ಕಣ್ಣುಹಾಯಿಸಿದಷ್ಟು ದೂರಕ್ಕೆ ಭಕ್ತಸಾಗರವೇ ಅಲ್ಲಿತ್ತು...
ವಿರಾಟ ಕುಂಭಮೇಳಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಜನರು ಪ್ರಯಾಗರಾಜ್ ತಲುಪಿದ್ದರು. ಅವರವರ ಭಕುತಿಗೆ, ಆಸೆಗೆ, ಕನಸಿಗೆ ತಕ್ಕಂತೆ ಮೇಳದಲ್ಲಿ ಲೀನವಾಗಿದ್ದರು. ಪ್ರಜಾವಾಣಿ ಹಿರಿಯ ಫೋಟೊ ಜರ್ನಲಿಸ್ಟ್ ತಾಜುದ್ದೀನ್ ಆಜಾದ್ ತಮ್ಮ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಮಹಾಮೇಳವನ್ನು ಇಲ್ಲಿ ದಾಖಲಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ಸಂಭ್ರಮಕ್ಕೆ ಸಾಕ್ಷಿಯಾಗಬೇಕು, ಅಲ್ಲಿನ ದೃಶ್ಯ ವೈಭವವನ್ನು ಕ್ಯಾಮೆರಾ ಫ್ರೇಮ್‌ನಲ್ಲಿ ಸೆರೆಹಿಡಿಯಬೇಕೆಂಬ ಆಸೆ ಮನದಲ್ಲಿ ಮೂಡಿತ್ತು. ಕಲಬುರಗಿಯಿಂದ ಅತ್ತ ಹೊರಟೆ. ಮೂರು ದಿನ ಹೇಗೋ ಪ್ರಯಾಣ ಮಾಡಿ ಅಲ್ಲಿಗೆ ತಲುಪಿದಾಗ ತಡರಾತ್ರಿಯಾಗಿತ್ತು. ಆಗ ಮೊದಲು ಕಣ್ಣಿಗೆ ಬಿದ್ದಿದ್ದೇ ಟ್ರಾಫಿಕ್. ಅಲ್ಲಿ ಜನದಟ್ಟಣೆ ಎಷ್ಟಿತ್ತೆಂದರೆ, ಕಣ್ಣು ಹಾಯಿಸಿದಷ್ಟು ದೂರದವರೆಗೂ ಜನವೋ ಜನ, ವಾಹನವೋ ವಾಹನ.
ಭಕ್ತಸಾಗರದಂತೆ ಪ್ರಯಾಗರಾಜ್‌ನಲ್ಲಿ ಹಕ್ಕಿಗಳ ಸಾಗರ...
ಅಂದು ಮಾಘಸ್ನಾನವಿತ್ತು. ಬೋಟಿಂಗ್‌ನಲ್ಲೇ ತ್ರಿವೇಣಿ ಸಂಗಮಕ್ಕೆ ಹೋದೆ. ಅಲ್ಲಿ ಬಸ್‌ಗಳು ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಂತೆ, ದೋಣಿಗಳು ಲಂಗರು ಹಾಕಿ ನಿಂತಿದ್ದು ಗಮನ ಸೆಳೆಯಿತು. ಗುಜರಾತಿನ ಒಂದು ಕುಟುಂಬ ತಾವಷ್ಟೇ ಅಲ್ಲ; ತಮ್ಮ ಮನೆಯಲ್ಲಿ ಸಾಕಿದ ನಾಯಿಗಳನ್ನೂ ಕರೆತಂದು ಪುಣ್ಯಸ್ನಾನ ಮಾಡಿಸಿತು!
ಮೈಕೊರೆಯುವ ಚಳಿಯಿಂದ ಪಾರಾಗಾಲು ಜನರು ಬೆಂಕಿ ಸುತ್ತ ಕುಳಿತು ಮೈ ಬೆಚ್ಚಗಾಗಿಸಿಕೊಳ್ಳುತ್ತಿದ್ದರು. ಬಿಸಿ ಬಿಸಿ ಚಹಾ ಕುಡಿಯಲು ನೂಕುನುಗ್ಗಲೇ ಉಂಟಾಗಿತ್ತು.
ತಣ್ಣನೆಯ ನೀರು, ಚುಮುಚುಮು ಚಳಿ ಮಧ್ಯೆ ಅಲ್ಲಿ ಭಕ್ತಿಯ ಹೊಳೆಯೇ ಹರಿಯುತ್ತಿತ್ತು. ನಾನು ಕರುನಾಡು ಹಾಗೂ ಮಹಾರಾಷ್ಟ್ರದಲ್ಲಿನ ಹಲವು ಜಾತ್ರೆಗಳು, ಉತ್ಸವಗಳಿಗೆ ಸಾಕ್ಷಿಯಾಗಿದ್ದೆ. ಆದರೆ, ಇಷ್ಟೊಂದು ಭಕ್ತಸಾಗರ ನೋಡಿದ್ದು ಇದೇ ಮೊದಲು. ಅಲ್ಲಿದ್ದ ಭಕ್ತರ ಸಂಖ್ಯೆ ಊಹಿಸಲಾಗದಷ್ಟಿತ್ತು. ದೇಶದ ವಿವಿಧ ಸಂಸ್ಕೃತಿಗಳ ಸಂಗಮವೂ ಆಗಿತ್ತು. ಜನರು ತಮ್ಮ ಸಂಸ್ಕೃತಿಗೆ ಅನುಗುಣವಾಗಿ ಪೂಜೆ–ಪುನಸ್ಕಾರ ಮಾಡುತ್ತಿದ್ದರು.
