ADVERTISEMENT

ಕೃಷಿಯೆಡೆಗೆ ಮಠದ ನಡಿಗೆ

ರಾಜೇಂದ್ರ ಹೆಗಡೆ
Published 3 ಮೇ 2025, 23:30 IST
Last Updated 3 ಮೇ 2025, 23:30 IST
<div class="paragraphs"><p>ಕೃಷಿ ಜಯಂತಿ ಪ್ರಯುಕ್ತ ಕಾಯಿ ಸುಲಿಯುವ ಸ್ಪರ್ಧೆಯಲ್ಲಿ ಭಾಗಿಯಾದ ರೈತರು</p></div>

ಕೃಷಿ ಜಯಂತಿ ಪ್ರಯುಕ್ತ ಕಾಯಿ ಸುಲಿಯುವ ಸ್ಪರ್ಧೆಯಲ್ಲಿ ಭಾಗಿಯಾದ ರೈತರು

   
ಸ್ವರ್ಣವಲ್ಲೀ ಮಠದಲ್ಲಿ 2007ರಿಂದ ಕೃಷಿ ಜಯಂತಿ ನಡೆಯುತ್ತಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಕೃಷಿಯಲ್ಲಿ ಆಸಕ್ತಿ ಮೂಡಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಎಲೆ, ಬೀಜಗಳನ್ನು ಗುರುತಿಸುವಂಥ ಕೃಷಿ ಸಂಬಂಧಿ ಅನೇಕ ಸ್ಪರ್ಧೆಗಳು ನಡೆಯುತ್ತವೆ. ಸಾಧಕ ರೈತರನ್ನು ಗೌರವಿಸಲಾಗುತ್ತದೆ. ದೇಶದ ವಿವಿಧ ಭಾಗಗಳ ಕೃಷಿ ತಜ್ಞರ ಉಪನ್ಯಾಸಗಳೂ ಇದರ ಭಾಗವಾಗಿದೆ. ಈ ಸಲ ಮೇ 10 ಮತ್ತು 11ರಂದು ಈ ಕಾರ್ಯಕ್ರಮ ನಡೆಯಲಿದೆ.

ಇನ್ನೂ ಅಕ್ಷರಾಭ್ಯಾಸವಿಲ್ಲದ ಪುಟ್ಟ ಮಕ್ಕಳಿಗೆ ವಿವಿಧ ಎಲೆ, ಬೀಜಗಳನ್ನು ಗುರುತಿಸಿ ಸ್ಪರ್ಧೆ ಗೆದ್ದ ಭಾವ, ಎಲ್ಲರಿಗಿಂತ ಹೆಚ್ಚು ಚಾಲಿ ಅಡಿಕೆ ಸುಲಿದೆನೆಂಬ ಕೃಷಿ ಮಹಿಳೆಯೊಬ್ಬರ ಸಂಭ್ರಮ, ರಸಪ್ರಶ್ನೆಯಲ್ಲಿ ಭಾಗಿಯಾದ ಪ್ರೌಢಶಾಲಾ ಮಕ್ಕಳಿಗೆ ಕೃಷಿಯೆಡೆಗಿನ ಜ್ಞಾನ ವೃದ್ಧಿಸಿಕೊಂಡ ಹೆಮ್ಮೆ, ಕೃಷಿಯನ್ನೇ ನಂಬಿ ಬದುಕು ರೂಪಿಸಿಕೊಂಡು ಇತರರಿಗೆ ಮಾದರಿಯಾದೆ ಎಂಬ ರೈತರ ಸಾರ್ಥಕತೆ.... ಇಂಥ ವಿಶಿಷ್ಟ ಕೃಷಿ ಸಂಸ್ಕೃತಿ ಅನಾವರಣಕ್ಕೆ ವೇದಿಕೆಯಾಗಿರುವುದು ಸ್ವರ್ಣವಲ್ಲೀ ಮಠದಲ್ಲಿ ನ‌ಡೆಯುವ ಕೃಷಿ ಜಯಂತಿ.

