ADVERTISEMENT

ಎಳೆಯ ಹುಡುಗರ ಮೀನು ಶಿಕಾರಿ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:52 IST
Last Updated 13 ಸೆಪ್ಟೆಂಬರ್ 2025, 23:52 IST
ಈ ಜಾಗದಲ್ಲಿ ಮೀನು ಸಿಗ್ತವೆ ಕನ್ಲಾ...
ಈ ಜಾಗದಲ್ಲಿ ಮೀನು ಸಿಗ್ತವೆ ಕನ್ಲಾ...   

ಮಳೆಗಾಲದಲ್ಲಿ ಗ್ರಾಮೀಣ ಭಾಗದ ಮಕ್ಕಳು ಸಿಗುವುದು ಒಂದೋ ಕೆರೆ ದಂಡೆಯಲ್ಲಿ ಅಥವಾ ಹಳ್ಳದ ಹರಿವಿಗೆ ಅಡ್ಡಲಾಗಿ ಕಟ್ಟಿದ ಸಣ್ಣ ಅಣೆಕಟ್ಟುಗಳ ಮೇಲೆ. ಇವರಿಗೆ ಅಲ್ಲೇನು ಕೆಲಸ ಎಂದು ಪ್ರಶ್ನಿಸಿದರೆ ಸಿಗುವ ಉತ್ತರ ‘ಮೀನು ಶಿಕಾರಿ’.

ಇತ್ತೀಚೆಗಷ್ಟೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕೆರೆಗೆ ಕೋಡಿ ಬಿದ್ದಿದ್ದರಿಂದ ಅಲ್ಲಿ ನೀರ ಹರಿವು ತುಸು ಹೆಚ್ಚೇ ಇತ್ತು. ಒಂದು ಇಳಿ ಸಂಜೆ ಮಕ್ಕಳ ದಂಡು ಕೊಟ್ಟೂರು ರಸ್ತೆಯಲ್ಲಿರುವ ಹಳ್ಳದ ದಂಡೆಯಲ್ಲಿದ್ದ ಬಳ್ಳಾರಿ ಜಾಲಿಯ ಪೊದೆಯೊಳಗೆ ಕೈ ಹಾಕಿ ದಾರ ಸುತ್ತಿದ ಕೋಲುಗಳನ್ನು ಮೆಲ್ಲಗೆ ಹೊರ ತೆಗೆದರು. ಮತ್ತೊಂದಿಷ್ಟು ಹುಡುಗರು ಅಲ್ಲೇ ಇದ್ದ ತಿಪ್ಪೆಯನ್ನು ಕೋಳಿ ಕೆದರಿದಂತೆ ಗೇಣು ಉದ್ದದ ಕೋಲಿನಿಂದ ಕೆದರಲು ಶುರು ಮಾಡಿದರು. ಇವರೇನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯದೇ ಗೊಂದಲಕ್ಕೆ ಬಿದ್ದೆ.

ಬಾಲಕನೊಬ್ಬ ಹರಿಯುವ ನೀರಿನೆಡೆಗೆ ದೃಷ್ಟಿ ಮೊನಚು ಮಾಡಿ ‘ಭರ್ಜರಿ ಮೀನುಗಳು ಇದಾವೆ ಬರ್ರೋ ಬೇಗ...’ ಎಂಬ  ಸುಳಿವನ್ನು ಜೊತೆಗಾರರಿಗೆ ನೀಡಿದ. ತಕ್ಷಣ ಗಾಳವನ್ನು ಥೇಟ್ ಬಿಲ್ಲು ಎತ್ತಿದಂತೆ ಎತ್ತಿಕೊಂಡ ಒಂದಿಷ್ಟು ಹುಡುಗರು ತಿಪ್ಪೆ ಬಳಿ ಹೋದರು. ಅಷ್ಟರಲ್ಲಾಗಲೇ ಅಲ್ಲಿಯ ತಂಡ ಹೇರಳವಾಗಿ ಸಿಕ್ಕ ಎರೆಹುಳುಗಳನ್ನು ಪುಟ್ಟ ಕೈ ಚೀಲದಲ್ಲಿ ತುಂಬಿದ್ದರು. ಅವರಿಂದ ಒಂದಿಷ್ಟು ಎರೆಹುಳುಗಳನ್ನು ತೆಗೆದುಕೊಂಡು ಗಾಳಕ್ಕೆ ನಯವಾಗಿ ಪೋಣಿಸಿದರು. ಹೀಗೆ ಮೀನಿನ ಶಿಕಾರಿಗೆ ಸರ್ವ ಸನ್ನದ್ಧರಾಗಿ ನೀರಿಗಿಳಿದರು ಆ ಹುಡುಗರು.

