ಕಣ್ಣಾರೆ ಬೀಜ, ಕಣ್ಣಾರೆ ಕಳೆ ಗಿಡ ಹುಡುಕುವವರು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗದ ಅಜ್ಜಪ್ಪರ ಅಜ್ಜಣ್ಣ ಒತ್ತಾರೆ ಹೊಲದೆಡೆ ಹೊರಟಿದ್ದರು. ವಾರದ ಹಿಂದೆಯಷ್ಟೇ ಪೈರನ್ನೆಲ್ಲ ಮಾರಿದ್ದನ್ನು ನೋಡಿದ್ದೆ. ಹೀಗಾಗಿ ‘ಈಗ್ಯಾಕೆ ಹೊಲಕ್ಕೆ?’ ಅಂದಿದ್ದಕ್ಕೆ, ‘ಹೊಲ ಕಾಯೋಕೆ’ ಅಂದರು!. ‘ಬೆಳೆನೇ ಇಲ್ಲ, ಇನ್ನೇನು ಕಾಯ್ತಿಯಾ..?’ ಮರು ಪ್ರಶ್ನಿಸಿದೆ. ‘ಅದೃಷ್ಟಕ್ಕೆ ಈ ವರ್ಷ ಜಗ್ಗಿ ಕಣ್ಣಾರೆ ಹುಟ್ಯಾವೆ. ಅವುಗಳ ಮೇಲೆ ಅವರಿವರ, ಕುರಿಮಂದಿ ಕಣ್ಣು ಬಿದ್ರೆ ಕತೆ ಮುಗಿತು. ಈ ಸಲ ಮಳೆ ಹೆಚ್ಚಾಗಿ ಕೈಗೆ ಬಂದ ಬೆಳೆ ಬ್ಯಾರೆ ಬಾಯಿಗೆ ಬರಲಿಲ್ಲ. ಇದ್ನಾದ್ರು ಕಾದ್ರೆ ಆ ಲಾಸ್ ತುಂಬ್ಕೊಂಡು ನಾಲ್ಕ್ ಕಾಸಾದ್ರು ಸಿಗುತ್ತೆ...’ ಅಂದರು. ಇದೇ ವೇಳೆ ಅವರ ಹಿಂದೆಮುಂದೆ ಹೊರಟವರಿಗೆಲ್ಲ ವಿಚಾರಿಸಿದೆ. ಕೆಲವೊಂದಿಷ್ಟು ಜನ ಕಣ್ಣಾರೆ ಗಿಡಗಳ ಹುಡುಕಿಕೊಂಡು, ಮತ್ತೊಂದಿಷ್ಟು ಜನ ತಮ್ಮ ಹೊಲಗಳಲ್ಲಿಯ ಈ ಗಿಡಗಳ ಕಾವಲಿಗೆ ಲಗುಬಗೆಯಲ್ಲಿ ಹೊರಟಿದ್ದರು. ಒಟ್ಟಿನಲ್ಲಿ ಇಡೀ ಊರೆಂಬ ಊರೇ ಬ್ರಹ್ಮಕಾಲಕ್ಕೇ ಕಣ್ಣಾರೆ ಗಿಡಗಳ ಬೆನ್ನತ್ತಿ ಊರಿಗೆ ಬೆನ್ನು ಮಾಡಿತ್ತು.
