ADVERTISEMENT

Malgudi Days: ಮಾಲ್ಗುಡಿ ಡೇಸ್ ನೆನಪುಗಳೊಂದಿಗೆ ಹೆಜ್ಜೆ...

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 0:21 IST
Last Updated 16 ಫೆಬ್ರುವರಿ 2025, 0:21 IST
ಗೆಳೆಯರೊಂದಿಗೆ ‘ಸ್ವಾಮಿ’...
ಗೆಳೆಯರೊಂದಿಗೆ ‘ಸ್ವಾಮಿ’...   

‘ತಾ ನಾ ನಾ ತಾನಾ ನಾನಾ ನಾ...’ ಈ ಥೀಮ್ ಮ್ಯೂಸಿಕ್‌ ಅನ್ನು ಕೇಳಿದೊಡನೆ ಥಟ್ಟನೇ ನೆನಪಾಗುವುದೇ 80-90ರ ದಶಕದ ದೂರದರ್ಶನದ ಪ್ರಸಿದ್ಧ ಧಾರಾವಾಹಿ ‘ಮಾಲ್ಗುಡಿ ಡೇಸ್’. ಈ ಧಾರಾವಾಹಿಯನ್ನು ನೋಡಿದಾಗಲೆಲ್ಲಾ ಮತ್ತೆ ಬಾಲ್ಯದ ದಿನಗಳು ನೆನಪಾಗುತ್ತವೆ. ಆರ್.ಕೆ.ನಾರಾಯಣ್ ಅವರಂತಹ ಹೆಸರಾಂತ ಕಾದಂಬರಿಕಾರರ ಸಣ್ಣ ಕಥಾ ಸಂಗ್ರಹವೇ ಇದರ ಆತ್ಮ. ಅವರ ಕಿರಿಯ ಸಹೋದರ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಸ್ಕೆಚ್ ವರ್ಕ್‌, ಕರ್ನಾಟಕ ಸಂಗೀತಗಾರ ಎಲ್. ವೈದ್ಯನಾಥನ್ ಅವರ ಸಂಗೀತ ಇರುವ ಈ ಕಥಾ ಸರಣಿಯನ್ನು ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ ಶಂಕರ್‌ನಾಗ್ ನಿರ್ದೇಶಿಸಿದ್ದರು. ಅನಂತ್‌ನಾಗ್‌ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದರು.

ಮಾಲ್ಗುಡಿ ಎಂಬುದೊಂದು ಕಾಲ್ಪನಿಕ ಗ್ರಾಮ. ಆದರೂ ಇಂದಿಗೂ ಹಲವಾರು ವಿಷಯಗಳಿಗಾಗಿ ‘ಮಾಲ್ಗುಡಿ ಡೇಸ್’ ನಮ್ಮ ಮನಸ್ಸಿನಲ್ಲಿ ಬೇರೂರಿದೆ. ಆಗುಂಬೆಯ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗೊಂಡ ಈ ಧಾರಾವಾಹಿಯ ಪ್ರತಿಯೊಂದು ಸಂಚಿಕೆಯು ಸೊಗಸಾಗಿತ್ತು. ಇದರಲ್ಲಿ ಬರುವ ‘ಸ್ವಾಮಿ’ (ಮಾಸ್ಟರ್‌ ಮಂಜುನಾಥ್‌) ಪಾತ್ರವನ್ನು ಮರೆಯಲು ಹೇಗೆ ಸಾಧ್ಯ?

ಮಾಲ್ಗುಡಿ ಎಂದಾಕ್ಷಣ ಸಂಗೀತ ಹೇಗೆ ನೆನ‌ಪಾಗುವುದೋ, ಹಾಗೆಯೇ ಅದರಲ್ಲಿ ಮೂಡಿಬಂದ ರೈಲು ನಿಲ್ದಾಣ ಸಹ. ಇಷ್ಟೆಲ್ಲಾ ಓದಿದ ಬಳಿಕ ನಿಮಗೇನಾದರೂ ‘ಛೇ! ಆ ಮಾಲ್ಗುಡಿ ಡೇಸ್‌ನ ರೈಲು ನಿಲ್ದಾಣವನ್ನು ನೋಡಲು ಸಿಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದೆನಿಸಿದರೆ ಈಗಲೂ ಅದಕ್ಕೆ ಅವಕಾಶವಿದೆ.