ನಾಗಸಾಧುವೊಬ್ಬರು ಕ್ಯಾಮೆರಾ ಫ್ರೇಮ್ ಒಳಗೆ ಸೆರೆಸಿಕ್ಕಿದ್ದು ಹೀಗೆ..
ನದಿ ದಂಡೆಯಲ್ಲಿ ದೇಶದ ವಿವಿಧೆಡೆಯ ಮಠಾಧೀಶರು ಮತ್ತು ಪ್ರಮುಖರು ಅಖಾಡಗಳನ್ನು ನಿರ್ಮಿಸಿದ್ದರು. ಆಯಾ ರಾಜ್ಯಗಳಿಂದ ಬಂದ ಭಕ್ತರು ತಮ್ಮ ಮಠಾಧೀಶರು ನಿರ್ಮಿಸಿದ ಅಖಾಡಗಳಲ್ಲಿ ಬಿಡಾರ ಹೂಡುತ್ತಿದ್ದರು. ಅಲ್ಲಿ ಹಗಲಿರುಳೆನ್ನದೆ ಪ್ರಸಾದ ವಿತರಣೆಯಾಗುತ್ತಲೇ ಇತ್ತು.
ಈ ಮಹಾಮೇಳವು ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ, ಹಲವರಿಗೆ ‘ಅನ್ನ’ದ ದಾರಿ ಮಾಡಿಕೊಟ್ಟಿತ್ತು. ಹಣತೆ, ಎಣ್ಣೆ, ಕುಂಕುಮ–ಭಂಡಾರ, ರುದ್ರಾಕ್ಷಿಗಳ ಮಾರಾಟದ ಭರಾಟೆ ಜೋರಾಗಿತ್ತು. ಇಲ್ಲಿ ಒಂದಲ್ಲ; ಎರಡಲ್ಲ; ಹತ್ತಾರು ಬಗೆಯ ರುದ್ರಾಕ್ಷಿಗಳು ಕಾಣಸಿಕ್ಕವು.
ಇನ್ನು ಕುಂಭಮೇಳದಲ್ಲಿ ಹೆಚ್ಚಾಗಿ ಆಕರ್ಷಿಸಿದ್ದು ನಾಗಸಾಧುಗಳು. ಅವರ ಉಡುಗೆ–ತೊಡುಗೆ, ಸಾಹಸ ಸೆಳೆದವು. ಫಕೀರರ ಮಾದರಿಯಲ್ಲಿ ಅಲ್ಲಿನ ನಾಗಾಸಾಧುಗಳೂ ನವಿಲು ಗರಿಗಳನ್ನು ಹಿಡಿದು ಭಕ್ತರನ್ನು ಆಶೀರ್ವದಿಸುತ್ತಿದ್ದರು. ಭಕ್ತರಿಂದ ಕಾಣಿಕೆ ಸ್ವೀಕರಿಸುವುದಷ್ಟೇ ಅಲ್ಲ; ತಮ್ಮ ಬಳಿ ಇದ್ದ ಹಣ, ಚಹಾ–ತಿಂಡಿಯನ್ನೂ ಕೊಡುತ್ತಿದ್ದರು. ದೇವರ ನಾಮಸ್ಮರಣೆಯಲ್ಲಿ ಅಸಂಖ್ಯಾತ ಭಕ್ತಗಣ ಮುಳುಗಿತ್ತು.
ಸಂಗಮದಲ್ಲಿ ದೋಣಿಗಳಲ್ಲಿ ಪಯಣ
ತ್ರಿವೇಣಿ ಸಂಗಮದಲ್ಲಿ ಜನಸಾಗರದಂತೆ ಪಕ್ಷಿಗಳ ಸಾಗರವೂ ಕಂಡುಬಂತು. ನದಿಗೆ ಪವಿತ್ರಸ್ನಾನಕ್ಕೆ ಬಂದ ಭಕ್ತರು ವಿವಿಧ ಆಹಾರ ಖಾದ್ಯಗಳನ್ನು ಪಕ್ಷಿ ಸಂಕುಲಕ್ಕೆ ಉಣಿಸುತ್ತಿದ್ದರು.
ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದ ಸ್ಥಳದಲ್ಲಿ ಅವರೆಲ್ಲರನ್ನೂ ಒಂದೇ ಫ್ರೇಮ್‌ನಲ್ಲಿ ಸೆರೆಹಿಡಿಯುವ ಸವಾಲು ನನ್ನ ಮುಂದಿತ್ತು. ಒಂದೆಡೆ ನಿಂತು ಫೋಟೊ ತೆಗೆಯಲೂ ಕಷ್ಟವಾಗುತ್ತಿತ್ತು. ತಳ್ಳಾಟ–ನೂಕಾಟ ಮುಂದುವರಿದೇ ಇತ್ತು. ಇವೆಲ್ಲದರ ಮಧ್ಯೆಯೇ ರಾಶಿಗಟ್ಟಲೆ ಚಿತ್ರಗಳನ್ನು ಸೆರೆಹಿಡಿದು, ಊರಿನತ್ತ ಮುಖಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.