ADVERTISEMENT

ಮೀನಿನ ಗುಂಗಲ್ಲೇ ಮಕ್ಕಳು..

ಮಳೆಗಾಲದ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆ ಬಿಟ್ಟರೆ ಸಿಗುವುದು ಹಳ್ಳ–ಕೊಳ್ಳ ಸೇರಿದಂತೆ ನೀರಿನ ಮೂಲಗಳ ಬಳಿಯಲ್ಲೇ. ಅದೆಷ್ಟೋ ಸಾರಿ ಶಾಲೆಗೆ ಚಕ್ಕರ್ ಹಾಕಿ ಮೀನು ಶಿಕಾರಿಗಾಗಿಯೇ ನೀರ ಹರಿವಿನ ಆಸುಪಾಸಿನಲ್ಲಿ ಸುಳಿದಾಡುತ್ತಿರುತ್ತಾರೆ. ಶಾಲೆಗೆ ರಜೆ ಇದ್ದರಂತೂ ಮುಗಿದೇ ಹೋಯಿತು. ಬೆಳ್ಳಂಬೆಳಗ್ಗೆ ಮೀನು ಹಿಡಿಯಲು ಬಂದವರು
ಕತ್ತಲಾಗುವವರೆಗೆ ಧ್ಯಾನಸ್ಥ ಸ್ಥಿತಿಯಲ್ಲೇ ಇರುತ್ತಾರೆ! ತಮ್ಮ ತಮ್ಮಲ್ಲೇ ಪೈಪೋಟಿಗೆ ಬಿದ್ದು ಮೀನುಗಳನ್ನು ಹಿಡಿಯುವ ಉಮೇದಿನಲ್ಲಿ ಮನೆ, ಮಠ, ಓದು, ನಿದ್ದೆ, ಹಸಿವು, ನೀರೆಡಿಕೆ.. ಇದ್ಯಾವುದನ್ನು ಲೆಕ್ಕಿಸುವುದೇ ಇಲ್ಲ. ಹೀಗೆ ಮಳೆಗಾಲದ ಬಹುತೇಕ ದಿನಗಳು ಮೀನಿನ ಗುಂಗಿನಲ್ಲೇ ಇರುವ ಮಕ್ಕಳಿಗೆ ಕನಸು, ಮನಸಲ್ಲೂ ಮೀನುಗಳೇ ಬರುತ್ತಿರುತ್ತವೆ.

