ಜಡೆ ಈರುಳ್ಳಿ
ಈರುಳ್ಳಿಯನ್ನು ಸಾಮಾನ್ಯವಾಗಿ ಬಹುತೇಕ ಖಾದ್ಯಗಳನ್ನು ತಯಾರಿಸಲು ಬಳಸುತ್ತೇವೆ. ಅಡುಗೆಮನೆಯಲ್ಲಿ ಇತರ ತರಕಾರಿಗಳಿಂಗಿಂತಲೂ ಹೆಚ್ಚಾಗಿ ಈರುಳ್ಳಿ ಇದ್ದೆ ಇರುತ್ತದೆ. ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಕಣ್ಣಲ್ಲಿ ನೀರು ತರಿಸದ, ಸಿಹಿಯಾದ ಈರುಳ್ಳಿಯ ಬಗ್ಗೆ ಕೇಳಿದ್ದೀರಾ?
ಹೌದು, ರುಚಿಯಲ್ಲಿ ಸಿಹಿಯಾಗಿಯೂ, ಕತ್ತರಿಸುವಾಗ ಕಣ್ಣಲ್ಲಿ ನೀರು ತರಿಸದ ಅಪರೂಪದ ಸಿಹಿ ಈರುಳ್ಳಿಯನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ರೈತರು ಬೆಳೆಯುತ್ತಾರೆ. ಇದನ್ನು ಆ ಭಾಗದಲ್ಲಿ ಜಡೆ ಈರುಳ್ಳಿ, ಪೊತ್ತೆ ಈರುಳ್ಳಿ ಎಂಬುದಾಗಿಯೂ ಕರೆಯುತ್ತಾರೆ. ಅಷ್ಟೇ ಅಲ್ಲ, ಈ ವಿಶೇಷ ಈರುಳ್ಳಿಯು ಕುಮಟಾ ಭಾಗದಲ್ಲಿ ಮಾತ್ರ ದೊರಕುವುದರಿಂದ ‘ಕುಮಟಾ ಈರುಳ್ಳಿ’ ಎಂತಲೂ ಕರೆಯುತ್ತಾರೆ.
ಈ ಈರುಳ್ಳಿ ಬೆಳೆಯನ್ನು ಮಾರ್ಚ್ ಮತ್ತು ಏಪ್ರಿಲ್ ಸಮಯದಲ್ಲಿ ಕುಮಟಾ, ಹಂದಿಗೋಣ, ಚಿಟ್ಟಿಹಕ್ಕಲ, ಅಳ್ವೇಕೋಡಿ, ವನ್ನಳ್ಳಿ, ಗೋಕರ್ಣ ಭಾಗದಲ್ಲಿ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಈ ಜಡೆ ಈರುಳ್ಳಿಯನ್ನು ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಜೊತೆಗೆ ಕುಮಟಾ–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ರಾಶಿ ಇಟ್ಟು ಮಾರಾಟ ಮಾಡುವ ದೃಶ್ಯಗಳು ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ.
ಈ ಸಿಹಿ ಈರುಳ್ಳಿಯನ್ನು ಜುಟ್ಟು ಸಮೇತ ಮಣ್ಣಿನಿಂದ ತೆಗೆಯಲಾಗುತ್ತದೆ. ಬಳಿಕ ಒಣಗಿದ ಜುಟ್ಟನ್ನು ಹೆಂಗಳೆಯರು ತಮ್ಮ ಕೂದಲನ್ನು ಹೇಗೆ ಹೆಣೆದು ಕಟ್ಟಿಕೊಳ್ಳುತ್ತಾರೋ, ಹಾಗೇ ಹೆಣೆದು ಜುಟ್ಟದ ರೀತಿಯಲ್ಲಿ ಕಟ್ಟಿ ಅದನ್ನು ನೇತು ಹಾಕಿರುತ್ತಾರೆ. ಹಾಗಾಗಿ ಇದು ನೋಡಲು ಜಡೆಯ ರೀತಿಯ ಇರುವುದರಿಂದ ‘ಜಡೆ ಈರುಳ್ಳಿ’ ಎಂದು ಕರೆಯುತ್ತಾರೆ.