ಕಣ್ಣಾರೆ, ಇದು ಕಳೆ ಗಿಡ. ಗುಡ್ಡಗಾಡು, ಕಲ್ಲುಮಿಶ್ರಿತ ಜಮೀನಿನಲ್ಲಿ, ಹೊಲಗಳ ಬದುಗಳಲ್ಲಿ, ರಸ್ತೆ, ಕಾಲುದಾರಿಯಲ್ಲಿ ಹೆಚ್ಚಾಗಿ ಇರುತ್ತವೆ. ಇಲ್ಲೆಲ್ಲ ರೈತರು ಅದರಲ್ಲೂ ಈ ಗಿಡದ ಮಹತ್ವ ಗೊತ್ತಿದ್ದವರು ಇತರೆ ಕಳೆ ಗಿಡಗಳಂತೆ ಇದನ್ನು ಕಿತ್ತು ಬಿಸಾಡಲ್ಲ. ಬದಲಾಗಿ ಮುಖ್ಯ ಬೆಳೆಯಷ್ಟೇ ಜೋಪಾನವಾಗಿ ಕಾಪಾಡುತ್ತಾರೆ. ಭಾಗಶಃ ಮಘಾ ಮಳೆಗೆ ಹುಟ್ಟುವ ಈ ಸಸ್ಯ ಚಿತ್ತ ಮಳೆಗೆ ಕಾಯಿ ಬಿಡಲು ಆರಂಭಿಸಿ ವಿಶಾಖ ಮಳೆಯವರೆಗೂ ಹೇರಳವಾಗಿ ಕಾಯಿ ಬಿಡುತ್ತದೆ. ಈ ಕಾಯಿ ಕುರಿ, ಆಡುಗಳಿಗೆ ಪಂಚಪ್ರಾಣ. ಜನರಿಗೆ ಆರ್ಥಿಕವಾಗಿ ಲಾಭ. ಈ ಕಾರಣಕ್ಕೆ ಇದು ಬೆಳೆದಷ್ಟೂ ಜನರ ಮೊಗದಲ್ಲಿ ‘ಕಳೆ’ ದ್ವಿಗುಣವಾಗುತ್ತದೆ.
ಕಣ್ಣಾರೆ ಅಲೆಮಾರಿಗಳು..!
ಈ ದಿನಗಳಲ್ಲಿ ಸಣ್ಣಪುಟ್ಟ ಕೃಷಿಕರು, ವಿಶೇಷವಾಗಿ ಕೃಷಿ ಕೂಲಿ ಕಾರ್ಮಿಕರು ಕುಟುಂಬ ಸಮೇತ ಈ ಕಣ್ಣಾರೆ ಗಿಡಗಳನ್ನು ಅರಸುತ್ತಾ ತಮ್ಮ ಊರು, ಜಿಲ್ಲೆ, ಅಷ್ಟೇಕೆ ರಾಜ್ಯದ ಸೀಮೋಲ್ಲಂಘನೆಯನ್ನೂ ಮಾಡುತ್ತಾರೆ!. ಮುಂಗಾರಿನ ಕೃಷಿ ಕೆಲಸಗಳೆಲ್ಲ ಬಹುತೇಕ ಮುಗಿಯುತ್ತಿದ್ದಂತೆ ಈ ಕಣ್ಣಾರೆ ಗಿಡಗಳು ಹೆಚ್ಚಾಗಿ ಕಂಡುಬರುವ ಜಾಗಗಳನ್ನು ಹುಡುಕುತ್ತಾ ಹೋಗುತ್ತಾರೆ. ‘ಕಣ್ಣಾರೆ ಕಂಡಿರಾ? ಕಂಡಿರಾ?’ ಅಂಥ ಸಿಕ್ಕವರನ್ನು ಕೇಳುತ್ತಾರೆ. ಗಿಡ, ಕಾಯಿ ಗುರುತು ಹೇಳಿ ಅದನ್ನು ಪತ್ತೆ ಹಚ್ಚುತ್ತಾರೆ. ಕಾಯಿ ಬಲಿಯುತ್ತಿದ್ದಂತೆ ಇಡೀ ಪರಿವಾರದೊಂದಿಗೆ ಕಾಯಿ ಹರಿಯಲಿಕ್ಕೆ ವಲಸೆ ಹೊರಡುತ್ತಾರೆ. ಹೋದ ಕಡೆ ಸಿಗುವ ಗುಡಿ ಗುಂಡಾರಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಕಾಯಿ ಭರ್ತಿ ಸಿಕ್ಕ ಮೇಲೆ ಊರಿಗೆ ಮರಳುತ್ತಾರೆ. ಬೀಜಗಳನ್ನು ಬೇರ್ಪಡಿಸಿ, ಮಾರಿ ಮತ್ತೆ ಕಾಯಿ ಸಂಗ್ರಹಿಸಲು ಹೊರಟು ನಿಲ್ಲುತ್ತಾರೆ.