ADVERTISEMENT

ಶಿವಮೊಗ್ಗದಿಂದ 34 ಕಿಲೋಮೀಟರ್‌ ದೂರದಲ್ಲಿರುವ ಅರಸಾಳು ಗ್ರಾಮದ ರೈಲು ನಿಲ್ದಾಣದಲ್ಲಿ ಇಂಥ ಅಪರೂಪದ ಮಾಲ್ಗುಡಿ ಡೇಸ್ ಮ್ಯೂಸಿಯಂ ಇದೆ. ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ. ₹5 ನೀಡಿ ಒಳಗೆ ಪ್ರವೇಶಿಸುತ್ತಿದ್ದಂತೆ ಮಾಲ್ಗುಡಿ ಡೇಸ್ ಹಿನ್ನೆಲೆ ಸಂಗೀತ ಕಿವಿ ತುಂಬಿಕೊಳ್ಳುತ್ತದೆ. ಅದು ನಮ್ಮನ್ನು ಮತ್ತೆ ಮಾಲ್ಗುಡಿ ದಿನಗಳಿಗೆ ಕರೆದೊಯ್ಯುತ್ತದೆ. ಇದನ್ನು 2019-20 ರಲ್ಲಿ ಮೈಸೂರು ರೈಲ್ವೆ ವಿಭಾಗವು ಸ್ಥಾಪಿಸಿತು. ಈಗಲೂ ಇದರ ನಿರ್ವಹಣೆಯನ್ನು ರೈಲ್ವೆ ಇಲಾಖೆಯೇ ಮಾಡುತ್ತಿದೆ.

ಅರಸಾಳು ನಿಲ್ದಾಣದಿಂದ ಮಾಲ್ಗುಡಿ ಮ್ಯೂಸಿಯಂನತ್ತ ಹೆಜ್ಜೆ ಹಾಕುತ್ತಿದ್ದಂತೆ ಸುಂದರವಾದ ಪುಟ್ಟ ಉದ್ಯಾನ ಬರ ಮಾಡಿಕೊಳ್ಳುತ್ತದೆ. ಅಲ್ಲಿ ‘ಸ್ವಾಮಿ ಹಾಗೂ ಆತನ ಗೆಳೆಯರ’ ಪ್ರತಿಮೆಗಳು ಕಾಣಸಿಗುತ್ತದೆ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ನೇರಳೆ ಬಣ್ಣದ ‘ಮಾಲ್ಗುಡಿ ಚಾಯ್’ ಎಂಬ ಕೆಫೆ ಸಿಗುತ್ತದೆ. ಇದನ್ನು ನಿಜವಾದ ರೈಲು ಬೋಗಿಯ ಒಳಗಡೆ ನಿರ್ಮಿಸಲಾಗಿದೆ. ಅದರ ಒಳಗಿನ ದೃಶ್ಯ ಹಳ್ಳಿಯ ಕೆಫೆಯ ಅನುಭವವನ್ನು ನೀಡುತ್ತದೆ.

ಮಾಲ್ಗುಡಿ ಮ್ಯೂಸಿಯಂ ಅನ್ನು ಚಿಕ್ಕ ಹೆಂಚಿನ ಮನೆಯೊಳಗೆ ನಿರ್ಮಿಸಲಾಗಿದ್ದು, ಗೋಡೆಗಳನ್ನು ಸುಂದರ ವರ್ಣಚಿತ್ರಗಳಿಂದ ಸಿಂಗರಿಸಲಾಗಿದೆ. ಮ್ಯೂಸಿಯಂ ಒಳಗಡೆ ಆರ್. ಕೆ. ನಾರಾಯಣ್‌ ಅವರ ಕಥೆಗಳಿಂದ ಪ್ರೇರಿತವಾದ ಕಲಾಕೃತಿಗಳು, ಛಾಯಾಚಿತ್ರಗಳು ಮತ್ತು ಹಸ್ತಪ್ರತಿಗಳಂತಹ ವಿವಿಧ ವಸ್ತುಗಳು ಹಾಗೂ ಮಾಲ್ಗುಡಿ ಡೇಸ್‌ನಲ್ಲಿ ಬಳಸಲಾದ ಹಲವು ವಸ್ತುಗಳನ್ನು ಜೋಡಿಸಿಡಲಾಗಿದೆ. ಇವೆಲ್ಲವನ್ನೂ ನೋಡುತ್ತಿದ್ದರೆ ಮಾಲ್ಗುಡಿ ಗ್ರಾಮದಲ್ಲೇ ಇದ್ದ ಅನುಭವವಾಗುತ್ತದೆ. ಮಲೆನಾಡಿನ ಪ್ರಶಾಂತವಾದ ಪರಿಸರದಲ್ಲಿ, ಪಕ್ಷಿಗಳ ಕಲರವದ ಮಧ್ಯೆ ಇರುವ ಈ ಮಾಲ್ಗುಡಿ ಡೇಸ್ ಮ್ಯೂಸಿಯಂ ಒಂದು ಅನನ್ಯ ತಾಣವೇ ಸರಿ.

ಅರಸಾಳು ಗ್ರಾಮದ ರೈಲು ನಿಲ್ದಾಣದಲ್ಲಿ ‘ಮಾಲ್ಗುಡಿ ಡೇಸ್’ ಮ್ಯೂಸಿಯಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.