ADVERTISEMENT

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಪದ ಕಲಾಮೇಳಗಳ ಸಂಗಮ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 0:10 IST
Last Updated 16 ಮಾರ್ಚ್ 2025, 0:10 IST
   

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂದು ವಿವಿಧ ಜನಪದ ಕಲಾ ಪ್ರಕಾರಗಳ ವರ್ಣರಂಜಿತ ಮೆರವಣಿಗೆ ಹೊರಟಿತ್ತು. ಅದನ್ನು ಕಂಡವರು ಇದೇನು ದಸರಾ ಮೆರವಣಿಗೆ ಹೊರಟಿದೆಯೇ ಎನ್ನುವಂತೆ ಆಶ್ಚರ್ಯಚಕಿತರಾಗಿ ನೋಡಿ ಖುಷಿಪಡುತ್ತಿದ್ದರು. ಬೆಂಗಳೂರಿನ ಸ್ನೇಹ ಬಳಗದವರು ಆಯೋಜಿಸಿದ್ದ ಜನಪದ ಕಲಾಮೇಳಕ್ಕೆ ಇದು ಮುನ್ನುಡಿಯಂತಿತ್ತು.

ದೇಸಿ ಶೈಲಿಯಲ್ಲಿ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಜೆ ಆರೂವರೆಯಿಂದ ಒಂಬತ್ತೂವರೆ ತನಕ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 18 ಜನಪದ ಕಲಾ ತಂಡಗಳ 180 ಕಲಾವಿದರು ಪ್ರದರ್ಶನ ನಡೆಸಿಕೊಟ್ಟಿದ್ದು ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು. ಇಲ್ಲಿ ಪ್ರದರ್ಶಕ ಹಾಗೂ ಮೌಖಿಕ ಕಾವ್ಯ ಹಾಡುಗಾರಿಕೆ ಎರಡು ವಿಧದಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡಿತ್ತು.

ಚಿಕ್ಕಮಗಳೂರಿನ ನವೀನ್ ಮತ್ತು ಸಂಗಡಿಗರ ವೀರಗಾಸೆ ಕುಣಿತ ಶುರುವಿನಲ್ಲೇ ಪ್ರೇಕ್ಷಕರಲ್ಲಿ ಉತ್ಸಾಹ ತುಂಬಿತು. ಬೆನ್ನಿಗೇ ಸಹನಾ ಅವರು ವೀರಗಾಸೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು. ಸಾಮಾನ್ಯವಾಗಿ ಪುರುಷರೇ ಪಾಲ್ಗೊಳ್ಳುವ ಡೊಳ್ಳು ಕುಣಿತದಲ್ಲಿ ಶಿವಮೊಗ್ಗದ ಶಾಂತ ಮತ್ತು ಸಂಗಡಿಗರು ಪುರುಷರಿಗೇನು ಕಡಿಮೆ ಇಲ್ಲ ಎಂಬಂತೆ ವಿವಿಧ ಪಿರಮಿಡ್‌ಗಳನ್ನು ರಚಿಸಿದ್ದು ರೋಮಾಂಚನವನ್ನುಂಟು ಮಾಡಿತು. ಇದಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯ ಚಪ್ಪಾಳೆ ಸಂದಾಯವಾಯಿತು.

ADVERTISEMENT

ಕಲಾಮೇಳದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಲಾಗಿತ್ತು. ಮಹಿಳೆಯರೇ ಪ್ರದರ್ಶಿಸಿದ ಕೊಡಗಿನ ಉಮ್ಮತ್ತಾಟ, ವಿಜಯನಗರದ ಲಂಬಾಣಿ ನೃತ್ಯ ಆಕರ್ಷಕ ಉಡುಪು ಮತ್ತು ವಿಶಿಷ್ಟ ನೃತ್ಯದಿಂದ ಮನಸೆಳೆದವು. ತಮಟೆ–ನಗಾರಿಯಲ್ಲಿ ಹೆಣ್ಣು ಮಕ್ಕಳು ಪ್ರಧಾನವಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು. ಅವರು ನುಡಿಸಿದ ವೈವಿಧ್ಯಮಯ ನಗಾರಿ ನಾದಕ್ಕೆ ಪ್ರೇಕ್ಷಕರು ಹೆಜ್ಜೆ ಹಾಕಿದರು.