ಎಳವೆಯಲ್ಲಿಯೇ ಕೃಷಿಯೆಡೆ ಆಸಕ್ತಿ ಮೂಡಿಸುವ ಪ್ರಯತ್ನದ ಭಾಗವಾಗಿ ಈ ಮಠವು 2007ರಿಂದ ಕೃಷಿ ಜಯಂತಿಯನ್ನು ಆಯೋಜಿಸುತ್ತಿದೆ. ಈ ಮೂಲಕ ಮಠದ ಆವರಣಕ್ಕೆ ಸೀಮಿತವಾಗಿ ಶಾಸ್ತ್ರೀಯವಾಗಿ ಸಂಪನ್ನಗೊಳ್ಳುತ್ತಿದ್ದ ಆಚರಣೆಯೊಂದು ಎಲ್ಲ ವರ್ಗದವರನ್ನು, ಎಲ್ಲ ವಯಸ್ಸಿನವರನ್ನು ಒಂದುಗೂಡಿಸಿ ಕೃಷಿ ಕ್ಷೇತ್ರದ ತಲ್ಲಣಗಳ ನಿವಾರಣಾ ಪ್ರಯತ್ನ ಮಾದರಿಯಾಗಿ ಗುರುತಿಸಿಕೊಂಡಿದೆ. ಒಂದೂವರೆ ದಶಕಗಿಂತಲೂ ಹೆಚ್ಚು ಸಮಯದಿಂದ ಕೃಷಿ ಕ್ಷೇತ್ರದ ಪುನರುತ್ಥಾನದ ಕಾರ್ಯ ಸಾಗಿದೆ.

ADVERTISEMENT

ಕೃಷಿ ಜಯಂತಿ ಅಂಗವಾಗಿ ಅಂಗನವಾಡಿ ಹಾಗೂ ಬಾಲವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ ಸ್ಪರ್ಧೆ ನಡೆಯುತ್ತದೆ. ಆರಂಭದಲ್ಲಿ ಕಡಿಮೆ ಮಕ್ಕಳು ಪಾಲ್ಗೊಳ್ಳುತ್ತಿದ್ದವು. ಈಗೀಗ ನೂರಾರು ಮಕ್ಕಳು ಭಾಗವಹಿಸುತ್ತಿವೆ ಕೆಲ ಮಕ್ಕಳು ಒಂದೆರಡು ತರಕಾರಿ ಗುರುತಿಸಿದರೆ, ಕೆಲವು ಎಲ್ಲವನ್ನೂ ಗುರುತಿಸುವಷ್ಟು ಚುರುಕಾಗಿವೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಜಯಂತಿಯ ಸಭಾ ವೇದಿಕೆಯಲ್ಲಿ ಗೌರವಿಸಲಾಗುತ್ತದೆ.

‘ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಕಾಳು, ಬೀಜಗಳನ್ನು ಗುರುತಿಸುವ, 5ರಿಂದ 7ನೇ ತರಗತಿಯ ಮಕ್ಕಳಿಗೆ ವಿವಿಧ ಸಸ್ಯಗಳ ಎಲೆಗಳನ್ನು ಗುರುತಿಸುವ ಸ್ಪರ್ಧೆ ನಡೆಸಲಾಗುತ್ತಿದೆ. ಕಳೆದ ವರ್ಷಗಳಲ್ಲಿ ಪಾಲ್ಗೊಂಡವರು ಪ್ರಸಕ್ತ ವರ್ಷ ಸ್ಪರ್ಧೆ ಗೆಲ್ಲುವ ಸಲುವಾಗಿ ಪೂರ್ವ ತಯಾರಿ ಮಾಡಿಕೊಂಡು ಬರುತ್ತಾರೆ. ಆ ಮೂಲಕ ಕೃಷಿಯೆಡೆಗೆ ಅವರ ಸುಪ್ತ ಮನಸ್ಸು ಕೆಲಸ ಮಾಡುತ್ತಿರುತ್ತದೆ. ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿನ ಗುರುತಿಸುವಿಕೆ ಪಕ್ವ ಆಗುತ್ತಿದೆ. ಇದು ಜಯಂತಿ ಆಚರಣೆಗೆ ಉದ್ದೇಶ ಈಡೇರುವ ಭಾಗವಾಗಿದೆ’ ಎಂದು ಸಂಘಟಕರಲ್ಲಿ ಒಬ್ಬರಾದ ರತ್ನಾಕರ ಬಾಡಲಕೊಪ್ಪ ಹೇಳಿದರು. 

