುತ್ತಾ ನಡೆದೇ ಮನೆ ತಲುಪಿದ್ದರು. ತಮಗಾದ ಅವಮಾನವನ್ನು ನೆನೆದು ಇಡೀ ರಾತ್ರಿ ಕಣ್ಣೀರು ಹಾಕಿದರು. ನಮ್ಮದಲ್ಲದ ತಪ್ಪಿಗೆ ಸಮಾಜ ಏಕೆ ನಮ್ಮನ್ನು ಹೀಗೆ ಕಾಣುತ್ತದೆ ಎಂದು ಸಂಕಟಪಟ್ಟರು. ಆಗ ತಾಯಿ, ‘ನಿನ್ನ ಕಾಲ ಮೇಲೆ ನೀನು ನಿಂತಾಗ ಮಾತ್ರ ಇಂಥ ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು’ ಎಂದು ಸಮಾಧಾನ ಮಾಡಿದರು. ಈ ಘಟನೆ ಅನಿ ಅವರ ಆತ್ಮಾಭಿಮಾನಕ್ಕೂ ಪೆಟ್ಟು ನೀಡಿತ್ತು. ಈ ಅವಮಾನವನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ದಿಟ್ಟ ನಿರ್ಧಾರಕ್ಕೆ ಬಂದರು. ತಾವೇ ಆಟೊ ಖರೀದಿಸಲು ಸಂಕಲ್ಪ ಮಾಡಿದರು!
ಫೈನಾನ್ಸ್‌ನಿಂದ ಸಾಲ ಪಡೆದು ಮೊದಲಿಗೆ ಒಂದು ಆಟೊ ಖರೀದಿಸಿದರು. ಆದರೆ ಆಟೊ ಖರೀದಿಸಿ, ಚಾಲನೆ ಕಲಿತರೂ ಅಂದುಕೊಂಡಂತೆ ಜೀವನ ಸಾಗಲಿಲ್ಲ. ಆಟೊ ಓಡಿಸುವವರು ಲಿಂಗತ್ವ ಅಲ್ಪಸಂಖ್ಯಾತೆ ಎಂದು ತಿಳಿದ ತಕ್ಷಣ ಜನರು ಕಪೋಲಕಲ್ಪಿತ ಭಯದಿಂದ ಆಟೊವನ್ನೇ ಹತ್ತುತ್ತಿರಲಿಲ್ಲ. ಬೇರೆ ದಾರಿ ಕಾಣದ ಅನಿ ಆಟೊವನ್ನು ಬಾಡಿಗೆಗೆ ನೀಡಿದರು. ದಿನದ ಬಾಡಿಗೆ ಪಡೆಯಲು ಆರಂಭಿಸಿದರು. ಅನಂತರ ದುಡಿಮೆ ಕೈಹಿಡಿಯಿತು. ಇರುವ ಆಟೊ ಆಧಾರದಲ್ಲಿ ಬ್ಯಾಂಕುಗಳಲ್ಲಿ ಮತ್ತು ಫೈನಾನ್ಸ್‌ಗಳಲ್ಲಿ ಸಾಲ ಮಾಡಿ ಹಂತ ಹಂತವಾಗಿ ನಾಲ್ಕು ಆಟೊ ಖರೀದಿಸಿದರು.
ಈ ದಿಟ್ಟ ಹೆಜ್ಜೆಯಿಂದ ಅನಿ ಅವರ ಬದುಕು ತಕ್ಕಮಟ್ಟಿಗೆ ಸುಧಾರಿಸಿದೆ. ಸ್ವಾವಲಂಬಿ ಜೀವನದ ಜೊತೆಗೆ ಬಡತನದ ಬೇಗೆಯಲ್ಲಿ ಬೆಂದ ತಂದೆ–ತಾಯಿಗೂ ಸಹಾಯ ಮಾಡುತ್ತಿದ್ದಾರೆ. ಮನೆ ಮಗ ಲಿಂಗತ್ವ ಅಲ್ಪಸಂಖ್ಯಾತೆಯಾದ ನಂತರ ಹೊಟ್ಟೆಯೊಳಗೇ ಸಂಕಟಪಡುವ ತಂದೆ–ತಾಯಿಯ ನೋವಿಗೆ ‘ಮುಲಾಮು’ ಹಚ್ಚುತ್ತಿದ್ದಾರೆ.
ಅನಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಿರೇದಿನ್ನಿ ಕ್ಯಾಂಪ್‌ನವರು. ಕಡುಬಡತನದ ಕುಟುಂಬ. ತಂದೆ–ತಾಯಿ ಕೂಲಿ ಮಾಡಿ ನಾಲ್ವರು ಮಕ್ಕಳನ್ನು ಸಾಕುತ್ತಿದ್ದರು. ಈ ಮಧ್ಯೆ ಅನಿ ಅವರು ಎರಡನೇ ತರಗತಿಯಲ್ಲಿದ್ದಾಗಲೇ ಅವರಲ್ಲಿ ಶಾರೀರಿಕ ಬದಲಾವಣೆಗಳಾಗುತ್ತಿದ್ದವು. ಆದರೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಗಾಯದ ಮೇಲೆ ಬರೆ ಎಳೆಯುವಂತೆ ಪ್ರತಿ ದಿನ, ಪ್ರತಿ ಕ್ಷಣ ಅವಮಾನ, ತಾತ್ಸಾರ ಮಾಡುವುದನ್ನು ಕಂಡ ಅನಿ, ‘ನಾನು ಈ ರೀತಿ ಅವಮಾನಕ್ಕೆ ಒಳಗಾಗಬಾರದು ಎಂದರೆ ಶಿಕ್ಷಣವೊಂದೇ ಅಸ್ತ್ರ’ ಎಂದುಕೊಂಡರು. ಹೀಗಾಗಿ ಶಾರೀರಿಕ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸದ ಅವರು ಹಿರೇದಿನ್ನಿ ಕ್ಯಾಂಪ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಹಿರೇದಿನ್ನಿಯಲ್ಲಿ 6-8ನೇ ತರಗತಿ, ತೋರಣದಿನ್ನಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಲಿಂಗಸೂರಿನಲ್ಲಿ ಪದವಿ ಪಡೆದರು. ದಿನವೂ ಕನಿಷ್ಠ ಆರು ಕಿಲೋಮೀಟರ್ ನಡೆದೇ ಸಾಗಬೇಕಿತ್ತು. ಆದರೂ ಶಿಕ್ಷಣ ಪಡೆಯಲೇಬೇಕೆನ್ನುವ ಉತ್ಕಟತೆ ಅವರಲ್ಲಿತ್ತು.
ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ್ದರಿಂದ ಮಂಗಳೂರಿನ ಸರ್ಕಾರಿ ಬಿ.ಎಡ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಶಿಕ್ಷಕ ವೃತ್ತಿ ಮಾಡುವ ಹಂಬಲವೇನೋ ಹೆಚ್ಚಿತ್ತು. ಆದರೆ ಬಿ.ಎಡ್ ಎರಡನೇ ಸೆಮಿಸ್ಟರ್ ಓದುತ್ತಿರುವಾಗ ಅನಿ ಅವರಲ್ಲಿ ತಳಮಳ ಹೆಚ್ಚಾಯಿತು. ಅವರಲ್ಲಾಗುತ್ತಿದ್ದ ಶಾರೀರಿಕ ಮತ್ತು ಹಾವಭಾವ ಬದಲಾವಣೆ ಬಗ್ಗೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೋ ಎಂಬ ಅಂಜಿಕೆಯಿಂದ ಲಿಂಗತ್ವ ಅಲ್ಪಸಂಖ್ಯಾತರಂತೆ ಬದುಕಲು ಬೆಂಗಳೂರನ್ನು ಆಯ್ಕೆ ಮಾಡಿಕೊಂಡರು. ಅಲ್ಲಿ ಸಮುದಾಯದವರ ಜೊತೆ ಸೇರಿದರು. ಆದರೆ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಅವರಿಗೆ ಬಸ್ತಿ ಅನಿವಾರ್ಯ ಎಂಬುದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ‘ಬಸ್ತಿ, ಲೈಂಗಿಕ ವೃತ್ತಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದಾಗ ಚಿತ್ರಹಿಂಸೆ, ಅವಮಾನ ಎದುರಿಸಬೇಕಾಯಿತು. ರಾತ್ರೋರಾತ್ರಿ ಅಲ್ಲಿಂದ ಹೊರಟು ಮತ್ತೆ ಮಂಗಳೂರಿಗೆ ಬಂದರು. ಪದವಿ ಅಂಕಪಟ್ಟಿ ಹಿಡಿದು ಹೋಟೆಲ್‌ಗಳು, ಕಚೇರಿಗಳಿಗೆ ಉದ್ಯೋಗಕ್ಕಾಗಿ ಅಲೆದಾಡಿದರು. ಎಲ್ಲ ಕಡೆ ನಿರಾಕರಣೆಯೊಂದೇ ಉತ್ತರವಾಗಿತ್ತು. ಉದ್ಯೋಗ ನಿರಾಕರಣೆ, ಮನೆ ಬಾಡಿಗೆ ಕೇಳಿದರೆ ಬಾಡಿಗೆದಾರರಿಂದ ಒಲ್ಲೆ ಎಂಬ ಮಾತು, ಸಾರ್ವಜನಿಕ ಸಾರಿಗೆಯಲ್ಲೂ ತಾತ್ಸಾರದ ನೋಟ– ಪ್ರತಿ ನಿತ್ಯ ಇಂಥ ತಿರಸ್ಕಾರದ ಅನುಭವಗಳಿಂದ ಅವರು ನೊಂದು ಬೆಂದಿದ್ದರು. ಬೇರೆ ದಾರಿ ಕಾಣದೆ ಬಸ್ತಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಆ ರಾತ್ರಿ ಆದ ಅವಮಾನ ಅವರ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು.
ಹೀಗಿ ಅವಮಾನದಿಂದ ನೊಂದು ಬೆಂದವರು ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಳ್ಳುತ್ತಾರೆ. ಆದರೆ, ಅನಿ ಅದನ್ನೇ ಸವಾಲನ್ನಾಗಿ ಸ್ವೀಕರಿಸಿ, ಜಯಿಸಿ ತೋರಿಸಿದ್ದಾರೆ. ತಮ್ಮಂಥವರಿಗೆ ಹೊಸ ದಾರಿಯನ್ನೂ ತೋರಿಸಿದ್ದಾರೆ.
ಜಿಮ್ ಟ್ರೈನರ್ ಮತ್ತು ಸಮಾಜ ಸೇವೆ...
ಅನಿ ಅವರಿಗೆ ಜಿಮ್ ಸೇರಲು ಆಸಕ್ತಿ ಇತ್ತು. ಆದರೆ ಲಿಂಗತ್ವ ಅಲ್ಪಸಂಖ್ಯಾತೆ ಎಂಬ ಕಾರಣಕ್ಕಾಗಿ ಯಾವ ಜಿಮ್‌ಗಳಲ್ಲೂ ಅವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಕೊನೆಗೂ ಒಬ್ಬರು ಜಿಮ್ ಪ್ರವೇಶಕ್ಕೆ ಅನುಮತಿ ನೀಡಿದರು. ಅಲ್ಲಿ ಜಿಮ್ ಮಾಡುವ ಜೊತೆಗೆ ತರಬೇತಿಯನ್ನೂ ಪಡೆದ ಅನಿ, ಸದ್ಯ ಜಿಮ್‌ವೊಂದರಲ್ಲಿ ವೈಯಕ್ತಿಕ ತರಬೇತುದಾರರಾಗಿದ್ದಾರೆ. ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಕಥಾಹಂದರ ಹೊಂದಿರುವ ‘ಶಿವಲೀಲಾ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಹಾಗೂ ಇದೇ ಸಿನಿಮಾದಲ್ಲಿ ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಮ್ಮಂತೆ ಅವಮಾನ, ಕಷ್ಟ ಎದುರಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಏನನ್ನಾದರೂ ಮಾಡಬೇಕು ಎಂಬುದು ಅನಿ ಅವರ ಮನದಾಳದ ತುಡಿತ. ಹೀಗಾಗಿ ತಮ್ಮ ಆಟೊದಲ್ಲಿ ಗರ್ಭಿಣಿಯರಿಗೆ ಮತ್ತು ಹಿರಿಯ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಜೊತೆಗೆ ಆಟೊದಿಂದ ಬರುವ ಹಣದಲ್ಲಿ ಅಲ್ಪಭಾಗವನ್ನು ಅನಾಥಾಶ್ರಮಕ್ಕೆ ಊಟ ನೀಡಲು ಮತ್ತು ಬೀದಿಬದಿ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಲು ಮೀಸಲಿಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.