ಜಿಲೇಬಿ, ಮೊಟ್ಟು, ಉಲುಚಿ ಅಥವಾ ಮಳಲಿ.. ಇದೇ ಜಾತಿಯ ಮೀನುಗಳು ಈಗ ಹೇರಳವಾಗಿ ಸಿಗುತ್ತವೆ. ಮಕ್ಕಳು ತಮ್ಮ ತಮ್ಮಲ್ಲೇ ಈ ಮೀನುಗಳನ್ನು ಪಾಲು ಮಾಡಿಕೊಂಡು, ಕೈಚೀಲದಲ್ಲಿ ತುಂಬಿಕೊಂಡು ಮನೆ ಕಡೆ ಒಂದೇ ಉಸಿರಿನಲ್ಲಿ ಓಟ ಕೀಳುತ್ತಾರೆ. ‘ಅಮ್ಮಾ, ಮೀನು ಸಿಕ್ಕವು..!’ ಎಂದು ದೂರದಿಂದಲೇ ಹಿಗ್ಗಿನಿಂದಲೇ ಕೂಗುತ್ತಾರೆ. ಆ ತಾಯಿಯೂ ಅಷ್ಟೇ ಕುತೂಹಲ, ಅತ್ಯುತ್ಸಾಹದಿಂದ ಕೈಚೀಲ ಪಡೆದು ‘ಒಳ್ಳೆಯ ಮೀನುಗಳು ಸಿಕ್ಕಾವೆ...’ ಎಂದು ಮೆಚ್ಚುಗೆ ಸೂಚಿಸಿದಾಗ ಮಕ್ಕಳ ಕಾಲು ನೆಲದ ಮೇಲೆಯೇ ಇರುವುದಿಲ್ಲ. ಮೀನು ತಂದು ತಮ್ಮ ಆಸೆಯಂತೆ ಅಡುಗೆ ಸಾಗಿದರಂತೂ ಹುಚ್ಚೆದ್ದು ಕುಣಿಯುತ್ತವೆ. ಪುನಃ ಹುಡುಗರು ಮೀನು ಹಿಡಿಯಲು ಹೊರಟು ನಿಂತರೆ ‘ಹುಷಾರು, ಜಾಸ್ತಿ ತೊಂದರೆ ತಗೋ ಬೇಡಿ. ಬೇಗ ಮರಳಿ ಮನೆಗೆ ಬನ್ನಿ...’ ಎಂದು ಆ ತಾಯಿ ಹರಸಿದರೆ ಆ ಹುಡುಗರಲ್ಲಿಯ ಹುರುಪು,
ಆತ್ಮವಿಶ್ವಾಸವನ್ನು ಅಂದಾಜಿಸಲೂ ಆಗದು.

ನೈಪುಣ್ಯ ಬೇಕು...

ಗಾಳ ಹಾಕಿ ಮೀನು ಹಿಡಿಯುವ  ಹುಡುಗರ ನೈಪುಣ್ಯ ಅಥವಾ ಕಲೆಗೆ ಜೋಳಿಗೆ ತುಂಬಾ ಮೀನು. ಯಾಕೆಂದರೆ ಒಮ್ಮೊಮ್ಮೆ ನೀರಿನಲ್ಲಿ ಗಾಳ ಹಾಕಿ ಗಂಟೆಗಟ್ಟಲೆ ಕಾದರೂ ಒಂದೂ ಮೀನು ಬೀಳುವುದಿಲ್ಲ. ಬಿದ್ದಾಗ ಸಕಾಲದಲ್ಲಿ ಗಾಳವನ್ನು ಮೇಲೆತ್ತದೇ ಹೋದರೆ ಮೀನು ಎರೆಹುಳವನ್ನು ತಿಂದು ನಾಜೂಕಾಗಿ ಜಾರಿ ಹೋಗುತ್ತದೆ. ಈ ಕಾರಣಕ್ಕೆ ಅನೇಕರು ಗಾಳ ಹಾಕುವ ಸಾಹಸ ಮಾಡದೇ ನುರಿತವರ ಕೈಗೆ ಗಾಳ ಕೊಟ್ಟು ಸಹಾಯಕರಾಗುತ್ತಾರೆ. ಅದೂ ಇಲ್ಲದಿದ್ದರೆ ಗಾಳದ ಬದಲಾಗಿ ಮಾಸಿದ ಸೀರೆ, ಸೊಳ್ಳೆ ಪರದೆ, ಕುಳೇವುಗಳನ್ನು ಬಳಸಿ ಮೀನು ಹಿಡಿಯುತ್ತಾರೆ.