ಶಿಕ್ಷಣ ಇಲಾಖೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಹಕಾರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕೃಷಿ ವಿಜ್ಞಾನ ಮಾದರಿ ಸ್ಪರ್ಧೆ, ಪ್ರದರ್ಶನ ನಡೆಯುತ್ತದೆ. ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಕೇಳುವ ಪ್ರಶ್ನೆಗಳಿಗೆ ಥಟ್ ಅಂಥ ಉತ್ತರಿಸುವಷ್ಟು ಪ್ರೌಢ ಹಂತಕ್ಕೆ ಮಕ್ಕಳು ತಲುಪಿದ್ದಾರೆ. ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯುತ್ತವೆ. ಇಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪರಿಸರ, ಪ್ರಾಣಿ, ಪಕ್ಷಿ, ಜಲಮೂಲ, ಹವಾಮಾನ, ಅರಣ್ಯ, ಆಹಾರಗಳ ಕುರಿತು ಪ್ರಶ್ನೆಗಳಿರುತ್ತವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ತೋರಿದವರಿಗೆ ಬಹುಮಾನ ನೀಡಲಾಗುತ್ತದೆ.

ಕೃಷಿ ಜಯಂತಿ ಅಂಗವಾಗಿ ಮಠದ ವಿವಿಧ ಅಂಗಸಂಸ್ಥೆಗಳಿಂದ ರೈತರು, ರೈತ ಕುಟುಂಬದವರಿಗಾಗಿ ಸ್ಪರ್ಧೆ, ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇವುಗಳ ಜತೆ ಕೃಷಿ ಕ್ಷೇತ್ರದ ಸಾಧಕರಿಗೆ ಕೃಷಿ ಕಂಠೀರವ, ಕೃಷಿಕ ಮಹಿಳೆ, ಅವಿಭಕ್ತ ಕೃಷಿ ಕುಟುಂಬ, ಕೃಷಿ ಕುಶಲಕರ್ಮಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಜಯಂತಿ ಪೂರ್ವದಲ್ಲಿ ಆಮೂಲಾಗ್ರ ಪರಿಶೀಲಿಸಿ ಉತ್ತಮರನ್ನು ಆಯ್ಕೆ ಮಾಡಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆ ಮೂಲಕ ಸಾಮಾಜಿಕವಾಗಿ ಕೃಷಿಕರನ್ನೂ ಗೌರವದಿಂದ ಕಾಣುವ ಕೆಲಸ ಆಗುತ್ತಿದೆ.

ಇದರ ಜತೆಗೆ ಮಠದ ಮಾತೃಮಂಡಲದ ಸಹಕಾರದಲ್ಲಿ ಮಹಿಳೆಯರಿಗಾಗಿಯೇ ಕೃಷಿ ಸಂಬಂಧಿತ ಪರಿಕರಗಳಿಂದ ಸ್ಥಳದಲ್ಲೇ ಆರತಿ ತಾಟು ತಯಾರಿಸುವ ಸ್ಪರ್ಧೆ, ಏಕ್ ಮಿನಿಟ್ ಸ್ಪರ್ಧೆ, ಕೃಷಿ ಪದಬಂಧ, ಚಾಲಿ ಸುಲಿಯುವ, ಪುರುಷರಿಗೆ ತೆಂಗಿನಕಾಯಿ ಸುಲಿಯುವ, ಶಂಖನಾದ ಸ್ಪರ್ಧೆ ಹಾಗೂ 55 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಕೃಷಿ ಸಂಬಂಧಿ ಛದ್ಮವೇಷ ಸ್ಪರ್ಧೆ ನಡೆಸಲಾಗುತ್ತದೆ. ನೂರಾರು ಕೃಷಿಕರು ಇದರಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಇವುಗಳ ಜತೆ ರೈತರಿಗೆ ಆಧುನಿಕ, ಸಾಂಪ್ರಾಯಿಕ ಬೇಸಾಯದ ಬಗ್ಗೆ ಬೆಂಗಳೂರು, ದೆಹಲಿಯಿಂದ ಕೃಷಿ ತಜ್ಞರು ಬಂದು ಉಪನ್ಯಾಸ ನೀಡುತ್ತಾರೆ. ಒಟ್ಟಾರೆ ಕೃಷಿ ಜಯಂತಿ ಅಂಗವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳು ರೈತರಿಗೆ ಮೀಸಲು. ಶಾಸ್ತ್ರೀಯ ಆಚರಣೆಗಳ ಪರಿಧಿಯಲ್ಲೇ ಇದ್ದಿದ್ದ ನರಸಿಂಹ ಜಯಂತಿ ಸಂಭ್ರಮ ಈಗೀಗ ಕೃಷಿ ಜಯಂತಿಯ ಕಾರಣದಿಂದ ಸುತ್ತಲಿನ ಐದಾರು ಜಿಲ್ಲೆಗಳ ರೈತರು ತಮ್ಮ ಕೃಷಿ ಸಾಧನೆಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ಮಾರ್ಪಟ್ಟಿದೆ.