ಜಾನುವಾರು ಈ ಬೀಜಗಳನ್ನು ಪಸರಿಸುತ್ತವೆ. ಇಲ್ಲಿಯವರೆಗೆ ಇದು ಪ್ರಕೃತಿದತ್ತವಾಗಿ ಬೆಳೆದ ಜಾಗಗಳಿಂದಷ್ಟೆ ಸಂಗ್ರಹಿಸಲಾಗುತ್ತಿತ್ತು. ಆದರೆ ಕೈ ತುಂಬಾ ಕಾಸು ನೀಡಿ, ಕಷ್ಟ ನೀಗಿಸುತ್ತಿರುವ ಕಾರಣ ಇದನ್ನೇ ಮುಖ್ಯ, ಮಿಶ್ರ ಬೆಳೆಯಾಗಿ ಬೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಕೂಡ್ಲಿಗಿ ತಾಲ್ಲೂಕಿನ ಕುಮತಿಯ ಮುತ್ತಪ್ಪ, ದೇವರಹಟ್ಟಿ ಸರಸಮ್ಮ ಇದರಲ್ಲಿ ಯಶಸ್ವಿಯಾಗಿ ಒಳ್ಳೆಯ ಹಣ ಗಳಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ರೈತರು ಭವಿಷ್ಯದಲ್ಲಿ ಇದನ್ನೇ ಮುಖ್ಯ ಬೆಳೆಯಾಗಿ ಆಯ್ಕೆ ಮಾಡಿಕೊಂಡರೂ ಅಚ್ಚರಿ ಇಲ್ಲ.
ಹೆಸರು ಹಲವು..
ಕ್ಯಾಸಿಯಾ ಅಬ್ಸಸ್ ಫ್ಯಾಬೇಸಿ ಕುಟುಂಬಕ್ಕೆ, ತೊಗರಿ ಜಾತಿಗೆ ಸೇರಿದ ಇದಕ್ಕೆ ಒಂದೊಂದೆಡೆ ಒಂದೊಂದು ಹೆಸರು. ಕನ್ನಡದಲ್ಲಿ ಕಣ್ಣಾರೆ, ಕಣ್ಣಾರಿ, ಅಡವಿ ಹುರುಳಿ, ಕಣ್ಣಪಾಲ್, ಕಣ್ಣುಬೀಜ ಅಂತಲೂ, ಹಿಂದಿಯಲ್ಲಿ ಆಂಕ್ ಕೀ ಬೀಜ್ ಅಂತಲೂ, ಇದನ್ನು ಖರೀದಿಸುವ ಮಾರ್ವಾಡಿಗಳು ಚಾಸ್ಕೋ ಎಂತಲೂ ಕರೆಯುತ್ತಾರೆ.
ಬಿಸಿಲೇರಿದಂತೆ ಇದರ ಬೀಜ ಸಿಡಿಯುವ ಕಾರಣ ತಂಪು ಹೊತ್ತಿನಲ್ಲೇ ಕಾಯಿ ಹರಿಯಬೇಕು. ಹೀಗಾಗಿ ಬೆಳ್ಳಂಬೆಳಗ್ಗೆ ಗಿಡಗಳಿರುವ ಜಾಗದಲ್ಲಿರಬೇಕು. ನಿದ್ದೆ, ನೀರೆಡಿಕೆ, ಹಸಿವು ಲೆಕ್ಕಿಸದೇ ಗಿಡಗಳನ್ನು ಹುಡುಕುತ್ತಾ ಹತ್ತಾರು ಕಿಲೊಮೀಟರ್ ಅಲೆಯಬೇಕು. ಪೊದೆ, ಹುಲ್ಲು, ಕಲ್ಲುಗಳ ಮಧ್ಯೆ ಹೆಚ್ಚಾಗಿಯೇ ಈ ಗಿಡಗಳಿರುವ ಕಾರಣ ಕಾಡುಪ್ರಾಣಿಗಳು, ಹುಳ ಉಪ್ಪಡಿಗಳ ಭಯ ಬೇರೆ. ಜೊತೆಗೆ ಬಹುತೇಕ ಗಿಡಗಳು ಗಿಡ್ಡವಾಗಿ ಬೆಳೆಯುವ ಕಾರಣ ನಡು ಬಗ್ಗಿಸಿಯೇ ಹರಿಯಬೇಕು. ಕೈಯೆಲ್ಲ ಅಂಟು ಅಂಟು. ಬಿಸಿಲಿಗೆ ಒಣಗಿಸಿ, ಬಡಿದು ಸಿಪ್ಪೆ ಬೇರ್ಪಡಿಸಿ, ಗಾಳಿಗೆ ತೂರಿ, ಜರಡಿ ಹಿಡಿದು ಜಟ್ಟು ಕಾಳುಗಳನ್ನು ಸ್ವಚ್ಛ ಮಾಡಬೇಕು. ಇವೆಲ್ಲ ಪ್ರಕ್ರಿಯೆ ಪೂರ್ಣವಾಗುವಷ್ಟರಲ್ಲಿ 50 ಕೆ.ಜಿ ಚೀಲದ ಕಾಯಿಗೆ ಸಿಗೋದೇ 8-10 ಸೇರು ಬೀಜ.
ಬೇಕಿದೆ ಮಾರುಕಟ್ಟೆ..
ಐದಾರು ದಶಕಗಳಿಂದ ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಸಾವಿರಾರು ಜನರು ಹತ್ತಾರು ಜಿಲ್ಲೆ, ಆಂಧ್ರಪ್ರದೇಶದಲ್ಲೂ ತಿರುಗಾಡಿ ಬೀಜ ಸಂಗ್ರಹಿಸುತ್ತಿದ್ದಾರೆ. ಗಾಢ ನೇರಳೆ ಬಣ್ಣದ ಈ ಬೀಜಕ್ಕೆ ಸಿಕ್ಕಾಪಟ್ಟೆ ಬೇಡಿಕೆ. ಇದು ಮುಂಬೈ ಮಾರುಕಟ್ಟೆಗೆ ಹೋಗುತ್ತದೆ ಎನ್ನಲಾಗುತ್ತಿದ್ದು, ಸೀಜನ್‌ನಲ್ಲಿ ಸಾವಿರಾರು ಟನ್ ಸಂಗ್ರಹವಾಗಿ, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಕಣ್ಣಾರೆ ಬೀಜ ಖರೀದಿಗೆ ಖರೀದಿದಾರರು ದಂಡು ದಂಡಾಗಿ ಊರೂರು ತಿರುಗುತ್ತಾರೆ. ಒಂದು ಸೇರಿಗೆ ₹ 450-500 ಬೆಲೆ ಇದೆ. ಆದರೆ ಕಾಯಿ ಹರಿಯುವವರಿಗೆ, ಸ್ಥಳೀಯವಾಗಿ ಖರೀದಿಸುವವರಿಗೆ ಇದನ್ನು ಯಾತಕ್ಕೆ ಖರೀದಿಸುತ್ತಾರೆ? ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಅಷ್ಟೊಂದು ನಿಗೂಢವಾಗಿ ನಡೆಯುತ್ತದೆ ಈ ವ್ಯಾಪಾರ. ಹಾಗಾಗಿ ಇದನ್ನು ನೇರವಾಗಿ ಖರೀದಿಸಲು ಮಾರುಕಟ್ಟೆಯ ಅವಶ್ಯಕತೆ ಇದೆ.