ಪುಕ್ಕಟೆಯಾಗಿ ಮೀನು ಸಿಗುವುದು ಮಳೆಗಾಲದಲ್ಲೇ. ಅದರಲ್ಲೂ ಹಳ್ಳ–ಕೊಳ್ಳಗಳು ತುಂಬಿ ಹರಿದು, ಕೆರೆ–ಕಟ್ಟೆಗಳು ಕೋಡಿ ಬಿದ್ದರೆ, ಒಡೆದರೆ ಬಡ ವರ್ಗದವರಲ್ಲಿ ಮೀನೂಟದ ಆಸೆಯೂ ಚಿಗುರುತ್ತದೆ, ತೀರುತ್ತದೆ. ನೀರ ಹರಿವಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು, ನೀರಾಟದಲ್ಲಿ ಕಳೆದು ಹೋಗಲು ಹಲವರು ಧಾವಿಸಿದರೆ ಕೆಲವು ವರ್ಗದ ಮಕ್ಕಳು ಮಾತ್ರ ಮೀನು ಸಿಗುವ ಆಸೆಯೊಂದಿಗೆ ಇಂತಹ ಸ್ಥಳಗಳಿಗೆ ದೌಡಾಯಿಸುತ್ತಾರೆ. ಕೋಡಿ ಬಾಯಲ್ಲಿ, ನೀರು ಹರಿಯುವ ಜಾಡಿನಲ್ಲಿ ಹಾಗೆ ಹರಿಯುವ ನೀರಿಗೆ ಮೀನು ಎದುರು ಈಜುವ ಜಾಗಗಳನ್ನು ಶಿಕಾರಿಗಾಗಿ ಹುಡುಕಿಕೊಳ್ಳುತ್ತಾರೆ.  

ಅಜ್ಜಿಯ ಹಳೆ ಸೀರೆ ಸಿಕ್ಕಿದ್ರೆ ಹಿಂಗೂ ಮೀನು ಹಿಡಿಬೋದು...

ಮೂರೊತ್ತೂ ಮೀನೂಟ

ದೊಡ್ಡವರಿಗೆ ನಿತ್ಯವೂ ಮೀನಿನ ಬೇಟೆ ಹೋಗಲು ಸಮಯ ಇರುವುದಿಲ್ಲ. ಅವರಿಗೆಲ್ಲ ದುಡಿಮೆಯೇ ಮುಖ್ಯ. ಹೀಗಾಗಿ ಈ ವರ್ಗದ ಮಕ್ಕಳು ಮೀನಿನ ಶಿಕಾರಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ₹5-₹10 ಕೊಟ್ಟು ಗಾಳ ಕೊಂಡುಕೊಳ್ಳುತ್ತಾರೆ. ಒಮ್ಮೆ ಖರೀದಿಸಿದರೆ ಸಾಕು. ಹಳ್ಳದಲ್ಲಿ ನೀರ ಹರಿವು ನಿಲ್ಲುವವರೆಗೆ, ಗುಂಡಿಗಳಲ್ಲಿ ನೀರು ಇಂಗುವವರೆಗೆ ಮೀನುಗಳಿಗೆ ಬರವಿಲ್ಲ. ಹೀಗಾಗಿ ಮಕ್ಕಳ ಈ ಹೆಚ್ಚುವರಿ, ಸ್ವಯಂ ಪ್ರೇರಿತ ಮೀನು ಶಿಕಾರಿಯಿಂದ ಇವರ ಮನೆಗಳಲ್ಲಿ ನಿತ್ಯವೂ ಮೂರೊತ್ತೂ ಮೀನೂಟವೇ. ಸಣ್ಣ ಅಥವಾ ಮರಿ ಮೀನುಗಳು ಭರ್ಜರಿ ಆಗಿ ಸಿಕ್ಕರಂತೂ ಅವುಗಳಲ್ಲಿ ಒಂದಿಷ್ಟನ್ನು ತಮ್ಮ ಸುಪರ್ದಿಯಲ್ಲಿರುವ ನೀರಿನ ಮೂಲಗಳಲ್ಲಿ ಬಿಟ್ಟುಕೊಂಡು ಸಾಕುತ್ತಾರೆ. ಮಿಕ್ಕಿದ್ದನ್ನು ಒಣಗಿಸಿ ಸಂರಕ್ಷಿಸಿಕೊಳ್ಳುತ್ತಾರೆ. ಹೀಗೆ ಮಳೆಗಾಲದ ಈ ಮೀನು ಶಿಕಾರಿಯಿಂದ ವರ್ಷವಿಡೀ ಮೀನೂಟ ಸವಿಯುತ್ತಾರೆ.