ರಾಯಚೂರಿನ ಡೊಳ್ಳು ಕುಣಿತ, ಚಿಕ್ಕಮಗಳೂರಿನ ವೀರಗಾಸೆ, ವಿಜಯನಗರ ಜಿಲ್ಲೆಯ ದೊಡ್ಡಾಟ, ಮೈಸೂರು, ಮಂಡ್ಯ, ಚಾಮರಾಜನಗರ ಪ್ರತಿನಿಧಿಸುವ ಬೀಸು ಕಂಸಾಳೆ, ರಾಮನಗರ ಸುತ್ತಮುತ್ತ ಕಾಣಿಸುವ ಪಟ ಕುಣಿತ, ಮಂಡ್ಯದ ವಿಶಿಷ್ಟ ಕಲೆ ಪೂಜಾ ಕುಣಿತ, ಉತ್ತರ ಕರ್ನಾಟಕದ ಕರಡಿ ಮಜಲು ಕಲಾಮೇಳದಲ್ಲಿ ಪಾಲ್ಗೊಂಡಿ ದ್ದವು. ಕರಾವಳಿ ಕರ್ನಾಟಕವನ್ನು ಪ್ರತಿನಿಧಿಸಿದ ಚಂಡೆ ಮೇಳ, ಬಯಲು ಸೀಮೆಯ ಗೊರವರ ಕುಣಿತ, ಮೈಸೂರಿನ ತಮಟೆ–ನಗಾರಿ ಮುಂತಾದ ಕಲಾ ಪ್ರಕಾರಗಳು ಕಲಾಮೇಳದಲ್ಲಿದ್ದವು.

ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದ ಕಲಾವಿದರಿಗೆ ಕಲಾಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಪ್ರತಿ ಕಲಾತಂಡವು ಪರಿಣತ ಪಕ್ಕ ವಾದ್ಯದೊಂದಿಗೆ ಕಲಾ ಕೌಶಲವನ್ನು, ಫಲುಕುಗಳನ್ನು ಪ್ರದರ್ಶಿಸಿದರು. ಜನಪದ ಕಲೆ ನಿಂತ ನೀರಲ್ಲ, ಹಾಗೆಯೇ ಪ್ರತಿ ಕಲಾ ಪ್ರಕಾರವೂ ಹೊಸ ಹೊಸ ವರಸೆಗಳನ್ನು ತನ್ನ ಪ್ರಕಾರಕ್ಕೆ ಸೇರಿಸಿಕೊಂಡು ಮೂಲರೂಪಕ್ಕೆ ಕೊಂಚವೂ ಊನವಾಗದಂತೆ ಜವಾಬ್ದಾರಿಯುತವಾಗಿ ಮುನ್ನಡೆಸುತ್ತದೆ. ಜನರನ್ನು ಆಕರ್ಷಿಸುವ ಕಲೆಯಾಗಿ ರೂಪಿಸುವಲ್ಲಿ ಈ ಕಲಾತಂಡಗಳು ವಿಶಿಷ್ಟತೆಯನ್ನು ಮೆರೆದವು.