ಈ ಬೀಜವನ್ನು ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಇದು ಅಲಕ್ಷಿತ ಸಸ್ಯವಾಗಿದ್ದು ಬಹುತೇಕರಿಗೆ ಇದರ ಮಹತ್ವ ತಿಳಿದಿಲ್ಲ. ಈ ಬೀಜಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಹೀಗಾಗಿ ಇದನ್ನು ಬೆಳೆಯಲು ಅಧ್ಯಯನಕ್ಕೆ ಉತ್ತೇಜನ ನೀಡಬೇಕು. ಮಾರುಕಟ್ಟೆ ತೆರೆದು ನ್ಯಾಯಯುತ ಬೆಲೆಗೆ ಖರೀದಿಸುವ ಅಗತ್ಯವಿದೆ
–ಸಂತೋಷ್ ಕುಮಾರ್ ಎಂ. ಸಹಾಯಕ ಪ್ರಾಧ್ಯಾಪಕ ಜೀವರಸಾಯನಶಾಸ್ತ್ರ ದಾವಣಗೆರೆ ವಿವಿ
ನಮ್ಮಿಂದಲೇ ಸೇರಿಗೆ ₹450-500 ಕೊಟ್ಟು ಖರೀದಿಸುತ್ತಾರೆ. ಇನ್ನು ಅವರಿಗೆ ಎಷ್ಟು ಲಾಭ ಇರಬೇಡಾ..? ಕಷ್ಟ ಬೀಳುವುದು ನಾವು ನಮಗಿಂತ ಹೆಚ್ಚು ಲಾಭ ತಿನ್ನೋದು ಮತ್ಯಾರೋ? ಸರ್ಕಾರ ನಮ್ಮಿಂದ ಈ ಬೀಜಗಳನ್ನು ನೇರವಾಗಿ ಖರೀದಿಸಬೇಕು. ಆಗ ನಾವು ಆರ್ಥಿಕವಾಗಿ ಮತ್ತಷ್ಟು ಸದೃಢರಾಗುತ್ತೇವೆ
–ಬಂಡಿ ಈರಣ್ಣ ರಾಮದುರ್ಗ ವಿಜಯನಗರ ಜಿಲ್ಲೆ
–––
ಔಷಧಿ ಗುಣಗಳ ಆಗರ..!
ಇದು ಕಾಡುಜಾತಿಯ ಗಿಡ. ಹೆಚ್ಚಿನ ಮಟ್ಟದ ಬರ ಸಹಿಷ್ಣುತೆಯನ್ನು ಹೊಂದಿದ್ದು ಸಮಶೀತೋಷ್ಣ ಮತ್ತು ಉಷ್ಣವಲಯದಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತದೆ. ಬೀಜದಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದೆ. ಈ ಬೀಜಗಳನ್ನು ರಕ್ತದಲ್ಲಿಯ ಗ್ಲೂಕೋಸ್ ಮಟ್ಟ ಕಾಪಾಡಲಿಕ್ಕೆ ಸತ್ತ ಚರ್ಮದ ಕೋಶ ತೆಗೆದು ಹಾಕಲು ಚರ್ಮದ ಸೋಂಕಿಗೆ ಗಾಯದ ಮೇಲಿನ ಊರಿಯೂತದ ಶಮನಕ್ಕೆ ಜಾನುವಾರುಗಳಲ್ಲಿ ಅತಿಸಾರವನ್ನು ನಿವಾರಿಸಲು ಯಕೃತ್ ಮತ್ತು ಮೂತ್ರಪಿಂಡದ ಕಾಯಿಲೆಗೆ ಅಜೀರ್ಣಕ್ಕೆ ಅಧಿಕ ರಕ್ತದ ಒತ್ತಡ ಸಮಸ್ಯೆಗೆ ಬಳಸಲಾಗುತ್ತದೆ. ಅಲ್ಲದೆ ಜಾನುವಾರುಗಳಿಗೆ ಉತ್ತಮ ಆಹಾರವೂ ಕೂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.