ಮೊದಲೇ ಹೇಳಿದಂತೆ ಎಲ್ಲರಿಗೂ ಮೀನು ಹಿಡಿಯಲು ಬರುವುದಿಲ್ಲ. ಇದಕ್ಕೆ ಜಾಣ್ಮೆ ಬೇಕು. ವ್ಯವಧಾನ ಇರಬೇಕು. ಅಂದಹಾಗೆ ಮಕ್ಕಳು ಮೀನನ್ನು ಕೇವಲ ಊಟಕ್ಕಾಗಿ ಹಿಡಿಯುವುದಿಲ್ಲ. ಮೋಜಿಗಾಗಿ ಹಿಡಿಯುವುದೂ ಇದೆ. ಇದರಿಂದ ಅಪಾರ ಮೀನುಗಳು ಸಿಗುತ್ತವೆ. ಇದನ್ನೇ ಕಾದುಕೊಂಡಿದ್ದ ಕೆಲವರು ಇಂತಹ ಮಕ್ಕಳಿಗೆ ತಮ್ಮ ಮನಸ್ಸಿಗೆ ತೋಚಿದಷ್ಟು ಹಣ ಕೊಟ್ಟು ಮೀನುಗಳನ್ನು ಒಯ್ಯುತ್ತಾರೆ. ಹೀಗೆ ಮಕ್ಕಳಿಗೆ ಭಕ್ಷೀಸು ರೂಪದಲ್ಲಿ ಸಿಗುವ ಹಣ ಅವರ ಮನೆ, ಓದಿನ ಖರ್ಚಿಗೂ ಆಸರೆ ಆಗುತ್ತದೆ.

ಜಿಲೇಬಿ, ಮೊಟ್ಟು, ಮಳಲಿ … ಇವುಗಳೆಲ್ಲ ಮೀನೂಟ ಪ್ರೀಯರಿಗೆ ಬಲು ಅಚ್ಚುಮೆಚ್ಚು. ಈ ಮೀನುಗಳಿಂದ ಮಾಡಿದ ಬಗೆ ಬಗೆಯ ಖಾದ್ಯಗಳಂತೂ ಸ್ವಾದಿಷ್ಟಕರ. ಇಂತಹ ಜಾತಿಗಳ ಮೀನೂಟವೆಂದರೆ ಮೀನು ಪ್ರಿಯರಿಗೆ ಎರಡು ಹೊಟ್ಟೆ ಆಗಿ ಬಿಡುತ್ತದೆ. ಹೀಗಾಗಿ ಮನೆಯವರಷ್ಟೇ ಅಲ್ಲ ತಮ್ಮ ಬಂಧು-ಬಳಗವನ್ನೆಲ್ಲ ಆಹ್ವಾನಿಸಿ ಮೀನೂಟ ಮಾಡಿ ಬಡಿಸುತ್ತಾರೆ.

ಮಳೆಗಾಲ ಮುಗಿಯುವವರೆಗೂ ಇಂತಹ ದೃಶ್ಯಗಳು ಈ ಭಾಗದಲ್ಲಿ ಸಾಮಾನ್ಯ. ಆದರೆ, ಯಾರೂ ಕೂಡ ಮಕ್ಕಳಿಗೆ ಬೈಯುವುದಿಲ್ಲ. ಏಕೆಂದರೆ, ಮೀನು ಶಿಕಾರಿ ಮಕ್ಕಳಲ್ಲಿ ಏಕಾಗ್ರತೆ, ಜಾಗ್ರತೆ, ತಾಳ್ಮೆ, ಪರಸ್ಪರರಲ್ಲಿ ಹೊಂದಾಣಿಕೆ, ಹಂಚಿಕೊಳ್ಳುವ ಗುಣ, ಸಹಕಾರ, ಸಹಬಾಳ್ವೆ ಹಾಗೆ ಪರಿಶ್ರಮ, ಸಮಯದ ನಿರ್ವಹಣೆ.. ಹೀಗೆ ಪರೋಕ್ಷವಾಗಿ ಒಂದಿಷ್ಟು ಪಾಠಗಳನ್ನು ಕಲಿಸುತ್ತಿರುತ್ತದೆ.

ಇವತ್ತಿಂದ ಭರ್ಜರಿ ಬೇಟೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.