‘ಎರಡು ದಿನ ನಡೆಯುವ ಕೃಷಿ ಜಯಂತಿಯಲ್ಲಿ ಸ್ಪರ್ಧೆಗಳ ಆಯೋಜನೆಯ ಕಾರಣ ಯುವ ಪೀಳಿಗೆ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ನಾಲ್ಕು ವರ್ಷದವರಿಂದ ಎಂಬತ್ತು ವರ್ಷದವರಿಗೆ ಕೇವಲ ಕೃಷಿಯೆಡೆ ತಿಳಿವಳಿಕೆ ಪಡೆಯಲು ಇದು ದಾರಿಯಾಗಿದೆ. ಆರಂಭದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವುದು, ಹಂತಹಂತವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೋತ್ಸಾಹಿಸಲಾಗುತ್ತದೆ’ ಎಂಬುದು ಮಠದ ಪ್ರಮುಖರ ಅಭಿಪ್ರಾಯ.

ಬೆಳೆಗಳಿಗೆ ರೋಗಬಾಧೆ, ಅಸ್ಥಿರ ಬೆಲೆ, ಸಾಲ ಬಾಧೆ, ಕೃಷಿ ಕೂಲಿಗಳ ಸಮಸ್ಯೆಗಳಿಂದ ಹತಾಶೆಯಲ್ಲಿರುವ ಕೃಷಿ ಕ್ಷೇತ್ರಕ್ಕೆ ಪುನಶ್ಚೇತನ ತುಂಬುವ ಆಶಯದಿಂದ ನಿರಂತರವಾಗಿ ಕೃಷಿ ಜಯಂತಿ ಆಚರಿಸಲಾಗುತ್ತದೆ’ ಎಂದು ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳುತ್ತಾರೆ.

‘ಜನಮಾನಸದಲ್ಲಿ ಅಧ್ಯಾತ್ಮದ ಬಗೆಗೆ ಒಲವು ಮೂಡಿಸುವುದು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮುಖ್ಯ ಆಶಯ. ಆದರೆ ರೈತರ ಹಿತವೂ ಮುಖ್ಯ. ಮಠದ ಶಿಷ್ಯವರ್ಗದ್ದು ಬಹುತೇಕ ಕೃಷಿ ಮೂಲವಾಗಿದ್ದು, ವರ್ತಮಾನದಲ್ಲಿ ಕೃಷಿ ವಲಯದಲ್ಲಿ ಹಲವು ಸಂಕಷ್ಟಗಳು ಇವೆ. ಇವುಗಳಿಗೆ ಪರಿಹಾರೋಪಾಯ ಹುಡುಕುವುದು ಕೂಡ ಮಠದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೃಷಿ, ಕೃಷಿಕರಿಗಾಗಿಯೇ ಜಯಂತಿ ಸಂಘಟಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಅಡಿಕೆ ಸುಲಿಯುವ ಸ್ಪರ್ಧೆಯಲ್ಲಿ ಮಹಿಳೆಯರ ಪೈಪೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.