ಉತ್ತರ ಕರ್ನಾಟಕದ ದೊಡ್ಡಾಟದ ತುಣುಕನ್ನು ಪಾಲಾಕ್ಷಯ್ಯ, ಸಂಗಡಿಗರು ವೇದಿಕೆ ಮೇಲೆ ತಂದರು. ತಾರಕ ಸ್ವರದಲ್ಲಿ ಹಾಡಿದ ಬೈಲಾಟದ ಹಾಡುಗಳು ರಂಜನೀಯವಾಗಿದ್ದವು. ನಂತರ ಪ್ರದರ್ಶಿತವಾದ ಬೀಸು ಕಂಸಾಳೆಯಲ್ಲಿ ಕಲಾವಿದರು ಅತ್ಯಂತ ಚುರುಕಾಗಿ ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದರು. ಕೀಲಾರ ಕೃಷ್ಣೇಗೌಡ, ತಂಡದವರು ದೈವಿಭಾವದಿಂದ ಪೂಜಾ ಕುಣಿತವನ್ನು ಪ್ರದರ್ಶಿಸಿದರು. ಉತ್ತರ ಕರ್ನಾಟಕದ ವಿಶಿಷ್ಟ ಕಲೆ ಕರಡಿ ಮಜಲು ಇನ್ನಷ್ಟು ರಂಗೇರಿಸಿತು. ನಂತರ ಪ್ರದರ್ಶಿತವಾದ ಸೋಮನ ಕುಣಿತ, ಪಟ ಕುಣಿತ, ಕೋಲಾಟ ಬಯಲುಸೀಮೆಯ ಹೆಜ್ಜೆಯ ಗತ್ತುಗಳೊಂದಿಗೆ ಪ್ರದರ್ಶಿತವಾದವು.

ಜನಪದ ಕಾವ್ಯ ಪರಂಪರೆ ಹೊಸ ಹಾಗೂ ಹಳೆ ತಲೆಮಾರುಗಳ ಬೆಸುಗೆ. ನಮ್ಮ ಬಹುಪಾಲು ಜನಪದ ಕಾವ್ಯ ಪರಂಪರೆಗಳು ಜೀವಂತವಾಗಿರುವುದು ಮಂಟೇಸ್ವಾಮಿ ಹಾಗೂ ಮಾದೇಶ್ವರ ವೃತ್ತಿ ಗಾಯಕ ಮೇಳಗಳಲ್ಲಿ. ಆದರೆ ತಲೆಮಾರಿನಿಂದ ತಲೆಮಾರಿಗೆ ಇದನ್ನು ದಾಟಿಸುವ ವೇಗ ಕಡಿಮೆಯಾಗಿದೆ. ಭೌತಿಕ ಕಾವ್ಯ ಪರಂಪರೆ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೈಲಾಸಮೂರ್ತಿ ಅವರ ಮಂಟೇಸ್ವಾಮಿ ಮೇಳ ಆಶಾಭಾವನೆಯನ್ನು ಮೂಡಿಸಿತು. ಮಂಟೇಸ್ವಾಮಿ ಕಾವ್ಯ ಪರಂಪರೆಯ ಕೊನೆಯ ಕೊಂಡಿಯಂತೆ ಕಂಡುಬಂದರು. ಕೀಳರಿಮೆಯಿಂದಲೋ, ಅವಕಾಶ ವಂಚನೆಯಿಂದಲೂ ಈ ಪರಂಪರೆ ಅಪರೂಪವಾಗಿದೆ. ಕಲಾಮೇಳದಲ್ಲಿ ಪಾಲ್ಗೊಂಡ ಏಕೈಕ ಮಂಟೇಸ್ವಾಮಿ ಮೇಳ ಇದಾಗಿತ್ತು. ಕಣ್ಮರೆಯಾಗುತ್ತಿರುವ ಮಂಟೆಸ್ವಾಮಿ ಕಾವ್ಯ ವೃತ್ತಿ ಗಾಯಕ ಪರಂಪರೆಯನ್ನು ಕೈಲಾಸಮೂರ್ತಿ, ಸಂಗಡಿಗರು ಜೀವಂತವಾಗಿರಿಸಿರುವುದು ಪ್ರಶಂಸೆಗೆ ಪಾತ್ರವಾಯಿತು.

ಗೌರವ ಸಂಭಾವನೆ ಜೊತೆಗೆ ಕಲಾವಿದರಿಗೆ ₹8,000 ಮೌಲ್ಯದ ಆಹಾರ ಪದಾರ್ಥಗಳನ್ನು ಕೊಟ್ಟು ಕಳುಹಿಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ‘ಇಂಥ ಕಲಾಮೇಳ ಮತ್ತೆ ಯಾವಾಗ’ ಎಂಬ ಪ್ರಶ್ನೆಯನ್ನು ಭಾಗವಹಿಸಿದ್ದ ಕಲಾವಿದರು ಕೇಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.