ಮೊದಲೆಲ್ಲಾ ಇವುಗಳ ಗೊಂಚಲುಗಳನ್ನು ಅಡುಗೆ ಮನೆಯ ಮೇಲ್ಭಾಗದಲ್ಲಿ ಬಿದಿರಿನ ಗಳಕ್ಕೆ ಕಟ್ಟಿಡುತ್ತಿದ್ದರು. ಆಗ ಕಟ್ಟಿಗೆ ಒಲೆಯನ್ನು ಬಳಸುತ್ತಿದ್ದರಿಂದ ಅಡುಗೆ ಒಲೆಯ ಹೊಗೆಯು ಈರುಳ್ಳಿಯನ್ನು ಇನ್ನಷ್ಟು ದಿನ ಹಾಳಾಗದಂತೆ ಕಾಪಾಡುತ್ತಿತ್ತು. ಹಾಗಾಗಿ ವರ್ಷಗಟ್ಟಲೇ ಕೆಡದಂತೆ ಇರುತ್ತಿದ್ದವು. ಈಗ ಕಟ್ಟಿಗೆ ಒಲೆ ಇಲ್ಲದಿದ್ದರೂ ಚಾವಣಿಯಲ್ಲಿ ಕಟ್ಟಿಡುವುದನ್ನು ಕಾಣಬಹುದು.
ಹಿರಿಯರು ಹೇಳಿಕೊಟ್ಟ ಈ ಬೆಳೆಯನ್ನು ಈಗಲೂ ಈ ಭಾಗದ ರೈತರು ತಪ್ಪದೇ ನಾಟಿ ಮಾಡಿಕೊಂಡು ಬರುತ್ತಿದ್ದಾರೆ. ಮುಂಗಾರು ಭತ್ತದ ಕೊಯ್ಲು ಮುಗಿದ ತಕ್ಷಣ (ಡಿಸೆಂಬರ್) ಈರುಳ್ಳಿ ಬೀಜದ ನಾಟಿ ಮಾಡುತ್ತಾರೆ. ಈ ಬೆಳೆಯನ್ನು ಸಂಪೂರ್ಣವಾಗಿ ಸಾವಯುವ ಕೃಷಿ ಪದ್ಧತಿ ಮೂಲಕ ಬೆಳೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ಭಾಗದ ಉಸುಕು ಮಿಶ್ರಿತ ಮಣ್ಣು ಸಹ ಈ ಬೆಳೆಯನ್ನು ಬೆಳೆಯಲು ಸಹಾಯಕವಾಗಿದೆ. ನಾಟಿ ಮಾಡಿದ ಮೂರು ತಿಂಗಳಲ್ಲಿ ಈರುಳ್ಳಿ ಕಟಾವಿಗೆ ಬರುತ್ತದೆ. ಆಗ ರೈತರು ಅದನ್ನು ಜುಟ್ಟು ಸಮೇತ ಕೀಳುತ್ತಾರೆ. ನಂತರ ಅವುಗಳನ್ನು ಐದರಿಂದ ಹತ್ತು ಕೆ. ಜಿ. ತೂಕದ ಒಂದೊಂದೆ ಪೊತ್ತೆಗಳನ್ನು ಕಟ್ಟಿ ಮಾರುಕಟ್ಟೆಗೆ ತರುತ್ತಾರೆ.
ಕಾರವಾರ, ಗೋವಾ , ಉಡುಪಿ, ಮಂಗಳೂರು ಪ್ರಯಾಣಿಸುವವರು ರಸ್ತೆಬದಿಯಲ್ಲಿ ಈ ಸಿಹಿ ಈರುಳ್ಳಿಯ ಪೋತ್ತೆಯನ್ನು ಖರೀದಿಸುತ್ತಾರೆ. ಅಷ್ಟೇ ಅಲ್ಲದೇ ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೂ ರವಾನೆ ಆಗುತ್ತದೆ. ಇದು ಸೀಮೀತ ಅವಧಿಯಲ್ಲಿ ಬೆಳೆಯುವ ಬೆಳೆಯಾದ್ದರಿಂದ ಇದರ ರುಚಿ ನೋಡಿದವರು ವರ್ಷಕ್ಕೆ ಆಗುವಷ್ಟನ್ನು ಒಮ್ಮೆಲೇ ಖರೀದಿ ಮಾಡುತ್ತಾರೆ. ಇದರ ಬೆಲೆ ಕಾಲಕ್ಕೆ ತಕ್ಕಂತೆ ರೈತರು ನಿಗದಿಪಡಿಸುತ್ತಾರೆ. ಅಂದಹಾಗೆ ಈ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಸಿಗುವ ಈರುಳ್ಳಿ ದರಕ್ಕಿಂತ ಹೆಚ್ಚಿರುತ್ತದೆ. ಇದನ್ನು ಊಟದ ಜೊತೆಗೆ, ಚಟ್ನಿ, ಮೀನಿನ ಸಾಂಬಾರು, ಈರುಳ್ಳಿ ದೋಸೆಗೆ ಬಳಸುತ್ತಾರೆ. ನೀವೇನಾದರೂ ಈಗ ಅತ್ತ ಹೊರಟಿದ್ದರೆ ಜಡೆ ಈರುಳ್ಳಿಯ ಸಿಹಿಯನ್ನು ಸವಿಯಬಹುದು. ⇒
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.